ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರು
ಕಬ್ಬು ಮತ್ತು ಬಾಳೆ ಬೆಳೆಗಳು ಪ್ರಮುಖ ವಾಣಿಜ್ಯ ಬೆಳೆಗಳಾಗಿದ್ದು, ಆಧುನಿಕ ಕೃಷಿ ಪದ್ಧತಿಗಳನ್ನು ಅಳವಡಿಸಿಕೊಂಡಲ್ಲಿ ಅಧಿಕ ಇಳುವರಿಯನ್ನು ಪಡೆದು ರೈತರು ಆರ್ಥಿಕವಾಗಿ ಸದೃಢರಾಗಬೇಕು ಎಂದು ಜಿಲ್ಲಾ ಕೃಷಿ ತರಬೇತಿ ಕೇಂದ್ರದ ಉಪ ಕೃಷಿ ನಿರ್ದೇಶಕ ಕೆ. ನಾಗರಾಜ್ ಕರೆ ನೀಡಿದರು.ನಾಗನಹಳ್ಳಿ ಜಿಲ್ಲಾ ಕೃಷಿ ತರಬೇತಿ ಕೇಂದ್ರದ ವತಿಯಿಂದ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ ಆಯೋಜಿಸಿದ್ದ ಕಬ್ಬು ಮತ್ತು ಬಾಳೆ ಬೆಳೆಯಲ್ಲಿ ತಳಿ ಆಯ್ಕೆ, ಆಧುನಿಕ ಕೃಷಿ ಪದ್ಧತಿಗಳು ಮತ್ತು ಮಾರುಕಟ್ಟೆಗಿರುವ ಅವಕಾಶಗಳು ಕುರಿತ ಮೂರು ದಿನಗಳ ಸಾಂಸ್ಥಿಕ ತರಬೇತಿಯನ್ನು ಅವರು ಉದ್ಘಾಟಿಸಿ ಮಾತನಾಡಿದರು.
ಬಾಳೆಯಲ್ಲಿ ತಳಿಗಳು ಮತ್ತು ಉತ್ಪಾದನಾ ತಾಂತ್ರಿಕತೆಗಳು ಹಾಗೂ ಸಮಗ್ರ ಪೋಷಕಾಂಶಗಳು ನಿರ್ವಹಣೆ ಕುರಿತು ಮಂಡ್ಯ ಕೃಷಿ ಮಹಾವಿದ್ಯಾಲಯದ ಸಹ ಪ್ರಾಧ್ಯಾಪಕ ಡಾ. ನಾಗಪ್ಪ ದೇಸಾಯಿ ಉಪನ್ಯಾಸ ನೀಡಿದರು. ಸಮಗ್ರ ಕೃಷಿ ಪದ್ಧತಿ ಕುರಿತು ಮುದ್ದಹಳ್ಳಿ ಪ್ರಗತಿಪರ ರೈತ ಚಿಕ್ಕಸ್ವಾಮಿ ತಮ್ಮ ಅನುಭವ ಹಂಚಿಕೊಂಡರು.ಕಬ್ಬು ಬೆಳೆಯಲ್ಲಿ ತಳಿಗಳು ಮತ್ತು ಉತ್ಪಾದನಾ ತಾಂತ್ರಿಕತೆಗಳು ಮತ್ತು ಸಮಗ್ರ ಪೋಷಕಾಂಶಗಳ ನಿರ್ವಹಣೆ ಕುರಿತು ವಲಯ ಕೃಷಿ ಸಂಶೋಧನ ಕೇಂದ್ರದ ಪ್ರಾಧ್ಯಾಪಕ ಡಾ.ಕೆ.ವಿ. ಕೇಶವಯ್ಯ ಉಪನ್ಯಾಸ ನೀಡಿದರು. ಬಾಳೆ ಮತ್ತು ಕಬ್ಬು ಬೆಳೆಗಳಲ್ಲಿ ಕೀಟ ರೋಗ ಬಾದೆ ಮತ್ತು ಸಮಗ್ರ ನಿರ್ವಹಣೆ, ಕೀಟನಾಶಕಗಳ ಸುರಕ್ಷಿತ ಬಳಕೆ ಕುರಿತು ಸಸ್ಯರೋಗ ಶಾಸ್ತ್ರಜ್ಞೆ ಡಾ.ಆರ್.ಎನ್. ಪುಷ್ಪಾ ಮಾಹಿತಿ ನೀಡಿದರು.
ತೋಟಗಾರಿಕೆ ಇಲಾಖೆಯಲ್ಲಿ ದೊರೆಯುವ ಸವಲತ್ತುಗಳು ಹಾಗೂ ನರೇಗಾ ಕಾರ್ಯಕ್ರಮದಡಿ ಪ್ರದೇಶ ವಿಸ್ತರಣಾ ಬೆಳೆಗಳು ಕುರಿತು ವರುಣ ಹೋಬಳಿ ಸಹಾಯಕ ತೋಟಗಾರಿಕೆ ಅಧಿಕಾರಿ ದರ್ಶನ್ ಮಾಹಿತಿ ನೀಡಿದರು.ಕೃಷಿ ಮತ್ತು ತೋಟಗಾರಿಕೆ ಬೆಳೆಯಲ್ಲಿ ಸಮಗ್ರ ಪೋಷಕಾಂಶಗಳ ನಿರ್ವಹಣೆ, ವಿವಿಧ ಸಾವಯವ ಗೊಬ್ಬರಗಳ ತಯಾರಿಕೆ ಮತ್ತು ಬಳಕೆ, ಮಹತ್ವ ಕುರಿತು ಡಾ.ಜಿ.ವಿ. ಸುಮಂತ್ ಕುಮಾರ್ ವಿವರಿಸಿದರು. ಹಾವು ಕಡಿತ ಸಂದರ್ಭದಲ್ಲಿ ಅನುಸರಿಸಬೇಕಾದ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಶರಣ್ಯ ಭಟ್ ಮಾಹಿತಿ ನೀಡಿದರು.
ಸಹಾಯಕ ಕೃಷಿ ನಿರ್ದೇಶಕಿ ಎಚ್.ಬಿ. ಮಧುಲತಾ ಇದ್ದರು.