ಸಾರಾಂಶ
- 24*7 ನೀರು ಸರಬರಾಜು ಯೋಜನೆಗೆ ಚಾಲನೆ ನೀಡಿ ಶಾಸಕ ದೇವೇಂದ್ರಪ್ಪ ಮನವಿ
- - -ಕನ್ನಡಪ್ರಭ ವಾರ್ತೆ ಜಗಳೂರು
ಸಿರಿಗೆರೆ ಡಾ|| ಶಿವಮೂರ್ತಿಶಿವಾಚಾರ್ಯ ಮಹಾಸ್ವಾಮೀಜಿಗಳು, ಸಿಎಂ ಸಿದ್ದರಾಮಯ್ಯ ಶ್ರಮದ ಫಲವಾಗಿ ತಾಲೂಕಿನ 57 ಕೆರೆಗಳಿಗೆ ನೀರು ಹರಿಯುತ್ತಿದೆ. ನೀರನ್ನು ಮಿತವಾಗಿ ಬಳಸಿ, ಜೀವ ಉಳಿಸಿ ಎಂದು ಗ್ರಾಮಸ್ಥರಿಗೆ ಶಾಸಕ ಬಿ.ದೇವೇಂದ್ರಪ್ಪ ಹೇಳಿದರು.ತಾಲೂಕಿನ ಸೊಕ್ಕೆ, ಗುರುಸಿದ್ದಾಪುರ ಮತ್ತು ತೋರಣಗಟ್ಟೆ ಗ್ರಾಪಂ ವ್ಯಾಪ್ತಿಯ ಚಿಕ್ಕಬಂಟನಹಳ್ಳಿ, ಜಾಡನಕಟ್ಟೆ ಮತ್ತು ಜಮ್ಮಾಪುರ ಗೊಲ್ಲಹರಟ್ಟಿ ಗ್ರಾಮಗಳಲ್ಲಿ 24*7 ನೀರು ಸರಬರಾಜು ಯೋಜನೆಗೆ ಚಾಲನೆ ನೀಡಿ ಅವರು ಮಾತನಾಡಿದರು.
ನಮ್ಮ ಹಿರಿಯರು ಕನ್ಯಾ ಪರೀಕ್ಷೆಗೆ ಹೋದಾಗ ಮನೆಗೆ ಬರುವ ಹೆಣ್ಣು ಎಷ್ಟು ಪ್ರಮಾಣದಲ್ಲಿ ನೀರು ಬಳಕೆ ಮಾಡುತ್ತಾಳೆ ಎನ್ನುವುದರ ಪರೀಕ್ಷೆ ಮಾಡುತ್ತಿದ್ದರು. ಇದರ ತಾತ್ಪರ್ಯ ಪ್ರಕೃತಿಯಲ್ಲಿ ಸಿಗುವ ನೀರನ್ನೇ ದೊಡ್ಡಮಟ್ಟದಲ್ಲಿ ಖರ್ಚು ಮಾಡುವ ಕನ್ಯೆ, ಮನೆತನ ಹೇಗೆ ನಿರ್ವಹಿಸುತ್ತಾಳೆ ಎಂಬ ಪರೀಕ್ಷೆಯಾಗಿತ್ತು. ನೀರನ್ನು ಮಿತವಾಗಿ ಬಳಸಿದರೆ ಭವಿಷ್ಯದ ಎಲ್ಲ ಜೀವರಾಶಿಗಳ ಉಳಿವು ಅಡಗಿದೆ. ರಾಜ್ಯದ 38 ಗ್ರಾಮಗಳಲ್ಲಿ ನಮ್ಮ ಜಿಲ್ಲೆಯ 20 ಗ್ರಾಮಗಳನ್ನು ನಿರಂತರ ನೀರು ಸರಬರಾಜು ಮಾಡುವ ಗ್ರಾಮಗಳೆಂದು ಘೋಷಿಸಲಾಗಿದೆ ಎಂದರು.ನಮ್ಮ ಜಿಲ್ಲೆಗೆ ದಕ್ಷ ಜಿಲ್ಲಾಧಿಕಾರಿ, ಪೊಲೀಸ್ ವರಿಷ್ಠಾಧಿಕಾರಿಗಳು ಬಂದಿದ್ದಾರೆ. ಈಗ ಜಿಪಂ ಸಿಇಒ ಗಿತ್ತೆ ವಿಠಲ ಮಾದವ ರಾವ್ ಸಹ ಜಿಲ್ಲೆಯ ಮತ್ತು ಅತ್ಯಂತ ಹಿಂದುಳಿದ ಜಗಳೂರು ತಾಲೂಕಿನ ಅಭಿವೃದ್ಧಿಗೆ ಶ್ರಮಿಸಲು ಬಂದಿರುವುದು ಸಂತೋಷ. ತಾಲೂಕಿನ ಸರ್ವತೋಮುಖ ಅಭಿವೃದ್ಧಿಗೆ ಜಿಪಂ ಸಿಇಒ ಸಹಕಾರ ನೀಡಬೇಕು ಎಂದರು.
ಇದೇ ಮೊದಲ ಬಾರಿಗೆ ಜಗಳೂರು ತಾಲೂಕಿಗೆ ಆಗಮಿಸಿದ ನೂತನ ಜಿಪಂ ಸಿಇಒ ಗಿತ್ತೆ ವಿಠಲ ಮಾದವ ರಾವ್ ಮಾತನಾಡಿ, ನಾನು ಮಹಾರಾಷ್ಟ್ರದ ಅತ್ಯಂತ ಹಿಂದುಳಿದ ಬರಪೀಡಿತ ಪ್ರದೇಶದಿಂದ ಬೆಳೆದು ಬಂದವರು. ಅಲ್ಲಿನ ನೀರಿನ ಸಮಸ್ಯೆ ಅನುಭವಿಸಿದ್ದೇವೆ. ನಿಮಗೆ ಸರ್ಕಾರ 24*7 ದಿನವೂ ನೀರು ಕೊಡಲು ಮುಂದಾಗಿದೆ. ಭವಿಷ್ಯದ ದಿನಗಳಲ್ಲಿ ನೀರನ್ನು ಮಿತವಾಗಿ ಬಳಸಿ, ಉಳಿಸಬೇಕಾಗಿದೆ ಎಂದರು.ಗ್ರಾಪಂ ಸದಸ್ಯರಾದ ತಿರುಮಲ, ಸೊಕ್ಕೆ ಗ್ರಾಮ ದೊಡ್ಡ ಗ್ರಾಮವಾಗಿದ್ದು, ನಿರಂತರ ನೀರು ಯೋಜನೆ ವಿಸ್ತರಿಸಿ, ರಸ್ತೆ ಅಭಿವೃದ್ಧಿಗೆ ಸಹಕರಿಸಿ ಎಂದು ಶಾಸಕರಲ್ಲಿ ಮನವಿ ಮಾಡಿದರು. ಚಿಕ್ಕಬಂಟನಹಳ್ಳಿ ಗ್ರಾಪಂ ಸದಸ್ಯ ರಾಜಪ್ಪ, ಫೀಡ್ ಬ್ಯಾಕ್ ಫೌಂಡೇಶನ್ ರಾಜ್ಯ ಸಂಯೋಜಕ ನಂದನ್, ನೀರು ಸರಬರಾಜು ಇಲಾಖೆ ಎಇಇ ಸಾದಿಕ್ ಉಲ್ಲಾ ಮಾತನಾಡಿದರು.
ಕಾರ್ಯಕ್ರಮದಲ್ಲಿ ತಾಪಂ ಇಒ ಕೆಂಚಪ್ಪ, ಎಇಇ ಷಣ್ಮುಖಪ್ಪ, ಜಿಪಂ ಎಇಇ ಶಿವಮೂರ್ತಿ, ಗ್ರಾಪಂ ಅಧ್ಯಕ್ಷರಾದ ಸರೋಜಮ್ಮ ಮಲ್ಲೇಶಪ್ಪ, ಪಿಡಿಒ ಶಿವಕುಮಾರ್, ನಂದಕುಮಾರ್ ಪಲ್ಲಾಗಟ್ಟೆ ಶೇಖರಪ್ಪ, ಗ್ರಾಪಂ ಸದಸ್ಯರು ಇದ್ದರು.- - -
-17ಜೆ.ಎಲ್.ಆರ್ಚಿ1:ಜಗಳೂರು ತಾಲೂಕಿನ ಚಿಕ್ಕಬಂಟನಹಳ್ಳಿಯಲ್ಲಿ ನಿರಂತರ ನೀರು ಸರಬರಾಜು ಯೋಜನೆಗೆ ಶಾಸಕ ಬಿ.ದೇವೇಂದ್ರಪ್ಪ ಮತ್ತು ಜಿಪಂ ಸಿಇಒ ಗಿತ್ತೇ ವಿಠಲ ಮಾದವ ರಾವ್ ಚಾಲನೆ ನೀಡಿದರು.