ಈದ್ ಮಿಲಾದ್ ಮೆರವಣಿಗೆಯಲ್ಲಿ ಡಿಜೆ ಬಳಕೆ: ಕ್ರಮಕ್ಕೆ ಒತ್ತಾಯ

| Published : Sep 17 2025, 01:05 AM IST

ಈದ್ ಮಿಲಾದ್ ಮೆರವಣಿಗೆಯಲ್ಲಿ ಡಿಜೆ ಬಳಕೆ: ಕ್ರಮಕ್ಕೆ ಒತ್ತಾಯ
Share this Article
  • FB
  • TW
  • Linkdin
  • Email

ಸಾರಾಂಶ

ಶಿವಮೊಗ್ಗದಲ್ಲಿ ನಡೆದ ಈದ್ ಮಿಲಾದ್ ಮೆರವಣಿಗೆಯಲ್ಲಿ ಡಿಜೆ ಮತ್ತು ಭಾವಚಿತ್ರಗಳ ಬಳಸಿದವರ ಮೇಲೆ ತಕ್ಷಣವೇ ಎಫ್‌ಐಆರ್ ದಾಖಲಿಸಿ ಮೆರವಣಿಗೆಯಲ್ಲಿ ಬಳಸಿದ ವಾಹನಗಳ ಮೇಲೆ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಮಂಗಳವಾರ ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗದಳ ಜಿಲ್ಲಾ ಶಾಖೆ ವತಿಯಿಂದ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.

ಶಿವಮೊಗ್ಗ: ಶಿವಮೊಗ್ಗದಲ್ಲಿ ನಡೆದ ಈದ್ ಮಿಲಾದ್ ಮೆರವಣಿಗೆಯಲ್ಲಿ ಡಿಜೆ ಮತ್ತು ಭಾವಚಿತ್ರಗಳ ಬಳಸಿದವರ ಮೇಲೆ ತಕ್ಷಣವೇ ಎಫ್‌ಐಆರ್ ದಾಖಲಿಸಿ ಮೆರವಣಿಗೆಯಲ್ಲಿ ಬಳಸಿದ ವಾಹನಗಳ ಮೇಲೆ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಮಂಗಳವಾರ ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗದಳ ಜಿಲ್ಲಾ ಶಾಖೆ ವತಿಯಿಂದ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು. ಈ ಮೆರವಣಿಗೆಯಲ್ಲಿ ವಿದೇಶಿ ಆಕ್ರಮಣಕಾರರ ಭಾವಚಿತ್ರ ಹಾಗೂ ವಿದೇಶಿ ಬಾವುಟಗಳನ್ನು ಪ್ರದರ್ಶನ ಮಾಡಿರುವುದು ಹಾಗೂ ಭಾರತದ ತ್ರಿವರ್ಣ ಧ್ವಜವನ್ನು ವಿರೂಪಗೊಳಿಸಿರುವುದು ಕಂಡುಬಂದಿದೆ. ಮೆರವಣಿಗೆಯಲ್ಲಿ 100ಕ್ಕೂ ಹೆಚ್ಚು ಸಂಚಾರಿ ಡಿಜೆಗಳಿಗೆ ಅನುಮತಿ ಕೊಡಲಾಗಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.

ಜಿಲ್ಲಾ ರಕ್ಷಣಾಧಿಕಾರಿಗಳು ಹಾಗೂ ಮಹಾನಗರಪಾಲಿಕೆ ಆಯುಕ್ತರು ಕಾನೂನು ಪಾಲಿಸದೇ ಇರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಆದ್ದರಿಂದ ಇವರಿಬ್ಬರ ಮೇಲೆ ಇಲಾಖೆ ಕಾನೂನು ಕ್ರಮ ಕೈಗೊಳ್ಳಬೇಕು. ಗಣೇಶ ಉತ್ಸವದ ಸಮಯದಲ್ಲಿ ಗಣಪತಿ ಸಮಿತಿಗಳಿಗೆ ಹಲವಾರು ರೀತಿಯ ಕಾನೂನಿನ ಅನುಮತಿಯನ್ನು ತೆಗೆದುಕೊಂಡು ಉತ್ಸವ ಆಚರಿಸಲು ಅನುಮತಿ ನೀಡಲಾಗಿದೆ. ಡಿಜೆ ಹಾಕಲು ಯಾವುದೇ ಅನುಮತಿ ನೀಡಿಲ್ಲ. ಎಲ್ಲೋ ಒಂದು ಕಡೆ ಪೊಲೀಸರು ಮುಸ್ಲಿಂರ ಓಲೈಕೆ ಮಾಡುತ್ತಿರುವುದು ಕಂಡು ಬರುತ್ತಿದೆ. ಇದನ್ನು ಖಂಡಿಸಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಹಮ್ಮಿಕೊಳ್ಳಬೇಕಾಗುತ್ತದೆ. ಆದ್ದರಿಂದ ತಪ್ಪಿತಸ್ಥರ ಮೇಲೆ ಕೂಡಲೇ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ವಿಶ್ವ ಹಿಂದೂ ಪರಿಷತ್ ಪ್ರಮುಖರಾದ ರಮೇಶ್ ಬಾಬು ಜಾದವ್, ವಿನೋದ್‌ಕುಮಾರ್ ಜೈನ್, ಆನಂದ್‌ರಾವ್ ಜಾದವ್, ಸುರೇಶ್ ಬಾಬು ಸೇರಿದಂತೆ ಹಲವರು ಭಾಗವಹಿಸಿದ್ದರು.