ಸಾರಾಂಶ
ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರಸಿರಿಧಾನ್ಯಗಳಲ್ಲಿ ವಿಟಮಿನ್, ಪ್ರೊಟೀನ್‌ಗಳು ಸೇರಿದಂತೆ ಹೇರಳವಾದ ಪೌಷ್ಟಿಕಾಂಶಗಳು ಇರುವುದರಿಂದ ಸಮತೊಲಿತ ಆರೋಗ್ಯಕ್ಕಾಗಿ ಸಿರಿಧಾನ್ಯಗಳನ್ನು ಬಳಕೆ ಮಾಡುವುದು ಉತ್ತಮ ಎಂದು ಡಾ.ಎಂ.ಸಿ. ಸುಧಾಕರ್ ತಿಳಿಸಿದರು.ಗುರುವಾರ ನಗರದ ಜಿಲ್ಲಾ ಸರ್.ಎಂ.ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತ, ಕೃಷಿ ಇಲಾಖೆ ಆಯೊಜಿಸಿದ್ಧ “ಸಿರಿಧಾನ್ಯಗಳ ನಡಿಗೆ ಆರೋಗ್ಯದ ಕಡೆಗೆ” ಕಾರ್ಯಕ್ರಮಕ್ಕೆ ಸಿರಿಧಾನ್ಯಗಳ ಮಹತ್ವದ ಕುರಿತ ಜಾಗೃತಿ ಕರಪತ್ರಗಳು ಮತ್ತು ಭಿತ್ತಿ ಪತ್ರಗಳನ್ನು ಬಿಡುಗಡೆಗೊಳಿಸಿ ನಂತರ ಜಾಗೃತಿ ಜಾಥಾಗೆ ಹಸಿರು ನಿಶಾನೆ ತೋರಿಸಿ ಮಾತನಾಡಿದರು.
ದೇಶೀಯ ವ್ಯವಸಾಯ ಪದ್ಧತಿ:ಸಿರಿಧಾನ್ಯಗಳ ಬೆಳೆ ನಮ್ಮ ದೇಶೀಯ ವ್ಯವಸಾಯ ಪದ್ಧತಿಯಾಗಿದೆ.ಈ ಪದ್ಧತಿಗೆ ಸುಮಾರು 5 ಸಾವಿರ ವರ್ಷಗಳ ಇತಿಹಾಸವಿದ್ದು, ನಮ್ಮ ದೇಶದ ವಿವಿಧ ರಾಜ್ಯಗಳಲ್ಲಿ ಬೆಳೆಯಲಾಗುತ್ತಿದೆ. ಮನುಷ್ಯನ ಸುಸ್ಥಿರ ಆರೋಗ್ಯ ಕಾಪಾಡಲು ರಾಗಿ, ನವಣೆ, ಹಾರಕ, ಸಾಮೆ, ನೆಲ್ಲಕ್ಕಿ, ಬರುಗು, ಕೊರಲೆ, ಊದಲು, ಸಜ್ಜೆ ಮತ್ತು ಜೋಳ ಹೀಗೆ ಹಲವಾರು ಬಗೆಯ ಸಿರಿಧಾನ್ಯಗಳಲ್ಲಿನ ಪೌಷ್ಠಿಕಾಂಶಗಳು ಸಹಕಾರಿಯಾಗಿವೆ. ಇವುಗಳಲ್ಲಿ ಫೈಬರ್, ಕ್ಯಾಲ್ಸಿಯಂ ಮತ್ತು ಖನಿಜಾಂಶ ಸಮೃದ್ಧವಾಗಿರುತ್ತವೆ ಎಂದರು.
ಸಿರಿಧಾನ್ಯ ಸೇವನೆಯನ್ನು ಶ್ರೀಮಂತ ವರ್ಗದ ಜನರು ಆಹಾರದ ಭಾಗವಾಗಿ ಅಳವಡಿಸಿಕೊಂಡಿದ್ದಾರೆ. ಇತ್ತೀಚಿನ ಕೆಲವು ಸಂಶೋಧನೆಗಳು ಕೂಡಾ ಸಿರಿಧಾನ್ಯಗಳಿಂದ ಮಾಡಿದ ಆಹಾರ ಆರೋಗ್ಯಕ್ಕೆ ಉತ್ತಮ ಎಂದು ಖಾತ್ರಿಪಡಿಸಿವೆ. ಎಲ್ಲಕ್ಕಿಂತ ಮುಖ್ಯವಾಗಿ ಸಿರಿಧಾನ್ಯಗಳನ್ನು ಕಡಿಮೆ ನೀರಿನಲ್ಲಿ, ಕಡಿಮೆ ಫಲವತ್ತತೆ ಇರುವ ಪ್ರದೇಶಗಳಲ್ಲಿಯೂ ಬೆಳೆಯಬಹುದಾಗಿರುವುದರಿಂದ ಗುಡ್ಡಗಾಡು ಹಾಗೂ ಬುಡಕಟ್ಟು ಜನಾಂಗದವರಲ್ಲಿ ಈ ಕೃಷಿ ಹೆಚ್ಚು ಜನಪ್ರಿಯವಾಗಿದೆ ಎಂದು ತಿಳಿಸಿದರು.ಉತ್ತಮ ಮಾರುಕಟ್ಟೆ ಸಿಗುತ್ತಿಲ್ಲ:
ಸಿರಿಧಾನ್ಯಗಳಿಗೆ ಹಿಂದಿನಿಂದ ನಮ್ಮ ಪೂರ್ವಿಕರು ಹೆಚ್ಚು ಒತ್ತು ನೀಡುತ್ತಿದ್ದರು. ಈ ಧಾನ್ಯಗಳ ಬಳಕೆಯಿಂದ ಮಧುಮೇಹ, ಹೃದಯರೋಗ, ಕರುಳುಬೇನೆ ಹಾಗೂ ಕ್ಯಾನ್ಸರ್ ನಂತಹ ಇತ್ಯಾದಿ ಕಾಯಿಲೆಗಳನ್ನು ತಡೆಯಬಹುದಾಗಿದೆ. ಇಷ್ಟೆಲ್ಲಾ ಅನುಕೂಲತೆಯನ್ನು ಹೊಂದಿದ್ದರೂ ಸಿರಿಧಾನ್ಯಗಳಿಗೆ ಉತ್ತಮ ಮಾರುಕಟ್ಟೆ ಮತ್ತು ಬೆಲೆ ಸಿಗುತ್ತಿಲ್ಲ ಎಂದು ವಿಷಾದಿಸಿದರು.ಸಿರಿಧಾನ್ಯ ವಾಕಥಾನ್:
2023ನೇ ವರ್ಷವನ್ನು ಅಂತಾರಾಷ್ಟ್ರೀಯ ಸಿರಿಧಾನ್ಯಗಳ ವರ್ಷವೆಂದು ಘೋಷಣೆ ಮಾಡಿರುವುದರಿಂದ ಆಹಾರ ಮತ್ತು ಪೌಷ್ಟಿಕ ಭದ್ರತಾ ಯೋಜನೆಯಡಿ ಗ್ರಾಹಕರಿಗೆ ಸಿರಿಧಾನ್ಯಗಳ ಬಗ್ಗೆ ಅರಿವು ಮೂಡಿಸುವ ಸಲುವಾಗಿ ಜಿಲ್ಲಾ ಮಟ್ಟದ “ಸಿರಿಧಾನ್ಯ ವಾಕಥಾನ್” ಕಾರ್ಯಕ್ರಮ ನಡೆಯಿತು. ಸರ್ ಎಂವಿ ಕ್ರೀಡಾಂಗಣದಿಂದ ಈ ಜಾಗೃತಿ ಜಾಥಾ ಆರಂಭವಾಗಿ ಸುಮಾರು 4ಕಿ.ಮೀ ವರೆಗೆ ಜಾಥಾ ಜರುಗಿತು.ಚಿಂತಾಮಣಿ ತಾಲೂಕಿನ ಕೃಷಿ ವಿಶ್ವ ವಿದ್ಯಾಲಯದ(ಜಿಕೆವಿಕೆ) ಮತ್ತು ಕುರುಬೂರು ಆರ್ ಡಬ್ಲ್ಯೂಇ ಶಿಬಿರಾರ್ಥಿಗಳು, ಪತಂಜಲಿ, ಶ್ರೀ ಪತಂಜಲಿ ಯೋಗ ಸಮಿತಿಯ ಸದಸ್ಯರು, ಶ್ರೀ ಸತ್ಯಸಾಯಿ ಟ್ರಸ್ಟ್ ಸಂಸ್ಥೆಯ ವಿದ್ಯಾರ್ಥಿಗಳು ಮತ್ತು ಪದಾಧಿಕಾರಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಜಾಥಾಗೆ ಹೆಚ್ಚಿನ ಸಾಥ್ ನೀಡಿದರು.
ಈ ಸಂದರ್ಭದಲ್ಲಿ ಜಿಪಂ ಸಿಇಒ ಪ್ರಕಾಶ್ ಜಿ.ಟಿ. ನಿಟ್ಟಾಲಿ, ಎಸ್ಪಿ ಡಿ.ಎಲ್. ನಾಗೇಶ್, ಅಪರ ಜಿಲ್ಲಾಧಿಕಾರಿ ಡಾ.ಎನ್. ತಿಪ್ಪೇಸ್ವಾಮಿ, ಉಪವಿಭಾಗಾಧಿಕಾರಿ ಡಿ.ಎಚ್. ಅಶ್ವಿನ್, ಕೃಷಿ ಇಲಾಖೆಯ ಜಂಟಿ ನಿರ್ದೆಶಕಿ ಜಾವೀದಾ ನಾಸಿಮ್ ಖಾನಂ, ತಹಸೀಲ್ದಾರ್ ಅನಿಲ್, ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು, ಪತಂಜಲಿ ಯೋಗ ಸಮಿತಿಯ ಪದಾಧಿಕಾರಿಗಳು, ಶ್ರೀ ಸತ್ಯಸಾಯಿ ಟ್ರಸ್ಟ್ ಸಂಸ್ಥೆಯ ಗೋವಿಂದರೆಡ್ಡಿ ಮತ್ತು ಪದಾಧಿಕಾರಿಗಳು ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ ಇದ್ದರು.;Resize=(128,128))
;Resize=(128,128))
;Resize=(128,128))
;Resize=(128,128))
;Resize=(128,128))