ಭದ್ರಾ ಡ್ಯಾಂ ನೀರಿನ ವಿಚಾರವಾಗಿ ಮನವಿ ಸಲ್ಲಿಸಲು ಬಂದ ರೈತರ ಎದುರು ಹರಿಹರ ಶಾಸಕ ಬಿ.ಪಿ.ಹರೀಶ ವಿರುದ್ಧ ಆಕ್ಷೇಪಾರ್ಹ ಹಾಗೂ ಅಸಂಸದೀಯ ಪದ ಬಳಸಿದ ಜಿಲ್ಲಾ ಉಸ್ತುವಾರಿ ಸಚಿವ ಎಸ್ಸೆಸ್ ಮಲ್ಲಿಕಾರ್ಜುನ ವರ್ತನೆ ಖಂಡನೀಯವಾದುದು ಎಂದು ಬಿಜೆಪಿ ಎಸ್‌ಟಿ ಮೋರ್ಚಾ ರಾಜ್ಯ ಉಪಾಧ್ಯಕ್ಷ, ದಕ್ಷಿಣದ ಪರಾಜಿತ ಅಭ್ಯರ್ಥಿ ಶ್ರೀನಿವಾಸ ಟಿ.ದಾಸಕರಿಯಪ್ಪ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕನ್ನಡಪ್ರಭ ವಾರ್ತೆ ದಾವಣಗೆರೆ
ಭದ್ರಾ ಡ್ಯಾಂ ನೀರಿನ ವಿಚಾರವಾಗಿ ಮನವಿ ಸಲ್ಲಿಸಲು ಬಂದ ರೈತರ ಎದುರು ಹರಿಹರ ಶಾಸಕ ಬಿ.ಪಿ.ಹರೀಶ ವಿರುದ್ಧ ಆಕ್ಷೇಪಾರ್ಹ ಹಾಗೂ ಅಸಂಸದೀಯ ಪದ ಬಳಸಿದ ಜಿಲ್ಲಾ ಉಸ್ತುವಾರಿ ಸಚಿವ ಎಸ್ಸೆಸ್ ಮಲ್ಲಿಕಾರ್ಜುನ ವರ್ತನೆ ಖಂಡನೀಯವಾದುದು ಎಂದು ಬಿಜೆಪಿ ಎಸ್‌ಟಿ ಮೋರ್ಚಾ ರಾಜ್ಯ ಉಪಾಧ್ಯಕ್ಷ, ದಕ್ಷಿಣದ ಪರಾಜಿತ ಅಭ್ಯರ್ಥಿ ಶ್ರೀನಿವಾಸ ಟಿ.ದಾಸಕರಿಯಪ್ಪ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.ಸಾರ್ವಜನಿಕವಾಗಿ ಮಾತನಾಡುವ ಮುನ್ನ ಬಳಸುವ ಭಾಷೆ, ಆಡುವ ಮಾತು, ವರ್ತನೆಗಳ ಬಗ್ಗೆ ಸಚಿವರಿಗೆ ಹಿಡಿತ ಇರಲಿ. ಸಾರ್ವಜನಿಕ ಜೀವನದಲ್ಲಿರುವ ಜನ ಪ್ರತಿನಿಧಿಗಳು, ಅದರಲ್ಲೂ ಸಚಿವ ಸ್ಥಾನದಲ್ಲಿದ್ದವರು ಸಾರ್ವಜನಿಕರ ಮುಂದೆ ಸಂಯಮ ಹಾಗೂ ಗೌರವಯುತವಾಗಿ ಮಾತನಾಡಬೇಕು. ರಾಜಕೀಯ ಭಿನ್ನಾಭಿಪ್ರಾಯ ಏನೇ ಇದ್ದರೂ, ವೈಯಕ್ತಿಕ ನಿಂದನೆ ಹಾಗೂ ಅಸಂಸದೀಯ ಪದ ಬಳಕೆ ಪ್ರಜಾಪ್ರಭುತ್ವದ ಮೌಲ್ಯಗಳಿಗೆ ವಿರುದ್ಧವಾಗಿದೆ ಎಂದು ಅವರು ಪತ್ರಿಕಾ ಹೇಳಿಕೆಯಲ್ಲಿ ಖಂಡಿಸಿದ್ದಾರೆ.
ಸಚಿವರು ಬಳಸಿದ ಅಸಂಸದೀಯ ಪದ ಬಳಕೆಯಿಂದ ರಾಜಕೀಯ ವಾತಾವರಣ ಮತ್ತಷ್ಟು ಕಲುಷಿತವಾಗುವ ಸಾಧ್ಯತೆ ಇದೆ. ಜನ ಪ್ರತಿನಿಧಿಗಳು ಪರಸ್ಪರ ಆರೋಪ, ಪ್ರತ್ಯಾರೋಪ ಮಾಡುವ ಬದಲು ಜನರ ಸಮಸ್ಯೆಗಳ ಕಡೆಗೆ ಗಮನ ಹರಿಸಬೇಕು. ಸಚಿವ ಎಸ್ಸೆಸ್ ಮಲ್ಲಿಕಾರ್ಜುನ ತಮ್ಮ ಮಾತಿನ ಮೇಲೆ ಹಿಡಿತ ಸಾಧಿಸಬೇಕಿದೆ. ಒಬ್ಬ ಜನ ಪ್ರತಿನಿಧಿಯಾದವರು ಹೇಗೆ ನಡೆದುಕೊಳ್ಳಬೇಕೆಂಬ ವಿಚಾರ ಹಾಗೂ ವೈಯಕ್ತಿಕ ವಾಗ್ವಾದವು ಸಚಿವರಿಗೆ ಶೋಭೆ ತರುವುದಿಲ್ಲ ಎಂದು ಅವರು ತಿಳಿಸಿದ್ದಾರೆ.ವಿಪಕ್ಷದ ಹಿರಿಯ ಶಾಸಕರಿಗೆ ಸಾರ್ವಜನಿಕವಾಗಿ ವೈಯಕ್ತಿಕ ನಿಂದನೆ ಮಾಡುವ ಬದಲಿಗೆ ದಾವಣಗೆರೆ ಜಿಲ್ಲೆಗೆ, ಭದ್ರಾ ಅಚ್ಚುಕಟ್ಟು ಪ್ರದೇಶಕ್ಕೆ ಬರಬೇಕಾದ ಹಕ್ಕಿನ ನೀರನ್ನು ತರಿಸುವ ಕಡೆಗೆ ಸಚಿವರು ಗಮನ ಹರಿಸರಿ. ಟ್ರಯಲ್ ರನ್ ಹೆಸರಿನಲ್ಲಿ ಭದ್ರಾ ಡ್ಯಾಂ ನೀರನ್ನು ಭದ್ರಾ ಮೇಲ್ದಂಡೆ ಮೂಲಕ ಚಿತ್ರದುರ್ಗ, ಚಿಕ್ಕಮಗಳೂರು, ತುಮಕೂರು ಇತರೆ ಭಾಗಕ್ಕೆ ನೀರನ್ನು ಕೊಡುತ್ತಿದ್ದರೂ ಅದರ ಬಗ್ಗೆ ಸಚಿವ ಎಸ್ಸೆಸ್ ಮಲ್ಲಿಕಾರ್ಜುನ ಯಾಕೆ ಮಾತನಾಡುತ್ತಿಲ್ಲ. ಮೊದಲು ಜಿಲ್ಲೆಯ ಅಚ್ಚುಕಟ್ಟು ಪ್ರದೇಶದ ರೈತರಿಗೆ ಬೇಸಿಗೆ ಬೆಳೆಗಾದರೂ ನೀರು ತರುವ ಬಗ್ಗೆ ಚಿಂತನೆ ನಡೆಸಲಿ ಎಂದು ಶ್ರೀನಿವಾಸ ದಾಸಕರಿಯಪ್ಪ ಕಿವಿಮಾತು ಹೇಳಿದ್ದಾರೆ.