ಸಾರಾಂಶ
-ದಾವಣಗೆರೆಯಲ್ಲಿ ಎಪಿಎಂಸಿ ಕಾರ್ಯದರ್ಶಿ ರಾಣಿ ಅವರಿಗೆ ರೈತರ ಒಕ್ಕೂಟದಿಂದ ಮನವಿ ಪತ್ರ ಸಲ್ಲಿಕೆ
----ಕನ್ನಡಪ್ರಭವಾರ್ತೆ, ದಾವಣಗೆರೆ
ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯಿಂದ ಇ-ಟೆಂಡರ್ ಖರೀದಿ ವಹಿವಾಟನ್ನು ಜಿಲ್ಲೆಯ ಗ್ರಾಮೀಣ ಪ್ರದೇಶಕ್ಕೂ ವಿಸ್ತರಣೆ ಮಾಡುವಂತೆ ಒತ್ತಾಯಿಸಿ ಜಿಲ್ಲಾ ರೈತರ ಒಕ್ಕೂಟದ ನಿಯೋಗವು ನಗರದಲ್ಲಿ ಎಪಿಎಂಸಿಗೆ ಮನವಿ ಅರ್ಪಿಸಿದೆ.ನಗರದ ಎಪಿಎಂಸಿ ಕಚೇರಿಯಲ್ಲಿ ಸಮಿತಿ ಕಾರ್ಯದರ್ಶಿ ಎಚ್.ಸಿ.ಎಂ.ರಾಣಿ ಅವರಿಗೆ ಒಕ್ಕೂಟದ ಮುಖಂಡರಾದ ಬಿ.ಎಂ.ಸತೀಶ ಕೊಳೇನಹಳ್ಳಿ, ಬೆಳವನೂರು ಬಿ.ನಾಗೇಶ್ವರರಾವ್, ಡಾ.ವಿಜಯಲಕ್ಷ್ಮಿ ವೀರಮಾಚಿನೇನಿ, ಲೋಕಿಕೆರೆ ನಾಗರಾಜ ನೇತೃತ್ವದಲ್ಲಿ ಭೇಟಿ ಮಾಡಿ, ಮನವಿ ಅರ್ಪಿಸಿ, ಇ-ಟೆಂಡರ್ ಖರೀದಿ ವಹಿವಾಟನ್ನು ಗ್ರಾಮೀಣ ಭಾಗಕ್ಕೂ ವಿಸ್ತರಣೆ ಸೇರಿದಂತೆ ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿದರು.
ಇದೇ ವೇಳೆ ಮಾತನಾಡಿದ ಒಕ್ಕೂಟದ ಮುಖಂಡರು, ನಮ್ಮ ಮನವಿಗೆ ಸ್ಪಂದಿಸಿ ಎಪಿಎಂಸಿ ಪ್ರಾಂಗಣದಲ್ಲೇ ಇ-ಟೆಂಡರ್ ಪದ್ಧತಿಯಲ್ಲಿ ಖರೀದಿ ವಹಿವಾಟು ಶುರು ಮಾಡಲಾಗಿದೆ. ನಮ್ಮ ಮನವಿಗೆ ಸ್ಪಂದಿಸಿ, ಅದನ್ನು ಕಾರ್ಯರೂಪಕ್ಕೆ ತಂದ ಎಪಿಎಂಸಿ ಅಧಿಕಾರಿ, ಸಿಬ್ಬಂದಿಗೆ ರೈತರ ಪರವಾಗಿ ಕೃತಜ್ಞತೆ ಅರ್ಪಿಸುತ್ತೇವೆ. ಅದೇ ರೀತಿ ಇ-ಟೆಂಡರ್ ಜಾರಿಯಿಂದ ಧಾರಣೆಯಲ್ಲಿ ಏರಿಕೆಯಾಗಿದೆ. ಕೊಯ್ಲು ಮಾಡಿ, ರಾಶಿ ಮಾಡಿರುವ ಧಾನ್ಯವನ್ನು ಈಗಲೂ ಹಳ್ಳಿಗಳಲ್ಲಿ ನೇರವಾಗಿ ಖರೀದಿಸುತ್ತಿದ್ದು, ಇದರಿಂದ ಹಳ್ಳಿಗಳಲ್ಲಿ ಖರೀದಿಸುವ ಧಾನ್ಯಗಳ ಬೆಲೆ ಏರಿಕೆಯಾಗಿಲ್ಲ ಎಂದರು.ರೈತರು ಚೀಲಕ್ಕೆ ತುಂಬಿಸಿ, ಟ್ರ್ಯಾಕ್ಟರ್‌ಗೆ ಲೋಡ್ ಮಾಡಿಕೊಂಡು, ಎಪಿಎಂಸಿ ದಲಾಲಿ ಮಂಡಿಗೆ ತಂದು, ಸುರಿದರೆ ಇ-ಟೆಂಡರ್ ಖರೀದಿಯಾಗುತ್ತದೆ. ಖರೀದಿ ನಂತರ ಚೀಲಗಳಿಗೆ ತುಂಬಿ, ಎಲೆಕ್ಟ್ರಾನಿಕ್ ಸ್ಕೇಟ್ ಕಾಟಾದಲ್ಲಿ ತೂಕ ಮಾಡಬೇಕು. ಆ ನಂತರ ಚೀಲ ಹೊಲಿದೆ ಲಾರಿಗೆ ಲೋಡ್ ಮಾಡಬೇಕು. ಇ-ಟೆಂಡರ್ ಖರೀದಿ ವಹಿವಾಟನ್ನು ಗ್ರಾಮೀಣ ಪ್ರದೇಶದಲ್ಲಿ ಕಣ ಅಥವಾ ಕಾಂಕ್ರಿಟ್ ರಸ್ತೆಗಲ್ಲಿ ರಾಶಿ ಹಾಕಿ, ಸಂಗ್ರಹಿಸಿರುವ ಧಾನ್ಯಗಳಿಗೂ ವಿಸ್ತರಿಸಬೇಕು. ಆಗ ಹಳ್ಳಿಗಳಲ್ಲಿ ಮಾರಾಟ ಮಾಡುವ ಧಾರಣೆಯೂ ಹೆಚ್ಚುತ್ತದೆ. ಹಳ್ಳಿಗಳಿಗೆ ಇ-ಟೆಂಡರ್ ಪದ್ಧತಿ ವಿಸ್ತರಿಸಬೇಕಾದರೆ, ರೈತರು ಮಾರುಕಟ್ಟೆಗೆ ನಿತ್ಯ ಬೆಳಿಗ್ಗೆ 9 ಗಂಟೆಗೆ ಸ್ಯಾಂಪಲ್ ತರಲು ಎಪಿಎಂಸಿ ವ್ಯವಸ್ಥೆ ಮಾಡಬೇಕು ಎಂದು ಅವರು ಆಗ್ರಹಿಸಿದರು.
ಪ್ರತಿ ಸ್ಯಾಂಪಲ್‌ಗೂ ಲಾಟ್ ನಂಬರ್ ನೀಡಿ, ಇ-ಟೆಂಡರ್ ನಲ್ಲೇ ಖರೀದಿ ವಹಿವಾಟು ಆಗಬೇಕು. ಹೀಗೆ ಮಾಡುವುದರಿಂದ ಮಧ್ಯವರ್ತಿ, ದಲಾಲರ ಮಧ್ಯ ಪ್ರವೇಶ ಇಲ್ಲದೇ, ರೈತರಿಂದ ಖರೀದಿದಾರರಿಗೆ ನೇರ ವ್ಯಾಪಾರವಾಗುತ್ತದೆ. ಅತೀ ಹೆಚ್ಚು ಬೆಲೆ ನಮೂದಿಸಿದ ಯಶಸ್ವಿ ಖರೀದಿದಾರರು ಹಳ್ಳಿಗಳಲ್ಲಿ ರಾಶಿ ಮಾಡಿರುವ ಸ್ಥಳಕ್ಕೆ ಹೋಗಿ, ಲೋಡ್ ಮಾಡಿಕೊಂಡು ವೇ ಬ್ರಿಡ್ಜ್ ನಲ್ಲಿ ತೂಕ ಮಾಡಿಸಿ, ರೈತನಿಗೆ ಆನ್ ಲೈನ್ ಮೂಲಕ ಪೇಮೆಂಟ್ ಮಾಡುವ ವ್ಯವಸ್ಥೆಯನ್ನು ಜಾರಿಗೊಳಿಸಬೇಕು. ಇದರಿಂದ ದಲಾಲಿ ಮಂಡಿಗೆ ತಂದು, ಸುರಿದು, ಖರೀದಿ ನಂತರ ಚೀಲಕ್ಕೆ ತುಂಬಿ, ತೂಕ ಮಾಡಿ, ಹೊಲೆಡು, ಮತ್ತೆ ಲಾರಿಗೆ ಲೋಡ್ ಮಾಡುವ ಮಾನವ ಶ್ರಮ, ಸಮಯ ಉಳಿಯುತ್ತದೆ. ರೈತರಿಗೂ ನ್ಯಾಯಯುತ ವ್ಯಾಪಾರ, ವಹಿವಾಟು ಒದಗಿಸಿದಂತಾಗುತ್ತದೆ ಎಂದು ಅವರು ಮಾಹಿತಿ ನೀಡಿದರು.
ಈಗ ಇ-ಟೆಂಡರ್ ಖರೀದಿಯಿಂದಾಗಿ ಬತ್ತ, ಮೆಕ್ಕೆಜೋಳ ಧಾರಣೆ ದಿನದಿಂದ ದಿನಕ್ಕೆ ಏರಿಕೆಯಾಗಿದ್ದು, ಹಳ್ಳಿಗಳಿಗೂ ಇ-ಟೆಂಡರ್ ಖರೀದಿ ವಿಸ್ತರಿಸಬೇಕು. ಪೇಮೆಂಟ್ ಪದ್ಧತಿ ಕಡ್ಡಾಯ ಜಾರಿಗೆ ತರಬೇಕು. ಹಣ ಕೊಡಲು ವಿಳಂಬ ಮಾಡಿದವೆ ಅಂತಹವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಜರುಗಿಸಬೇಕು. ಪೇಮೆಂಟ್ ಸ್ಲಿಪ್‌ನಲ್ಲಿ ಖರೀದಿದಾರರ ಹೆಸರಷ್ಟೇ ಅಲ್ಲ, ರೈತರ ಹೆಸರು, ಊರು, ಖರೀದಿಸಿದ ಬೆಲೆ ಕಡ್ಡಾಯವಾಗಿ ನಮೂದಿಸಬೇಕು. ಪೇಮೆಂಟ್ ಆದ ತಕ್ಷಣ ರೈತನ ಬ್ಯಾಂಕ್ ಖಾತೆಗೆ ಹಣ ಜಮಾ ಆಗಿದ್ದನ್ನು ಪರಿಶೀಲಿಸಬಹುದು. ಶ್ಯೂಟ್ ಪಡೆಯುವ, ಡಿಸ್ಕೌಂಟ್ ಪದ್ಧತಿ ಸಂಪೂರ್ಣ ನಿಷೇಧಿಸಬೇಕು. ಶ್ಯೂಟ್ ಪಡೆದವರು, ಡಿಸ್ಕೌಂಟ್ ಕೇಳಿದವರನ್ನು ತಕ್ಷಣ ಬಂಧಿಸಬೇಕು. ಹಮಾಲರ ಕೂಲಿ ಸಂಪೂರ್ಣವಾಗಿ ಖರೀದಿದಾರರೆ ಭರಿಸಬೇಕು. ಹಮಾಲರು ಸ್ಯಾಂಪಲ್, ತಳಗಾಳು ಪಡೆಯುವುದನ್ನು ನಿಷೇಧಿಸಬೇಕು ಎಂದು ಅವರು ಆಗ್ರಹಿಸಿದರು.ರೈತ ಮುಖಂಡರಾದ ಬೆಳವನೂರು ಬಿ.ನಾಗೇಶ್ವರರಾವ್, ಡಾ.ವಿಜಯಲಕ್ಷ್ಮಿ ವೀರಮಾಚಿನೇನಿ, ದೂಡಾ ಮಾಜಿ ಅಧ್ಯಕ್ಷ, ಹಿರಿಯ ವಕೀಲ ಎ.ವೈ.ಪ್ರಕಾಶ, ಧನಂಜಯ ಕಡ್ಲೇಬಾಳು, ಗೋಣಿವಾಡ ಮಂಜುನಾಥ, ರುದ್ರಕಟ್ಟೆ ಪರಮೇಶ್ವರಪ್ಪ, ಆರುಂಡಿ ಪುನೀತ, ಮಾಜಿ ಮೇಯರ್ ಕೆ.ಆರ್.ವಸಂತಕುಮಾರ, ಅಣಬೇರು ಕುಮಾರಸ್ವಾಮಿ, ಶಿವಪ್ರಕಾಶ, ಗೋಪನಾಳ ಪಾಲಾಕ್ಷಪ್ಪ, ವಡ್ಡಿನಹಳ್ಳಿ ಸಿದ್ದೇಶ, ಆರನೇ ಕಲ್ಲು ವಿಜಯಕುಮಾರ, ಕಾಶೀಪುರ ಸುರೇಶ, ಕುರ್ಕಿ ರೇವಣಸಿದ್ದಪ್ಪ, ಐಗೂರು ತಿಪ್ಪೇಸ್ವಾಮಿ ಇದ್ದರು.
ಮನವಿ ಸ್ವೀಕರಿಸಿದ ಎಪಿಎಂಸಿ ಕಾರ್ಯದರ್ಶಿ ಎಚ್.ಸಿ.ಎಂ.ರಾಣಿ ಮಾತನಾಡಿ, ಗ್ರಾಮೀಣ ಪ್ರದೇಶಕ್ಕೂ ಇ-ಟೆಂಡರ್ ವಿಸ್ತರಿಸುವ ಬೇಡಿಕೆ ಚೆನ್ನಾಗಿದೆ. ಇದರ ಸಾಧಕ ಬಾಧಕದ ಕೂಲಂಕಷ ಚರ್ಚೆಗಾಗಿ ವರ್ತಕರ ಮತ್ತು ರೈತರ ಸಭೆಯನ್ನು ಎಪಿಎಂಸಿ ಆಡಳಿತಾಧಿಕಾರಿಯಾದ ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿಯವರ ಅಧ್ಯಕ್ಷತೆಯಲ್ಲಿ ನಡೆಸಿ, ಸೂಕ್ತ ನಿರ್ಣಯ ಅಂಗೀಕರಿಸುವ ಭರವಸೆ ನೀಡಿದರು.............ಫೋಟೊ: ದಾವಣಗೆರೆಯಲ್ಲಿ ಎಪಿಎಂಸಿ ಕಾರ್ಯದರ್ಶಿ ಎಚ್.ಎಂ.ಸಿ.ರಾಣಿ ಅವರಿಗೆ ಜಿಲ್ಲೆಯ ರೈತರ ಒಕ್ಕೂಟದ ನಿಯೋಗ ಮನವಿ ಅರ್ಪಿಸಿತು.
----