ಬೆಳೆಗೆ ತಕ್ಷಣ ಭದ್ರಾ ನೀರು ಹರಿಸಲು ಒತ್ತಾಯ

| Published : Jul 26 2024, 01:34 AM IST

ಸಾರಾಂಶ

ದಾವಣಗೆರೆಯಲ್ಲಿ ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ ಮುಖಾಂತರ ರಾಜ್ಯ ಸರ್ಕಾರಕ್ಕೆ ಭಾರತೀಯ ರೈತ ಒಕ್ಕೂಟದಿಂದ ಮನವಿ ಅರ್ಪಿಸಲಾಯಿತು.

ಕನ್ನಡಪ್ರಭ ವಾರ್ತೆ ದಾವಣಗೆರೆ

ಮಳೆಗಾಲದ ಬೆಳೆಗಳ ಸಲುವಾಗಿ ಭದ್ರಾ ಅಣೆಕಟ್ಟೆಯಿಂದ ಅಚ್ಚುಕಟ್ಟು ಪ್ರದೇಶಗಳಿಗೆ ತಕ್ಷಣವೇ ನೀರು ಹರಿಸಲು ಒತ್ತಾಯಿಸಿ ಭಾರತೀಯ ರೈತ ಒಕ್ಕೂಟ ಭದ್ರಾ ಶಾಖೆಯಿಂದ ಜಿಲ್ಲಾ ಆಡಳಿತದ ಮುಖಾಂತರ ರಾಜ್ಯ ಸರ್ಕಾರಕ್ಕೆ ಮನವಿ ಅರ್ಪಿಸಲಾಯಿತು.

ನಗರದಲ್ಲಿ ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ ಅವರನ್ನು ಭೇಟಿ ಮಾಡಿದ ಭಾರತೀಯ ರೈತ ಒಕ್ಕೂಟದ ಅಧ್ಯಕ್ಷ ಶಾಬನೂರು ಎಚ್.ಆರ್.ಲಿಂಗರಾಜ ನೇತೃತ್ವದ ರೈತರ ನಿಯೋಗವು, ಭದ್ರಾ ಅಣೆಕಟ್ಟೆಯಿಂದ ಮಳೆಗಾಲದ ಬೆಳೆ ಬೆಳೆಯಲು, ಭತ್ತ ನಾಟಿ ಮಾಡಲು ತಕ್ಷಣ‍ವೇ ನಾಲೆಗಳಿಗೆ ನೀರು ಹರಿಸುವಂತೆ ಡಿಸಿ ಮೂಲಕ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿಗಳಿಗೆ ಮನವಿ ಅರ್ಪಿಸಿದರು.

ಇದೇ ವೇಳೆ ಮಾತನಾಡಿದ ಶಾಬನೂರು ಎಚ್.ಆರ್.ಲಿಂಗರಾಜ, ಈಗಾಗಲೇ ಭದ್ರಾ ಅಚ್ಚುಕಟ್ಟು ರೈತರು ಭತ್ತದ ಸಸಿ ಮಾಡಿಕೊಂಡು, ನಾಟಿ ಮಾಡಲು ನೀರಿಗಾಗಿ ಕಾದಿದ್ದಾರೆ. ಇನ್ನೂ ಕೆಲವರು ಸಸಿ ಮಾಡಿಕೊಳ್ಳಲು ತುದಿಗಾಲಲ್ಲಿ ಕಾಯುತ್ತಿದ್ದಾರೆ. ಜು.22ರಂದು ದಾವಣಗೆರೆ, ಹರಿಹರ ಮತ್ತು ಹರಪನಹಳ್ಳಿ ತಾಲೂಕಿನ ಅಚ್ಚುಕಟ್ಟು ರೈತರ ಸಭೆಯಲ್ಲಿ, ತಕ್ಷಣ‍ವೇ ನೀರು ಹರಿಸುವಂತೆ ನಿರ್ಣಯ ಕೈಗೊಂಡು ಜಿಲ್ಲಾಡಳಿತಕ್ಕೆ ಮನವಿ ಪತ್ರ ಸಲ್ಲಿಸಲಾಗಿತ್ತು ಎಂದರು.

ಒಕ್ಕೂಟದ ಗೌರವಾಧ್ಯಕ್ಷ, ಮಾಜಿ ಸಚಿವ ಎಸ್.ಎ.ರವೀಂದ್ರನಾಥರ ನೇತೃತ್ವದಲ್ಲಿ ಜು.23ರಂದು ಜಿಲ್ಲಾಧಿಕಾರಿ ಕಚೇರಿಯಲ್ಲಿ ರೈತರ ಸಭೆಯಲ್ಲಿ ಶೀಘ್ರವೇ ನೀರು ಬಿಡಲು ಒತ್ತಾಯಿಸಿ ರಾಷ್ಟ್ರೀಯ ಹೆದ್ದಾರಿ ಬಂದ್ ಗೆ ಕರೆ ನೀಡಿದ್ದರೂ, ಸರ್ಕಾರದ ಭರವಸೆ ಮೇರೆಗೆ ಮುಂದೂಡಿದ್ದೆವು. ಈಗ ಸಾಕಷ್ಟು ಮಳೆಯಾಗಿ ಜಲಾಶಯ ತುಂಬುತ್ತಿದ್ದರೂ ನೀರು ಹರಿಸಲು ವಿಳಂಬ ಮಾಡು ತ್ತಿರುವು ಸರಿಯಲ್ಲ ಎಂದು ಆಕ್ಷೇಪಿಸಿದರು.

ಜಿಲ್ಲಾಧಿಕಾರಿ ಕಚೇರಿ ಸಭೆ ವೇಳೆ ಬೆಂಗಳೂರಿನಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನರ ಜೊತೆಗೆ ದೂರವಾಣಿಯಲ್ಲಿ ಮಾತನಾಡಿ ಇಲ್ಲಿಯ ವಸ್ತುಸ್ಥಿತಿ ವಿವರಿಸಿ, ಕೂಡಲೇ ನೀರು ಬಿಡುವಂತೆ ಮನವಿ ಮಾಡಲಾಗಿತ್ತು. ನೀರಾವರಿ ನಿಗಮದ ಸಭೆಯಲ್ಲಿ ನೀರು ಬಿಡುವ ಬಗ್ಗೆ ತೀರ್ಮಾನ ಕೈಗೊಳ್ಳುವುದಾಗಿ ಸಚಿವರು ಭರವಸೆ ನೀಡಿದ್ದರು. ಈಗ ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ, ಅಧೀಕ್ಷಕ ಅಭಿಯಂತರರು ಆ.5ರಂದು ಕಾಡಾ ಸಭೆ ಕರೆಯಲು ಸೂಚಿಸಿರುವುದಾಗಿ ವರದಿಯಾಗಿದೆ. ಇದು ರೈತ ವಿರೋಧಿ ತೀರ್ಮಾನವಾಗಿದೆ ಎಂದು ಅವರು ದೂರಿದರು.

ಜುಲೈ ವೇಳೆಗೆ ಭದ್ರಾ ಜಲಾಶಯ ಭರ್ತಿಯಾಗಿ ನೀರು ನದಿಗೆ ಹರಿದು ಹೋಗುತ್ತದೆ. ಇದು ಯಾರಿಗೆ ಪ್ರಯೋಜನ? ಕಾಲುವೆಗೆ ಇವಾಗಲೇ ನೀರು ಬಿಟ್ಟರೆ ಅಚ್ಚುಕಟ್ಟಿನ ಕೆರೆಗಳು ತುಂಬಿ, ಭತ್ತದ ನಾಟಿ ಭರದಿಂದ ಸಾಗುತ್ತದೆ. ಈಗ ನಾಟಿ ಮಾಡದೆ, ಕಾಲುವೆಗಳಲ್ಲಿ ನೀರು ಬಿಟ್ಟ ನಂತರ ನಾಟಿ ಮಾಡಿದರೆ ನವೆಂಬರ್ ಚಳಿಗಾಲ, ಮೂಡು ಗಾಳಿಗೆ ಭತ್ತ ಸಿಲುಕುತ್ತದೆ. ಇದರಿಂದ ಭತ್ತ ಜೋಳ್ಳಾಗಿ ಇಳುವರಿ ಕಡಿಮೆಯಾಗುತ್ತದೆ ಎಂದು ತಿಳಿಸಿದರು.

ನಾಲೆಗಳಿಗೆ ತಕ್ಷಣ ನೀರು ಹರಿಸಿದರೆ ಮಳೆಗಾಲದ ಬೆಳೆ ಮುಗಿದ ಮೇಲೂ ಜಲಾಶಯದಲ್ಲಿ 186 ಅಡಿ ನೀರು ಸಂಗ್ರಹವಾಗಿರುತ್ತದೆ. ಆದ್ದರಿಂದ ಸರ್ಕಾರ ಕೂಡಲೇ ಭದ್ರಾ ಅಚ್ಚುಕಟ್ಟು ಪ್ರದೇಶದ ನಾಲೆಗಳಿಗೆ ನೀರು ಬಿಡುವ ವ್ಯವಸ್ಥೆ ಮಾಡಬೇಕು. ಸರ್ಕಾರದ ತಪ್ಪು ನಿರ್ಣಯದಿಂದ ಕುಡಿಯುವ ನೀರು ಮತ್ತು ಬೇಸಿಗೆ ಬೆಳೆಗೆ ತೊಂದರೆಯಾದರೆ ಸರ್ಕಾರವೇ ಹೊಣೆ ಹೊರ ಬೇಕಾಗುತ್ತದೆ ಎಂದು ಶಾಮನೂರು ಎಚ್.ಆರ್.ಲಿಂಗರಾಜ ಎಚ್ಚರಿಸಿದರು.

ಒಕ್ಕೂಟದ ಕೊಂಡಜ್ಜಿ ಶಾನುಬೋಗರ ನಾಗರಾಜರಾವ್, ಎ.ಎಂ.ಮಂಜುನಾಥ, ಶಿರಮಗೊಂಡನಹಳ್ಳಿ ಕರಿಬಸಪ್ಪ, ಕುಂದುವಾಡ ಮಹೇಶಪ್ಪ ಇತರರು ನಿಯೋಗದಲ್ಲಿದ್ದರು.