ಉರುಸ್ ಹಿಂದು-ಮುಸ್ಲಿಮರ ಭಾವೈಕ್ಯತೆ ಸಂಕೇತ

| Published : Apr 21 2024, 02:17 AM IST

ಸಾರಾಂಶ

ದೇವರಹಿಪ್ಪರಗಿ: ಹಿಂದು ಮುಸ್ಲಿಮರ ಭಾವೈಕ್ಯತೆಯ ಸಂಕೇತ ಉರುಸ್ ಆಗಿದ್ದು, ಇಂತಹ ಸಮಾರಂಭಗಳಲ್ಲಿ ಎಲ್ಲರೂ ಒಂದುಗೂಡಿ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡು ಸಮಾಜಕ್ಕೆ ಎಲ್ಲರೂ ಒಂದೇ ಎಂಬ ಸಂದೇಶ ಸಾರಬೇಕೆಂದು ವಿಜಯಪುರದ ಅನುಗ್ರಹ ಕಣ್ಣಿನ ಆಸ್ಪತ್ರೆಯ ಮುಖ್ಯಸ್ಥ ಡಾ.ಪ್ರಭುಗೌಡ ಲಿಂಗದಳ್ಳಿ ಚಬನೂರ ಹೇಳಿದರು.

ಕನ್ನಡಪ್ರಭ ವಾರ್ತೆ ದೇವರಹಿಪ್ಪರಗಿ

ಹಿಂದು ಮುಸ್ಲಿಮರ ಭಾವೈಕ್ಯತೆಯ ಸಂಕೇತ ಉರುಸ್ ಆಗಿದ್ದು, ಇಂತಹ ಸಮಾರಂಭಗಳಲ್ಲಿ ಎಲ್ಲರೂ ಒಂದುಗೂಡಿ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡು ಸಮಾಜಕ್ಕೆ ಎಲ್ಲರೂ ಒಂದೇ ಎಂಬ ಸಂದೇಶ ಸಾರಬೇಕೆಂದು ವಿಜಯಪುರದ ಅನುಗ್ರಹ ಕಣ್ಣಿನ ಆಸ್ಪತ್ರೆಯ ಮುಖ್ಯಸ್ಥ ಡಾ.ಪ್ರಭುಗೌಡ ಲಿಂಗದಳ್ಳಿ ಚಬನೂರ ಹೇಳಿದರು.

ತಾಲೂಕಿನ ಹುಣಶ್ಯಾಳ ಗ್ರಾಮದ ಶ್ರೀ ಹಜರತ್ ಶಾಹ ಹುಸೇನ್ ಬಾಷಾ ದರ್ಗಾ ಜಾತ್ರಾ ಮಹೋತ್ಸವದ ಪ್ರಯುಕ್ತ ಶುಕ್ರವಾರ ನಡೆದ ಧರ್ಮ ಸಭೆಯಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದ ಅವರು, ಹಿಂದೂ-ಮುಸ್ಲಿಂ ಎಂಬ ಧರ್ಮಗಳ ಬೇಧ ಇಲ್ಲದೇ ಎಲ್ಲರೂ ಸಮಾನತೆಯಿಂದ ಉರುಸ​ನಲ್ಲಿ ಭಾಗಿಯಾಗುವುದು ಸಹೋದರತೆಗೆ ಸಾಕ್ಷಿಯಾಗಿದೆ. ದೇವರ ಸೃಷ್ಟಿಯಲ್ಲಿ ನಾವೆಲ್ಲರೂ ಒಂದೇ, ಎಲ್ಲಾ ಮನುಷ್ಯರಲ್ಲಿ ಹರಿಯುತ್ತಿರುವ ರಕ್ತದ ಬಣ್ಣ ಒಂದೇ, ಧರ್ಮ ಧರ್ಮಗಳಿಗಾಗಿ ಬಡೆದಾಡುವ ಈ ಕಾಲದಲ್ಲಿ ಉರುಸ್ ಎಲ್ಲರನ್ನೂ ಒಗ್ಗೂಡಿಸುವ ಕಾರ್ಯ ಮಾಡಿದೆ. ಹಿಂದೂ ಮುಸ್ಲಿಂ ಜಾತಿ ಬೇಧ ಭಾವವಿಲ್ಲದೇ ಸರ್ವಜನಾಂಗದ ಜನರು ಜಾತ್ರೆ ಸಡಗರದಲ್ಲಿ ಭಾಗವಹಿಸುವ ಮೂಲಕ ಹುಣಶ್ಯಾಳದ ಗ್ರಾಮಸ್ಥರು ರಾಜ್ಯದಲ್ಲಿ ಮಾದರಿಯಾಗಿದ್ದಾರೆ ಎಂದು ಹೇಳಿದರು.

ಯುವ ಮುಖಂಡ ಸಿದ್ದು ಬುಳ್ಳಾ ಮಾತನಾಡಿ, ಜಾತ್ರೆಗಳು ಭಾವೈಕ್ಯತೆಯನ್ನು ಬೆಸೆಯುವ ಮತ್ತು ಜನತೆಯನ್ನು ಸಾಮರಸ್ಯದಿಂದ ಬದುಕುವ ಕೆಲಸವನ್ನು ಮಾಡುತ್ತವೆ. ಗ್ರಾಮಸ್ಥರೆಲ್ಲರೂ ಸೇರಿ ದರ್ಗಾದ ಉರುಸ್ ಹಿಂದು ಮುಸ್ಲಿಂ ಭೇದ ಭಾವವಿಲ್ಲದೇ ಆಚರಿಸುತ್ತಿರುವುದು ಮಾದರಿಯ ಗ್ರಾಮವಾಗಿದೆ ಎಂದು ಹೇಳಿದರು.

ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ನೀಲೂರ ಹಜರತ್ ಸಯ್ಯದ್ ಸರ್ತಾಜ್ ಪಾಷಾ ಖಾದ್ರಿ, ಯಲಗೋಡ ಬೆಟ್ಟದ ಪರಮಾನಂದೇಶ್ವರ ಮಠದ ಪ.ಪೂ ಶ್ರೀ ಗುರುಲಿಂಗ ಮಹಾಸ್ವಾಮಿಗಳು ಮಳಖೇಡದ ಪೂಜ್ಯಶ್ರೀ ಹಜರತ್ ಅಲ್ ಹಚ್ ಸೈಯದ್ ಷಹ ಮುಸ್ತಫ ಖಾದ್ರಿ ಅವರು ಮಾತನಾಡಿ, ಹುಣಶ್ಯಾಳ ಗ್ರಾಮ ಭಾವೈಕ್ಯತೆಗೆ ಹೆಸರಾಗಿದೆ‌, ಮುಸ್ಲಿಂ ದೇವರಿಗೆ ಹಿಂದೂ ಧರ್ಮದವರು ದೇವಸ್ಥಾನ ನಿರ್ಮಾಣಕ್ಕೆ ಜಾಗ ನೀಡಿವ ಜೊತೆ ಜಾತಿಭೇದ ಭಾವವಿಲ್ಲದೇ ಸರ್ವ ಜನಾಂಗದವರು ಸೌಹಾರ್ದಯುತವಾಗಿ ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡು ದೇವನ್ನೊಬ್ಬನಾದರೂ ನಾಮ ಹಲವು ಎಂಬುದನ್ನು ತೋರಿಸಿಕೊಟ್ಟರು ಎಂದು ಹೇಳಿದರು.

ಕಾರ್ಯಕ್ರಮದ ಸಾನ್ನಿಧ್ಯವನ್ನು ಗೋಗಿ ಹಜರತ್ ಸೈಯದ್ ಶಾಹ ಇಸ್ಮಾಯಿಲ್ ಹುಸೇನಿ, ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮೆಹಬೂಬ್ ಖುದಾನಸಾಬ ನಾಗಾವಿ ವಹಿಸಿದ್ದರು. ಗಂಧದ ಮೆರವಣಿಗೆ ವೇಳೆ ಹಿಂದೂ ಧರ್ಮೀಯರು ಸಕ್ಕರೆ ನಿವೇದಿಸಿ ಭಕ್ತಿ ಸಮರ್ಪಿಸಿದರು. ವಾದ್ಯವೃಂದ, ಬ್ಯಾಂಡ್ ಸೆಟ್‌ ಗಮನ ಸೆಳೆದವು.

ಇದೇ ಸಂದರ್ಭದಲ್ಲಿ ಗ್ರಾಪಂ ಅಧ್ಯಕ್ಷರ ಪ್ರತಿನಿಧಿಗಳಾದ ಮೌನೇಶ ಪೂಜಾರಿ, ಮುಖಂಡರುಗಳಾದ ಸಾಯಿನಾಥ್ ವಾಲೀಕಾರ, ಅಪ್ಪಾಸಾಹೇಬ ದೇವರಗುಡಿ, ಶರಣಪ್ಪ ಹಿಪ್ಪರಗಿ, ಮಡಿವಾಳಪ್ಪ ದರ್ಗಾದಹೊಲ, ಗುತ್ತಪ್ಪಗೌಡ ಕೋಟಿಖಾನಿ, ಹುಸೇನ್ ನಾಗಾವಿ, ಶಾಂತಗೌಡ ಕೋಟಿಖಾನಿ, ಮುತ್ತು ಕುಂಟೋಜಿ, ಸೋಮನಗೌಡ ಕೋಟಿಖಾನಿ, ಪೀರಮಹ್ಮದ ಹವಾಲ್ದಾರ್, ಶಬ್ಬೀರ್ ದೊಡಮನಿ, ಶಕೀಲ್ ಪೊಲಾಶಿ, ಚೇತನ್ ಹೊಟಗಾರ ಸೇರಿದಂತೆ ಗ್ರಾಮದ ಪ್ರಮುಖರು, ಗಣ್ಯರು ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಭಾಗವಹಿಸಿದ್ದರು.