ಸಾರಾಂಶ
ಕಾಂಗ್ರೆಸ್ ಶಾಸಕ ಸತೀಶ ಸೈಲ್ ಮನೆಯ ಮೇಲೆ ಜಾರಿ ನಿರ್ದೇಶನಾಲಯ (ಇ.ಡಿ.) ನಡೆಸಿದ ದಾಳಿಯಲ್ಲಿ ₹1.68 ಕೋಟಿ ನಗದು, 6.75 ಕೇಜಿ ಬಂಗಾರವನ್ನು ಜಪ್ತಿ ಮಾಡಲಾಗಿದೆ. ವಿವಿಧ ಬ್ಯಾಂಕ್ ಖಾತೆಗಳಲ್ಲಿದ್ದ ₹14.13 ಕೋಟಿ ಮೊತ್ತವನ್ನು ಫ್ರೀಜ್ ಮಾಡಲಾಗಿದೆ.
ಕಾರವಾರ (ಉತ್ತರ ಕನ್ನಡ) : ಕಾಂಗ್ರೆಸ್ ಶಾಸಕ ಸತೀಶ ಸೈಲ್ ಮನೆಯ ಮೇಲೆ ಜಾರಿ ನಿರ್ದೇಶನಾಲಯ (ಇ.ಡಿ.) ನಡೆಸಿದ ದಾಳಿಯಲ್ಲಿ ₹1.68 ಕೋಟಿ ನಗದು, 6.75 ಕೇಜಿ ಬಂಗಾರವನ್ನು ಜಪ್ತಿ ಮಾಡಲಾಗಿದೆ. ವಿವಿಧ ಬ್ಯಾಂಕ್ ಖಾತೆಗಳಲ್ಲಿದ್ದ ₹14.13 ಕೋಟಿ ಮೊತ್ತವನ್ನು ಫ್ರೀಜ್ ಮಾಡಲಾಗಿದೆ.
ಕಾರವಾರ ತಾಲೂಕಿನ ಸದಾಶಿವಗಡದಲ್ಲಿನ ಸತೀಶ ಸೈಲ್ ನಿವಾಸದ ಮೇಲೆ ಇ.ಡಿ. ಬೆಂಗಳೂರು ವಿಭಾಗದ ಅಧಿಕಾರಿಗಳ ತಂಡ ಆ.13ರಂದು ನಸುಕಿನಲ್ಲಿ ದಾಳಿ ನಡೆಸಿತ್ತು. ಆ.14ರ ನಸುಕಿನ ತನಕ ದಾಖಲೆಗಳನ್ನು ಪರಿಶೀಲಿಸಿ ಮಹತ್ವದ ದಾಖಲೆಗಳು ಹಾಗೂ ಅಪಾರ ಪ್ರಮಾಣದ ನಗದು, ಬಂಗಾರವನ್ನು ವಶಪಡಿಸಿಕೊಂಡಿದೆ.
ಇ.ಡಿ. ತಂಡ ಕಾರವಾರ, ಗೋವಾ, ಮುಂಬೈ ಹಾಗೂ ನವದೆಹಲಿಯಲ್ಲಿ ಸತೀಶ ಸೈಲ್ ಹಾಗೂ ಇತರ ವ್ಯಕ್ತಿಗಳ ಸಂಸ್ಥೆಗಳ ಮೇಲೆ ತನಿಖೆ ನಡೆಸುತ್ತಿದೆ. ಬೇಲೆಕೇರಿ ಅದಿರು ನಾಪತ್ತೆ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿದ್ದ ಸತೀಶ ಸೈಲ್ 2010ರಲ್ಲಿ ತಮ್ಮ ಮಾಲೀಕತ್ವದ ಮಲ್ಲಿಕಾರ್ಜುನ ಶಿಪ್ಪಿಂಗ್ ಕಂಪನಿ ಮೂಲಕ ಅಕ್ರಮ ಅದಿರನ್ನು ವಿದೇಶಕ್ಕೆ ರಫ್ತು ಮಾಡಿದ ಆರೋಪ ಎದುರಿಸುತ್ತಿದ್ದಾರೆ. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಪಿಎಂಎಲ್‌ಎ (ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ) ಪ್ರಕರಣದ ಅಡಿಯಲ್ಲಿ ಇಡಿ ತನಿಖೆ ನಡೆಸುತ್ತಿದೆ.
ಅಕ್ರಮ ಅದಿರು ವಹಿವಾಟಿಗೆ ಸಂಬಂಧಿಸಿದಂತೆ ಜನಪ್ರತಿನಿಧಿಗಳ ನ್ಯಾಯಾಲಯ 2024ರಲ್ಲಿ ಸತೀಶ ಸೈಲ್ ಗೆ 7 ವರ್ಷ ಶಿಕ್ಷೆ ವಿಧಿಸಿತ್ತು. ನಂತರ ಸೈಲ್ ಹೈಕೋರ್ಟ್ ಮೊರೆ ಹೋಗಿದ್ದರು. ಹೈಕೋರ್ಟ್ ಜನಪ್ರತಿನಿಧಿಗಳ ನ್ಯಾಯಾಲಯದ ತೀರ್ಪನ್ನು ಅಮಾನತಿನಲ್ಲಿಟ್ಟು ತೀರ್ಪು ನೀಡಿತ್ತು. ಈ ಅವಧಿಯಲ್ಲಿ ಸೈಲ್ ವಿಧಾನಸಭೆ ಕಲಾಪದಲ್ಲಿ ಪಾಲ್ಗೊಳ್ಳುವಂತಿಲ್ಲ. ಭತ್ಯೆ ಪಡೆಯುವಂತಿಲ್ಲ ಎಂದೂ ನಿಬಂಧನೆ ವಿಧಿಸಿತ್ತು.
ಹೈಕೋರ್ಟಿನಲ್ಲಿ ವಿಚಾರಣೆ ಬಾಕಿ ಇರುವಾಗಲೇ ಸತೀಶ ಸೈಲ್‌ಗೆ ಇ.ಡಿ. ಕಂಟಕ ಎದುರಾಗಿದೆ. ಇ.ಡಿ. ದಾಳಿ ವೇಳೆ ದೊರೆತ ಹಣ, ಬಂಗಾರಕ್ಕೆ ದಾಖಲೆಗಳನ್ನು ನೀಡಬೇಕಾದ ಅನಿವಾರ್ಯತೆ ಅವರಿಗೆ ಎದುರಾಗಿದೆ. ಸೂಕ್ತ ದಾಖಲೆಗಳನ್ನು ನೀಡದಿದ್ದಲ್ಲಿ ಸೈಲ್ ಮತ್ತಿಷ್ಟು ಸಂಕಷ್ಟದಲ್ಲಿ ಸಿಲುಕುವ ಸಾಧ್ಯತೆ ಇದೆ ಎನ್ನಲಾಗಿದೆ.