ಅಪರಾಧ ಪತ್ತೆಗೆ ಆಧುನಿಕ ತಂತ್ರಜ್ಞಾನ ಬಳಸಿ: ಎಸ್‌ಪಿ

| Published : Sep 04 2024, 01:53 AM IST

ಅಪರಾಧ ಪತ್ತೆಗೆ ಆಧುನಿಕ ತಂತ್ರಜ್ಞಾನ ಬಳಸಿ: ಎಸ್‌ಪಿ
Share this Article
  • FB
  • TW
  • Linkdin
  • Email

ಸಾರಾಂಶ

ಆಧುನಿಕತೆ, ತಂತ್ರಜ್ಞಾನ ಮುಂದುವರಿದಂತೆಲ್ಲಾ ಅಪರಾಧ ಪ್ರಕರಣಗಳು, ಅಪರಾಧದ ಸ್ವರೂಪಗಳು ಬದಲಾಗುತ್ತಿದ್ದು, ಅಪರಾಧಗಳ ಪತ್ತೆ ಜೊತೆ ಸೂಕ್ತ ಸಾಕ್ಷ್ಯಾಧಾರಗಳನ್ನು ಕಲೆ ಹಾಕುವುದೂ ಅತಿ ಮುಖ್ಯ ಎಂದು ಜಿಲ್ಲಾ ಪೊಲೀಸ್ ಅಧೀಕ್ಷಕಿ ಉಮಾ ಪ್ರಶಾಂತ್ ದಾವಣಗೆರೆಯಲ್ಲಿ ಹೇಳಿದ್ದಾರೆ.

- ಪೊಲೀಸ್‌ ಸಭಾಂಗಣದಲ್ಲಿ ವಲಯಮಟ್ಟದ ಪೊಲೀಸ್ ಕರ್ತವ್ಯ ಕೂಟ ಕಾರ್ಯಕ್ರಮ

- - -

ಕನ್ನಡಪ್ರಭ ವಾರ್ತೆ ದಾವಣಗೆರೆ ಆಧುನಿಕತೆ, ತಂತ್ರಜ್ಞಾನ ಮುಂದುವರಿದಂತೆಲ್ಲಾ ಅಪರಾಧ ಪ್ರಕರಣಗಳು, ಅಪರಾಧದ ಸ್ವರೂಪಗಳು ಬದಲಾಗುತ್ತಿದ್ದು, ಅಪರಾಧಗಳ ಪತ್ತೆ ಜೊತೆ ಸೂಕ್ತ ಸಾಕ್ಷ್ಯಾಧಾರಗಳನ್ನು ಕಲೆ ಹಾಕುವುದೂ ಅತಿ ಮುಖ್ಯ ಎಂದು ಜಿಲ್ಲಾ ಪೊಲೀಸ್ ಅಧೀಕ್ಷಕಿ ಉಮಾ ಪ್ರಶಾಂತ್ ಹೇಳಿದರು.

ನಗರದ ಜಿಲ್ಲಾ ಪೊಲೀಸ್ ಇಲಾಖೆ ಸಭಾಂಗಣದಲ್ಲಿ ಮಂಗಳವಾರ 6ನೇ ವಲಯಮಟ್ಟದ ಪೊಲೀಸ್ ಕರ್ತವ್ಯ ಕೂಟ-2024ರ ಉದ್ಘಾಟನಾ ಸಮಾರಂಭ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ತಂತ್ರಜ್ಞಾನಕ್ಕೆ ತಕ್ಕಂತೆ ಅಪರಾಧಗಳ ಸ್ವರೂಪವೂ ಬದಲಾಗುತ್ತಿದೆ. ಅಪರಾಧ, ಅಪರಾಧಿಗಳ ಪತ್ತೆ ಜೊತೆಗೆ ಸೂಕ್ತ ಸಾಕ್ಷ್ಯಾಧಾರಗಳ ಪತ್ತೆಗೂ ತನಿಖಾಧಿಕಾರಿಗಳು ಒತ್ತು ನೀಡಬೇಕು ಎಂದರು.

ಪೊಲೀಸರು ಈಗಿನ ತಂತ್ರಜ್ಞಾನ ಸಹಾಯದಿಂದ ಸರಿಯಾದ ರೂಪದಲ್ಲಿ ತನಿಖೆ ನಡೆಸಬೇಕು. ಅಪರಾಧಿಗಳಿಗೆ ಶಿಕ್ಷೆಗೆ ಒಳಪಡಿಸಲು ಸಾಕ್ಷಿ ಹಾಗೂ ಆಧಾರ ಮುಖ್ಯವಾಗುತ್ತದೆ. ಅದಕ್ಕಾಗಿ ಈ ಬಗ್ಗೆ ಪೊಲೀಸರು ಸೂಕ್ತವಾಗಿ ತಯಾರಿರಬೇಕು. ತಂತ್ರಜ್ಞಾನ ಬಗ್ಗೆ ನಮ್ಮ ಅಧಿಕಾರಿ, ಸಿಬ್ಬಂದಿಗೂ ಅರಿವು ಇರಬೇಕಾದ ಅಗತ್ಯವಿದೆ ಎಂದು ಹೇಳಿದರು.

ಬದಲಾಗಿರುವ ಕಾನೂನುಗಳ ಬಗ್ಗೆ ಪೊಲೀಸ್‌ ಅಧಿಕಾರಿ, ಸಿಬ್ಬಂದಿ ಅರಿತಿರಬೇಕು. ಪ್ರಕರಣ ನಡೆದ ಸ್ಥಳದ ಚಿತ್ರೀಕರಣ ಮಾಡಲು ಮೊಬೈಲ್ ಬಳಸಬಹುದು. ಈ ಬಗ್ಗೆ ಬಹಳಷ್ಟು ಗೊಂದಲಗಳಿವೆ. ಆದರೆ, ಮೊಬೈಲ್ ಬಳಕೆ ಮಾಡಬಹುದೆಂದು ಕಾನೂನಿನಲ್ಲಿದೆ. ಅದರೊಂದಿಗೆ ಪ್ರಕರಣದ ಬಗ್ಗೆ ಆಡಿಯೋ, ವೀಡಿಯೋ ಅಗತ್ಯವಿದೆ ಎಂದಾಗ ಅದಕ್ಕಾಗಿ ಅಧಿಕಾರಿಗಳು ಸೂಕ್ತ ಸಾಕ್ಷ್ಯಗಳನ್ನು ಕಲೆ ಹಾಕುವುದು ಅತಿ ಮುಖ್ಯ. ಇದರಿಂದ ನ್ಯಾಯಾಧೀಶರಿಗೂ ಉತ್ತಮ ತೀರ್ಪು ಕೊಡಲು ಸಾಧ್ಯವಿದೆ ಎಂದು ಅಧಿಕಾರಿಗಳಿಗೆ ತಿಳಿಸಿದರು.

ಪೊಲೀಸ್ ಅಧಿಕಾರಿಗಳಾದ ನಾವು ನಿತ್ಯದ ಕೆಲಸದಲಲಿ ಬದಲಾವಣೆ ತರಬೇಕಾದ ಅಗತ್ಯವಿದೆ. ವೈಜ್ಞಾನಿಕವಾಗಿಯೂ ತನಿಖೆ ನಡೆಸಬೇಕಾಗಿದೆ. ಅದಕ್ಕಾಗಿ ತಯಾರಿರಬೇಕು. ಪ್ರಕರಣದ ಬಗ್ಗೆ ತನಿಖೆ ಕೈಗೊಳ್ಳುವಾಗ ದೊಡ್ಡ ಕಾಗದದ ಕಡತಗಳನ್ನು ನಮ್ಮ ಮುಂದೆ ತಂದಿಡುವುದಷ್ಟೇ ಅಲ್ಲ, ಬದಲಾದ ತಂತ್ರಜ್ಞಾನವನ್ನೂ ಅಳವಡಿಸಿಕೊಂಡು ಸಾಧ್ಯವಾದಷ್ಟು ಸರಳೀಕರಿಸಿ, ನೀಡಬೇಕು. ಮೊಬೈಲ್‌ಗಳ ಬಳಕೆ ಮಾಡಿ, ತನಿಖೆಗೆ ಅಗತ್ಯವಾಗಿ ತೊಡಗಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶೆ ರಾಜೇಶ್ವರಿ ಎನ್. ಹೆಗಡೆ ಸಸಿಗೆ ನೀರೆರೆಯುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು. ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ವಿಜಯಕುಮಾರ ಎಂ.ಸಂತೋಷ್, ಜಿ.ಮಂಜುನಾಥ, ದೊಡ್ಡಬಾತಿಯ ಆರ್‌ಎಫ್‌ಎಸ್ಎಲ್‌ನ ಉಪ ನಿರ್ದೇಶಕಿ ಡಾ.ಛಾಯಾಕುಮಾರಿ, ಡಿವೈಎಸ್‌ಪಿಗಳಾದ ಎ.ಕೆ.ರುದ್ರೇಶ, ರುದ್ರಪ್ಪ ಉಜ್ಜಿನಕೊಪ್ಪ, ಪಿ.ಬಿ.ಪ್ರಕಾಶ, ಬೆಂಗಳೂರಿನ ಹಿರಿಯ ಕಾರ್ಯಕ್ರಮ ಅಧಿಕಾರಿ ನಾಗೇಶ ಇತರೆ ಅಧಿಕಾರಿ, ಸಿಬ್ಬಂದಿ ಇದ್ದರು.

ಪೊಲೀಸ್ ಅಧಿಕಾರಿ, ಸಿಬ್ಬಂದಿಗೆ ನಡೆದ ವಿವಿಧ ಸ್ಪರ್ಧೆಗಳಿಗೆ ತೀರ್ಪುಗಾರರು ಸೇರಿದಂತೆ ದಾವಣಗೆರೆ, ಚಿತ್ರದುರ್ಗ, ಹಾವೇರಿ, ಶಿವಮೊಗ್ಗ ಜಿಲ್ಲೆಗಳಿಂದ ಕರ್ತವ್ಯ ಕೂಟದಲ್ಲಿ ಅಧಿಕಾರಿ, ಸಿಬ್ಬಂದಿ ಸ್ಪರ್ಧಿಗಳಾಗಿ ಭಾಗವಹಿಸಿದ್ದರು.

- - -

ಕೋಟ್‌ ನೂತನ ತಂತ್ರಜ್ಞಾನ ಬಳಸಿ, ಅಪರಾಧಿಗಳು ಅಪರಾಧ ಕೃತ್ಯ ಎಸಗುತ್ತಿದ್ದಾರೆ. ಅದಕ್ಕೆ ತಕ್ಕಂತೆ ಅಪರಾಧಿಗಳು, ಅಪರಾಧ ಪತ್ತೆ ಹಿನ್ನೆಲೆ ನಮ್ಮ ಅಧಿಕಾರಿ, ಸಿಬ್ಬಂದಿ ಸಹ ತಂತ್ರಜ್ಞಾನ ಕಲಿಯಬೇಕು. ಅಂತಹ ಮನೋಭಾವ, ಕಲಿಕಾ ಆಸಕ್ತಿಯನ್ನು ರೂಢಿಸಿಕೊಳ್ಳಬೇಕು

- ಉಮಾ ಪ್ರಶಾಂತ್‌, ಜಿಲ್ಲಾ ಎಸ್‌ಪಿ

- - - -3ಕೆಡಿವಿಜಿ5, 6:

ದಾವಣಗೆರೆಯಲ್ಲಿ ಮಂಗಳವಾರ 6ನೇ ವಲಯಮಟ್ಟದ ಪೊಲೀಸ್ ಕರ್ತವ್ಯ ಕೂಟ-2024ರ ಉದ್ಘಾಟನೆಯನ್ನು ನ್ಯಾಯಾಧೀಶೆ ರಾಜೇಶ್ವರಿ ಎನ್. ಹೆಗಡೆ ಸಸಿಗೆ ನೀರೆರೆಯುವ ಮೂಲಕ ಉದ್ಘಾಟಿಸಿದರು.