ಭೂಮಿ ಫಲವತ್ತತೆಗೆ ಹಸಿರೆಲೆ ಗೊಬ್ಬರ ಬಳಸಿ: ಅಶೋಕ್‌ಕುಮಾರ್ ಕರೆ

| Published : Jun 04 2024, 12:30 AM IST

ಭೂಮಿ ಫಲವತ್ತತೆಗೆ ಹಸಿರೆಲೆ ಗೊಬ್ಬರ ಬಳಸಿ: ಅಶೋಕ್‌ಕುಮಾರ್ ಕರೆ
Share this Article
  • FB
  • TW
  • Linkdin
  • Email

ಸಾರಾಂಶ

ಹಸಿರೆಲೆ ಗೊಬ್ಬರ ಉತ್ಪಾದನೆಯಾಗುವ ಅಲಸಂದೆ ಮತ್ತು ಡಯೆಂಚಾ ಬಿತ್ತನೆ ಮಾಡಿ ಅದರ ಗಿಡಗಳನ್ನು ಕೃಷಿ ಭೂಮಿಗೆ ಸೇರಿಸುವುದರಿಂದ ಸಾವಯವ ಅಂಶ ಸೇರಿದಂತೆ ಬೋರಾನ್, ಜಿಂಕ್, ಪಾಸ್ಪರೆಸ್ ಅಂಶದ ಪ್ರಮಾಣ ಹೆಚ್ಚಾಗಿ ಭೂಮಿ ಫಲವತ್ತತೆ ಹೊಂದುತ್ತದೆ. ಅಲ್ಲದೆ ಭತ್ತ, ಕಬ್ಬು, ರಾಗಿ, ತರಕಾರಿ ಸೇರಿದಂತೆ ಯಾವುದೇ ಬೆಳೆಗಳ ಇಳುವರಿ ಪ್ರಮಾಣವೂ ಹೆಚ್ಚಾಗುತ್ತದೆ.

ಕನ್ನಡಪ್ರಭ ವಾರ್ತೆ ನಾಗಮಂಗಲ

ಕೃಷಿ ಭೂಮಿ ಫಲವತ್ತತೆ ಮತ್ತು ಬೆಳೆ ಇಳುವರಿ ಪ್ರಮಾಣ ಹೆಚ್ಚು ಮಾಡಲು ಡಯೆಂಚಾ (ಚಂಬೆ) ಮತ್ತು ಅಲಸಂದೆ ಗಿಡದ ಹಸಿರೆಲೆಗೊಬ್ಬರ ರಾಮಬಾಣವಿದ್ದಂತೆ ಎಂದು ಜಂಟಿ ಕೃಷಿ ನಿರ್ದೇಶಕ ಅಶೋಕ್‌ಕುಮಾರ್ ಹೇಳಿದರು.

ಪಟ್ಟಣದ ಕಸಬಾ ಹೋಬಳಿಯ ರೈತ ಸಂಪರ್ಕ ಕೇಂದ್ರದಲ್ಲಿ ರೈತರಿಗೆ ರಿಯಾಯ್ತಿ ದರದಲ್ಲಿ ಅಲಸಂದೆ ಮತ್ತು ಡಯೆಂಚಾ ಬಿತ್ತನೆ ಬೀಜ ವಿತರಿಸಿ ಮಾತನಾಡಿ, ಕೃಷಿ ಭೂಮಿಗೆ ಡಯೆಂಚಾ ಮತ್ತು ಅಲಸಂದೆಯನ್ನು ಮಿಶ್ರಣ ಮಾಡಿ ಬಿತ್ತನೆ ಮಾಡಿದರೆ ಅದು ಹಸಿರೆಲೆ ಗೊಬ್ಬರವಾಗಿ ಪ್ರತಿ ಹೆಕ್ಟೇರ್‌ಗೆ 35 ರಿಂದ 40 ಟನ್‌ನಷ್ಟು ಇಳುವರಿಯನ್ನು ಹೆಚ್ಚಿಸುತ್ತದೆ ಎಂದರು.

ಹಸಿರೆಲೆ ಗೊಬ್ಬರ ಉತ್ಪಾದನೆಯಾಗುವ ಅಲಸಂದೆ ಮತ್ತು ಡಯೆಂಚಾ ಬಿತ್ತನೆ ಮಾಡಿ ಅದರ ಗಿಡಗಳನ್ನು ಕೃಷಿ ಭೂಮಿಗೆ ಸೇರಿಸುವುದರಿಂದ ಸಾವಯವ ಅಂಶ ಸೇರಿದಂತೆ ಬೋರಾನ್, ಜಿಂಕ್, ಪಾಸ್ಪರೆಸ್ ಅಂಶದ ಪ್ರಮಾಣ ಹೆಚ್ಚಾಗಿ ಭೂಮಿ ಫಲವತ್ತತೆ ಹೊಂದುತ್ತದೆ. ಅಲ್ಲದೆ ಭತ್ತ, ಕಬ್ಬು, ರಾಗಿ, ತರಕಾರಿ ಸೇರಿದಂತೆ ಯಾವುದೇ ಬೆಳೆಗಳ ಇಳುವರಿ ಪ್ರಮಾಣವೂ ಹೆಚ್ಚಾಗುತ್ತದೆ ಎಂದರು.

ಜಿಲ್ಲೆಯಲ್ಲಿ 55 ರಿಂದ 57 ಸಾವಿರ ಹೆಕ್ಟೇರ್‌ನಷ್ಟು ವಿಸ್ತೀರ್ಣದಲ್ಲಿ ರೈತರು ಭತ್ತ ಬೆಳೆಯುತ್ತಾರೆ. ಕಳೆದ 2011-12ನೇ ಸಾಲಿನಲ್ಲಿ ರಾಜ್ಯದಲ್ಲಿ ಪ್ರತಿ ಹೆಕ್ಟೇರ್‌ಗೆ ಸರಾಸರಿ 44ಕ್ವಿಂಟಾಲ್ ಇಳುವರಿ ಇದ್ದರೆ, ಜಿಲ್ಲೆಯಲ್ಲಿ ಪ್ರತಿ ಹೆಕ್ಟೇರ್‌ಗೆ 60 ಕ್ವಿಂಟಾಲ್‌ನಷ್ಟು ಇಳುವರಿ ಬರುತ್ತಿತ್ತು. ಆದರೆ, ಭೂಮಿಯಲ್ಲಿ ಸಾವಯವ, ಬೋರಾನ್ ಮತ್ತು ಜಿಂಕ್ ಅಂಶದ ಕೊರತೆಯಿಂದಾಗಿ 2022-23ನೇ ಸಾಲಿಗೆ ಜಿಲ್ಲೆಯಲ್ಲಿ 44.9 ಕ್ವಿಂಟಾಲ್‌ಗೆ ಸರಾಸರಿ ಇಳುವರಿ ಕುಸಿದಿದೆ ಎಂದರು.

ಗ್ರಾಮೀಣ ಪ್ರದೇಶದಲ್ಲಿ ಹಸುಗಳ ಸಂಖ್ಯೆ ಕಡಿಮೆಯಾಗಿ ಅಧಿಕ ಪ್ರಮಾಣದಲ್ಲಿ ಕೊಟ್ಟಿಗೆ ಗೊಬ್ಬರ ಸಿಗುತ್ತಿಲ್ಲ. ಇರುವ ಕೊಟ್ಟಿಗೆ ಗೊಬ್ಬರವನ್ನು ರೈತರು ತರಕಾರಿ ಮತ್ತು ಹೆಚ್ಚು ಆದಾಯ ಕೊಡುವ ಬೆಳೆಗಳಿಗೆ ಬಳಸುತ್ತಾರೆ. ಭತ್ತ ಮತ್ತು ರಾಗಿ ಬೆಳೆಗೆ ಕಡಿಮೆ ಪ್ರಮಾಣದ ಕೊಟ್ಟಿಗೆ ಗೊಬ್ಬರ ಹಾಕಿ ಹೆಚ್ಚು ಪ್ರಮಾಣದಲ್ಲಿ ರಸಗೊಬ್ಬರ ಹಾಕುತ್ತಿರುವುದರಿಂದ ಕೃಷಿ ಭೂಮಿಯಲ್ಲಿನ ಮಣ್ಣಿನ ಆರೋಗ್ಯ ಮತ್ತು ಗುಣಮಟ್ಟ ಶೇ.30ರಷ್ಟು ಕಡಿಮೆಯಾಗಿದೆ ಎಂದರು.

ಕೊಟ್ಟಿಗೆ ಗೊಬ್ಬರಕ್ಕಿಂತಲೂ ಹಸಿರೆಲೆ ಗೊಬ್ಬರ ಮಣ್ಣಿನಲ್ಲಿ ಅಧಿಕ ಪ್ರಮಾಣದ ಸಾವಯವ ಅಂಶವನ್ನು ಸೇರಿಸುತ್ತದೆ. ಹಾಗಾಗಿ ರೈತರು ತಮ್ಮ ಕೃಷಿ ಭೂಮಿಯನ್ನು ಖಾಲಿ ಬಿಡುವ ಬದಲು ಉತ್ತಮ ಮಳೆಯಾಗಿರುವುದರಿಂದ ಡಯೆಂಚಾ ಮತ್ತು ಅಲಸಂದೆಯನ್ನು ಮಿಶ್ರಣ ಮಾಡಿ ಬಿತ್ತನೆ ಮಾಡಬೇಕು ಎಂದು ಮನವಿ ಮಾಡಿದರು.

ಇಲಾಖೆಯಲ್ಲಿ ಸಬ್ಸಿಡಿ ದರದಲ್ಲಿ ದೊರೆಯುವ ಡಯೆಂಚಾ ಮತ್ತು ಅಲಸಂದೆ ಬಿತ್ತನೆ ಬೀಜವನ್ನು ಖರೀದಿಸಿ ಕೃಷಿ ಭೂಮಿಗೆ ಬಿತ್ತನೆ ಮಾಡುವ ಜೊತೆಗೆ, ಸ್ಥಳೀಯ ದಿನಸಿ ಅಂಗಡಿಗಳಲ್ಲಿಯೂ ದೊರೆಯುವ ಈ ಬಿತ್ತನೆ ಬೀಜಗಳನ್ನು ಖರೀದಿಸಿ ಮಿಶ್ರಣ ಮಾಡಿ ಜಮೀನಿಗೆ ಬಿತ್ತನೆ ಮಾಡಿ ಎರಡು ತಿಂಗಳ ನಂತರ ಶೇ.50ರಷ್ಟು ಹೂವು ಬಂದ ನಂತರ ಅದನ್ನು ಉಳುಮೆ ಮಾಡಿಸಿ ಭೂಮಿಗೆ ಸೇರಿಸಿದರೆ ರೈತರು ಕೇವಲ 3ಸಾವಿರ ಖರ್ಚಿನಲ್ಲಿ ಕನಿಷ್ಠ 7ರಿಂದ 8 ಕ್ವಿಂಟಾಲ್‌ನಷ್ಟು ಇಳುವರಿ ಪ್ರಮಾಣ ಹೆಚ್ಚಿಸಿಕೊಳ್ಳಬಹುದು ಎಂದು ತಿಳಿಸಿದರು.

ಈ ವೇಳೆ ಪಾಂಡವಪುರ ಉಪವಿಭಾಗದ ಉಪ ಕೃಷಿ ನಿರ್ದೇಶಕಿ ಮಮತ, ಸಹಾಯಕ ಕೃಷಿ ನಿರ್ದೇಶಕ ಆರ್.ಹರೀಶ್, ಕೃಷಿ ಅಧಿಕಾರಿ ಯುವರಾಜ್, ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ಎಚ್.ಜಿ.ರಾಜೇಶ್ ಸೇರಿದಂತೆ ಹಲವರು ಇದ್ದರು.