ಮಡಿಕೇರಿ: ಚಾಟ್ ಜಿಪಿಟಿಯಂಥ ತಾಂತ್ರಿಕ ಮಾಧ್ಯಮವನ್ನು ಹೆಚ್ಚು ಬಳಕೆ ಮಾಡುತ್ತಿದ್ದರೆ ನಮ್ಮ ಮನಸ್ಸಿನ ಕ್ರಿಯಾಶೀಲತೆಯನ್ನೇ ನಾಶ ಮಾಡುವ ಮೂಲಕ ಮೆದುಳಿನ ಮೇಲೆ ದುಫ್ಪರಿಣಾಮ ಬೀರುವ ಸಾಧ್ಯತೆ ಹೆಚ್ಚಾಗಿರುವ ನಿಟ್ಟಿನಲ್ಲಿ ಅಗತ್ಯಕ್ಕೆ ತಕ್ಕಂತೆ ಎಐ, ಜಿಪಿಟಿಯಂಥ ಮಾಧ್ಯಮವನ್ನು ಬಳಸುವ ಮೂಲಕ ಮಾನಸಿಕ ಮತ್ತು ದೈಹಿಕ ಆರೋಗ್ಯದ ಕರೆ ಗಮನ ನೀಡಿ ಎಂದು ಆಯುಷ್ ಇಲಾಖೆಯ ಹಿರಿಯ ವೈದ್ಯಾಧಿಕಾರಿ ಡಾ. ಶುಭಾ ಕೆ.ಜಿ. ವಿದ್ಯಾರ್ಥಿಗಳಿಗೆ ಕರೆ ನೀಡಿದ್ದಾರೆ.ಕೊಡಗು ವಿಶ್ವವಿದ್ಯಾಲಯ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಕೆ.ಎಂ. ಕಾರ್ಯಪ್ಪ ಕಾಲೇಜಿನ ಮಹಿಳಾ ಘಟಕ ಹಾಗೂ ಸಮಾಜಶಾಸ್ತ್ರ ಮತ್ತು ರಾಜ್ಯಶಾಸ್ತ್ರ ವಿಭಾಗಗಗಳ ಆಶ್ರಯದಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ 2026 ರ ಅಂಗವಾಗಿ ‘ಹೆಲ್ದಿ ಹ್ಯಾಬಿಟ್ಸ್- ಹ್ಯಾಪಿ ಲೈಫ್’ ವಿಷಯ ಕುರಿತು ಆಯೋಜಿಸಿದ ಕಾರ್‍ಯಾಗಾರದಲ್ಲಿ ಮಾತನಾಡಿದರು.

ಯೌವನದಲ್ಲಿ ಯುವತಿಯರು ಚರ್ಮ ಸಂರಕ್ಷಣೆ ಸಂಬಂಧಿಸಿ ಹೆಚ್ಚು ಜಾಗ್ರತೆ ವಹಿಸುವ ನಿಟ್ಟಿನಲ್ಲಿ ಆರೋಗ್ಯಕರ ಆಹಾರ ಸೇವಿಸಬೇಕು. ಆಯಾ ಕಾಲಮಾನಕ್ಕೆ ತಕ್ಕಂತೆ ಆಹಾರ ಸೇವನೆಯೂ ಯೌವನದಲ್ಲಿ ಮುಖ್ಯವಾಗುತ್ತದೆ ಎಂದು ಹೇಳಿದರು.ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಹ ನಿರ್ದೇಶಕಿ ಮೇಪಾಡಂಡ ಸವಿತಾ ಕೀರ್ತನ್ ಮಾತನಾಡಿ, ವಿದ್ಯಾರ್ಥಿಗಳು ಹೇಗೆ ದುಶ್ಚಟಗಳಿಗೊಳಗಾಗುತ್ತಿದ್ದಾರೆ, ಮೊಬೈಲ್ ದುರ್ಬಳಕೆಯಿಂದ ದಿಕ್ಕು ತಪ್ಪುತ್ತಿದ್ದಾರೆ. ಜೀವನದಲ್ಲಿ ತೆಗೆದುಕೊಳ್ಳಬೇಕಾದ ಸರಿಯಾದ ನಿರ್ಧಾರಗಳು ಮತ್ತು ಪೌಷ್ಟಿಕ ಆಹಾರದ ಮಹತ್ವ ಕುರಿತು ಜಾಗೃತಿ ಮೂಡಿಸಿದರು. ಕರ್ನಾಟಕ ಸರ್ಕಾರ ಮಹಿಳೆಯರು ಮತ್ತು ಮಕ್ಕಳ ಸುರಕ್ಷತೆಗಾಗಿ ಜಾರಿಗೆ ತಂದಿರುವ ವಿಶೇಷ ಪೊಲೀಸ್ ಪಡೆಯಾದ ‘ಅಕ್ಕ ಪಡೆ’ ಬಗ್ಗೆ ಮಾಹಿತಿ ನೀಡಿದರು.

ಕಾಲೇಜಿನ ಪ್ರಾಂಶುಪಾಲ ಮೇಜರ್ ಪ್ರೊ. ರಾಘವ ಬಿ. ಮಾತನಾಡಿ, ಪ್ರಸ್ತುತ ಸಮಾಜದಲ್ಲಿ ಮಹಿಳೆಯರು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡುತ್ತಿದ್ದಾರೆ. ಪ್ರತಿಯೊಬ್ಬರೂ ತಮ್ಮ ಬದುಕಿನಲ್ಲಿ ಸ್ತ್ರೀಯ ಮಹತ್ವ ತಿಳಿಯುವ ಅಗತ್ಯ ಇದೆ ಎಂದರು.

ಕಾಲೇಜಿನ ಮಹಿಳಾ ಘಟಕದ ಸಂಯೋಜಕಿ ಪ್ರೊ. ನಯನಾ ಕಶ್ಯಪ್ ಪ್ರಾಸ್ತಾವಿಕವಾಗಿ ಮಾತನಾಡಿ, ಮಹಿಳೆ ಈವರೆಗೆ ಸಾಗಿಬಂದ ಹೋರಾಟದ ಹಾದಿ ಒಂದೆಡೆಯಾದರೆ ಇಂದಿನ ಶತಮಾನದ ಮಹಿಳೆ ಹೊಸ ಸವಾಲುಗಳನ್ನು ಎದುರಿಸುವ ಅನಿವಾರ್ಯ ಇನ್ನೊಂದೆಡೆ ಇದೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬ ಯುವತಿಯರು ಮಾನಸಿಕ, ದೈಹಿಕ ಸಾಮರ್ಥ್ಯ ಮತ್ತು ಆರೋಗ್ಯ ಸಮತೋಲನವನ್ನು ಎಚ್ಚರದಿಂದ ಕಾಪಾಡಿಕೊಳ್ಳಬೇಕಾಗಿದೆ ಎಂದು ಹೇಳಿದರು.

ಈ ಸಂದರ್ಭ ಕಾಲೇಜಿನ ಮಹಿಳಾ ಸ್ವಚ್ಛತಾ ಸಿಬ್ಬಂದಿಯನ್ನು ಗೌರವಿಸಲಾಯಿತು. ತಾವು ಯಾವುದೇ ದುಶ್ಚಟಗಳಿಗೊಳಗಾಗುವುದಿಲ್ಲ ಹಾಗೂ ಆರೋಗ್ಯಕರ ಜೀವನ ನಡೆಸುತ್ತೇವೆ ಎಂದು ವಿದ್ಯಾರ್ಥಿನಿಯರು ಪ್ರತಿಜ್ಞೆ ಸ್ವೀಕರಿಸಿದರು.ವಿದ್ಯಾರ್ಥಿನಿಯರಾದ ಸಪ್ನಾ ಸೇಠ್ ಮತ್ತು ಚೋಂದಮ್ಮ ಪ್ರಾಥಿ೯ಸಿ, ರಾಜ್ಯಶಾಸ್ತ್ರ ವಿಭಾಗದ ಸಂಯೋಜಕಿ ಪ್ರೊ. ಗಾಯತ್ರಿ ದೇವಿ ಸ್ವಾಗತಿಸಿದರು. ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥೆ ಡಾ. ಎ.ಎನ್. ಗಾಯತ್ರಿ ವಂದಿಸಿದರು. ರಾಜ್ಯಶಾಸ್ತ್ರ ವಿಭಾಗದ ಡಾ. ಶ್ರುಂಗಾರ್ ನಿರ್ವಹಿಸಿದರು. ಕಾಲೇಜಿನ ಬೋಧಕರಾದ ಆಲೋಕ್ ಬಿಜೈ, ಯೋಗಾನಂದ, ಶರತ್, ಡಾ. ಭೈರವಿ, ಕನ್ನಿಕಾ ಪ್ರಕಾಶ್, ಡಾ. ವಿಜಯಲತ, ದೇವಮ್ಮ, ಡಾ. ಅಮೃತ ಮತ್ತು ಡಾ. ನಳಿನಿ ಉಪಸ್ಥಿತರಿದ್ದರು.


ಮೊಬೈಲ್ ಬಳಕೆ ಹೆಚ್ಚಾದಂತೆ ಇದು ಯುವ ಪೀಳಿಗೆಯಲ್ಲಿ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ದೈಹಿಕವಾಗಿಯೂ ಮೊಬೈಲ್ ನ ಅತಿ ಬಳಕೆ ಗಂಭೀರ ಪರಿಣಾಮ ಬೀರುತ್ತದೆ. ಹಿಂದಿನ ಕಾಲದಲ್ಲಿ ಸಂಸ್ಕೃತಿ, ಸಂಪ್ರದಾಯಕ್ಕೆ ಮನೆಗಳಲ್ಲಿ ಹೆಚ್ಚು ಆದ್ಯತೆ ನೀಡುತ್ತಿದ್ದ ಹಿನ್ನೆಲೆಯಲ್ಲಿ ಕುಟುಂಬ ವರ್ಗದ ಆರೋಗ್ಯ ಉತ್ತಮವಾಗಿತ್ತು. ನಮ್ಮ ದೇಹಕ್ಕೆ ನಾವೇ ಚಾಲಕರಂತೆ, ಹೀಗಾಗಿ ನಮ್ಮ ದೇಹದ ಆರೋಗ್ಯದ ಕಾಳಜಿಯನ್ನು ನಾವೇ ಸೂಕ್ತವಾಗಿ ನಿರ್ವಹಿಸಬೇಕು. ಕಾಯಿಲೆಗಳಿಂದ ಮುಕ್ತವಾಗಿರುವ ಶರೀರವನ್ನು ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಯೌವನದಲ್ಲೇ ಹೆಚ್ಚು ಮುತುವರ್ಜಿ ವಹಿಸಬೇಕು.

-ಡಾ. ಶುಭಾ ಕೆ.ಜಿ. ಆಯುಷ್ ಇಲಾಖೆ ಹಿರಿಯ ವೈದ್ಯಾಧಿಕಾರಿ