ನೀರಿನ ಸಂರಕ್ಷಣೆಗೆ ಕೃಷಿ ಭಾಗ್ಯ ಯೋಜನೆ ಬಳಸಿಕೊಳ್ಳಿ: ಚಳ್ಳಕೆರೆ ವಿಭಾಗದ ಡಾ.ಬಿ.ಎನ್.ಪ್ರಭಾಕರ್

| Published : Feb 02 2025, 01:00 AM IST

ನೀರಿನ ಸಂರಕ್ಷಣೆಗೆ ಕೃಷಿ ಭಾಗ್ಯ ಯೋಜನೆ ಬಳಸಿಕೊಳ್ಳಿ: ಚಳ್ಳಕೆರೆ ವಿಭಾಗದ ಡಾ.ಬಿ.ಎನ್.ಪ್ರಭಾಕರ್
Share this Article
  • FB
  • TW
  • Linkdin
  • Email

ಸಾರಾಂಶ

ರೈತರು ನೀರಿನ ಸಂರಕ್ಷಣೆಗೆ ಕೃಷಿಭಾಗ್ಯ ಯೋಜನೆಯ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಚಳ್ಳಕೆರೆ ವಿಭಾಗದ ಉಪ ಕೃಷಿ ನಿರ್ದೇಶಕ ಡಾ.ಬಿ.ಎನ್.ಪ್ರಭಾಕರ್ ಹೇಳಿದರು.

ತರಬೇತಿ ಕಾರ್ಯಕ್ರಮ । ಅಂತರ್ಜಲ ನಿರ್ವಹಣೆ, ಜಲ ಭದ್ರತಾ ಯೋಜನೆ ಸಿದ್ಧಪಡಿಸುವ ಕುರಿತು ಮಾಹಿತಿ

ಕನ್ನಡಪ್ರಭ ವಾರ್ತೆ ಹಿರಿಯೂರು

ರೈತರು ನೀರಿನ ಸಂರಕ್ಷಣೆಗೆ ಕೃಷಿಭಾಗ್ಯ ಯೋಜನೆಯ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಚಳ್ಳಕೆರೆ ವಿಭಾಗದ ಉಪ ಕೃಷಿ ನಿರ್ದೇಶಕ ಡಾ.ಬಿ.ಎನ್.ಪ್ರಭಾಕರ್ ಹೇಳಿದರು.

ತಾಲೂಕಿನ ಬಬ್ಬೂರು ಫಾರಂನ ಜಿಲ್ಲಾ ಕೃಷಿ ತರಬೇತಿ ಕೇಂದ್ರದಲ್ಲಿ ತಾಲೂಕಿನ ರೈತರಿಗೆ ಅಟಲ್ ಭೂಜಲ ಯೋಜನೆಯಡಿ ಸಮುದಾಯ ಸಹಭಾಗಿತ್ವದೊಂದಿಗೆ ಅಂತರ್ಜಲ ನಿರ್ವಹಣೆ, ಜಲ ಭದ್ರತಾ ಯೋಜನೆ ಸಿದ್ಧಪಡಿಸುವುದು ಮತ್ತು ನೀರಿನ ಬೇಡಿಕೆ ಕಡಿಮೆ ಮಾಡುವ ಸೂಕ್ಷ್ಮ ನೀರಾವರಿ ತಾಂತ್ರಿಕತೆಗಳ ಕುರಿತು ಆಯೋಜಿಸಲಾದ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಭೂ ಹೊದಿಕೆ, ಕಡಿಮೆ ನೀರು ಬೇಡುವ ಬೆಳೆಗಳನ್ನು ಬೆಳೆಯುವುದು ಮತ್ತು ಬೆಳೆ ಪರಿವರ್ತನೆಗೆ ಆದ್ಯತೆ ನೀಡಬೇಕು. ಸಮುದಾಯದ ಸಹಭಾಗಿತ್ವದಲ್ಲಿ ಅಂತರ್ಜಲ ಸಂಗ್ರಹಣೆ ಮತ್ತು ಅಂತರ್ಜಲವನ್ನು ಮರುಪೂರಣ ಮಾಡಲು ಅಟಲ್ ಭೂಜಲ ಯೋಜನೆಯು ಹೆಚ್ಚಿನ ಪ್ರಾಮುಖ್ಯತೆ ವಹಿಸುತ್ತದೆ ಎಂದರು.

ಜಿಲ್ಲೆಯ ಮೊಳಕಾಲ್ಮೂರು ಹೊರತುಪಡಿಸಿ ಉಳಿದ ಐದು ತಾಲೂಕಿನಲ್ಲಿ ಅಂತರ್ಜಲವನ್ನು ಅತಿ ಹೆಚ್ಚು ಬಳಕೆ ಮಾಡುತ್ತಿದ್ದು ನೀರಿನ ಮಿತ ಬಳಕೆ ಮಾಡಿ ಉತ್ಪಾದಕತೆ ಹೆಚ್ಚಿಸಲು ಕೃಷಿ ಇಲಾಖೆಯಿಂದ ಅಟಲ್ ಭೂಜಲ ಯೋಜನೆ ಅಡಿ ಸಹಾಯಧನದಡಿ ರೈತರಿಗೆ ಸ್ಪ್ರಿಂಕ್ಲರ್ ಘಟಕಗಳನ್ನು ವಿತರಣೆ ಮಾಡಲಾಗುತ್ತಿದೆ ಎಂದರು.

ಅಟಲ್ ಭೂಜಲ ಯೋಜನೆ ಬೆಂಗಳೂರಿನ ಕೇಂದ್ರ ಕಚೇರಿಯ ಸಾಮಾಜಿಕ ಅಭಿವೃದ್ದಿ ತಜ್ಞ ಪ್ರವೀಣ್ ಮಾತನಾಡಿ, ಭಾರತ ಹಾಗೂ ಕರ್ನಾಟಕದಲ್ಲಿ ಅಂತರ್ಜಲ ನೀರಿನ ಅತಿಯಾದ ಬಳಕೆಯ ಇಂದಿನ ಸ್ಥಿತಿಗತಿ, ಅಂತರ್ಜಲ ನಿರ್ವಹಣೆಗೆ ಪೂರಕವಾದ ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿವಿಧ ಯೋಜನೆಗಳು, ಅಟಲ್ ಭೂಜಲ ಯೋಜನೆಯಡಿ ಅಂತರ್ಜಲ ನಿರ್ವಹಣೆಗೆ ಸಮುದಾಯದಲ್ಲಿ ಅರಿವು ಮೂಡಿಸುವು ಅಗತ್ಯತೆ ಮತ್ತು ಸಮುದಾಯದ ಸಹಭಾಗಿತ್ವದ ಪಾತ್ರಗಳ ಬಗ್ಗೆ ಮನವರಿಕೆ ಮಾಡಿಕೊಟ್ಟರು

ಜಿಲ್ಲಾ ಅಟಲ್ ಭೂಜಲ ಯೋಜನೆ ಕಚೇರಿಯ ಡಿ.ರವಿಕುಮಾರ್ ಮಾತನಾಡಿ, ನೀರಿನ ಮಿತ ಬಳಕೆ ಮಾಡಿ ಉತ್ಪಾದಕತೆಯನ್ನು ಹೆಚ್ಚಿಸಲು ಅಟಲ್ ಭೂಜಲ ಯೋಜನೆಯ ಸಹಾಯಧನದಡಿ 2022-23 ನೇ ಸಾಲಿನಿಂದ ಸ್ಪ್ರಿಂಕ್ಲರ್ ಘಟಕ ವಿತರಿಸಲು ಕೃಷಿ ಇಲಾಖೆಯಿಂದ ಅನುಷ್ಠಾನ ಮಾಡಲಾಗುತ್ತಿದೆ ಎಂದರು.

ಸಹಾಯಕ ಕೃಷಿ ನಿರ್ದೇಶಕ ಎಂ.ವಿ. ಮಂಜುನಾಥ್ ಮಾತನಾಡಿ, ಕೃಷಿ ಇಲಾಖೆಯ ವಿವಿಧ ಯೋಜನೆಗಳು ಹಾಗೂ ಕೃಷಿ ಭಾಗ್ಯ ಯೋಜನೆಯಡಿ ಬಿದ್ದ ಮಳೆ ನೀರನ್ನು ಸಮರ್ಪಕವಾಗಿ ಸಂಗ್ರಹಣೆ ಮಾಡಲು ಕಂದಕದೊಂದಿಗೆ ಬದು, ಕೃಷಿ ಹೊಂಡ ನಿರ್ಮಾಣ ಕುರಿತು ಮಾಹಿತಿ ನೀಡುತ್ತ ಕೃಷಿ ಹೊಂಡದಲ್ಲಿ ಸಂಗ್ರಹಣೆ ಆದ ನೀರನ್ನು ಬೆಳೆಗಳ ಸಂದಿಗ್ಧ ಹಂತದಲ್ಲಿ ನೀರನ್ನು ಹಾಯಿಸಲು ಸ್ಪ್ರಿಂಕ್ಲರ್ ಸೆಟ್ ಮತ್ತು ಡೀಸೆಲ್ ಪಂಪ್ ಸೆಟ್ ಬಳಸಿಕೊಂಡು ಈ ಯೋಜನೆಯ ಸದುಪಯೋಗ ಪಡೆದುಕೊಳ್ಳಬೇಕು ಎಂದರು.

ಜಿಲ್ಲಾ ಕೃಷಿ ತರಬೇತಿ ಕೇಂದ್ರದ ಮುಖ್ಯಸ್ಥ ರಜನೀಕಾಂತ, ನೆಟಾಫಿಮ್ ಸಂಸ್ಥೆಯ ಬೇಸಾಯ ಶಾಸ್ತ್ರಜ್ಞ ಆಂಜಿನಪ್ಪ, ಫೈಲೊ ಸಂಸ್ಥೆಯ ಪ್ರತಿನಿಧಿ ಡಾ.ಬಿ.ಎಂ.ಕಿರಣ್ ಹಾಜರಿದ್ದರು.