ಡಾ. ಆರ್‌. ಗಣೇಶರಿಗೆ ಉತ್ತರ ಕನ್ನಡ ಜಿಲ್ಲಾ ಯಕ್ಷಶ್ರೀ ಪ್ರಶಸ್ತಿ

| Published : Nov 04 2024, 12:29 AM IST

ಸಾರಾಂಶ

ಪ್ರಶಸ್ತಿ ಒಂದು ಲಕ್ಷ ರು. ಹಾಗೂ ಬೆಳ್ಳಿಯ ಕಡಗವನ್ನು ಹೊಂದಿದೆ. ಸಾಹಿತ್ಯ, ಸಂಗೀತ ಕ್ರೀಡೆ, ಯಕ್ಷಗಾನ ಈ ನಾಲ್ಕು ಪ್ರಕಾರದ ಕಲಾವಿದರನ್ನು ಪ್ರಶಸ್ತಿಗೆ ಗುರುತಿಸಲಾಗುವುದು. ಪ್ರತಿವರ್ಷ ನ. ೧೨ರಂದು ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಲಿದೆ.

ಹೊನ್ನಾವರ: ಶ್ರೀ ಗಜಾನನ ಕಲೆ ಮತ್ತು ಸಾಂಸ್ಕೃತಿಕ ಅಭಿವೃದ್ಧಿ ಟ್ರಸ್ಟ್ ವತಿಯಿಂದ ಉತ್ತರ ಕನ್ನಡ ಜಿಲ್ಲಾ ಯಕ್ಷಶ್ರೀ ಪ್ರಶಸ್ತಿ ಸ್ಥಾಪಿಸಲಾಗಿದ್ದು, ಪ್ರಥಮ ಪ್ರಶಸ್ತಿಯನ್ನು ವಿದ್ವಾಂಸ ಶತಾವಧಾನಿ ಡಾ. ಆರ್. ಗಣೇಶ ಅವರಿಗೆ ಪ್ರದಾನ ಮಾಡಲಾಗುವುದು ಎಂದು ಯಕ್ಷಗಾನ ಕಲಾವಿದ ಕೊಂಡದಕುಳಿ ರಾಮಚಂದ್ರ ಹೆಗಡೆ ತಿಳಿಸಿದರು.ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಪ್ರಶಸ್ತಿ ಒಂದು ಲಕ್ಷ ರು. ಹಾಗೂ ಬೆಳ್ಳಿಯ ಕಡಗವನ್ನು ಹೊಂದಿದೆ. ಸಾಹಿತ್ಯ, ಸಂಗೀತ ಕ್ರೀಡೆ, ಯಕ್ಷಗಾನ ಈ ನಾಲ್ಕು ಪ್ರಕಾರದ ಕಲಾವಿದರನ್ನು ಪ್ರಶಸ್ತಿಗೆ ಗುರುತಿಸಲಾಗುವುದು. ಪ್ರತಿವರ್ಷ ನ. ೧೨ರಂದು ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಲಿದೆ ಎಂದರು.

ಯಕ್ಷಗಾನ ಕಲಾವಿದ ಮೋಹನ ಹೆಗಡೆ ಹೆರವಟ್ಟಾ ಮಾತನಾಡಿ, ಯಕ್ಷ ವಿಭೂಷಣ ಕೊಂಡದಕುಳಿ ರಾಮಚಂದ್ರ ಹೆಗಡೆಯವರ ಪರಿಕಲ್ಪನೆಯೊಂದಿಗೆ ಪ್ರಶಸ್ತಿಯನ್ನು ಸ್ಥಾಪಿಸಲಾಗಿದೆ. ಉತ್ತರ ಕನ್ನಡ ಜಿಲ್ಲೆಯ ಹೆಸರನ್ನು ಹೊಂದಿದ ಪ್ರಶಸ್ತಿಯನ್ನು ಕೊಡಬೇಕೆಂಬುದು ಆಶಯ. ಜಿಲ್ಲೆಯ ಎಲ್ಲೆಡೆಯಿಂದ ಸಲಹೆ ಪಡೆದು ಉತ್ತರ ಕನ್ನಡ ಜಿಲ್ಲೆಯ ಹೆಸರಿನಲ್ಲಿ ಪ್ರಶಸ್ತಿ ರಚಿಸಲಾಗಿದೆ ಎಂದರು.ಸುದ್ದಿಗೋಷ್ಠಿಯಲ್ಲಿ ಸೆಲ್ಕೋ ಸೋಲಾರ್ ಕುಮಟಾದ ಹಿರಿಯ ವ್ಯವಸ್ಥಾಪಕ ದತ್ತಾರಾಮ ಭಟ್ ಉಪಸ್ಥಿತರಿದ್ದರು.

ಭಾಗವತ ಉಮೇಶ ಭಟ್‌ರಿಗೆ ಸಾರ್ಥಕ ಸಾಧಕ ಪ್ರಶಸ್ತಿ

ಕುಮಟಾ: ಯಕ್ಷಗಾನ ಕ್ಷೇತ್ರದಲ್ಲಿ ಗಣನೀಯ ಸೇವೆಗೈವದರಿಗೆ ಬೆಂಗಳೂರಿನ ಯಕ್ಷಸಿಂಚನ ಟ್ರಸ್ಟ್‌ನವರು ಪ್ರ್ರತಿವರ್ಷ ನೀಡುವ ‘ಸಾರ್ಥಕ ಸಾಧಕ’ ಪ್ರಶಸ್ತಿಯನ್ನು ಈ ಬಾರಿ ಯಕ್ಷಗಾನ ಭಾಗವತ, ಯಕ್ಷಗುರು ತಾಲೂಕಿನ ಬಾಡದ ಉಮೇಶ ಭಟ್ ಅವರಿಗೆ ನೀಡಿ ಗೌರವಿಸಲು ನಿರ್ಧರಿಸಲಾಗಿದೆ.ನ. ೧೭ರಂದು ಬೆಂಗಳೂರಿನ ಉದಯಭಾನು ಕಲಾಸಂಘದಲ್ಲಿ ನಡೆಯವ ಯಕ್ಷಸಿಂಚನದ ೧೫ನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುತ್ತಿದೆ ಎಂದು ಸಂಘಟಕರು ಪ್ರಟಕಣೆಯಲ್ಲಿ ತಿಳಿಸಿದ್ದಾರೆ.ಭಾಗವತ ಉಮೇಶ ಭಟ್ ಅವರು ಕಳೆದ ನಾಲ್ಕು ದಶಕಗಳಿಂದ ಯಕ್ಷಗಾನದ ಭಾಗವತರಾಗಿ ಕಲಾಸೇವೆಯ ಜತೆಗೆ ಯಕ್ಷಗುರುವಾಗಿಯೂ ಸಾವಿರಾರು ಹೊಸ ತಲೆಮಾರಿನ ಕಲಾವಿದರನ್ನು ಸಿದ್ಧಪಡಿಸಿದ್ದಾರೆ. ಯಕ್ಷಗಾನದ ಮಹಾನ್ ತಾರೆಗಳಾದ ಚಿಟ್ಟಾಣಿ ರಾಮಚಂದ್ರ ಹೆಗಡೆ, ಜಲವಳ್ಳಿ ವೆಂಕಟೇಶ್ ರಾವ್, ಕುಮಟಾ ಗೋವಿಂದ ನಾಯ್ಕ ಮುಂತಾದ ಅತಿರಥ ಕಲಾವಿದರನ್ನು ರಂಗದಲ್ಲಿ ಕುಣಿಸಿದ ಖ್ಯಾತಿ ಇವರದ್ದಾಗಿದೆ. ಹಲವು ವೃತ್ತಿ ಮೇಳಗಳಲ್ಲೂ ಕೆಲಸ ಮಾಡಿದ್ದು ಯಕ್ಷಗಾನ ಪರಂಪರೆಯ ಪ್ರಮುಖ ಭಾಗವತರಾಗಿ, ಯಕ್ಷಗುರುವಾಗಿ ಗಮನ ಸೆಳೆದಿರುವ ಹಿನ್ನೆಲೆ ಸಾರ್ಥಕ ಸಾಧಕ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.