ಬಳ್ಳಾರಿ: ಕೃತಕ ಬುದ್ಧಿಮತ್ತೆ (ಎಐ) ಮತ್ತು ಮಷಿನ್ ಲರ್ನಿಂಗ್ ನಂತಹ ತಂತ್ರಜ್ಞಾನಗಳನ್ನು ಎಲ್ಲದಕ್ಕೂ ಬಳಕೆ ಮಾಡದೆ ಉತ್ತಮ ಸಾಮಾಜಿಕ ಸಂಶೋಧನೆಗಳನ್ನು ಹೊರತರಲು ಪ್ರಯೋಗಾತ್ಮಕವಾಗಿ ಬಳಸಬೇಕು ಎಂದು ಬೆಂಗಳೂರು ವಿಶ್ವವಿದ್ಯಾಲಯ ಶಿಕ್ಷಣ ನಿಕಾಯದ ಡೀನ್ ಮತ್ತು ಪ್ರ‍್ರಾಧ್ಯಾಪಕ ಪ್ರೊ. ಎಂ.ಸಿ ಎರ್ರಿಸ್ವಾಮಿ ಅಭಿಪ್ರಾಯಪಟ್ಟರು.

ಬಳ್ಳಾರಿ ವಿವಿಯ ಡಾ. ಬಿ.ಆರ್. ಅಂಬೇಡ್ಕರ್ ಸಭಾಂಗಣದಲ್ಲಿ ಬುಧವಾರ ಶಿಕ್ಷಣ ಅಧ್ಯಯನ ವಿಭಾಗ ಆಯೋಜಿಸಿದ್ದ ಒಂದು ದಿನದ “ಮುಂದಿನ ಪೀಳಿಗೆಯ ಉದಯೋನ್ಮುಖ ಸಂಶೋಧನಾ ಕೌಶಲ್ಯಗಳ ತಂತ್ರಜ್ಞಾನದೊಂದಿಗೆ ಡೇಟಾ ವಿಶ್ಲೇಷಣೆ” ಎಂಬ ವಿಷಯ ಕುರಿತು ರಾಷ್ಟ್ರೀಯ ಕಾರ್ಯಾಗಾರದ ಉದ್ಘಾಟನಾ ಭಾಷಣಕಾರರಾಗಿ ಭಾಗವಹಿಸಿ ಮಾತನಾಡಿದರು.

ಇಂದು ತಂತ್ರಜ್ಞಾನದ ಅತಿಯಾದ ಬಳಕೆಯಿಂದಾಗಿ ಅವುಗಳು ನಮ್ಮನ್ನು ಆವರಿಸಿಕೊಂಡಿವೆ. ಇದರಿಂದಾಗಿ ನಮ್ಮಲ್ಲಿರುವಂತ ವೈಚಾರಿಕ ಸ್ವಂತಿಕೆಯನ್ನು ಕಳೆದುಕೊಳ್ಳುತ್ತಿದ್ದೇವೆ ಎಂಬ ವಿಷಾದವಿದೆ. ಆದರೆ, ಎಐನಿಂದಾಗಿ ಶಿಕ್ಷಣ ಕ್ಷೇತ್ರದಲ್ಲಿ ಪರಿಣಾಮಕಾರಿ ಬೋಧನೆ ಸಾಧ್ಯವಾಗಿದೆ ಎಂದು ಹೇಳಿದರು.

ತಾಂತ್ರಿಕ ಕೌಶಲ್ಯಗಳಿಂದ ದತ್ತಾಂಶಗಳನ್ನು ಹೆಚ್ಚು ಕಲೆಹಾಕುವ ಮೂಲಕ ಸಂಶೋಧನೆಯಲ್ಲಿ ಒಳ್ಳೆಯ ಫಲಿತಾಂಶವನ್ನು ಪಡೆಯಬಹುದು. ಸಮೀಕ್ಷೆ, ಸಂಶೋಧನೆಯ ಅಂತರಗಳ ವಿಸ್ತರಣೆಯ ಮೂಲಕ ಸಾಮಾಜಿಕ ಸಂಬಂಧಗಳನ್ನು ಸುಧಾರಿಸಲು ತಂತ್ರಜ್ಞಾನ ಆಧಾರಿತ ಅಧ್ಯಯನಗಳಿಂದ ಸಾಧ್ಯವಾಗುತ್ತದೆ ಎಂದು ತಿಳಿಸಿದರು.

ಕಾರ್ಯಕ್ರಮ ಉದ್ಘಾಟಿಸಿದ ವಿವಿಯ ಕುಲಪತಿ ಪ್ರೊ. ಎಂ. ಮುನಿರಾಜು ಮಾತನಾಡಿ, ಶಿಕ್ಷಣ ಕ್ಷೇತ್ರದಲ್ಲಿ ತಂತ್ರಜ್ಞಾನ ಎಷ್ಟೇ ಮುಂದುವರಿದಿದ್ದರೂ ಶಿಕ್ಷಕನಿಗೆ ಸಮನಾಗಿ ಯಾವುದು ಇಲ್ಲ. ತಂತ್ರಜ್ಞಾನಗಳ ಬಳಕೆಯಿಂದಾಗಿ ತರಗತಿಗಳು ಇಂದು ಆಧುನಿಕ ಸ್ವರೂಪ ಪಡೆದುಕೊಂಡಿವೆ. ತಂತ್ರಜ್ಞಾನದ ಅತಿಯಾದ ಬಳಕೆಯಿಂದಾಗಿ ಸಂಬಂಧಗಳಲ್ಲಿ ಸಾಮರಸ್ಯಗಳ ಕೊರತೆ ಉಂಟಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.


ರಾಷ್ಟ್ರೀಯ ಕಾರ್ಯಾಗಾರದ ಸಂಚಾಲಕಿ ಡಾ. ಸುಷ್ಮಾ ಎನ್. ಜೋಗನ್ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿವಿಯ ಕುಲಸಚಿವ ಪ್ರೊ. ಎನ್.ಎಂ ಸಾಲಿ, ಕೇಂದ್ರೀಯ ವಿಶ್ವವಿದ್ಯಾಲಯದ ಸಹ ಪ್ರಾಧ್ಯಾಪಕ ಡಾ. ಕೆ.ತಿಯಾಗು, ಆಂಧ್ರಪ್ರದೇಶದ ಪ್ರಾದೇಶಿಕ ಎನ್‌ಸಿಇಆರ್‌ಟಿ ಕೇಂದ್ರ ನೆಲ್ಲೂರಿನ ಸಹ ಪ್ರಾಧ್ಯಾಪಕ ಡಾ. ಪ್ರಕಾಶ ಬಡಿಗೇರ, ಕಾರ್ಯಾಗಾರದ ಸಹ ಸಂಚಾಲಕ ಡಾ. ಗೋಪಾಲ್ ಎನ್. ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಒಂದು ದಿನದ ರಾಷ್ಟ್ರೀಯ ಕಾರ್ಯಾಗಾರದಲ್ಲಿ ವಿವಿಧ ಬಿ.ಇಡಿ ಕಾಲೇಜುಗಳ ಅಧ್ಯಾಪಕರು, ಸಂಶೋಧನಾರ್ಥಿಗಳು ಸೇರಿದಂತೆ 200ಕ್ಕೂ ಹೆಚ್ಚು ಪ್ರತಿನಿಧಿಗಳು ಹಾಜರಿದ್ದರು. ಪಾಂಡುರಂಗ ನಿರೂಪಿಸಿದರು. ವಿವಿಯ ಶಿಕ್ಷಣ ನಿಕಾಯದ ಡೀನರು ಮತ್ತು ವಿಭಾಗದ ಮುಖ್ಯಸ್ಥರಾದ ಡಾ. ಸಾಹೇಬ್ ಅಲಿ ಎಚ್ ನಿರಗುಡಿ ಅತಿಥಿಗಳನ್ನು ಸ್ವಾಗತಿಸಿದರು. ವಿಭಾಗದ ಸಹಾಯಕ ಪ್ರಾಧ್ಯಾಪಕ

ಡಾ. ಪ್ರಶಾಂತ ಕುಮಾರ ಟಿ.ಎಂ. ವಂದಿಸಿದರು. ವಿವಿಯ ಎಲ್ಲ ನಿಕಾಯದ ಡೀನರು, ಎಲ್ಲ ವಿಭಾಗಗಳ ಮುಖ್ಯಸ್ಥರು, ಪ್ರಾಧ್ಯಾಪಕರು, ಬೋಧಕ ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿಗಳು ಹಾಜರಿದ್ದರು.