ಸಾರಾಂಶ
ಪಂಡಿತ ದೀನ ದಯಾಳ ಉಪಾಧ್ಯಾಯ ಜನ್ಮ ಶತಾಬ್ದಿ ಕಾರ್ಯಕ್ರಮ
ಕನ್ನಡಪ್ರಭ ವಾರ್ತೆ ಶಿರಸಿಭಾರತ ಸ್ವಾವಲಂಬಿ, ಸ್ವಾಭಿಮಾನ ದೇಶವಾಗಿ ಬೆಳೆಯಬೇಕಾದರೆ ಸ್ವದೇಶಿ ವಸ್ತುಗಳನ್ನು ಕಡ್ಡಾಯವಾಗಿ ಬಳಸಬೇಕು ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.
ಗುರುವಾರ ನಗರದ ದೀನ ದಯಾಳ ಸಭಾಭವನದಲ್ಲಿ ಪಂಡಿತ ದೀನ ದಯಾಳ ಉಪಾಧ್ಯಾಯ ಜನ್ಮ ಶತಾಬ್ದಿ ಪ್ರಯುಕ್ತ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಮಾತನಾಡಿದರು.ಆತ್ಮನಿರ್ಭರ ಭಾರತದ ಮೂಲಕ ಸ್ವದೇಶಿ ಬಗ್ಗೆ ಚಿಂತನೆ ಮೂಡಿಸಬೇಕಿದ್ದು, ಗ್ರಾಮೀಣ ಭಾಗದಲ್ಲಿ ಸಣ್ಣ, ಮಧ್ಯಮ ಕೈಗಾರಿಕೆಗಳು ಸ್ಥಾಪನೆಯಾಗಬೇಕು ಎಂಬ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಪ್ರೋತ್ಸಾಹ ನೀಡುತ್ತಿದೆ. ಅಮೆರಿಕಾ ಇಡೀ ಜಗತ್ತು ನಿಯಂತ್ರ ಮಾಡಬೇಕು ಎಂಬ ಷಡ್ಯಂತ್ರದಿಂದ ಉಳಿದೆಲ್ಲ ದೇಶಗಳು ತೊಂದರೆ ಎದುರಿಸುವಂತಾಗಿದೆ. ಆದ್ದರಿಂದ ಸ್ವದೇಶಿ ಚಿಂತನೆ ಮತ್ತು ಪ್ರೋತ್ಸಾಹಿಸುವುದರಿಂದ ಮುಂದಿನ ದಿನಗಳಲ್ಲಿ ಭಾರತ ದೊಡ್ಡ ದೇಶವಾಗಿ ಬೆಳೆಯಲಿದೆ. ಜಿಎಸ್‌ಟಿ ದರ ಕಡಿತವಾಗಿರುವುದರಿಂದ ಬಡವರಿಗೆ ಬಹಳ ಅನುಕೂಲವಾಗಿದ್ದು, ಐತಿಹಾಸಿಕ ನಿರ್ಣಯ ತೆಗೆದುಕೊಂಡು ತೆರಿಗೆ ಕಡಿಮೆ ಮಾಡಬಹುದು ಎಂಬುದನ್ನು ತೋರಿಸಿದ್ದು, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ನಿರ್ಣಯದಿಂದ ಉಳಿತಾಯದ ಸಂಭ್ರಮವನ್ನು ದೇಶದ ಜನ ಆಚರಿಸುತ್ತಿದ್ದಾರೆ ಎಂದರು.
ಭಾರತದ ಬೆಳವಣಿಗೆಯನ್ನು ವಿದೇಶಗಳಿಗೆ ಸಹಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಆರ್ಥಿಕ ಅಸ್ಥಿರಗೊಳಿಸಲು ಕೆಲ ದೇಶಗಳು ಷಡ್ಯಂತ್ರ ಮಾಡುತ್ತಿದ್ದು, ಅದರಂತೆ ಗುಲಾಮಿತನದ ಮಾನಸಿಕತೆಯಿಂದ ಕಾಂಗ್ರೆಸ್ ಹಾಗೂ ನೆಹರು ಕುಟುಂಬ ಹೊರಗಡೆ ಬಂದಿಲ್ಲ. ರಾಜಕೀಯ ಪಕ್ಷ ಹೀಗೆ ಯೋಚಿಸಬೇಕು ಎಂಬ ಭದ್ರ ಬುನಾದಿ ಹಾಕಿಕೊಟ್ಟವರು ದೀನದಯಾಳ ಉಪಾಧ್ಯಾಯರು. ಕೇವಲ ರಾಜಕೀಯ, ಅಧಿಕಾರಕ್ಕೆ ಮಾತ್ರ ಪಕ್ಷ ಇರಬಾರದು. ಸಮಾಜದ ಅಭಿವೃದ್ಧಿಗೆ ಇರಬೇಕು ಎಂಬುದನ್ನು ನಮಗೆ ತೋರಿಸಿಕೊಟ್ಟಿದ್ದಾರೆ. ಜವಾಹಲಾಲ್ ನೆಹರು ದುರಾಡಳಿತದ ಸಂದರ್ಭದಲ್ಲಿ ಭಾರತೀಯ ಚಿಂತನೆಯ ಪಕ್ಷ ಬೆಳೆಸಬೇಕು ಎಂದು ಪಂಡಿತ ದೀನದಯಾಳ ಉಪಾಧ್ಯಾಯ, ಶಾಮಪ್ರಕಾಶ ಮುಖರ್ಜಿ ಸೇರಿ ಜನಸಂಘವನ್ನು ಸ್ಥಾಪಿಸಿದರು. ಹಿರಿಯರ ಭದ್ರ ಬುನಾದಿಯ ತಳಹದಿಯಿಂದ ಬಿಜೆಪಿ ಅಧಿಕಾರಕ್ಕೆ ಬಂದಿದೆ. ಅಲ್ಲದೇ ರಾಷ್ಟ್ರದ ನಾಯಕನಾಗಿ ನರೇಂದ್ರ ಮೋದಿ ಗುರುತಿಸಿಕೊಳ್ಳಲು ಕಾರಣವಾಗಿದೆ. ಕಾಶ್ಮೀರದಲ್ಲಿ 370 ರದ್ದು ಮಾಡಿದ್ದೇವೆ. ಅಯೋಧ್ಯೆಯಲ್ಲಿ ಭವ್ಯ ರಾಮಂಮದಿರ ನಿರ್ಮಾಣ, ಉಜ್ವಲ ಯೋಜನೆ, ಜಲಜೀವನ ಮಿಷನ್ ಸೇರಿದಂತೆ ಬಡ ಮತ್ತು ಮಧ್ಯಮ ವರ್ಗದವನ್ನು ಕೇಂದ್ರೀಕರಿಸಿ ಯೋಜನೆ ಜಾರಿಗೊಳಿಸಲಾಗಿದೆ ಎಂದರು.ನಗರ ಮಂಡಳ ಅಧ್ಯಕ್ಷ ಆನಂದ ಸಾಲೇರ ಪ್ರಾಸ್ತಾವಿಕ ಮಾತನಾಡಿದರು. ರೈತ ಮೋರ್ಚಾ ಜಿಲ್ಲಾಧ್ಯಕ್ಷ ರಮೇಶ ನಾಯ್ಕ ಕುಪ್ಪಳ್ಳಿ, ಯುವ ಮೋರ್ಚಾ ಜಿಲ್ಲಾಧ್ಯಕ್ಷ ಪ್ರೇಮಕುಮಾರ ನಾಯ್ಕ, ಶಿರಸಿ ಗ್ರಾಮೀಣ ಮಂಡಲಾಧ್ಯಕ್ಷೆ ಉಷಾ ಹೆಗಡೆ, ನಗರಸಭೆ ಅಧ್ಯಕ್ಷೆ ಶರ್ಮಿಳಾ ಮಾದನಗೇರಿ, ಉಪಾಧ್ಯಕ್ಷ ರಮಾಕಾಂತ್ ಭಟ್ಟ, ಸ್ಥಾಯಿ ಸಮಿತಿ ಅಧ್ಯಕ್ಷ ರಾಘವೇಂದ್ರ ಶೆಟ್ಟಿ, ಎಸ್ಟಿ ಮೋರ್ಚಾ ಅಧ್ಯಕ್ಷ ಶ್ರೀಕಾಂತ ಬಳ್ಳಾರಿ, ಪ್ರಮುಖರಾದ ರೇಖಾ ಹೆಗಡೆ ಕಂಪ್ಲಿ, ಆರ್.ಡಿ. ಹೆಗಡೆ ಜಾನ್ಮನೆ ಮತ್ತಿತರರು ಉಪಸ್ಥಿತರಿದ್ದರು. ಶಿರಸಿ ನಗರ ಮಂಡಲ ಕಾರ್ಯದರ್ಶಿ ನಾಗರಾಜ ನಾಯ್ಕ ನಿರೂಪಿಸಿದರು. ಶಿಲ್ಪಾ ನಾಯ್ಕ ವಂದಿಸಿದರು.ದಾಂಡೇಲಿ ಅಳ್ನಾವರ ಮಾರ್ಗ ಟ್ರೇನ್ ಪುನಃ ಆರಂಭ:
ದಾಂಡೇಲಿ-ಅಳ್ನಾವರ ತನಕ ಬರುತ್ತಿದ್ದ ರೈಲ್ವೆ ಪುನಃ ಆರಂಭವಾಗಲಿದೆ. ಕೊರೋನಾ ಕಾಲದಲ್ಲಿ ನಿಂತಿದ್ದ ಮಾರ್ಗವನ್ನು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ ಹಾಗೂ ರಾಜ್ಯ ಸಚಿವ ವಿ.ಸೋಮಣ್ಣ ಅವರಲ್ಲಿ ಚರ್ಚಿಸಿ, ಮನವರಿಕೆ ಮಾಡಲಾಗಿತ್ತು. ಉತ್ತರ ಕನ್ನಡದ ಘಟ್ಟದ ಮೇಲ್ಭಾಗದಲ್ಲಿ ಇದ್ದ ಏಕ ಮೇವ ರೈಲ್ವೆ ನಿಂತಿತ್ತು. ಮರಳಿ ಆರಂಭಿಸಲಾಗುತ್ತಿರುವದು ಸಂತಸ ತಂದಿದೆ. ಆ ಭಾಗದ ಜನರ ಬಹುಕಾಲದ ಬೇಡಿಕೆಗೆ ಕೇಂದ್ರ ಸರ್ಕಾರ ಸ್ಪಂದಿಸಿದೆ. ತಾಳಗುಪ್ಪ-ಶಿರಸಿ, ಅಂಕೋಲಾ-ಹುಬ್ಬಳ್ಳಿ, ಶಿರಸಿ-ಹುಬ್ಬಳ್ಳಿ ರೈಲು ಆಗಲಿದೆ ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ವಿಶ್ವಾಸ ವ್ಯಕ್ತಪಡಿಸಿದರು.