ಸಾರಾಂಶ
ರಾಜ್ಯದ ಕೆಲವೆಡೆ ಯೂರಿಯಾ ಗೊಬ್ಬರಕ್ಕಾಗಿ ರೈತರ ಪರದಾಟ ಮುಂದುವರಿದಿದ್ದು, ವಿಜಯನಗರ ಜಿಲ್ಲೆ ಹರಪನಹಳ್ಳಿ ತಾಲೂಕಿನ ಹಲವಾಗಲು ಗ್ರಾಮದಲ್ಲಿ ಬುಧವಾರ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ಕಚೇರಿಗೆ ರೈತರು ಬೀಗ ಜಡಿದು, ಅಧಿಕಾರಿಗಳಿಗೆ ದಿಗ್ಬಂಧನ ಹಾಕಿದ ಘಟನೆ ನಡೆಯಿತು. ಹಾವೇರಿ ಜಿಲ್ಲೆ ಗುತ್ತಲದಲ್ಲೂ ರೈತರು ಪ್ರತಿಭಟನೆ ನಡೆಸಿದರು.
ಕನ್ನಡಪ್ರಭ ವಾರ್ತೆ ಬೆಂಗಳೂರು
ರಾಜ್ಯದ ಕೆಲವೆಡೆ ಯೂರಿಯಾ ಗೊಬ್ಬರಕ್ಕಾಗಿ ರೈತರ ಪರದಾಟ ಮುಂದುವರಿದಿದ್ದು, ವಿಜಯನಗರ ಜಿಲ್ಲೆ ಹರಪನಹಳ್ಳಿ ತಾಲೂಕಿನ ಹಲವಾಗಲು ಗ್ರಾಮದಲ್ಲಿ ಬುಧವಾರ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ಕಚೇರಿಗೆ ರೈತರು ಬೀಗ ಜಡಿದು, ಅಧಿಕಾರಿಗಳಿಗೆ ದಿಗ್ಬಂಧನ ಹಾಕಿದ ಘಟನೆ ನಡೆಯಿತು. ಹಾವೇರಿ ಜಿಲ್ಲೆ ಗುತ್ತಲದಲ್ಲೂ ರೈತರು ಪ್ರತಿಭಟನೆ ನಡೆಸಿದರು.ಹಲವಾಗಲಿನಲ್ಲಿ ಸೊಸೈಟಿ ಮುಂದೆ ಬೆಳಗ್ಗೆಯಿಂದಲೇ ಜಮಾಯಿಸಿದ್ದ ರೈತರು, ಕಚೇರಿಗೆ ಮುತ್ತಿಗೆ ಹಾಕಿ, ಸೊಸೈಟಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ಸಿಬ್ಬಂದಿ ಒಳಗಿದ್ದಾಗಲೇ ಬಾಗಿಲಿಗೆ ಬೀಗ ಜಡಿದು ಪ್ರತಿಭಟನೆಗೆ ಇಳಿದರು. ಇನ್ನು, ಹರಪನಹಳ್ಳಿ ಪಟ್ಟಣದ ಟಿಎಪಿಎಂಎಸ್, ಹಳೆಬಸ್ ನಿಲ್ದಾಣದಲ್ಲಿರುವ ಪ್ರಾಥಮಿಕ ಕೃಷಿ ಸಹಕಾರ ಸಂಘದಲ್ಲಿ ಸಹ ರೈತರು ಗೊಬ್ಬರಕ್ಕಾಗಿ ಸಾಲುಗಟ್ಟಿ ನಿಂತಿದ್ದರು. ಮಧ್ಯಾಹ್ನದ ಸಮಯದಲ್ಲಿ ಬಂದ ಗೊಬ್ಬರವನ್ನು ಪೊಲೀಸರ ನೆರವಿನೊಂದಿಗೆ ರೈತರಿಗೆ ವಿತರಿಸಲಾಯಿತು.
ಹಾವೇರಿ ತಾಲೂಕಿನ ಗುತ್ತಲದ ಸಮೀಪದ ಬಸಾಪುರ ಗ್ರಾಮದಲ್ಲೂ ರೈತರು ಬುಧವಾರ ಯೂರಿಯಾ ಗೊಬ್ಬರಕ್ಕಾಗಿ ಪ್ರತಿಭಟನೆ ನಡೆಸಿದರು. ದಾವಣಗೆರೆ ಜಿಲ್ಲೆಯ ಜಗಳೂರು, ಮಾಯಕೊಂಡ, ಹೊನ್ನಾಳಿ ತಾಲೂಕುಗಳಲ್ಲಿ ಶೇಂಗಾ, ರಾಗಿ, ಮೆಕ್ಕೆಜೋಳ ಬೆಳೆದ ರೈತರು ಗೊಬ್ಬರಕ್ಕಾಗಿ ಬುಧವಾರ ಬೆಳಗ್ಗೆಯಿಂದಲೇ ಅಂಗಡಿಗಳ ಮುಂದೆ ಕ್ಯೂ ನಿಂತಿದ್ದರು. ಕೆಲವೆಡೆ ವ್ಯಾಪಾರಸ್ಥರು ₹266 ಚೀಲವೊಂದಕ್ಕೆ ₹400ಕ್ಕೆ ಮಾರಾಟ ಮಾಡಿದ ಆರೋಪ ಕೂಡ ಕೇಳಿ ಬಂದಿದೆ.ಧಾರವಾಡ ಜಿಲ್ಲೆಯ ಹಲವೆಡೆ ಮೆಕ್ಕೆಜೋಳ, ವಠಾಣಿ, ಆಲೂಗಡ್ಡೆ ಬೆಳೆದ ರೈತರು ಸೊಸೈಟಿಗಳಿಗೆ ಬಂದು ಯೂರಿಯಾ ಗೊಬ್ಬರಕ್ಕಾಗಿ ಬೇಡಿಕೆ ಇಡುವುದು ಕಂಡು ಬರುತ್ತಿದೆ. ವಿಜಯನಗರ ಜಿಲ್ಲೆ ಹರಪನಹಳ್ಳಿ ಪಟ್ಟಣದ ಟಿಎಪಿಸಿಎಂ ಮುಂಭಾಗ ರೈತರು ಗೊಬ್ಬರಕ್ಕಾಗಿ ಬೇಡಿಕೆ ಇಡುತ್ತಿರುವ ದೃಶ್ಯ ಕಂಡು ಬಂತು.
ಬೆಳಗಾವಿ, ಖಾನಾಪುರ, ಕಿತ್ತೂರು, ಬೈಲಹೊಂಗಲ, ಹಿರೇಬಾಗೆವಾಡಿ, ಎ.ಕೆ.ಹುಬ್ಬಳ್ಳಿಗಳಲ್ಲಿಯೂ ಭತ್ತ, ಟೊಮ್ಯಾಟೊ, ಗೆಣಸು, ಆಲೂಗಡ್ಡೆ, ಸೊಯಾಬಿನ್ ಬೆಳೆದ ರೈತರು ಯೂರಿಯಾ ಗೊಬ್ಬರಕ್ಕಾಗಿ ಅಲೆದಾಟ ನಡೆಸುತ್ತಿರುವ ದೃಶ್ಯ ಕಂಡು ಬಂತು. ಗಡಿ ಜಿಲ್ಲೆ ಬೀದರ್ ನ ಫರ್ಟಿಲೈಜರ್ ಅಂಗಡಿಗಳಲ್ಲಿ ರೈತರು ದುಬಾರಿ ದರಕ್ಕೆ ಯೂರಿಯಾ, ಡಿಎಪಿ ಗೊಬ್ಬರ ಖರೀದಿ ಮಾಡಿದ ಘಟನೆಗಳೂ ವರದಿಯಾಗಿವೆ.