ಉತ್ತರ ಕನ್ನಡ ಲೋಕಸಭಾ ಕ್ಷೇತ್ರ: ಕಗ್ಗಂಟಾದ ಟಿಕೆಟ್

| Published : Mar 20 2024, 01:17 AM IST

ಸಾರಾಂಶ

ಯಾರಿಗೆ ಟಿಕೆಟ್ ಎನ್ನುವುದು ಆಕಾಂಕ್ಷಿಗಳಷ್ಟೇ ಅಲ್ಲ, ಜಿಲ್ಲೆಯ ಜನತೆಯನ್ನೂ ತುದಿಗಾಲಿನ ಮೇಲೆ ನಿಲ್ಲಿಸಿದೆ.

ಕಾರವಾರ: ಉತ್ತರ ಕನ್ನಡ ಲೋಕಸಭೆ ಕ್ಷೇತ್ರಕ್ಕೆ ಬಿಜೆಪಿ ಹಾಗೂ ಕಾಂಗ್ರೆಸ್‌ನಿಂದ ಅಭ್ಯರ್ಥಿಗಳ ಹೆಸರು ಅಂತಿಮಗೊಂಡಿಲ್ಲ. ಬಿಜೆಪಿಯಿಂದ ಸಂಸದ ಅನಂತಕುಮಾರ ಹೆಗಡೆ ಸೇರಿದಂತೆ ಹಲವು ಹೆಸರುಗಳನ್ನು ತೇಲಿಬಿಡಲಾಗುತ್ತಿದೆ. ಕಾಂಗ್ರೆಸ್‌ನಲ್ಲೂ ಇದೇ ರೀತಿಯಾಗಿದೆ. ಅಭ್ಯರ್ಥಿಯ ಹೆಸರು ಅಂತಿಮಗೊಂಡ ತರುವಾಯವೇ ಇದಕ್ಕೆಲ್ಲ ಬ್ರೇಕ್ ಬೀಳಲಿದೆ.

ಇತ್ತೀಚೆಗೆ ಎಚ್ಚೆತ್ತುಕೊಂಡು ಬಿಜೆಪಿಯಲ್ಲಿ ಟಿಕೆಟ್‌ಗಾಗಿ ಭಾರಿ ಪ್ರಯತ್ನ ನಡೆಸುತ್ತ ಕ್ಷೇತ್ರಾದ್ಯಂತ ಚುರುಕಿನಿಂದ ಓಡಾಡುತ್ತಿದ್ದ ಸಂಸದ ಅನಂತಕುಮಾರ ಮೂರು ದಿನಗಳ ಹಿಂದೆ ಬೆಂಗಳೂರಿಗೆ ತೆರಳಿದ್ದಾರೆ.

ಈ ನಡುವೆ ಬಿಜೆಪಿ ಆಕಾಂಕ್ಷಿಗಳ ಪಟ್ಟಿ ಸಾಕಷ್ಟು ದೊಡ್ಡದಾಗಿರುವುದರಿಂದ ಸಾಮಾಜಿಕ ಜಾಲತಾಣಗಳಲ್ಲಿ ದಿನಕ್ಕೊಬ್ಬರು ಮುನ್ನೆಲೆಗೆ ಬರುತ್ತಿದ್ದಾರೆ. ತಮ್ಮ ನಾಯಕನಿಗೇ ಟಿಕೆಟ್ ಎಂದು ಅವರವರ ಬೆಂಬಲಿಗರು ಸಾಮಾಜಿಕ ಜಾಲತಾಣಗಳಲ್ಲಿ ಬಿಂಬಿಸುತ್ತಿದ್ದಾರೆ. ಇತ್ತೀಚೆಗೆ ವಿಶ್ವೇಶ್ವರ ಹೆಗಡೆ ಕಾಗೇರಿ, ಚಕ್ರವರ್ತಿ ಸೂಲಿಬೆಲೆ, ಡಾ. ಜಿ.ಜಿ. ಹೆಗಡೆ ಅವರ ಹೆಸರು ಮುನ್ನೆಲೆಗೆ ಬಂದಿದೆ. ಅಭ್ಯರ್ಥಿ ಯಾರಾಗಲಿದ್ದಾರೆ ಎಂದು ಪಕ್ಷದ ರಾಜ್ಯ ನಾಯಕರಿಗೆ ತಿಳಿಯದಂತಾಗಿದೆ. ಇವರ ಜತೆ ಬಿಜೆಪಿ ರಾಜ್ಯ ಉಪಾಧ್ಯಕ್ಷೆ ರೂಪಾಲಿ ನಾಯ್ಕ, ಅನಂತಮೂರ್ತಿ ಹೆಗಡೆ, ನಾಗರಾಜ ನಾಯಕ, ಶಶಿಭೂಷಣ ಹೆಗಡೆ ಮತ್ತಿತರರ ಹೆಸರುಗಳೂ ಇವೆ.

ಆದರೆ ಕಾಂಗ್ರೆಸ್‌ನಲ್ಲಿ ಮಾತ್ರ ಟಿಕೆಟ್‌ಗಾಗಿ ಬಿಜೆಪಿಯಲ್ಲಿ ಇರುವಷ್ಟು ಪೈಪೋಟಿ ಕಾಣಿಸುತ್ತಿಲ್ಲ. ಅಂಜಲಿ ನಿಂಬಾಳ್ಕರ್, ರವೀಂದ್ರ ನಾಯ್ಕ, ಜಿ.ಟಿ. ನಾಯ್ಕ ಅವರ ಹೆಸರುಗಳು ಪ್ರಮುಖವಾಗಿ ಕೇಳಿಬರುತ್ತಿದೆ. ಜೆಡಿಎಸ್‌ನ ಸೂರಜ ನಾಯ್ಕ ಸೋನಿ ಅವರನ್ನು ಕಾಂಗ್ರೆಸ್‌ಗೆ ಕರೆತಂದು ಅಭ್ಯರ್ಥಿಯನ್ನಾಗಿಸುವ ಪ್ರಯತ್ನ ನಡೆದಿತ್ತಾದರೂ ಸೂರಜ ನಾಯ್ಕ ಸದ್ಯಕ್ಕೆ ಏನನ್ನೂ ಹೇಳುತ್ತಿಲ್ಲ.

ಜೆಡಿಎಸ್ ಹಾಗೂ ಬಿಜೆಪಿ ನಡುವೆ ಮೈತ್ರಿ ಏರ್ಪಟ್ಟಿರುವುದರಿಂದ ಈ ಎರಡು ಪಕ್ಷಗಳ ಅಭ್ಯರ್ಥಿಗಳ ನಡುವೆ ನೇರಾನೇರ ಹೋರಾಟ ನಡೆಯುವ ಸಾಧ್ಯತೆ ಹೆಚ್ಚಿದೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಇದೆ. ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಇದೆ. ಇದರಿಂದ ಚುನಾವಣಾ ಕಣ ರೋಚಕವಾಗಿ ಇರಲಿದೆ.

ಬಿಜೆಪಿ ಹಾಗೂ ಕಾಂಗ್ರೆಸ್ ಎರಡೂ ಪಕ್ಷಗಳಲ್ಲಿ ಯಾರಿಗೆ ಟಿಕೆಟ್ ಎನ್ನುವುದು ಕಗ್ಗಂಟಾಗಿಯೇ ಉಳಿದಿದೆ. ಆದರೆ ಯಾರಿಗೆ ಟಿಕೆಟ್ ಎನ್ನುವುದು ಆಕಾಂಕ್ಷಿಗಳಷ್ಟೇ ಅಲ್ಲ, ಜಿಲ್ಲೆಯ ಜನತೆಯನ್ನೂ ತುದಿಗಾಲಿನ ಮೇಲೆ ನಿಲ್ಲಿಸಿದೆ. ಟಿಕೆಟ್ ಘೋಷಣೆಯಾಗುವ ತನಕ ವದಂತಿಗಳದ್ದೆ ಕಾರುಬಾರು ಎಂಬಂತಾಗಿದೆ.