ಸಾರಾಂಶ
ಧಾರವಾಡ:
ಧಾರವಾಡಕ್ಕೆ ಪ್ರತ್ಯೇಕ ಪಾಲಿಕೆ ವಿಚಾರವಾಗಿ ಧಾರವಾಡ ಸುತ್ತಲಿನ ಕೆಲವು ಹಳ್ಳಿಗಳನ್ನು ಸೇರ್ಪಡೆ ಮಾಡಿಕೊಂಡು ಸರ್ಕಾರಕ್ಕೆ ಶೀಘ್ರ ವಿಸ್ಕೃತ ಪ್ರಸ್ತಾವನೆ ಸಲ್ಲಿಸಲು ತಿರ್ಮಾನಿಸಲಾಗಿದೆ ಎಂದು ಮಹಾನಗರ ಪಾಲಿಕೆ ಆಯುಕ್ತ ಡಾ. ಈಶ್ವರ ಉಳ್ಳಾಗಡ್ಡಿ ಹೇಳಿದರು.ಇಲ್ಲಿಯ ಜರ್ನಲಿಸ್ಟ್ ಗಿಲ್ಡ್‌ನಲ್ಲಿ ಶುಕ್ರವಾರ ನಡೆದ ಮಾಧ್ಯಮ ಸಂವಾದದಲ್ಲಿ ಮಾತನಾಡಿದ ಅವರು, ಶಾಸಕ ವಿನಯ ಕುಲಕರ್ಣಿ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ಕಿತ್ತೂರಿನಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ಈ ಕುರಿತು ಚರ್ಚೆ ಬಂದು, ಸಭೆ ಮಾಡಲಾಗಿದೆ. ಈಗಿರುವ ಧಾರವಾಡ ವ್ಯಾಪ್ತಿಯ 26 ವಾರ್ಡ್‌ಗಳು ಸೇರಿದಂತೆ ಸಮೀಪದ ಚಿಕ್ಕಮಲ್ಲಿಗವಾಡ, ನರೇಂದ್ರ, ಮನಸೂರು, ಇಟಿಗಟ್ಟಿ, ದಾಸನಕೊಪ್ಪ, ಲಕಮಾಪೂರ, ಕವಲಗೇರಿ ಅಂತಹ ಹತ್ತು ಹಳ್ಳಿಗಳನ್ನು ಸೇರ್ಪಡೆ ಮಾಡಿಕೊಂಡು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಶಾಸಕರು ತಮಗೆ ಸೂಚಿಸಿದ್ದಾರೆ. ಉಳಿದಂತೆ 3 ಲಕ್ಷ ಜನಸಂಖ್ಯೆ, ತೆರಿಗೆ ಸಂಗ್ರಹ ಸೇರಿದಂತೆ ಪ್ರತ್ಯೇಕ ಪಾಲಿಕೆಗೆ ಧಾರವಾಡ ಸಂಪೂರ್ಣ ಅರ್ಹತೆ ಹೊಂದಿದ್ದು ಪ್ರಸ್ತಾವನೆ ನಂತರ ಸರ್ಕಾರ ಮುಂದಿನ ತೀರ್ಮಾನ ಕೈಗೊಳ್ಳಲಿದೆ ಎಂದರು.
ಕಸದ ಸಮಸ್ಯೆಗೆ ಮುಕ್ತಿ:ಪ್ರಸ್ತುತ ಹು-ಧಾ ಅವಳಿ ನಗರದಲ್ಲಿ 450 ಟನ್ ಕಸ ಸಂಗ್ರಹವಾಗುತ್ತಿದ್ದು, ಕಸ ನಿರ್ವಹಣೆಗೆಯೇ ಪಾಲಿಕೆಗೆ ತಲೆನೋವಾಗಿ ಪರಿಣಮಿಸಿದೆ. ಇಷ್ಟು ವರ್ಷಗಳ ಕಾಲ ಹುಬ್ಬಳ್ಳಿಯ ಕಾರವಾರ ರಸ್ತೆ ಹಾಗೂ ಧಾರವಾಡದ ಹೊಸಯಲ್ಲಾಪುರದ ಕಸ ಸಂಗ್ರಹಣಾ ಪ್ರದೇಶದಲ್ಲಿನ ಕಸವನ್ನು ಇಂದೋರ್ ಮಾದರಿಯಲ್ಲಿ ವಿಲೇವಾರಿ ಮಾಡಿ ನಂತರ ನಿತ್ಯದ ಕಸವನ್ನು ಸುಲಭವಾಗಿ ನಿರ್ವವಣೆ ಮಾಡಲು ಯೋಜಿಸಲಾಗಿದೆ. ಕೆಲವೇ ದಿನಗಳಲ್ಲಿ ಇದು ಯಶಸ್ವಿಯಾಗಲಿದ್ದು ಇನ್ಮುಂದೆ ಕಸ ಸಂಗ್ರಹ, ವಿಲೇವಾರಿ ಸಮಸ್ಯೆ ಎದುರಾಗುವುದಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಇದಲ್ಲದೇ, ಅವಳಿ ನಗರದಲ್ಲಿನ ರಸ್ತೆ, ಕಾಲುವೆ, ಒಳಚರಂಡಿ ಸೇರಿದಂತೆ ಇನ್ನಿತರೆ ಮಾಹಿತಿ ಸಂಗ್ರಹಿಸಿ 50 ವರ್ಷದ ಮುಂದಾಲೋಚನೆಯಲ್ಲಿ ಯೋಜನೆ ರೂಪಿಸಲು ಎಜೆನ್ಸಿಗೆ ಸಮೀಕ್ಷೆ ಮಾಡಲಾಗುತ್ತಿದೆ. ಕಸ ನಿರ್ವಹಣೆ ಹಾಗೂ ಸದ್ಯದಲ್ಲಿಯೇ ಇಡೀ ನಗರಕ್ಕೆ ಎಲ್‌ಇಡಿ ವಿದ್ಯುತ್ ಅಳವಡಿಕೆಯಿಂದ ಅವಳಿ ನಗರ ಸುಂದರವಾಗಲಿದೆ ಎಂದು ಆಯುಕ್ತರು ಹೇಳಿದರು.
ಕೆರೆ ಅಭಿವೃದ್ಧಿಗೆ ಬದ್ಧ:ಕೆಲಗೇರಿ ಕೆರೆ ಹಾಗೂ ಸಾಧನಕೇರಿ ಬಾರೋ ಸಾಧನಕೇರಿ ಕೆರೆ ಅಭಿವೃದ್ಧಿ ಹಾಗೂ ಕೊಳಚೆ ನೀರು ಬರದಂತೆ ಯೋಜನೆ ರೂಪಿಸಲಾಗುತ್ತಿದೆ ಎಂದ ಅವರು, ಖಾಲಿ ನಿವೇಶನಗಳಲ್ಲಿನ ಕಸ ಸ್ವಚ್ಛತೆ, ಒಳಚರಂಡಿ ಯೋಜನೆ, 24 ಗಂಟೆ ಕುಡಿಯುವ ನೀರಿನ ಯೋಜನೆ ಕಾರ್ಯಗತ, ಪಾರ್ಕಿಂಗ್ ಸಮಸ್ಯೆ, ರಸ್ತೆಗಳ ಸುಧಾರಣೆ, ವೃತ್ತಗಳ ಅಭಿವೃದ್ಧಿ ಸೇರಿದಂತೆ ಹಲವು ಕಾರ್ಯಗಳನ್ನು ಮಾಡಲು ಯೋಜನೆ ರೂಪಿಸಲಾಗಿದೆ. ಇದಕ್ಕಾಗಿ ಒಂದು ವರ್ಷದಲ್ಲಿ ₹ 550 ಕೋಟಿಗೂ ಹೆಚ್ಚು ಅನುದಾನ ಪಾಲಿಕೆಗೆ ಬಂದಿದೆ. ಮಹಾನಗರ ಪಾಲಿಕೆ ತನ್ನ ಕಾರ್ಯಗಳನ್ನು ಜನರಿಗೆ ತಿಳಿಸುವ ನಿಟ್ಟಿನಲ್ಲಿ ಪಾಲಿಕೆಯ 12 ವಲಯ ಸೇರಿದಂತೆ ಒಟ್ಟು 20 ಕಿಯೋಸ್ಕ್‌ಗಳನ್ನು ಸ್ಥಾಪಿಸಲಾಗುತ್ತಿದೆ. ಪಾಲಿಕೆ ನಡೆಸುತ್ತಿರುವ ಕಾಮಗಾರಿ, ಫೋಟೋಗಳ ಮಾಹಿತಿ ಇದರಲ್ಲಿ ಇರಲಿದೆ ಎಂದ ಉಳ್ಳಾಗಡ್ಡಿ, ಯಾವುದೇ ಕಾರಣಕ್ಕೂ ಅವಳಿ ನಗರದ ಜನರು ಅಕ್ರಮ-ಸಕ್ರಮ ನಿವೇಶನಗಳನ್ನು ಖರೀದಿಸಿ ಮೋಸಕ್ಕೆ ಹೋಗಬೇಡಿ. ಪಾಲಿಕೆ, ಹುಡಾದಿಂದ ಅನುಮೋದನೆಗೊಂಡ ನಿವೇಶಗಳನ್ನು ಖರೀದಿಸಿ ಎಂಬ ಸಲಹೆ ನೀಡಿದರು.
ಗಿಲ್ಡ್ ಅಧ್ಯಕ್ಷ ಡಾ. ಬಸವರಾಜ ಹೊಂಗಲ, ಪ್ರಧಾನ ಕಾರ್ಯದರ್ಶಿ ನಿಜಗುಣ ದಿಂಡಲಕೊಪ್ಪ ಹಾಗೂ ಪದಾಧಿಕಾರಿಗಳು ಇದ್ದರು.ಮೂರು ಪತ್ರ ಕಡ್ಡಾಯ:
ಇ-ಸ್ವತ್ತು ಯೋಜನೆಗೆ ವೇಗ ಕೊಡುವುದರ ಜತೆಗೆ ಅವಳಿ ನಗರದಲ್ಲಿ ಹೊಸ ಆಸ್ತಿ ಖರೀದಿ ಮತ್ತು ಮಾರಾಟಕ್ಕೆ ಕೃಷಿಯೇತರ ಜಮೀನು ಪತ್ರ (ಎನ್‌ಎ) ಬಡಾವಣೆ ಪರವಾನಗಿ ಪತ್ರ ( ಹುಡಾ ಒಪ್ಪಿಗೆ ಪತ್ರ) ಹಾಗೂ ಕಮ್ಮಿ ಜಾಸ್ತಿ ಪತ್ರ (ಕೆಜೆಪಿ) ಕಡ್ಡಾಯಗೊಳಿಸಲಾಗುವುದು. ಅವಳಿ ನಗರದಲ್ಲಿ ಆಸ್ತಿಗಳ ಅತಿಕ್ರಮಣ, ಪರಭಾರೆ ವೇಳೆ ಅಕ್ರಮ, ತಾಂತ್ರಿಕ ಸಮಸ್ಯೆಗಳನ್ನು ಸರಿಪಡಿಸಲು ಈ ಕ್ರಮಕೈಗೊಳ್ಳಲಾಗುತ್ತಿದೆ.ತಿಂಗಳಲ್ಲಿ ಪಾರ್ಕಿಂಗ್ ತೆರುವು:ಮುಂದಿನ ಒಂದು ತಿಂಗಳ ಅವಧಿಯಲ್ಲಿ ಅವಳಿ ನಗರದಲ್ಲಿ ಅತಿಕ್ರಮಣಗೊಂಡ ಪಾರ್ಕಿಂಗ್ ಸ್ಥಳಗಳನ್ನು ಮತ್ತೆ ತೆರುವುಗೊಳಿಸಲಾಗುವುದು. ಈಗಾಗಲೇ ಈ ಬಗ್ಗೆ ಸಮೀಕ್ಷೆ ನಡೆಸಲಾಗುತ್ತಿದೆ. ಕಟ್ಟಡ ಮಾಲೀಕರು ತಮ್ಮ ಕಟ್ಟಡಗಳ ಎದುರು ವಿಪರೀತ ವಾಹನಗಳನ್ನು ಪಾರ್ಕಿಂಗ್ ಮಾಡುತ್ತಿದ್ದಾರೆ. ನಗರದ ಮಧ್ಯ ಭಾಗದಲ್ಲಿ ಕೂಡ ಪಾರ್ಕಿಂಗ್ ವ್ಯವಸ್ಥೆಗೆ ಮೀಸಲಿಟ್ಟಿದ್ದ ಜಾಗೆಯನ್ನು ಮತ್ತೆ ಅತಿಕ್ರಮಣ ಮಾಡಿಕೊಳ್ಳಲಾಗಿದೆ. ಈ ಬಗ್ಗೆ ಒಂದು ವಾರ ಅವಧಿ ಕೊಟ್ಟು ನಂತರ ತೆರುವು ಕಾರ್ಯಾಚರಣೆ ನಡೆಸಲಾಗುವುದು ಎಂದರು ಡಾ. ಈಶ್ವರ ಉಳ್ಳಾಗಡ್ಡಿ.