ಸಾರಾಂಶ
ನರಸಿಂಹರಾಜಪುರ : ಮಳೆಗಾಲದಲ್ಲಿ ಅಡಕೆ ತೋಟಗಳಲ್ಲಿ ಕೊಳೆ ರೋಗ ಹೆಚ್ಚಾಗಿ ಕಾಣಿಸಿಕೊಳ್ಳುವುದರಿಂದ ರೋಗ ನಿಯಂತ್ರಣಕ್ಕೆ ರೈತರು ಬೋರ್ಡೋ ದ್ರಾವಣವನ್ನು ವೈಜ್ಞಾನಿಕ ವಿಧಾನದಲ್ಲಿ ತಯಾರಿಸಬೇಕೆಂದು ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ ಎಂ.ಜಿ.ರೋಹಿತ್ ಅಡಕೆ ಬೆಳೆಗಾರರಿಗೆ ಸಲಹೆ ನೀಡಿದರು.
ಶೇ.1ರಷ್ಟು ಬೋರ್ಡೋ ಮಿಶ್ರಣ ತಯಾರಿಸುವಾಗ ಒಂದು ಪ್ಲಾಸ್ಟಿಕ್ ಬಕೆಟ್‌ನಲ್ಲಿ 10 ಲೀ. ನೀರಿನಲ್ಲಿ 1 ಕೆಜಿ ಮೈಲು ತುತ್ತ ಕರಗಿಸಬೇಕು. ಇನ್ನೊಂದು ಬಕೆಟ್‌ನಲ್ಲಿ 10 ಲೀ. ನೀರಿನಲ್ಲಿ 1 ಕೆಜಿ ಸುಟ್ಟ ಸುಣ್ಣ ಕರಗಿಸಬೇಕು. ಈ ರೀತಿ ತಯಾರಿಸಿದ ಮೈಲುತುತ್ತ ದ್ರಾವಣ ಹಾಗೂ ಸುಣ್ಣದ ದ್ರಾವಣವನ್ನು 100 ಲೀ. ಬ್ಯಾರೆಲ್ ಗೆ 80 ಲೀಟರ್ ನೀರು ಹಾಕಿ ಆ ನೀರಿಗೆ ಏಕಕಾಲಕ್ಕೆ ಮೈಲುತುತ್ತ ದ್ರಾವಣ ಹಾಗೂ ಸುಣ್ಣದ ದ್ರಾವಣ ಸುರಿಯುತ್ತಾ ಕದಡುತ್ತಿರಬೇಕು. ಹಾಗೂ ಬೋರ್ಡೋ ಮಿಶ್ರಣದ ತಯಾರಿ ವೇಳೆ ಮಿಶ್ರಣದ ರಸಸಾರವನ್ನು ಸಹ ಪರೀಕ್ಷೆ ಮಾಡುತ್ತಾ ರಸಸಾರ ತಟಸ್ಥಗೊಳ್ಳುವಂತೆ ಮಾಡ ಬೇಕು. ರಸಸಾರ ಪರೀಕ್ಷೆ ಮಾಡುವ ಮೊದಲು ರಾಳ ಅಥವಾ ಇತರ ಅಂಟುಗಳನ್ನು ಮಿಶ್ರಣಕ್ಕೆ ಹಾಕಬಾರದು. ಬೋರ್ಡೋ ದ್ರಾವಣದ ರಸಸಾರವನ್ನು ಪರೀಕ್ಷೆ ಮಾಡಲು ಪಿಎಚ್ ಪೇಪರ್ ಅಥವಾ ಹರಿತವಾದ ಚಾಕು ಅಥವಾ ಕತ್ತಿ ಬಳಸಬಹುದು ಎಂದರು.
ಪಿಎಚ್ ಪೇಪರ್ ಬಳಸುವುದಾದರೆ ಮಿಶ್ರಣದ ರಸಸಾರವನ್ನು ತಟಸ್ಥ ಪಿಎಚ್ 7 ಕ್ಕೆ ತರಬೇಕು. ಕತ್ತಿ ಬಳಸುವುದಾದರೆ ಕತ್ತಿಯ ತುದಿ ಭಾಗವನ್ನು ಮಿಶ್ರಣದಲ್ಲಿ ಮುಳುಗಿಸಿದಾಗ ಅದು ಕಂದು ಬಣ್ಣಕ್ಕೆ ಬದಲಾಗುತ್ತಿದ್ದರೆ ಸ್ವಲ್ಪ ಸುಣ್ಣದ ದ್ರಾವಣ ಸೇರಿಸಬೇಕಾಗುತ್ತದೆ ಎಂದರ್ಥ. ಕತ್ತಿಯ ತುದಿ ಕಂದು ಬಣ್ಣಕ್ಕೆ ತಿರುಗದಿದ್ದರೆ ರಸಸಾರ ತಟಸ್ಥವಿದೆ ಎಂದರ್ಥವಾಗುತ್ತದೆ. ಈ ರೀತಿ ಮಿಶ್ರಣದ ರಸ ಸಾರ ತಟಸ್ಥಗೊಳ್ಳುವವರೆಗೆ ಸುಣ್ಣದ ದ್ರಾವಣ ಸ್ವಲ್ಪ, ಸ್ವಲ್ಫ ಸೇರಿಸಬೇಕಾಗುತ್ತದೆ ಎಂದು ತಿಳಿಸಿದರು.
ಈ ರೀತಿ ಮಿಶ್ರಣ ತಯಾರಿಸಿದ ಮೇಲೆ ಪ್ರತಿ 100 ಲೀ. ಬ್ಯಾರೆಲ್ ಗೆ 100 ಗ್ರಾಂ ಅಂಟನ್ನು ಸೇರಿಸಬೇಕು. ಬೋರ್ಡೋ ಮಿಶ್ರಣ ತಯಾರಿಸಿದ ಮೇಲೆ ಚೆನ್ನಾಗಿ ಕದಡಿ ಮಳೆಗಾಲದಲ್ಲಿ ಮಳೆ ಬಿಡುವು ಸಮಯದಲ್ಲಿ ಸಿಂಪರಣೆ ಮಾಡಬೇಕು. ಶುದ್ಧವಾದ ಕಟ್ಟಿಗೆ ತುಂಡಿನಿಂದ ಆಗಾಗ್ಗೆ ಕಲುಕುತ್ತಿರಬೇಕು. ಈ ಮಿಶ್ರಣವನ್ನು ತಾಮ್ರ, ಮಣ್ಣಿನ ಅಥವಾ ಪ್ಲಾಸ್ಚಿಕ್ ಪಾತ್ರೆಯಲ್ಲಿ ತಯಾರಿಸಬೇಕು. ಬೋರ್ಡೋ ಮಿಶ್ರಣವನ್ನು ತಯಾರಿಸಿದ ದಿನವೇ ಸಿಂಪರಣೆ ಮಾಡಬೇಕು. ಅದನ್ನು ಹೆಚ್ಚು ಕಾಲ ಇಟ್ಟರೆ ಗುಣಮಟ್ಟ ಕಡಿಮೆಯಾಗುತ್ತದೆ. ಅನಿವಾರ್ಯವಾಗಿ ಒಂದು ದಿನ ತಡವಾದರೆ 100 ಲೀಟರ್ ಮಿಶ್ರಣಕ್ಕೆ 100 ಗ್ರಾಂ. ಬೆಲ್ಲ ಅಥವಾ ಸಕ್ಕರೆ ಸೇರಿಸಿ ಇಡಬೇಕೆಂದು ಸಲಹೆ ನೀಡಿದ್ದಾರೆ.
ಹೆಚ್ಚಿನ ಮಾಹಿತಿಗೆ ತೋಟಗಾರಿಕೆ ಇಲಾಖೆಯನ್ನು ಸಂಪರ್ಕಿಸಬಹುದು ದೂ.ಸಂ. 9449759777 ಎಂದು ತಿಳಿಸಿದ್ದಾರೆ.