ಚುನಾವಣಾ ಅಕ್ರಮದ ದೂರು ನೀಡಲು ಸಿವಿಜಿಲ್ ಆಪ್ ಬಳಸಿ

| Published : Mar 24 2024, 01:30 AM IST

ಸಾರಾಂಶ

ಚುನಾವಣೆಯಲ್ಲಿ ಯಾವದೇ ರಾಜಕೀಯ ಪಕ್ಷ ಚುನಾವಣಾ ಅಕ್ರಮ ಎಸಗುತ್ತಿದ್ದರೆ ಅದರ ಮಾಹಿತಿ ದೂರು ಸಲ್ಲಿಸುವುದಕ್ಕಾಗಿ ಸಿ ವಿಜಿಲ್‌ ಆ್ಯಪ್ ಬಳಕೆ ಮಾಡಿ ಆಯೋಗಕ್ಕೆ ದೂರು ನೀಡಬಹುದಾಗಿದೆ.

ಮುದಗಲ್: ಲೋಕಸಭಾ ಚುನಾವಣೆಯ ದಿನಾಂಕ ಆಯೋಗ ಪ್ರಕಟಿಸಿರುವದರಿಂದ ಈಗಾಗಲೇ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿದೆ. ಚುನಾವಣೆಯಲ್ಲಿ ಯಾವದೇ ರಾಜಕೀಯ ಪಕ್ಷ ಚುನಾವಣಾ ಅಕ್ರಮ ಎಸಗುತ್ತಿದ್ದರೆ ಅದರ ಮಾಹಿತಿ ದೂರು ಸಲ್ಲಿಸುವುದಕ್ಕಾಗಿ ಸಿ ವಿಜಿಲ್‌ ಆ್ಯಪ್ ಬಳಕೆ ಮಾಡಿ ಆಯೋಗಕ್ಕೆ ದೂರು ನೀಡಬಹುದಾಗಿದೆ ಎಂದು ರಾಯಚೂರು ಲೋಕಸಭಾ ಕ್ಷೇತ್ರದ ಸಹಾಯಕ ಚುನಾವಣಾಧಿಕಾರಿ ಹಾಗೂ ಸಹಾಯಕ ಆಯುಕ್ತ ಅವಿನಾಶ ಸಿಂಧೆ ತಿಳಿಸಿದರು.

ಪಟ್ಟಣದ ಪುರಸಭೆ ಸಭಾಭವನದಲ್ಲಿ ಮುದಗಲ್ ವಲಯದ ಬಿಎಲ್ಒ ಸಭೆಯಲ್ಲಿ ಮಾತನಾಡಿದ ಅವರು, ಈ ಬಾರಿ ಚುನಾವಣಾ ಆಯೋಗವು ಚುನಾವಣಾ ಅಕ್ರಮ ತಡೆಗಟ್ಟಲು ಸಿ ವಿಜಿಲ್ ಎನ್ನುವ ಆ್ಯಪ್ ಜಾರಿಗೆ ತಂದಿದ್ದು, ಅದನ್ನು ಡೌನ್ಲೋಡ್ ಮಾಡಿಕೊಂಡು ಅಕ್ರಮ ಕುರಿತು ಎಲ್ಲ ರೀತಿಯ ಮಾಹಿತಿಯನ್ನು ಆಯೋಗಕ್ಕೆ ರವಾನಿಸಬಹುದಾಗಿದೆ. ಇದರಲ್ಲಿ ಯಾವದೆ ರೀತಿಯ ದೂರುದಾರರ ಮಾಹಿತಿ ಲಭ್ಯವಾಗುವದಿಲ್ಲ. ದೂರು ನೀಡುವಾಗ ಸ್ಥಳದ ಭಾವಚಿತ್ರ, ವಿಳಾಸವನ್ನು ನಮೂದಿಸಬೇಕಾಗುತ್ತದೆ. ಇದರ ಮಾಹಿತಿ ಚುನಾವಣಾಧಿಕಾರಿಗಳಿಗೆ ಮತ್ತು ಸಹಾಯಕ ಚುನಾವಣಾಧಿಕಾರಿಗಳಿಗೆ ರವಾನೆಯಾಗುತ್ತಿದ್ದಂತೆ ಏರಿಯಾ ಸೆಕ್ಟರ್ ಅಧಿಕಾರಿಗಳಿಗೆ ರವಾನೆಯಾಗಿ ಒಂದು ಗಂಟೆಯೊಳಗೆ ಸ್ಥಳ ಪರಿಶೀಲನೆಯಾಗಿ ಅದಕ್ಕೆ ಕ್ರಮ ಜರುಗಿಸಲಾಗುತ್ತದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಮುಖ್ಯಾಧಿಕಾರಿ ನಬೀ ಕಂದಗಲ್ಲ, ಉಪ ತಹಶೀಲ್ದಾರ ತುಳಜಾರಾಮಸಿಂಗ್, ಗ್ರಾಮ ಲೆಕ್ಕಿಗರಾದ ದೀಪಿಕಾ, ಶಿವುಕುಮಾರ ದೇಸಾಯಿ ಸೇರಿದಂತೆ ಚುನಾವಣಾ ಸಿಬ್ಬಂದಿ ವರ್ಗ ಇದ್ದರು.