ಡಾ.ಶಿವಕುಮಾರ ಶ್ರೀಗೆ ಭಾರತ ರತ್ನಕ್ಕೆ ಒತ್ತಾಯ

| Published : Jan 22 2025, 12:34 AM IST

ಸಾರಾಂಶ

ದಾವಣಗೆರೆಯ ಕೊಂಡಜ್ಜಿ ರಸ್ತೆಯ ಸಿದ್ದಗಂಗಾ ಸ್ವಾಮೀಜಿ ವೃತ್ತದಲ್ಲಿ ಡಾ.ಶಿವಕುಮಾರ ಸ್ವಾಮಿಗಳ 6ನೇ ಪುಣ್ಯಸ್ಮರಣೋತ್ಸವ ಹಾಗೂ ಶ್ರೀಗಳ ಪುತ್ಥಳಿ ಅನಾವರಣ ದಾಸೋಹ ದಿನಾಚರಣೆಯಲ್ಲಿ ಮಠಾಧೀಶರು, ವಿವಿಧ ಪಕ್ಷಗಳ ಮುಖಂಡರು.

ಕನ್ನಡಪ್ರಭ ವಾರ್ತೆ ದಾವಣಗೆರೆ

ತ್ರಿವಿಧ ದಾಸೋಹಿ ತುಮಕೂರು ಸಿದ್ಧಗಂಗಾ ಮಠದ ಡಾ.ಶಿವಕುಮಾರ ಸ್ವಾಮೀಜಿ ಅವರಿಗೆ ಭಾರತ ರತ್ನ ಪ್ರಶಸ್ತಿಯನ್ನು ಜ.26ರ ಒಳಗಾಗಿ ಘೋಷಿಸುವಂತೆ ಚಿತ್ರದುರ್ಗ ಮುರುಘಾ ಮಠದ ಶ್ರೀ ಬಸವಪ್ರಭು ಸ್ವಾಮೀಜಿ ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಿದರು.

ನಗರದ ಕೊಂಡಜ್ಜಿ ರಸ್ತೆಯ ಸಿದ್ಧಗಂಗಾ ಮಠದ ಡಾ.ಶಿವಕುಮಾರ ಸ್ವಾಮೀಜಿ ವೃತ್ತದಲ್ಲಿ ಡಾ.ಶಿವಕುಮಾರ ಸ್ವಾಮಿಗಳ 6ನೇ ಪುಣ್ಯಸ್ಮರಣೆ ಹಾಗೂ ಶ್ರೀಗಳ ಪುತ್ಥಳಿ ಅನಾವರಣ, ದಾಸೋಹ ದಿನದ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ಡಾ.ಶಿವಕುಮಾರ ಸ್ವಾಮೀಜಿಗಳಿಗೆ ಭಾರತ ರತ್ನ ಪ್ರಶಸ್ತಿ ಘೋಷಿಸಲು ಸರ್ಕಾರ ಮೀನಾ-ಮೇಷ ಎಣಿಸುವುದು ತರವಲ್ಲ ಎಂದರು.

ಯಾವುದೇ ಜಾತಿ, ಧರ್ಮ, ಮತಗಳ ಬೇಧವಿಲ್ಲದೆ ಎಲ್ಲರಿಗೂ ಸಮಾನವಾಗಿ ಅನ್ನ, ಅಕ್ಷರ, ಜ್ಞಾನ ದಾಸೋಹ ನೀಡಿದ ನಡೆದಾಡುವ ದೇವರೆಂದೇ ಹೆಸರಾಗಿದ್ದ ಡಾ.ಶಿವಕುಮಾರ ಸ್ವಾಮೀಜಿಗೆ ಭಾರತ ರತ್ನ ಪ್ರಶಸ್ತಿ ಘೋಷಣೆ ಮಾಡಬೇಕು. ಬಸವತತ್ವ ಅನುಯಾಯಿಯಾಗಿದ್ದ, ಕಾಯಕ, ದಾಸೋಹ, ಸಮಾನತೆಯ ಮಂತ್ರ ನೀಡಿದ ಶ್ರೀಗಳಿಗೆ ಭಾರತ ರತ್ನ ಗೌರವ ನೀಡಬೇಕೆಂಬುದು ಕೋಟ್ಯಾಂತರ ಭಕ್ತರ ಆಸೆ ಆಗಿದೆ ಎಂದು ತಿಳಿಸಿದರು.

ಭಾರತ ರತ್ನ ಪ್ರಶಸ್ತಿಯನ್ನು ಲಿಂಗೈಕ್ಯ ಶ್ರೀಗಳಿಗೆ ಘೋಷಿಸಿದರೆ ಜಾತ್ಯತೀತ ಮಠ, ದಾಸೋಹ ಸಂಸ್ಕೃತಿಯನ್ನು ಕೇಂದ್ರ ಸರ್ಕಾರ ಗೌರವಿಸಿದಂತಾಗುತ್ತದೆ. ದಾವಣಗೆರೆ ಕೊಂಡಜ್ಜಿ ರಸ್ತೆಯ ಈ ವೃತ್ತಕ್ಕೆ ಡಾ.ಶಿವಕುಮಾರ ಸ್ವಾಮೀಜಿ ಹೆಸರಿಟ್ಟು, ಲಿಂಗೈಕ್ಯ ಗುರುಗಳ ಪುತ್ಥಳಿ ಪ್ರತಿಷ್ಟಾಪಿಸಿರುವುದು ಸಂತೋಷದ ಸಂಗತಿ.

ಇನ್ನು ಮುಂದೆ ಎಲ್ಲರೂ ಡಾ.ಶಿವಕುಮಾರ ಸ್ವಾಮೀಜಿ ವೃತ್ತ ಅಂತಲೇ ಕರೆಯಬೇಕು. ಶ್ರೀಗಳ ಪುತ್ಥಳಿ ಸ್ಥಾಪಿಸಿದ ಶಂಕರ್ ಶಿರೆಕರ್ ಪವಾರ್ ಇತರರ ಆಸೆಯಂದೆ ಇಲ್ಲಿ ಕಂಚಿನ ಪುತ್ಥಳಿ ಪ್ರತಿಷ್ಟಾಪನೆಯಾಗಲಿ ಎಂದು ಅವರು ಶುಭಹಾರೈಸಿದರು.

ಕೂಡಲ ಸಂಗಮ ಪಂಚಮಸಾಲಿ ಪೀಠದ ಶ್ರೀ ಜಯ ಮೃತ್ಯುಂಜಯ ಸ್ವಾಮೀಜಿ ಮಾತನಾಡಿ, ಹಿಂದೊಮ್ಮೆ ಚಳವಳಿ, ವ್ಯಾಪಾರಿ ನಗರವಾಗಿದ್ದ ದಾವಣಗೆರೆ ಇಂದು ಶಿಕ್ಷಣ ನಗರಿಯಾಗಿ ಹೆಸರಾಗಿದೆ. ದಾನ, ಧಾರ್ಮಿಕ ನಗರವೂ ಇದಾಗಿದ್ದು, ಜಯದೇವ ಶ್ರೀಗಳು, ಶ್ರೀ ಬಕ್ಕೇಶ್ವರ ಸ್ವಾಮೀಜಿ ಇತರರು ದಾನ, ಧಾರ್ಮಿಕ ನಗರಿಯಾಗಲು ಕಾರಣ. ಇಲ್ಲಿ ದಾಸೋಹ ಸಂಸ್ಕೃತಿ ಬೆಳೆಯಲು ಡಾ.ಶಿವಕುಮಾರ ಸ್ವಾಮೀಜಿಯೇ ಮೂಲ ಪ್ರೇರಣೆ. ಅಂತಹವರನ್ನು ಹೆಸರು ವೃತ್ತಕ್ಕೆ ಇಟ್ಟು, ಗುರುಗಳ ಪುತ್ಥಳಿ ಪ್ರತಿಷ್ಟಾಪಿಸಿದ್ದು ಸಂತಸ ತಂದಿದೆ ಎಂದರು.

20ನೇ ಶತಮಾನದ ನಡೆದಾಡುವ ದೇವರು ಡಾ.ಶಿವಕುಮಾರ ಸ್ವಾಮಿಗಳು. ಸಾವಿರ ಜನ್ಮಹೊತ್ತು ಬಂದರೂ ಗುರುಗಳ ಋಣ ತೀರಿಸಲಾಗದು. ಜಾತ್ಯತೀತವಾಗಿ ಕೋಟ್ಯಾಂತರ ಜನರಿಗೆ ಅನ್ನ, ಅಕ್ಷರ, ಆಸ್ರಯ ನೀಡಿದವರು. ಪ್ರಸ್ತುತ ವಾತಾವರಣದಲ್ಲಿ ರಾಜಕಾರಣ, ಧರ್ಮಕಾರಣ ಶುದ್ಧೀಕರಣವಾಗಬೇಕಿದೆ. ಅಶುದ್ಧ ವ್ಯಕ್ತಿಗಳಿಂದಾಗಿರಾಜಕಾರಣವೇ ಕೆಟ್ಟಿದೆ. ಧರ್ಮದ ಬಗ್ಗೆ ಅಪಾರ್ಥ ಮಾಡಿಕೊಂಡವರಿಂದ ಧರ್ಮಕಾರಣ ಕೆಟ್ಟಿದೆ. ಆದರೆ, ಎಂದೆಂದಿಗೂ ಧರ್ಮಕಾರಣ, ರಾಜಕಾರಣ ಕೆಟ್ಟಿಲ್ಲ ಎಂದು ಅವರು ಹೇಳಿದರು. ಚನ್ನಗಿರಿ ಡಾ.ಕೇದಾರಲಿಂಗ ಶಿವಶಾಂತವೀರ ಶಿವಾಚಾರ್ಯ ಸ್ವಾಮೀಜಿ, ಶ್ರೀ ಸಿದ್ಧಬಸವ ಕಬೀರ ಸ್ವಾಮೀಜಿ, ಶ್ರೀ ಸಂಗಮಾನಂದ ಸ್ವಾಮೀಜಿ, ಶ್ರೀ ಬಸವ ಹರಳಯ್ಯ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ದೂಡಾ ಮಾಜಿ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ ಅಧ್ಯಕ್ಷತೆ ವಹಿಸಿದ್ದರು. ದೂಡಾ ಮಾಜಿ ಅಧ್ಯಕ್ಷ ಯಶವಂತರಾವ್ ಜಾಧವ್‌, ದೂಡಾ ಸದಸ್ಯೆ ವಾಣಿ ಬಕ್ಕೇಶ, ಅಭಿ ಕಾಟನ್ಸ್‌ ಮಾಲೀಕ, ಪಂಚಮಸಾಲಿ ಹಿರಿಯ ಮುಖಂಡ ನ್ಯಾಮತಿ ಎನ್.ಬಕ್ಕೇಶ, ಶಂಕರ್ ಶಿರೆಕರ್ ಪವರ್, ಶಾಂತಮ್ಮ, ಯೋಧ ಚನ್ನಬಸವನಗೌಡ, ಗೌತಮ್ ಜೈನ್, ನವೀನ್, ಎಚ್.ಎಸ್. ವೀರೇಶ, ಸೋಗಿ ಗುರು, ಟಂಕರ್ ಮಂಜಣ್ಣ, ಪಿಎಸ್‌ಐ ಲಲಿತಮ್ಮ ಇತರರು ಇದ್ದರು.