ಗದಗ ತಾಲೂಕನ್ನು ತಕ್ಷಣವೇ ಬರಪೀಡಿತ ಪ್ರದೇಶವೆಂದು ಘೋಷಿಸಿಸಬೇಕು ಎಂದು ಒತ್ತಾಯಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಮುಳಗುಂದ ಘಟಕದ ವತಿಯಿಂದ ಗದಗ ತಹಸೀಲ್ದಾರ್‌ ಶ್ರೀನಿವಾಸಮೂರ್ತಿ ಕುಲಕರ್ಣಿ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.

ಮುಳಗುಂದ: ಗದಗ ತಾಲೂಕನ್ನು ತಕ್ಷಣವೇ ಬರಪೀಡಿತ ಪ್ರದೇಶವೆಂದು ಘೋಷಿಸಿಸಬೇಕು ಎಂದು ಒತ್ತಾಯಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಮುಳಗುಂದ ಘಟಕದ ವತಿಯಿಂದ ಗದಗ ತಹಸೀಲ್ದಾರ್‌ ಶ್ರೀನಿವಾಸಮೂರ್ತಿ ಕುಲಕರ್ಣಿ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.

ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿನಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗದ ಹಿನ್ನೆಲೆಯಲ್ಲಿ ಅನಾವೃಷ್ಟಿಯ ಪರಿಸ್ಥಿತಿ ನಿರ್ಮಾಣವಾಗಿದೆ. ಹಿಂಗಾರು ಮಳೆ ಕೂಡಾ ಬಾರದ ಸ್ಥಿತಿ ಉಂಟಾಗಿದೆ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರು ಕೂಡಾ ಭೇಟಿ ನೀಡಿ ವಾಸ್ತವ ಪರಿಸ್ಥಿತಿ ನೋಡಿದ್ದಾರೆ, ಆದರೂ ಈ ವರೆಗೆ ಬರಪೀಡಿತ ಪ್ರದೇಶ ಪಟ್ಟಿಗೆ ಸೇರಿಸಿಲ್ಲ, ಇದರಿಂದ ರೈತ ಸಮುದಾಯ ಆತಂಕಗೊಂಡಿದೆ.

ಹೆಸರು, ಶೇಂಗಾ, ಹತ್ತಿ, ಮೆಣಸಿನಕಾಯಿ, ಗೋವಿನ ಜೋಳ ಸೇರಿದಂತೆ ವಿವಿಧ ಬೆಳೆಗಳ ಬಿತ್ತನೆ ಮಾಡಿದ್ದರು. ಆದರೆ ಬಿತ್ತನೆಯ ನಂತರ ಮಳೆ ಕೈಕೊಟ್ಟ ಪರಿಣಾಮ ಮೊಳಕೆಯೊಡೆದು ಬೆಳವಣಿಗೆಯ ಹಂತದಲ್ಲಿದ್ದ ಬೆಳೆಗಳು ತೇವಾಂಶದ ಕೊರತೆಯಿಂದ ಒಣಗಿ ಹಾಳಾಗಿವೆ. ಆದ್ದರಿಂದ ಸರ್ಕಾರ ಕೂಡಲೇ ಬೆಳೆ ವಿಮೆ ಬಿಡುಗಡೆ ಹಾಗೂ ರೈತರ ಬೆಳೆಸಾಲ ಮನ್ನಾ ಮಾಡಬೇಕು. ಗದಗ ತಾಲೂಕನ್ನು ಬರಪೀಡಿತ ಪ್ರದೇಶವೆಂದು ಘೋಷಿಸಬೇಕು. ಇಲ್ಲವಾದರೆ ಸರ್ಕಾರದ ವಿರುದ್ದ ರಸ್ತೆ ತಡೆದು ಪ್ರತಿಭಟಿಸಲಾಗುವುದು ಎಂದು ತಿಳಿಸಿದರು.

ಗದಗ ಕೃಷಿ ಸಹಾಯಕ ನಿದೇರ್ಶಕ ಮಲ್ಲಯ್ಯ ಕೊರಣ್ಣವರ, ರೈತ ಸಂಘದ ಅಧ್ಯಕ್ಷ ದೇವಪ್ಪ ಅಣ್ಣಿಗೇರಿ, ಬಸವರಾಜ ಕರಿಗಾರ, ದೇವರಾಜ ಸಂಗನಪೇಟಿ, ಮಹಾಂತೇಶ ಗುಂಜಳ, ದತ್ತಪ್ಪ ಯಳವತ್ತಿ, ಮಹ್ಮದಲಿ ಶೇಖ, ಮಹಾಂತೇಶ ಬಳ್ಳಾರಿ, ಈರಪ್ಪ ದೋಟಿಕಲ್ ಇದ್ದರು.

ಬರಗಾಲ ಘೋಷಣೆ, 12ರಂದು ನರಗುಂದ ಬಂದ್‌:

ಮುಂಗಾರು ಹಂಗಾಮಿನಲ್ಲಿ ತಾಲೂಕಿನಲ್ಲಿ ಮಳೆಯಾಗದೆ, ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದರೂ ಸರ್ಕಾರ ಈ ತಾಲೂಕನ್ನು ಬರಪೀಡಿತ ಎಂದು ಘೋಷಣೆ ಮಾಡಿಲ್ಲ, ಹೀಗಾಗಿ ನರಗುಂದ ಬಂದ್‌ ಕರೆ ನೀಡಲಾಗಿದೆ ಎಂದು ಕರ್ನಾಟಕ ರಾಜ್ಯ ರೈತ ಸೇನೆ ಅಧ್ಯಕ್ಷ ಶಂಕ್ರಣ್ಣ ಅಂಬಲಿ ಹೇಳಿದರು.ನರಗುಂದ ಪಟ್ಟಣದ ಮಹದಾಯಿ ಮಹಾ ವೇದಿಕೆಯಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗದಗ ಜಿಲ್ಲೆಯ 7 ತಾಲೂಕಿನಲ್ಲಿ ಸರ್ಕಾರ ಕೇವಲ ಗಜೇಂದ್ರಗಡವನ್ನು ಮಾತ್ರ ಬರಗಾಲ ಪೀಡಿತ ಪ್ರದೇಶವೆಂದು ಘೋಷಣೆ ಮಾಡಿ ಉಳಿದ 6 ತಾಲೂಕುಗಳಿಗೆ ಸರ್ಕಾರ ಅನ್ಯಾಯ ಮಾಡಿದೆ ಎಂದು ಹೇಳಿದರು.ಮುಂಗಾರು ಹಂಗಾಮಿನಲ್ಲಿ ತಾಲೂಕಿನಲ್ಲಿ ಅಲ್ಪಸ್ವಲ್ಪ ಮಳೆಯಾಗಿತ್ತು. ಆನಂತರ ದಿನಗಳಲ್ಲಿ ಮಳೆಯಾಗದೇ ಇರುವುದರಿಂದ ಬಿತ್ತನೆ ಮಾಡಿದ ಬೆಳೆಗಳು ಒಣಗಿವೆ. ನರಗುಂದ ಸೇರಿ ಜಿಲ್ಲೆಯ 6 ತಾಲೂಕುಗಳನ್ನು ಬರಗಾಲವೆಂದು ಘೋಷಣೆ ಮಾಡಬೇಕು ಎಂದು ಆಗ್ರಹಿಸಿ ಸೆ. 12ರಂದು ಬೆಳಗ್ಗೆ 6 ಗಂಟೆಯಿಂದ ಸಂಜೆ 5 ಗಂಟೆ ವರೆಗೆ ಹುಬ್ಬಳ್ಳಿ-ಸೋಲ್ಲಾಪುರ ರಾಷ್ಟ್ರೀಯ ಹೆದ್ದಾರಿ ಬಂದ್‌ ಮಾಡಿ, ಶಾಂತಿಯುತ ಹೋರಾಟ ಮಾಡಲಾಗುವುದು ಎಂದು ಹೇಳಿದರು.

ಮಲಪ್ರಭಾ ಅಚ್ಚುಕಟ್ಟು ಪ್ರದೇಶದ ಜಿಲ್ಲೆಗಳಾದ ಗದಗ, ಬೆಳಗಾವಿ, ಧಾರವಾಡ, ಬಾಗಲಕೋಟೆ ತೀವ್ರ ಬರ ಎಂದು ಘೋಷಿಸಿ, ಕೂಡಲೇ ಪರಿಹಾರ ನೀಡಬೇಕು ಮತ್ತು ಬೆಳೆ ವಿಮೆ ಪರಿಹಾರ ನೀಡಲು ಮತ್ತು ರೈತರ ಸಾಲ ಮನ್ನಾಕ್ಕಾಗಿ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಕ್ರಮ ಕೈಗೊಳ್ಳಬೇಕು ಎಂದು ಸರ್ಕಾರಕ್ಕೆ ಒತ್ತಾಯಿಸಿ ಬಂದ್‌ ಕರೆಯಲಾಗಿದೆ. ರೈತರು ಭಾಗವಹಿಸಿ ಯಶಸ್ವಿಗೊಳಿಸಲು ಮನವಿ ಮಾಡಿದರು.ಬಸವರಾಜ ಸಾಬಳೆ, ಉಮೇಶ ಮರ್ಚಪ್ಪನವರ, ವಿಠಲ ಜಾಧವ, ಚನ್ನು ನಂದಿ, ಮನೋಹರ ಹುಯಿಲಗೋಳ, ವೀರಣ್ಣ ಸೊಪ್ಪಿನ ಇದ್ದರು.