ಸಾರಾಂಶ
ಸಂಡೂರು: ಅಕ್ರಮ ಸಕ್ರಮದಲ್ಲಿ ಫಾರಂ 57ರ ಅಡಿ ಸಲ್ಲಿಸಲಾದ ಅರ್ಜಿಗಳನ್ನು ತಿರಸ್ಕರಿಸಬೇಡಿ ಎಂದ ರೈತರು ರೈತ ಸಂಘದ ನೇತೃತ್ವದಲ್ಲಿ ಇತ್ತೀಚೆಗೆ ತಹಸೀಲ್ದಾರ್ ಅವರಿಗೆ ಮನವಿ ಸಲ್ಲಿಸಿದರು.
ತಾಲೂಕಿನ ತೋರಣಗಲ್ಲು ಹೋಬಳಿ ವ್ಯಾಪ್ತಿಯ ಮಾಳಾಪುರ ಗ್ರಾಮದ ಸರ್ವೆ ನಂ. 123ರಲ್ಲಿನ 47 ಎಕರೆ 63 ಸೆಂಟ್ಸ್ ವಿಸ್ತೀರ್ಣವಿರುವ ಜಮೀನು ಎ ಡಬ್ಲು ಜಮೀನಾಗಿದೆ. ಈ ಜಮೀನುಗಳನ್ನು ತಾತ ಮುತ್ತಾತನ ಕಾಲದಿಂದ ಉಳುಮೆ ಮಾಡುತ್ತಿರುವ 16 ರೈತ ಕುಟುಂಬಗಳು ಅಕ್ರಮ ಸಕ್ರಮದ ಅಡಿಯಲ್ಲಿ ಪಟ್ಟಕ್ಕಾಗಿ ಫಾರಂ ನಂ.57 ಸಲ್ಲಿಸಿದ್ದೇವೆ. ಸಹಾಯಕ ಆಯುಕ್ತರ ಆದೇಶ ಬರುವವರೆಗೂ ಅರ್ಜಿ ತಿರಸ್ಕರಿಸಬಾರದು ಎಂದು ಕೋರಿದರು.ಶಿರಸ್ತೇದಾರ್ ಕೆ.ಎಂ. ಶಿವಕುಮಾರ್ ಅವರಿಗೆ ಮನವಿ ಸಲ್ಲಿಸಿ ಮಾತನಾಡಿದ ರೈತ ಸಂಘದ ಜಿಲ್ಲಾಧ್ಯಕ್ಷ ಕೆ. ದೇವೇಂದ್ರ, ಈ ಜಮೀನನ್ನು ಕೆಲವರು ಕೊಟ್ಟಿ ದಾಖಲೆಗಳನ್ನು ಸೃಷ್ಟಿಸಿ, ಜಮೀನುಗಳ ಪಹಣಿಯಲ್ಲಿ ತಮ್ಮ ಹೆಸರನ್ನು ನೋಂದಾಯಿಸಿಕೊಂಡಿದ್ದರು. ರೈತರು ಇದನ್ನು ವಿರೋಧಿಸಿದ್ದರು. ಈ ಕುರಿತು ತನಿಖೆ ನಡೆಸಿ, ಪಹಣಿಯಲ್ಲಿನ ರೈತರು ಸಾಗುವಳಿ ಮಾಡುತ್ತಿಲ್ಲ. ಕಚೇರಿಯಲ್ಲಿ ಅವರಿಗೆ ಮಂಜೂರಾದ ದಾಖಲೆಗಳು ಇಲ್ಲ. 16 ರೈತರು ಸಾಗುವಳಿ ಮಾಡುತ್ತಿರುವುದಾಗಿ ಸಹಾಯಕ ಆಯುಕ್ತರಿಗೆ ವರದಿ ಸಲ್ಲಿಸಿದ್ದರು ಎಂದರು.
ಸಹಾಯಕ ಆಯುಕ್ತರು ಜಮೀನಿನ ಪಹಣಿಯಲ್ಲಿನ ಹೆಸರುಗಳನ್ನು ರದ್ದುಗೊಳಿಸಿ, ಜಮೀನು ಕರ್ನಾಟಕ ಸರ್ಕಾರದ್ದು ಎಂದು ಆದೇಶಿಸಿದ್ದಾರೆ. ಈ ಜಮೀನುಗಳಿಗೆ ಸಾಗುವಳಿ ಮಾಡುವ ರೈತರು ಫಾರಂ 57 ಸಲ್ಲಿಸಿದ್ದಾರೆ. ಆದರೆ, ಗ್ರಾಮ ಕಂದಾಯ ಅಧಿಕಾರಿಗಳು ನಿಮ್ಮ ಜಮೀನಿಗೆ ಸರ್ವೆ ಮಾಡಲು ಆದೇಶವಿಲ್ಲ ಎಂದು ಹೇಳುತ್ತಿದ್ದಾರೆ. ರೈತರು ಸಾಗುವಳಿ ಮಾಡುವ ಜಮೀನು ಅನಾಧೀನ ಜಮೀನಾಗಿದ್ದು, ಸಹಾಯಕ ಆಯುಕ್ತರ ಆದೇಶ ಬರುವವರೆಗೆ ರೈತರ ಅರ್ಜಿಗಳನ್ನು ತಿರಸ್ಕಾರ ಮಾಡಬಾರದು. ತಿರಸ್ಕಾರ ಮಾಡಿದಲ್ಲಿ ಉಗ್ರ ಹೋರಾಟ ನಡೆಸಲಾಗುವುದೆಂದು ಎಚ್ಚರಿಸಿದರು.ರೈತ ಸಂಘದ ಜಿಲ್ಲಾ ಉಪಾಧ್ಯಕ್ಷ ಡಿ. ಬಸವರಾಜ, ತಾಲೂಕು ಘಟಕದ ಅಧ್ಯಕ್ಷ ಜಿ. ಶಾಂತಪ್ಪ, ರಾಜ್ಯ ಸಂಘದ ಸಹ ಕಾರ್ಯದರ್ಶಿ ವಿ.ಎಸ್. ಶಂಕರ್, ಜಿಲ್ಲಾ ಕಾರ್ಯದರ್ಶಿ ಉಬ್ಬಲಗಂಡಿ ಹೊನ್ನೂರಪ್ಪ, ಮುಖಂಡರಾದ ದೊಡ್ಡ ಮಲ್ಲಪ್ಪ, ಚಂದ್ರಶೇಖರ್, ವಾಮಣ್ಣ, ಗಂಡಿ ಮಾರೆಪ್ಪ, ಓಂಕಾರಪ್ಪ, ರೈತರಾದ ಎನ್. ತಿಪ್ಪೇಸ್ವಾಮಿ, ಎಂ. ಹನುಮಯ್ಯ, ಕೆ. ನಾಗರಾಜ, ಅಲ್ಲಾಭಕ್ಷ್, ಎಸ್. ಓಬಣ್ಣ, ಎಚ್.ಎನ್. ಕಾಶಪ್ಪ, ಬಸವರಾಜ, ಪುಷ್ಪಾವತಿ, ಸಿದ್ದಮ್ಮ, ಚೌಡಮ್ಮ, ಮಾರೆಕ್ಕಾ, ರಾಮಕೃಷ್ಣ, ಬಿ.ಎಂ. ಹೊನ್ನೂರಸ್ವಾಮಿ, ಲಕ್ಷ್ಮಿ, ಜಗದೀಶ್, ನವೀನ್‌ಕುಮಾರ್, ಡ್ರೈವರ್ ಸಿದ್ದಯ್ಯ ಉಪಸ್ಥಿತರಿದ್ದರು.