ಸಾರಾಂಶ
ಗ್ರಾಮ ಸಭೆಯಲ್ಲಿ ಕ್ರಿಯಾ ಯೋಜನೆ ತಯಾರಿಸಿ ಅನುಮೋದನೆ ಪಡೆಯಬೇಕು. ಆದರೆ ಅಧಿಕಾರಿಗಳು ಕಚೇರಿಯಲ್ಲಿ ಕುಳಿತು ತಮಗೆ ಇಷ್ಟ ಬಂದ ರೀತಿಯಲ್ಲಿ ಯೋಜನೆ ಸಿದ್ಧಪಡಿಸುತ್ತಾರೆ. ನರೇಗಾ ಕಾಮಗಾರಿಗಳಿಗೆ ಯಂತ್ರಗಳನ್ನು ಬಳಕೆ ಮಾಡಬಾರದು ಎಂಬ ಆದೇಶವಿದ್ದರೂ ಯಂತ್ರಗಳನ್ನು ಬಳಕೆ ಮಾಡಲಾಗುತ್ತಿದೆ.
ಕನ್ನಡಪ್ರಭ ವಾರ್ತೆ ಬಂಗಾರಪೇಟೆ
ನರೇಗಾ ಕಾಮಗಾರಿಗಳಲ್ಲಿ ನಡೆಯುತ್ತಿರುವ ಅಕ್ರಮಗಳಿಗೆ ಕಡಿವಾಣ ಹಾಕಿ, ೧೫ನೇ ಹಣಕಾಸು ಯೋಜನೆಯಲ್ಲಿ ಆಗುತ್ತಿರುವ ಹಣ ದುರುಪಯೋಗ ನಿಯಂತ್ರಣ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕೆಂದು ಒತ್ತಾಯಿಸಿ ಕರ್ನಾಟಕ ದಲಿತ ರೈತ ಸೇನೆಯಿಂದ ತಾ.ಪಂ ಎದುರು ಪ್ರತಿಭಟನೆ ನಡೆಸಿ ಇಒ ರವಿಕುಮಾರ್ ಗೆ ಮನವಿ ಪತ್ರ ಸಲ್ಲಿಸಲಾಯಿತು. ಈ ವೇಳೆ ಕರ್ನಾಟಕ ದಲಿತ ರೈತ ಸೇನೆಯ ರಾಜ್ಯಾಧ್ಯಕ್ಷ ಹುಣಸನಹಳ್ಳಿ ಎಸ್.ವೆಂಕಟೇಶ ಮಾತನಾಡಿ, ನರೇಗಾ ಯೋಜನೆಗಳ ಅನುಷ್ಠಾನಕ್ಕೆ ಗ್ರಾಮ ಪಂಚಾಯಿತಿ ಮೂಲಕ ಗ್ರಾಮ ಸಭೆಗಳನ್ನು ನಡೆಸಿ ಅವುಗಳ ಮೂಲಕ ಕ್ರಿಯಾಯೋಜನೆಯನ್ನು ತಯಾರಿಸಬೇಕು ಎಂದರು.ಕಚೇರಿಯಲ್ಲಿ ಕ್ರಿಯಾಯೋಜನೆ
ಆದರೆ ಅಧಿಕಾರಿಗಳು ಕಚೇರಿಯಲ್ಲಿ ಕುಳಿತು ತಮಗೆ ಇಷ್ಟ ಬಂದ ರೀತಿಯಲ್ಲಿ ಕ್ರಿಯಾ ಯೋಜನೆ ತಯಾರಿಸಿ ಅನುಮೋದನೆ ಪಡೆಯುತ್ತಾರೆ. ನರೇಗಾ ಕಾಮಗಾರಿಗಳಿಗೆ ಯಂತ್ರಗಳನ್ನು ಬಳಕೆ ಮಾಡಬಾರದು ಎಂಬ ಆದೇಶವಿದ್ದರೂ ಸಹ ಕೆಲವು ಪಿಡಿಒಗಳು ಇಂಜಿನಿಯರ್ ಗಳ ಜೊತೆಗೂಡಿ ಯೋಜನೆಯನ್ನು ದುರ್ಬಳಕೆ ಮಾಡುತ್ತಾ ಹಣವನ್ನು ಲೂಟಿ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.ತ್ಯಾಜ್ಯ ನಿರ್ವಹಣೆಗೆ ಆಗ್ರಹ
ಸ್ವಚ್ಛ ಭಾರತ್ ಮಿಷನ್ ಯೋಜನೆಯಡಿ ನಿರ್ಮಾಣವಾದ ಘನ ತ್ಯಾಜ್ಯ ವಿಲೇವಾರಿ ಘಟಕಗಳು ಆಟಕ್ಕೆ ಉಂಟು ಲೆಕ್ಕಕ್ಕೆ ಇಲ್ಲ ಎಂಬಂತಾಗಿದ್ದು ತ್ಯಾಜ್ಯಗಳು ಸರಿಯಾಗಿ ಕಾರ್ಯ ನಿರ್ವಹಣೆ ಮಾಡುತ್ತಿಲ್ಲ. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.ಈ ಸಂದರ್ಭದಲ್ಲಿ ಹೀರೆ ಕರಪನಹಳ್ಳಿ ಮುನಿರಾಜು, ಹುಳದೇನಹಳ್ಳಿ ವೆಂಕಟೇಶ್, ಕೀಲುಕೊಪ್ಪ ಮುನಿರಾಜ್, ಶ್ರೀನಿವಾಸ್, ಸತೀಶ್, ಸುಮನ್ ಮುಂತಾದವರು ಹಾಜರಿದ್ದರು.