ಸಾರಾಂಶ
ಕನ್ನಡಪ್ರಭ ವಾರ್ತೆ ಸಂಚಿ ಹೊನ್ನಮ್ಮ ಮತ್ತು ತ್ರಿವೇಣಿ ವೇದಿಕೆ(ಮಂಡ್ಯ)
ಕೃಷಿ ಸಂಕಷ್ಟ ಮತ್ತು ಸವಾಲನ್ನು ನಾವು ಅವಕಾಶವಾಗಿ ಮಾರ್ಪಡಿಸಿಕೊಳ್ಳಬೇಕು ಎಂದು ಬೆಂಗಳೂರಿನ ಗಾಂಧಿ ಕೃಷಿ ವಿವಿ ಕುಲಪತಿ ಪ್ರೊ.ಎಸ್.ವಿ. ಸುರೇಶ್ ಹೇಳಿದರು.ನಗರದಲ್ಲಿ ನಡೆಯುತ್ತಿರುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಅಂಗವಾಗಿ ಸಂಚಿ ಹೊನ್ನಮ್ಮ ಮತ್ತು ತ್ರಿವೇಣಿ ವೇದಿಕೆ(ಸಮಾನಂತರ ವೇದಿಕೆ-2)ಯಲ್ಲಿ ನಡೆದ ಕೃಷಿ ಮತ್ತು ಕೃಷಿಕರ ಸಂಕಷ್ಟ: ಸವಾಲುಗಳು ಮತ್ತು ಪರಿಹಾರಗಳು ಗೋಷ್ಠಿ ಅಧ್ಯಕ್ಷತೆವಹಿಸಿ ಮಾತನಾಡಿದರು. ಈಗ
ಕೃಷಿಯಲ್ಲಿ ಹಲವು ಮಜಲಿದೆ. ಭಾರತವನ್ನು ಕೃಷಿ ಪ್ರಧಾನ ರಾಷ್ಟ್ರ ಎಂದು ಕರೆಯುತ್ತೇವೆ. ಆದರೆ ರೈತನಿಗೆ ಕೃಷಿಯಿಂದ ಹೆಚ್ಚಿನ ಲಾಭವಾಗಿಲ್ಲ. ಭೂ ಹಿಡುವಳಿ ಮತ್ತು ದುಡಿಯುವ ಕೈಗಳು ಕಡಿಮೆಯಾಗುತ್ತಿವೆ. ಯುವಕರು ನಗರ ಸೇರುತ್ತಿದ್ದಾರೆ. ಹಳ್ಳಿಗಳು ವೃದ್ಧಾಶ್ರಮ ಆಗುತ್ತಿವೆ. ಈಗ ಕೃಷಿ ಮಾಡುವವರು 60 ವರ್ಷ ಮೇಲಿನವರು ಎಂದು ಹೇಳಿದರು.ರಾಸಾಯನಿಕ ಬಳಸದೆ ಕೃಷಿ ಮಾಡುತ್ತಿದ್ದ ರೈತರ ಮನವೊಲಿಸಿ ರಾಸಾಯನಿಕ ಗೂಬ್ಬರ ಬಳಕೆ ಆರಂಭಿಸಿದೆವು. ಆದರೆ ಈಗ ಇಡೀ ದೇಶವೇ ಸಾವಯವ ಕೃಷಿ, ಶೂನ್ಯ ಕೃಷಿ ನಡೆಸಬೇಕು ಎಂದು ಹೇಳುತ್ತಿರುವ ಹೊತ್ತಿನಲ್ಲಿ ನಾವು ಮತ್ತೆ ಹಳೆ ಹೊಸ ವಿಚಾರ ಮಂಡನೆ ಮೂಲಕ ರೈತರಲ್ಲಿ ಗೊಂದಲ ಮೂಡಿಸುತ್ತಿದ್ದೇವೆ. ಇದರ ಬದಲಿಗೆ ರೈತರಲ್ಲಿ ಅರಿವು ಮೂಡಿಸುವ ಕೆಲಸ ನಾವು ಮಾಡಬೇಕು ಎಂದು ಅವರು ತಿಳಿಸಿದರು.
ನಾವು ಅಂದುಕೊಂತೆ ಕೃಷಿ ಸರಳ ಕಸುಬಲ್ಲ. ಅದನ್ನು ಲಾಭದಾಯಕವಾಗಿ ಮಾಡಿಕೊಳ್ಳಬೇಕಷ್ಟೆ. ರೈತರು ಕೃಷಿಯ ಸಂಕಷ್ಟ ಮತ್ತು ಸವಾಲುಗಳನ್ನು ಅವಕಾಶವಾಗಿ ಬದಲಿಸಿಕೊಳ್ಳಬೇಕು ಎಂದು ಅವರು ಹೇಳಿದರು.ಕೃಷಿ ಮತ್ತು ಕೃಷಿಕರ ಸಂಕಷ್ಟ: ಪರಿಹಾರಗಳು ಕುರಿತು ಆರ್ಥಿಕ ತಜ್ಞ
ಡಾ.ರಾಜೇಂದ್ರ ಪೊದ್ದಾರ್ ಮಾತನಾಡಿ, ಕೃಷಿ ನಮ್ಮ ಮೂಲ ಕಸುಬು. ರಾಷ್ಟ್ರೀಯ ಆದಾಯಕ್ಕೆ ಶೇ.60ರಷ್ಟು ಕೊಡುಗೆ ನೀಡುತ್ತಿದ್ದ ಕೃಷಿಯ ಕೊಡುಗೆ ಈಗ ಶೇ.14ಕ್ಕೆ ಬಂದು ನಿಂತಿದೆ. ಈ ಸಂದರ್ಭದಲ್ಲಿ ನಾವು ಅದನ್ನು ಪುನರ್ ಸ್ಥಾಪಿಸಬೇಕೋ ಅಥವಾ ಇರುವ ವಸ್ತು ಸ್ಥಿತಿ ಒಪ್ಪಿಕೊಂಡು ಮುಂದೆ ಹೋಗಬೇಕೋ ಎಂಬುದು ಚರ್ಚೆ ಆಗಬೇಕು.ಮೊದಲಿಗೆ ಕೃಷಿ ಪಾರಂಪರಿಕವಾಗಿತ್ತು. ನಮ್ಮ ಹಳ್ಳಿ, ಕೃಷಿ ಬದುಕಾಗಿತ್ತು. ಸುಸ್ಥಿರ ಕೃಷಿ ನಮ್ಮದಾಗಿತ್ತು. ಜಾಗತೀಕರಣದ ಪ್ರಭಾವದಿಂದ ಮುಕ್ತ ಮಾರುಕಟ್ಟೆ ಪ್ರವೇಶವಾಗಿ ಬೀಜ, ಗೊಬ್ಬರ, ಔಷಧಗಳ ಬೆಲೆ ಹೆಚ್ಚಾಗಿ ಉತ್ಪಾದನಾ ವೆಚ್ಚವೂ ಹೆಚ್ಚಾಗಿದೆ. ಈ ಎಲ್ಲಾ ಸವಾಲನ್ನು ಗೆದ್ದರೂ ಮಾರುಕಟ್ಟೆಯಲ್ಲಿ ರೈತ ಸೋಲುತ್ತಾನೆ ಎಂದು ರೈತರ ಸಮಸ್ಯೆಯನ್ನು ಎಳೆ ಎಳೆಯಾಗಿ ಬಿಚ್ಚಿಟ್ಟರು.
ನಾವು ಕೃಷಿ ಸಮಸ್ಯೆಯನ್ನು ವೈಜ್ಞಾನಿಕವಾಗಿ ಅರ್ಥ ಮಾಡಿಕೊಂಡಿಲ್ಲ. ಕೃಷಿಕ ಕೃಷಿಕನಾಗಿಯೇ ಉಳಿಯಬೇಕು ಎಂಬುದು ಆರ್ಥಿಯ ನೀತಿಯ ಭಾಗವಾಗಬೇಕು. 2000ನೇ ಇಸವಿಯಿಂದ ರೈತರ ಆತ್ಮಹತ್ಯೆ ಕಲಬುರಗಿಯಿಂದ ಆರಂಭವಾಯಿತು. ಆದರೆ ಈಗ ನಾವು ರೈತನ ಆತ್ಮಹತ್ಯೆಯನ್ನು ಕುಡಿತ, ಜೂಜು, ಮತ್ತಿತರ ವಿಷಯ ಥಳಕುಹಾಕಿ ಮಾತನಾಡುತ್ತಿದ್ದೇವೆ. ಹೀಗಾಗಿ ಜಾಗೃತ ಸಮಾಜ ರೈತರ ನಿಜವಾದ ಸಂಕಷ್ಟ ಅರಿಯಬೇಕಿದೆ. ಕರ್ನಾಟಕದ ಮಟ್ಟಿಗೆ ಶೇ. 70ರಷ್ಟು ರೈತರು ಸಾಲದಲ್ಲಿಯೇ ಇದ್ದಾರೆ ಎಂದರು.ಕೃಷಿ ತಜ್ಞ ಡಾ.ಎ.ಪಿ. ಮಲ್ಲಿಕಾರ್ಜುನ ಗೌಡ ಆಶಯ ನುಡಿಗಳನ್ನಾಡಿದರು. ಬಸವೇಗೌಡ ಖರಡ್ಯ ನಿರ್ವಹಿಸಿದರು. ಎನ್.ಬಿ. ಗೋಪಾಲಗೌಡ ನಿರೂಪಿಸಿದರು. ವಿ.ಎನ್. ಶಿವಕುಮಾರ್ ವಂದಿಸಿದರು. ಕೆ.ಎಂ. ಶಿವಸ್ವಾಮಿ ಸ್ವಾಗತಿಸಿದರು.
ಯುವಕರು ದೈಹಿಕ ಶ್ರಮಹಾಕಿ ಕೃಷಿ ಮಾಡಲು ಹಿಂದೇಟು ಹಾಕುತ್ತಿರುವುದರಿಂದ ಯಂತ್ರಗಳನ್ನು ಬಳಸಬಹುದಾಗಿದೆ. ಚಿಕ್ಕ ಚಿಕ್ಕ ಹಿಡುವಳಿಗಳಲ್ಲಿ ಬಳಸಬಹುದಾದ ರೊಟೊವೇಟರ್ ಮುಂತಾದ ಯಂತ್ರಗಳಿವೆ. ಡ್ರೋನ್ ಮೂಲಕ ರಾಸಾಯನಿಕ ಸಿಂಪಡಿಸಬಹುದಾಗಿದೆ. ಕಟಾವಿಗೂ ಯಂತ್ರಗಳು ಬಂದಿರುವುದರಿಂದ ಕೂಲಿ ಕಾರ್ಮಿಕರ ಕೊರತೆ ತುಂಬಬಹುದು.-ಕೃಷಿ ತಜ್ಞ ಸುನಿಲ್ ಶಿರವಾಳಕೀಟ ನಾಶಕಗಳು ಪೀಡನಾಶಕಗಳಾಗಿವೆ. ಅಧಿಕ ಇಳುವರಿಗಾಗಿ ರಾಸಾಯನಿಕ ಬಳಕೆ ಹೆಚ್ಚಾಗಿದೆ. ಕೀಟ ನಾಶಕವನ್ನು ಕಡಿಮೆ ಬಳಸಿದರೂ ತೊಂದರೆ ಎನ್ನುವ ಸ್ಥಿತಿ ಇದೆ. ಮಣ್ಣು, ನೀರು, ಗಾಳಿ ಎಲ್ಲವೂ ಮಲಿನವಾಗುತ್ತಿದೆ.
- ಕೃಷಿ ತಜ್ಞೆ ಎಚ್.ಎಂ. ಸುಚಿತ್ರಾ ಕುಮಾರಿ