ಯೂರಿಯಾ ಗೊಬ್ಬರ ಅಭಾವ; ಕಾಳಸಂತೆಯಲ್ಲಿ ಮಾರಾಟ

| Published : Aug 01 2025, 12:30 AM IST

ಸಾರಾಂಶ

ರೈತ ಸಮೂಹಕ್ಕೆ ಯೂರಿಯಾ ಗೊಬ್ಬರ ಅತ್ಯಗತ್ಯ ಎಂಬುದನ್ನು ಅರಿತ ಕೆಲವರು, ರೋಣ ರಸ್ತೆಯ ಹೊರವಲಯದಲ್ಲಿ ಟಂಟಂ ಸೇರಿದಂತೆ ಕೆಲ ವಾಹನವೊಂದಕ್ಕೆ ಹತ್ತಿಪ್ಪತ್ತು ಚೀಲ ಯೂರಿಯಾ ಗೊಬ್ಬರ ಸಾಗಿಸುವ ದೃಶ್ಯ ಗುರುವಾರ ಕಂಡು ಬಂದಿತು.

ಗಜೇಂದ್ರಗಡ: ತಾಲೂಕಿನಲ್ಲಿ ಯೂರಿಯಾ ಗೊಬ್ಬರದ ಅಭಾವ ಸೃಷ್ಠಿಯಾಗಿದ್ದು, ರೈತರು ಗೊಬ್ಬರಕ್ಕಾಗಿ ಪರದಾಡುತ್ತಿದ್ದಾರೆ. ಆದರೆ ಕೆಲ ಪಟ್ಟಭದ್ರ ಹಿತಾಸಕ್ತಿಗಳು ಬಂಡವಾಳ ಮಾಡಿಕೊಂಡು ಯೂರಿಯಾ ಗೊಬ್ಬರ ಕೃತಕ ಅಭಾವಕ್ಕೆ ಯತ್ನ ನಡೆಸುತ್ತಿರುವ ಪರಿಣಾಮ ಹಗಲು, ರಾತ್ರಿ ಎನ್ನದೆ ರಸಗೊಬ್ಬರ ಅಂಗಡಿಗಳ ಮುಂದೆ ಕಾಯುವ ದುಸ್ಥಿತಿ ನಿರ್ಮಾಣವಾಗಿದೆ.

ತಾಲೂಕಿನಲ್ಲಿ ಉತ್ತಮ ಮಳೆಯಾಗಿದ್ದು, ರೈತ ಸಮೂಹಕ್ಕೆ ಯೂರಿಯಾ ಗೊಬ್ಬರ ಅತ್ಯಗತ್ಯ ಎಂಬುದನ್ನು ಅರಿತ ಕೆಲವರು, ರೋಣ ರಸ್ತೆಯ ಹೊರವಲಯದಲ್ಲಿ ಟಂಟಂ ಸೇರಿದಂತೆ ಕೆಲ ವಾಹನವೊಂದಕ್ಕೆ ಹತ್ತಿಪ್ಪತ್ತು ಚೀಲ ಯೂರಿಯಾ ಗೊಬ್ಬರ ಸಾಗಿಸುವ ದೃಶ್ಯ ಗುರುವಾರ ಕಂಡು ಬಂದಿತು. ಇದನ್ನು ಪ್ರಶ್ನಿಸಿದರೆ ಅಂಗಡಿಗೆ ಹೋಗಿ ಕೇಳಿ, ಇಲ್ಲಿ ₹ ೩೨೦ಕ್ಕೆ ಒಂದು ಚೀಲ ಕೊಡಲು ಹೇಳಿದ್ದಾರೆ ಎಂದು ಯೂರಿಯಾ ಗೊಬ್ಬರವನ್ನು ಲಾರಿಯಿಂದ ವಾಹನಗಳಿಗೆ ಹಾಕಲು ಮುಂದಾದರು.

ಗಜೇಂದ್ರಗಡ ಪಟ್ಟಣದ ರಸಗೊಬ್ಬರ ಅಂಗಡಿಗಳಿಗೆ ಎಷ್ಟು ಯೂರಿಯಾ ಬಂದಿದೆ. ಅದರ ಬೆಲೆ ಎಷ್ಟು ಹಾಗೂ ಎಷ್ಟು ಹಣಕ್ಕೆ ಮಾರಬೇಕು ಎಂಬುದರ ಬಗ್ಗೆ ಅಂಗಡಿಕಾರರ ಬಳಿ ಮಾಹಿತಿ ಅಸ್ಪಷ್ಟವಾಗಿದೆ. ಪರಿಣಾಮ ಒಂದು ಯೂರಿಯಾ ಗೊಬ್ಬರದ ಚೀಲಕ್ಕೆ ಪಟ್ಟಣದ ರೋಣ ರಸ್ತೆಯ ಹೊರವಲಯದಲ್ಲಿ₹ ೩೨೦ಕ್ಕೆ ಮಾರಾಟ ಮಾಡಲಾಗುತ್ತಿತ್ತು. ಹೆಚ್ಚಿನ ಹಣ ಏಕೆ ಪಡೆಯುತ್ತಿದ್ದೀರಿ ಎಂದು ಕೆಲವರು ಪ್ರಶ್ನಿಸಿದರೆ, ೩೦೦ಚೀಲ ಯೂರಿಯಾ ಗೊಬ್ಬರ ಬಂದಿದೆ. ಚೀಟಿ ಪಡೆದು ಪ್ರತಿ ಚೀಲಕ್ಕೆ ₹೩೨೦ ಪಡೆದು ಗೊಬ್ಬರ ನೀಡಲು ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿ ಬೇಕಿದ್ದರೆ ಅಂಗಡಿಗೆ ಹೋಗಿ ಕೇಳಿ ಎಂದು ಹಾರಿಕೆ ಉತ್ತರ ನೀಡಿದರು.

ಪಟ್ಟಣದಲ್ಲಿ ೧೫ಕ್ಕೂ ಅಧಿಕ ರಸಗೊಬ್ಬರ ಮಾರಾಟ ಅಂಗಡಿಗಳಿವೆ. ಯಾವ ಅಂಗಡಿಗೆ ಎಷ್ಟು ಲೋಡ್ ಯೂರಿಯಾ ಗೊಬ್ಬರ ಬರುತ್ತದೆ ಎನ್ನುವ ಮಾಹಿತಿ ಅಧಿಕಾರಿಗಳಿಗೆ ಹಾಗೂ ಅಂಗಡಿಕಾರರಿಗೆ ಇರುತ್ತದೆ. ಅಂಗಡಿಗೆ ಬರುವ ರೈತರ ಬೇಡಿಕೆಗೆ ಅನುಗುಣವಾಗಿ ಚೀಟಿ ನೀಡಿ ಗೊಬ್ಬರ ಬಂದ ಬಳಿಕ ಗೊಬ್ಬರ ವಿತರಿಸಿದಾಗ ರೈತರು ಇನ್ನೊಂದು ಅಂಗಡಿ ಮುಂದೆ ಕಾಯುವ ದುಸ್ಥಿತಿ ಇರಲ್ಲ. ಕಾಳಸಂತೆ ಮಾರಾಟ ಮಾದರಿಯಲ್ಲಿ ಪಟ್ಟಣದ ಹೊರವಲಯದಲ್ಲಿ ಲಾರಿ ನಿಲ್ಲಿಸಿ ಮನಸ್ಸಿಗೆ ಬಂದಂತೆ ಗೊಬ್ಬರ ಮಾರಾಟ ಮಾಡಿದರೆ ರೈತರಿಗೆ ಸಂಕಷ್ಟ ಎದುರಾಗುವ ಸಾಧ್ಯತೆಯಿದೆ.