ಸಂಶೋಧನೆಗೆ ಪಾಶ್ಚಾತ್ಯ ವಿಜ್ಞಾನಿಗಳಿಂದ ಜ್ಯೋತಿಷ್ಯ ಬಳಕೆ

| Published : Jun 12 2024, 12:31 AM IST

ಸಂಶೋಧನೆಗೆ ಪಾಶ್ಚಾತ್ಯ ವಿಜ್ಞಾನಿಗಳಿಂದ ಜ್ಯೋತಿಷ್ಯ ಬಳಕೆ
Share this Article
  • FB
  • TW
  • Linkdin
  • Email

ಸಾರಾಂಶ

ಸಮಾಜ ಜೀವಿಯಾದ ಮಾನವನ ಅವಶ್ಯಕತೆಗಳನ್ನು ಹಲವು ಬಗೆಯ ಅವಸರಗಳನ್ನಾಗಿ ವಿಂಗಡಿಸಬಹುದು. ಜ್ಯೋತಿಷ್ಯವು ಎಲ್ಲ ತುರ್ತು ಅವಶ್ಯಕತೆಗಳಿಗೂ ನಿರ್ದಿಷ್ಟವಾದ ಸಂಬಂಧ ಪಡೆದಿದೆ. ಬದುಕಿನಲ್ಲಿ ಯಶಸ್ಸು ಬಹುಮಟ್ಟಿಗೆ ಸಂಪತ್ತನ್ನು ಇಲ್ಲವೆ ವಿಪತ್ತನ್ನು ಅವಲಂಭಿಸುತ್ತದೆ.

ಧಾರವಾಡ:

ಮನುಷ್ಯನ ಸಾಮಾಜಿಕ ಜೀವನದಲ್ಲಿ ಜ್ಯೋತಿಷ್ಯದ ಪ್ರಾಮುಖ್ಯ ಹಲವು ಪ್ರಕಾರವುಳ್ಳದ್ದು. ಮಾನವೀಯ ಅವಶ್ಯಕತೆಗಳೂ, ಆಶೋತ್ತರಗಳೂ ಜ್ಯೋತಿಷ್ಯದ ಅನ್ವೇಷಣಕ್ಕೆ ಸತತವಾದ ಪ್ರೇರಕಶಕ್ತಿ ಒದಗಿಸುತ್ತದೆ ಎಂದು ಸಂಸ್ಕೃತ ಉಪನ್ಯಾಸಕ, ವಿದ್ವಾನ್ ನವೀನಶಾಸ್ತ್ರಿ ಪುರಾಣಿಕ ಹೇಳಿದರು.

ಕರ್ನಾಟಕ ವಿದ್ಯಾವರ್ಧಕ ಸಂಘವು ದಿ. ಎನ್.ಕೆ. ಜೋಗಳೇಕರ ಸ್ಮರಣಾರ್ಥ ದತ್ತಿ ಅಂಗವಾಗಿ ಆಯೋಜಿಸಿದ್ದ ‘ಭಾರತೀಯ ಜ್ಯೋತಿಷ್ಯ ಶಾಸ್ತ್ರ ಮತ್ತು ವೈಜ್ಞಾನಿಕ ಚಿಂತನೆಗಳು’ ವಿಷಯ ಕುರಿತು ಮಾತನಾಡಿದರು.

ಸಮಾಜ ಜೀವಿಯಾದ ಮಾನವನ ಅವಶ್ಯಕತೆಗಳನ್ನು ಹಲವು ಬಗೆಯ ಅವಸರಗಳನ್ನಾಗಿ ವಿಂಗಡಿಸಬಹುದು. ಜ್ಯೋತಿಷ್ಯವು ಎಲ್ಲ ತುರ್ತು ಅವಶ್ಯಕತೆಗಳಿಗೂ ನಿರ್ದಿಷ್ಟವಾದ ಸಂಬಂಧ ಪಡೆದಿದೆ. ಬದುಕಿನಲ್ಲಿ ಯಶಸ್ಸು ಬಹುಮಟ್ಟಿಗೆ ಸಂಪತ್ತನ್ನು ಇಲ್ಲವೆ ವಿಪತ್ತನ್ನು ಅವಲಂಭಿಸುತ್ತದೆ. ಮನುಷ್ಯನು ತನ್ನ ಪೂರ್ವಜನ್ಮದ ಕರ್ಮವಿಪಾಕದಿಂದ ಸದ್ಯದ ಬದುಕಿನಲ್ಲಿ ಅನುಭವಿಸುವ ಐಶ್ವರ್ಯ, ಖ್ಯಾತಿ, ಪದವಿ, ಸ್ಥಾನಮಾನ, ವಿಪತ್ತು, ಅನಾರೋಗ್ಯ ಮತು ದೌರ್ಭಾಗ್ಯಗಳ ಪ್ರಮಾಣವನ್ನು ಯೋಗಗಳು ತಿಳಿಯಪಡಿಸುತ್ತವೆ. ಅರ್ಥಾತ್ ವಿವಿಧ ಗ್ರಹಸ್ಥಿತಿಗಳು ನಾವು ಪಡೆದುಕೊಂಡು ಬಂದಿರುವ ದೈಹಿಕ, ಮಾನಸಿಕ ಪ್ರವೃತ್ತಿಗಳ ಮೊತ್ತವನ್ನು ಸೂಚಿಸುತ್ತವೆ. ಅಲ್ಲದೆ ಬಹಳ ಪ್ರಾಚೀನವಾದಂಥ ಜ್ಯೋತಿಷ್ಯ ಶಾಸ್ತ್ರ ವಿಜ್ಞಾನದ ಒಂದು ಭಾಗವೇ ಆಗಿದೆ. ಅದು ಜ್ಯೋತಿರ್ವಿಜ್ಞಾನ ಎಂದರು.

ಪಾಶ್ಚಾತ್ಯ ವಿಜ್ಞಾನಿಗಳು ಭಾರತೀಯ ಜ್ಯೋತಿಷ್ಯ ಶಾಸ್ತ್ರ ಬಳಸಿಕೊಂಡು ತಮ್ಮದೇ ಆದ ಅನೇಕ ಸಂಶೋಧನೆ ಮಾಡಿದ್ದಾರೆ ಎಂದ ಅವರು, ಮನುಷ್ಯ ಎಷ್ಟೇ ಆಧುನಿಕತೆ ಹೊಂದಿದ್ದರೂ ಅವನ ಭವಿಷ್ಯದಲ್ಲಿ ನಾಳೆ ಏನಾಗುತ್ತದೆ ಎಂಬುದನ್ನು ತಿಳಿದುಕೊಳ್ಳುವ ಕೌತುಕ ಇದ್ದೇ ಇರುತ್ತದೆ. ಈ ನಿಟ್ಟಿನಲ್ಲಿ ಜ್ಯೋತಿಷ್ಯ ಪರಿಹಾರ ಸೂಚಿಸುವ ಒಂದು ದಾರಿದೀಪ ಎಂದು ಹೇಳಿದರು.

ಇತ್ತೀಚಿನ ದಿನಗಳಲ್ಲಿ ಜ್ಯೋತಿಷ್ಯ ಅಧ್ಯಯನದ ಕೊರತೆ ಮತ್ತು ಅನೇಕ ಆಮಿಷಗಳಿಂದ ಅದರ ಪಾವಿತ್ರ್ಯತೆ ಕಡಿಮೆ ಆಗುತ್ತಿರುವುದು ಖೇದಕರ. ಹೀಗಾಗಿ ಜ್ಯೋತಿಷ್ಯ ಕೇವಲ ಉದರ ಪೋಷಣೆಗೆ ಇರದೆ ಇದೊಂದು ಮುನ್ಸೂಚನೆ ನೀಡುವ ಶಾಸ್ತ್ರ ಆಗಿರುವುದರಿಂದ ನಾವು ಹೆಚ್ಚು ಅಧ್ಯಯನ ಮಾಡಿದಾಗ ಅದರ ಮಹತ್ವದ ಅರಿವಾಗುತ್ತದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಮಾನಸಿಕ ಆರೋಗ್ಯ ತಜ್ಞ ಡಾ. ಆನಂದ ಕೆ. ಹಂದಿಗೋಳ, ಎನ್‌.ಕೆ. ಜೋಗಳೇಕರ ಅವರೊಂದಿಗಿನ ಒಡನಾಟ ಸ್ಮರಿಸಿಕೊಂಡರು. ವೀರಣ್ಣ ಒಡ್ಡೀನ ಸ್ವಾಗತಿಸಿದರು. ಗುರು ಹಿರೇಮಠ ಪ್ರಾಸ್ತಾವಿಕ ಮಾತನಾಡಿದರು. ಡಾ. ಜಿನದತ್ತ ಹಡಗಲಿ ನಿರೂಪಿಸಿದರು. ಶಿ.ಮ. ರಾಚಯ್ಯನವರ ವಂದಿಸಿದರು.