ರಾಜ್ಯ ಸರ್ಕಾರದಿಂದ ದಲಿತರ ಹಣ ಗ್ಯಾರಂಟಿಗೆ ಬಳಕೆ: ಜಿಲ್ಲಾ ಬಿಜೆಪಿಯ ಹುಚ್ಚಯ್ಯ ಆರೋಪ

| Published : Apr 01 2024, 12:52 AM IST

ರಾಜ್ಯ ಸರ್ಕಾರದಿಂದ ದಲಿತರ ಹಣ ಗ್ಯಾರಂಟಿಗೆ ಬಳಕೆ: ಜಿಲ್ಲಾ ಬಿಜೆಪಿಯ ಹುಚ್ಚಯ್ಯ ಆರೋಪ
Share this Article
  • FB
  • TW
  • Linkdin
  • Email

ಸಾರಾಂಶ

ಎಸ್ಟಿ ಸಮುದಾಯಕ್ಕೆ ಶೇ.೨ರಷ್ಟು, ಎಸ್ಟಿ ಸಮುದಾಯಕ್ಕೆ ಶೇ.೪ರಷ್ಟು ಮೀಸಲಾತಿ ಹೆಚ್ಚಿಸಿದ್ದು, ಬಿಜೆಪಿ ಸರ್ಕಾರವು ಜಮ್ಮು ಮತ್ತು ಕಾಶ್ಮೀರದಲ್ಲಿ ಆರ್ಟಿಕಲ್ ೩೭೦ ರದ್ದತಿಯಿಂದ ಅಲ್ಲಿನ ದಲಿತರು ಆಡಳಿತ ಸೇವೆಗಳಿಗೆ ಸೇರಲು ಸಹಾಯಕವಾಗಿದೆ. ಅವರಿಗೆ ನ್ಯಾಯಾಂಗ ಮತ್ತು ಆಡಳಿತಾತ್ಮಕ ಸೇವೆಗಳಲ್ಲಿ ಭಾಗವಹಿಸುವ ಹಕ್ಕು ದೊರಕಿದೆ. ಇದು ಪ್ರಧಾನಿ ನರೇಂದ್ರ ಮೋದಿಯವರ ಬಿಜೆಪಿ ಸರ್ಕಾರ ದಲಿತರಿಗೆ ಮಾಡಿಕೊಟ್ಟ ಅವಕಾಶ.

ಕನ್ನಡಪ್ರಭ ವಾರ್ತೆ ತುಮಕೂರು

ದಲಿತರಿಗೆ ಮೀಸಲಾದ 25 ಸಾವಿರ ಕೋಟಿ ರು.ಗಳನ್ನು ಗ್ಯಾರಂಟಿ ಯೋಜನೆಗಳಿಗೆ ಬಳಸಿಕೊಂಡು ದಲಿತರಿಗೆ ಅನ್ಯಾಯ ಮಾಡಿ, ಅಲ್ಪಸಂಖ್ಯಾತರಿಗೆ 10 ಸಾವಿರ ಕೋಟಿ ರು.ಘೋಷಣೆ ಮಾಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸರ್ಕಾರ ದಲಿತ ವಿರೋಧಿ ನೀತಿ ಮುಂದುವರೆಸಿದೆ ಎಂದು ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ವೈ.ಎಚ್. ಹುಚ್ಚಯ್ಯ ಆರೋಪಿಸಿದ್ದಾರೆ.

ತುಮಕೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎಸ್ಟಿ ಸಮುದಾಯಕ್ಕೆ ಶೇ.೨ರಷ್ಟು, ಎಸ್ಟಿ ಸಮುದಾಯಕ್ಕೆ ಶೇ.೪ರಷ್ಟು ಮೀಸಲಾತಿ ಹೆಚ್ಚಿಸಿದ್ದು, ಬಿಜೆಪಿ ಸರ್ಕಾರವು ಜಮ್ಮು ಮತ್ತು ಕಾಶ್ಮೀರದಲ್ಲಿ ಆರ್ಟಿಕಲ್ ೩೭೦ ರದ್ದತಿಯಿಂದ ಅಲ್ಲಿನ ದಲಿತರು ಆಡಳಿತ ಸೇವೆಗಳಿಗೆ ಸೇರಲು ಸಹಾಯವಾಗಿದೆ. ಅವರಿಗೆ ನ್ಯಾಯಾಂಗ ಮತ್ತು ಆಡಳಿತಾತ್ಮಕ ಸೇವೆಗಳಲ್ಲಿ ಭಾಗವಹಿಸುವ ಹಕ್ಕು ದೊರಕಿದೆ. ಇದು ಪ್ರಧಾನಿ ನರೇಂದ್ರ ಮೋದಿಯವರ ಬಿಜೆಪಿ ಸರ್ಕಾರ ದಲಿತರಿಗೆ ಮಾಡಿಕೊಟ್ಟ ಅವಕಾಶ ಎಂದರು.

ಡಾ. ಅಂಬೇಡ್ಕರ್‌ ಅವರಿಗೆ ಶ್ರೇಷ್ಠ ಗೌರವ ನೀಡುತ್ತಿರುವ ಕೇಂದ್ರ ಬಿಜೆಪಿ ಸರ್ಕಾರ, ಅವರಿಗೆ ಸಂಬಂಧಿಸಿದ 5 ಸ್ಥಳಗಳನ್ನು ಅಭಿವೃದ್ಧಿಪಡಿಸಲು ಮೋದಿ ಸರ್ಕಾರ ಪಂಚತೀರ್ಥ ಯೋಜನೆ ಪ್ರಾರಂಭಿಸಿದೆ, ದಲಿತರ ಏಳಿಗೆಗೆ ಕಾಳಜಿ ಹೊಂದಿರುವ ಮೋದಿ ಮತ್ತೊಮ್ಮೆ ಪ್ರಧಾನಿಯಾಗಬೇಕು ಎಂದರು.

ಬಿಜೆಪಿ ಮುಖಂಡ ಡಾ.ಲಕ್ಷ್ಮೀಕಾಂತ್ ಮಾತನಾಡಿ, ಬಿಜೆಪಿಯವರು ಸಂವಿಧಾನ ಬದಲಾಯಿಸುತ್ತಾರೆ ಎಂದು ಕಾಂಗ್ರೆಸ್‌ನವರು ಅಪಪ್ರಚಾರ ಮಾಡುತ್ತಾರೆ. ಆದರೆ ಮೋದಿಯವರಾಗಲಿ, ಅಮಿತ್ ಷಾ ಅವರಾಗಲಿ, ರಾಜ್ಯ ಬಿಜೆಪಿ ನಾಯಕರಾಗಲಿ ಸಂವಿಧಾನ ಬದಲಾವಣೆ ಬಗ್ಗೆ ಮಾತನಾಡಿಲ್ಲ ಎಂದರು.

ಮುಖಂಡ ಅನಿಲ್‌ ಕುಮಾರ್ ಮಾತನಾಡಿ, ಸಂವಿಧಾನ ಬದಲಾವಣೆ ಮಾಡಿ, ಮೀಸಲಾತಿ ಸೌಲಭ್ಯ ಸ್ಥಗಿತಗೊಳಿಸಲಾಗುತ್ತದೆ ಎಂದು ಕಾಂಗ್ರೆಸ್‌ನವರು ಅಪಪ್ರಚಾರ ಮಾಡಿ, ದಲಿತವರ್ಗವನ್ನು ದಾರಿ ತಪ್ಪಿಸುವ ಪ್ರಯತ್ನ ಮಾಡುತ್ತಿದ್ದಾರೆ ಎಂದರು.

ರಾಜ್ಯ ಬಿಜೆಪಿ ಎಸ್ಸಿ ಮೋರ್ಚಾ ಕಾರ್ಯದರ್ಶಿ ಓಂಕಾರ್ ಮಾತನಾಡಿ, ಕಾಂಗ್ರೆಸ್‌ನಲ್ಲಿ ದಲಿತ ನಾಯಕರಿಗೆ ರಕ್ಷಣೆ ಇಲ್ಲ, ದಲಿತ ಶಾಸಕರ ಮನೆಗೆ ಅಲ್ಪಸಂಖ್ಯಾತ ದುಷ್ಕರ್ಮಿಗಳು ಬೆಂಕಿ ಹಚ್ಚಿದಾಗ, ಶಾಸಕರಿಗೆ ರಕ್ಷಣೆ ನೀಡಬೇಕಾದ ಸರ್ಕಾರವು ಮತ ಬ್ಯಾಂಕಿಗಾಗಿ ದುಷ್ಕರ್ಮಿಗಳ ಪರ ಮೃದುಧೋರಣೆ ತಾಳಿದರಲ್ಲದೆ, ಮುಂದಿನ ಬಾರಿ ಚುನಾವಣೆಗೆ ಆ ಶಾಸಕರಿಗೆ ಟಿಕೆಟ್ ನೀಡದೇ ವಂಚಿಸಿದರು ಎಂದರು.

ಜಿಲ್ಲಾ ಬಿಜೆಪಿ ಎಸ್ಸಿ ಮೋರ್ಚಾದ ಅದ್ಯಕ್ಷ ಎಚ್.ಎ.ಆಂಜನಪ್ಪ, ಪ್ರಧಾನ ಕಾರ್ಯದರ್ಶಿ ಆಂಜನಮೂರ್ತಿ, ನಗರ ಅಧ್ಯಕ್ಷ ಹನುಮಂತರಾಯಪ್ಪ, ಮುಖಂಡರಾದ ಟಿ.ಆರ್.ಸದಾಶಿವಯ್ಯ, ಹನುಮಂತಪ್ಪ, ವೆಂಕಟೇಶ್, ನಟರಾಜು ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿದ್ದರು.