ಸಾರ್ವಜನಿಕ ಪಡಿತರ ವಿತರಣೆಯಲ್ಲಿ ರಾಜ್ಯದಲ್ಲಿ ಉತ್ತರ ಕನ್ನಡ ಜಿಲ್ಲೆ 4ನೇ ಸ್ಥಾನ

| Published : May 11 2025, 01:16 AM IST

ಸಾರ್ವಜನಿಕ ಪಡಿತರ ವಿತರಣೆಯಲ್ಲಿ ರಾಜ್ಯದಲ್ಲಿ ಉತ್ತರ ಕನ್ನಡ ಜಿಲ್ಲೆ 4ನೇ ಸ್ಥಾನ
Share this Article
  • FB
  • TW
  • Linkdin
  • Email

ಸಾರಾಂಶ

410 ಪಡಿತರ ವಿತರಣಾ ಅಂಗಡಿಗಳಲ್ಲಿನ 3,08,351 ಪಡಿತರ ಕಾರ್ಡಗಳ ಪೈಕಿ 2,78,578 ಪಡಿತರ ಚೀಟಿದಾರರು ತಮ್ಮ ಪಡಿತರವನ್ನು ಪಡೆದಿದ್ದು, ಒಟ್ಟು 53,094.55 ಕ್ವಿಂಟಾಲ್ ಪಡಿತರವನ್ನು ವಿತರಿಸಲಾಗಿದೆ.

ಕಾರವಾರ: ಉತ್ತರ ಕನ್ನಡ ಜಿಲ್ಲೆಯಲ್ಲಿ ಸಾರ್ವಜನಿಕ ಪಡಿತರ ವಿತರಣೆ ವ್ಯವಸ್ಥೆಯಲ್ಲಿ ಏಪ್ರಿಲ್ 2025 ರಲ್ಲಿ ಶೇ.90.34ರಷ್ಟು ಸಾರ್ವಜನಿಕರಿಗೆ ಪಡಿತರವನ್ನು ವಿತರಿಸುವ ಮೂಲಕ ರಾಜ್ಯದಲ್ಲಿ 4 ನೇ ಸ್ಥಾನದಲ್ಲಿ ಗುರುತಿಸಿಕೊಂಡಿದೆ.

ಜಿಲ್ಲೆಯ ಒಟ್ಟು 410 ಪಡಿತರ ವಿತರಣಾ ಅಂಗಡಿಗಳಲ್ಲಿನ 3,08,351 ಪಡಿತರ ಕಾರ್ಡಗಳ ಪೈಕಿ 2,78,578 ಪಡಿತರ ಚೀಟಿದಾರರು ತಮ್ಮ ಪಡಿತರವನ್ನು ಪಡೆದಿದ್ದು, ಒಟ್ಟು 53,094.55 ಕ್ವಿಂಟಾಲ್ ಪಡಿತರವನ್ನು ವಿತರಿಸಲಾಗಿದೆ.

ಭಟ್ಕಳದ 31 ಪಡಿತರ ವಿತರಣೆ ಅಂಗಡಿಗಳಲ್ಲಿ 29,752 ಪಡಿತರ ಚೀಟಿದಾರರಲ್ಲಿ 28,429 ಮಂದಿ 6063 ಕ್ವಿಂಟಲ್ ಪಡಿತರ ಪಡೆದು ಶೇ.95.55 ರೊಂದಿಗೆ ಮೊದಲನೇ ಸ್ಥಾನದಲ್ಲಿದೆ.

ಪಡಿತರ ಪಡೆಯದೇ ಬಾಕಿ ಉಳಿದರವರಲ್ಲಿ ಬಹುತೇಕ ಮಂದಿ ಪೋರ್ಟಬಿಲಿಟಿ ಮೂಲಕ ಬೇರೆ ಜಿಲ್ಲೆಯಲ್ಲಿ ಅಥವಾ ರಾಜ್ಯದಲ್ಲಿ ಪಡಿತರ ಪಡೆದಿದ್ದಾರೆ. ವಲಸೆ ಕಾರ್ಮಿಕರು ವಲಸೆ ಹೋಗುವ ಕಾರಣ ಪಡಿತರ ಪಡೆಯಲು ಸಾಧ್ಯವಾಗಿಲ್ಲ ಹಾಗೂ ಕೆಲವು ಮಂದಿ ವೈಯಕ್ತಿಕ ಕಾರಣಗಳಿಂದ ಪಡಿತರ ಪಡೆದಿಲ್ಲ. ಜಿಲ್ಲೆಯಲ್ಲಿನ ಒಟ್ಟು 410 ನ್ಯಾಯಬೆಲೆ ಅಂಗಡಿಗಳಲ್ಲಿ 402 ಅಂಗಂಡಿಗಳಿಗೆ ಪಾಯಿಂಟ್ ಆಫ್ ಸೇಲ್ (ಪಿಒಎಸ್) ಯಂತ್ರಗಳನ್ನು ಅಳವಡಿಸಿದ್ದು, ಇದರಿಂದಾಗಿ ಪಡಿತರ ಪಡೆದವರ ಸಂಪೂರ್ಣ ವಿವರ ಪಡೆಯಲು ಸಾಧ್ಯವಾಗಲಿದೆ.

ಉತ್ತರ ಕನ್ನಡ ಜಿಲ್ಲೆಯ ಅತ್ಯಂತ ವಿಸ್ತಾರವಾದ ಜಿಲ್ಲೆಯಾಗಿದ್ದು, ಗ್ರಾಮೀಣ ಜನಸಾಂದ್ರತೆಯು ಪಡಿತರ ವಿತರಣಾ ಅಂಗಡಿಗಳಿಂದ ಬಹಳ ದೂರ ಇದ್ದರೂ ಕೂಡ ಪಡಿತರ ವಿತರಣೆಯಲ್ಲಿ ರಾಜ್ಯದಲ್ಲೇ 4 ನೇ ಸ್ಥಾನ ಪಡೆಯುವ ಸಾಧನೆ ಮಾಡಲಾಗಿದೆ.-ಮಂಜುನಾಥ ರೇವಣ್‌ಕರ್, ಆಹಾರ ನಾಗರಿಕ ಸರಬರಾಜು ಇಲಾಖೆ ಉಪನಿರ್ದೇಶಕ

ಜಿಲ್ಲೆಯಲ್ಲಿ 2019ರಿಂದ ಇದುವರೆಗೆ 228 ಸರ್ಕಾರಿ ನೌಕರರು, ನಿಗದಿಗಿಂತ ಹೆಚ್ಚಿನ ಆದಾಯ ಹೊಂದಿರುವ 379 ಮಂದಿ, 3 ಹೆಕ್ಟೇರ್‌ಗಿಂತ ಹೆಚ್ಚು ಜಮೀನು ಹೊಂದಿರುವ 97 ಮಂದಿ, ಆದಾಯ ತೆರಿಗೆ ಪಾವತಿಸುವ 1,170 ಮಂದಿ ಮತ್ತು ಇತರೆ 2,216 ಸೇರಿದಂತೆ ಒಟ್ಟು 4,338 ಅನರ್ಹ ಪಡಿತರ ಚೀಟಿಗಳನ್ನು ಪತ್ತೆ ಹಚ್ಚಿ 46,29,100 ರುಪಾಯಿ ದಂಡ ಸಂಗ್ರಹಿಸಲಾಗಿದೆ.