ಸಾರಾಂಶ
ಹಾವೇರಿ: ಹಮಾಲಿ ಕಾರ್ಮಿಕರಿಗೆ ಕನಿಷ್ಠ ವೇತನ, ಭವಿಷ್ಯನಿಧಿ, ಇಎಸ್‌ಐ, ಪಿಂಚಣಿ ಮುಂತಾದ ಕಾರ್ಮಿಕ ಕಾನೂನುಗಳ ಕಡ್ಡಾಯ ಜಾರಿಗಾಗಿ, ಸಾಮಾಜಿಕ ಭದ್ರತಾ ಸೌಲಭ್ಯಗಳಿಗಾಗಿ ಒತ್ತಾಯಿಸಿ ಕರ್ನಾಟಕ ರಾಜ್ಯ ಹಮಾಲಿ ಕಾರ್ಮಿಕರ ಫೆಡರೇಶನ್ (ಸಿಐಟಿಯು) ನೇತೃತ್ವದಲ್ಲಿ ಮಿಲ್ ಗೋಡೌನ್ ವೇರ್‌ಹೌಸ್ ಹಮಾಲಿ ಕಾರ್ಮಿಕರ ರಾಜ್ಯ ಸಮಾವೇಶವನ್ನು ಬಳ್ಳಾರಿ ಜಿಲ್ಲೆಯ ಸಿರಗುಪ್ಪದಲ್ಲಿ ಆ. ೧೮ರಂದು ಆಯೋಜಿಸಲಾಗಿದೆ ಎಂದು ಸಂಘಟನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ ಪತ್ತಾರ ಹೇಳಿದರು.ನಗರದ ವೇರಹೌಸ್, ಗೋಡೌನ್ ಹಾಗೂ ಎಪಿಎಂಸಿಗಳಲ್ಲಿ ಪ್ರಚಾರ ನಡೆಸಿ ಮಾತನಾಡಿದ ಅವರು, ರಾಜ್ಯದಲ್ಲಿ ನೂರಾರು ಸರ್ಕಾರಿ ಸ್ವಾಮ್ಯದ ಗೋಡೌನ್, ವೇರ್‌ಹೌಸ್‌ಗಳಲ್ಲಿ ಹಾಗೂ ವಿವಿಧ ಕಂಪನಿಗಳ ಖಾಸಗಿ ಗೋಡೌನ್, ವೇರ್‌ಹೌಸ್‌ಗಳಲ್ಲಿ ಲೋಡಿಂಗ್ ಅನ್‌ಲೋಡಿಂಗ್ ಕೆಲಸದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಹಮಾಲಿ ಕಾರ್ಮಿಕರು ತೊಡಗಿಕೊಂಡಿದ್ದಾರೆ. ಜೀವನಾವಶ್ಯಕ ವಸ್ತುಗಳು ಸೇರಿದಂತೆ ಸರಕು ಸಾಗಾಣಿಕೆಯಲ್ಲಿ ಪ್ರಮುಖ ಪಾತ್ರ ವಹಿಸುವ ಅಸಂಘಟಿತ ಕಾರ್ಮಿಕರಾದ ಈ ವಿಭಾಗದ ಹಮಾಲಿ ಕಾರ್ಮಿಕರು ರಟ್ಟೆಯ ಬಿಟ್ಟರೇ ಆಸ್ತಿಯೇ ಇಲ್ಲದ ಆರ್ಥಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಹಿಂದುಳಿದಿರುವ ಶ್ರಮಜೀವಿಗಳಾದ ಇವರು ಮಾಲೀಕರು, ಗುತ್ತಿಗೆದಾರರು, ಹಾಗೂ ಸರ್ಕಾರದಿಂದ ನಿಷ್ಕಾಳಜಿಗೆ ಒಳಗಾಗಿರುವ ಸಮುದಾಯವಾಗಿದೆ. ಕರ್ನಾಟಕ ರಾಜ್ಯ ಹಮಾಲಿ ಕಾರ್ಮಿಕರ ಫೆಡರೇಶನ್ (ಸಿಐಟಿಯು) ನೇತೃತ್ವದಲ್ಲಿ ಹಲವು ವರ್ಷಗಳಿಂದ ಸಂಘಟಿತರಾದ ಹಮಾಲಿ ಕಾರ್ಮಿಕರು ತಮ್ಮ ಬದುಕಿನ ಪ್ರಶ್ನೆಗಳಿಗಾಗಿ ಹತ್ತು ಹಲವಾರು ಹೋರಾಟಗಳನ್ನು ನಡೆಸುತ್ತಾ ಬಂದಿದ್ದರಿಂದ ಅಲ್ಪಸ್ವಲ್ಪ ಸಮಸ್ಯೆಗಳಿಗೆ ಪರಿಹಾರ ಕಂಡುಕೊಂಡಿದ್ದರು ಪ್ರಮುಖ ಬೇಡಿಕೆಗಳು ನೆನಗುದಿಗೆ ಬಿದ್ದಿವೆ. ಅದಕ್ಕಾಗಿ ಮುಂದಿನ ದಿನಗಳಲ್ಲಿ ನಡೆಸಬೇಕಾದ ಹೋರಾಟ ಕಾರ್ಯಕ್ರಮಗಳನ್ನು ರೂಪಿಸುವ ನಿಟ್ಟಿನಲ್ಲಿ ಸಮಾವೇಶವನ್ನು ಸಂಘಟಿಸಲು ತೀರ್ಮಾನಿಸಿದೆ. ಈ ವಿಭಾಗಗಳ ಹಮಾಲಿ ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸಮಾವೇಶವನ್ನು ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದರು. ಈ ಸಂದರ್ಭದಲ್ಲಿ ಬಸವರಾಜ ಪೂಜಾರ, ಗುಡ್ಡಪ್ಪ ಮಾಳಗಿ, ಕರಿಯಪ್ಪ ಲಿಂಗದಳ್ಳಿ, ಶಂಕ್ರಪ್ಪ ಕಾಳಿ, ಫಕ್ಕಿರೇಶ ಮ್ಯಾಗೇರಿ, ಚಂದ್ರು ದೇವಗಿರಿ, ಹನುಮಂತಪ್ಪ ಕನಕಾಪುರ, ಫಕ್ಕಿರೇಶ ದೇವಸೂರು ಸೇರಿದಂತೆ ಇತರರು ಇದ್ದರು.
;Resize=(128,128))
;Resize=(128,128))
;Resize=(128,128))
;Resize=(128,128))