ಸಮಾಜಕ್ಕೆ ಪೂರಕವಾಗಿ ಬಾಳಬೇಕೇ ಹೊರತು ಮಾರಕವಾಗಿ ಅಲ್ಲ ಎಂದು ಮಾಜಿ ಸಚಿವ ಎಂ.ಪಿ. ಅಪ್ಪಚ್ಚುರಂಜನ್ ಹೇಳಿದರು.
ಕನ್ನಡಪ್ರಭ ವಾರ್ತೆ ಸುಂಟಿಕೊಪ್ಪ
ಸಮಾಜಕ್ಕೆ ಪೂರಕವಾಗಿ ಬಾಳಬೇಕೇ ಹೊರತು ಮಾರಕವಾಗಿ ಅಲ್ಲ ಎಂದು ಮಾಜಿ ಸಚಿವ ಎಂ.ಪಿ. ಅಪ್ಪಚ್ಚುರಂಜನ್ ಹೇಳಿದರು.ಗುರುವಾರ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಸುಂಟಿಕೊಪ್ಪ ಮಂಜನಾಥಯ್ಯ ಮೀನಾಕ್ಷಮ್ಮ ಕಲ್ಯಾಣ ಮಂಟಪದಲ್ಲಿ ನಡೆದ ಮದ್ಯವರ್ಜನ ಶಿಬಿರದ ಸಮಾರೋಪ ಸಮಾರಂಭದಲ್ಲಿ ಅವರು ಉದ್ಘಾಟನಾ ಭಾಷಣ ಮಾಡಿದರು.ಕೊಡಗಿನಲ್ಲಿ ಮದ್ಯವರ್ಜನ ಶಿಬಿರ ಯಶಸ್ವಿಯಾಗುವುದು ಕಷ್ಟ ಎಂಬುದನ್ನು ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಅವರು 1995ರಷ್ಟು ಹಿಂದೆಯೇ ತಮ್ಮೊಂದಿಗೆ ಹೇಳಿದನ್ನು ಸ್ಮರಿಸಿದ ಅವರು, ಮದ್ಯಪಾನದ ಸಾಧಕ ಭಾದಕಗಳನ್ನು ಅರಿತ ಜನ ಮದ್ಯಪಾನ ವರ್ಜನ ಶಿಬಿರಗಳ ಯಶಸ್ಸಿಗೆ ಕೊಡಗಿನಲ್ಲೂ ಅತ್ಯಂತ ಯಶಸ್ವಿಯಾಗಿ ಕೈಜೋಡಿಸಿದ್ದಾರೆ ಎಂದರು.
ಶಿಬಿರದಲ್ಲಿ ಪಾಲ್ಗೊಂಡವರು ತಮ್ಮ ಜೊತೆಯವರನ್ನು ಮದ್ಯವರ್ಜನ ಮಾಡುವಂತೆ ಪ್ರೋತ್ಸಾಹಿಸಬೇಕೆಂದು ಕರೆ ನೀಡಿದ ಅವರು, ಪ್ರಸ್ತುತ ದಿನಗಳಲ್ಲಿ ಆರೋಗ್ಯವೇ ಭಾಗ್ಯವನ್ನು ಮನಗಂಡು ಕುಡಿತಕ್ಕೆ ಖರ್ಚು ಮಾಡುವ ಹಣವನ್ನು ಸಂಸಾರ ಮತ್ತು ಆರೋಗ್ಯ ಕಾಪಾಡಿಕೊಳ್ಳುವ ಬಜೆಟ್ ಆಗಿ ಮಾರ್ಪಡಿಸಿಕೊಳ್ಳಿ ಎಂದರು.ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ ಮಡಿಕೇರಿ ತಾಲೂಕು ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್ ಕೊಡಗು ಜಿಲ್ಲೆ, ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ವ್ಯಸನ ಮುಕ್ತಿ ಮತ್ತು ಸಂಶೋಧನ ಕೇಂದ್ರ ಲಾಯಿಲ ಉಜಿರೆ, ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ ಬೆಂಗಳೂರು ಮತ್ತು ಪಗ್ರತಿ ಬಂಧು ಸ್ವ ಸಹಾಯ ಸಂಘಗಳ ಒಕ್ಕೂಟ ಸುಂಟಿಕೊಪ್ಪ ವಲಯದ ಎಲ್ಲ ಅಂಗ ಸಂಸ್ಥೆಗಳು ಆರಕ್ಷಕ ಠಾಣೆ, ಪ್ರಾಥಮಿಕ ಆರೋಗ್ಯ ಕೆಂದ್ರ, ನವಜೀವನ ಸಮಿತಿ, ಶೌರ್ಯ ವಿಪತ್ತು ನಿರ್ವಹಣಾ ಘಟಕ ಮಡಿಕೇರಿ ತಾಲೂಕು ಹಾಗೂ ಸ್ಥಳೀಯ ಸಂಸ್ಥೆಗಳ ನೆರವಿನೊಂದಿಗೆ 2040ನೇ ಮದ್ಯವರ್ಜನ ಶಿಬಿರದ ಸಮಾರೋಪ ಸಮಾರಂಭ ನಡೆಯಿತು. ಮದ್ಯವರ್ಜನ ಶಿಬಿರ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪಿ.ಆರ್. ಸುನಿಲ್ ಕುಮಾರ್ ಅಧ್ಯಕ್ಷತೆ ವಹಿಸಿದ್ದರು.
ಜಿಲ್ಲಾಧಿಕಾರಿಯವರ ಕಾನೂನು ಸಲಹೆಗಾರ ಎ. ಲೋಕೇಶ್ ಕುಮಾರ್ ಮಾತನಾಡಿ, ಸಾಮಾಜಿಕ ಪಿಡುಗುಗಳಲ್ಲಿ ಒಂದಾಗಿರುವ ಕುಡಿತದ ಚಟವನ್ನು ಬಿಡಿಸುವ ಜವಾಬ್ಧಾರಿ ತೆಗೆದುಕೊಂಡಿರುವ ರಾಜ್ಯದಲ್ಲಿ ಮಾತ್ರವಲ್ಲ ದೇಶದಲ್ಲೇ ಅದ್ವಿತೀಯ ಸಂಸ್ಥೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಾಗಿದೆ ಎಂದರು.ಸಮಾಜ ಸೇವಕ, ಕಾಫಿ ಬೆಳೆಗಾರ ಟಿ.ಕೆ.ಸಾಯಿಕುಮಾರ್ ಮಾತನಾಡಿ, ಮದ್ಯಪಾನವು ಸಾಮಾಜಿಕ ಪಿಡುಗಾಗಿದ್ದು, ಯುವ ಶಕ್ತಿಯನ್ನು ಹಾಳು ಮಾಡುತ್ತಿದೆ ಎಂದರು. ಕೊಡಗು ಜಿಪಂ ಮಾಜಿ ಸದಸ್ಯ ಬಿ.ಬಿ. ಭಾರತೀಶ್ ಮಾತನಾಡಿ, ಮನುಷ್ಯನ ಜೀವನದಲ್ಲಿ ಎಲ್ಲರಿಗೂ ಒಂದಲ್ಲ ಒಂದು ಹವ್ಯಾಸಗಳು, ಚಟಗಳು ಜೀವನದ ಬೇರೆ ಬೇರೆ ಹಂತಗಳಲ್ಲಿ ಬೇರೆ ಬೇರೆ ಕಾರಣಗಳಿಂದ ಹಂಚಿಕೊಳ್ಳುತ್ತವೆ. ಆದರೆ ಚಟಗಳು ದುಶ್ಚಟಗಳಾಗಿ ಕೊನೆಗೆ ಚಟ್ಟಕ್ಕೆ ಕೊಂಡೋಯ್ಯುವ ಚಟಗಳಲ್ಲಿ ಕುಡಿತ ಆಗ್ರ ಸ್ಥಾನವನ್ನು ಹೊಂದಿವೆ ಎಂದರು.
ಸುಂಟಿಕೊಪ್ಪ ಹೋಬಳಿ ಉಪ ತಹಸೀಲ್ದಾರ್ ಕೆ.ಎಂ. ದೀಪಿಕಾ, ಬೆಳ್ತಗಂಡಿ ಸೋಮವಾರಪೇಟೆ ತಾಪಂ ಮಾಜಿ ಸದಸ್ಯೆ ಓಡಿಯಪ್ಪನ ವಿಮಲಾವತಿ, ಸುಂಟಿಕೊಪ್ಪ ಗ್ರಾಪಂ ಮಾಜಿ ಉಪಾಧ್ಯಕ್ಷ ಸುಕುಮಾರ್, ಕೊಡಗು ಪತ್ರಕರ್ತರ ಸಂಘದ ಕುಶಾಲನಗರ ತಾಲೂಕು ಉಪಾಧ್ಯಕ್ಷ ಬಿ.ಸಿ. ದಿನೇಶ್, ಸುಂಟಿಕೊಪ್ಪ ಗ್ರಾಪಂ ಉಪಾಧ್ಯಕ್ಷೆ ಶಿವಮ್ಮ ಮಹೇಶ್, ಕೆದಕಲ್ ಗ್ರಾಪಂ ಉಪಾಧ್ಯಕ್ಷೆ ಪಾರ್ವತಿ ಸೋಮಯ್ಯ, ಕಂಬಿಬಾಣೆ ಗ್ರಾಪಂ ಮಾಜಿ ಅಧ್ಯಕ್ಷೆ, ಹಾಲಿ ಸದಸ್ಯೆ ಮಧುನಾಗಪ್ಪ, ಸುಂಟಿಕೊಪ್ಪ ಗ್ರಾಪಂ ಸದಸ್ಯರಾದ ಗೀತಾ, ಮಂಜುಳ ಪ್ರಾದೇಶಿಕ ವಲಯಾಧಿಕಾರಿ ಪುರುಷೋತ್ತಮ ಇದ್ದರು. ಶಿಬಿರಾಧಿಕಾರಿ ದಿನೇಶ್ ಮರಾಠೆ ಪ್ರಾಸ್ತಾವಿಕವಾಗಿ ಮಾತನಾಡಿ, ಶಿಬಿರದ 8 ದಿನಗಳ ಚಿತ್ರಣವನ್ನು ಅಂಕಿ ಅಂಶ ಸಹಿತವಾಗಿ ತೆರೆದಿಟ್ಟರು.ಪೊನ್ನಮ್ಮ ಪ್ರಾರ್ಥಿಸಿ, ಮಹೇಂದ್ರ ಸ್ವಾಗತಿಸಿ, ಎಂ.ಎಸ್. ಸುನಿಲ್ ನಿರೂಪಿಸಿದರು. ಸುಂಟಿಕೊಪ್ಪ ವಲಯ ಮೇಲ್ವಿಚಾರಕ ಸಂತೋಷ್ ವಂದಿಸಿದರು.