ಸಾರಾಂಶ
ಕದ್ರಾ ಡ್ಯಾಂನಿಂದ ಹೊರಬಿಡುವ ನೀರಿನಿಂದ ಸಂತ್ರಸ್ತರಾಗುವವರಿಗೆ ಶಾಶ್ವತ ಪರಿಹಾರ ಹಾಗೂ ಮಳೆಯಿಂದ ಕೃಷಿ ಮತ್ತು ತೋಟಗಾರಿಕೆ ಬೆಳೆ ಅನಾಹುತಕ್ಕೆ ಎನ್‌ಡಿಆರ್‌ಎಫ್ ಪ್ರಕಾರ ಪರಿಹಾರ ಒಗದಿಸುವ ಕುರಿತು ತಕ್ಷಣ ಹಾನಿಯ ವರದಿ ಸಲ್ಲಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆ ನೀಡಿದರು.
ಕಾರವಾರ : ಕದ್ರಾ ಡ್ಯಾಂನಿಂದ ಹೊರಬಿಡುವ ನೀರಿನಿಂದ ಸಂತ್ರಸ್ತರಾಗುವವರಿಗೆ ಶಾಶ್ವತ ಪರಿಹಾರ ಹಾಗೂ ಮಳೆಯಿಂದ ಕೃಷಿ ಮತ್ತು ತೋಟಗಾರಿಕೆ ಬೆಳೆ ಅನಾಹುತಕ್ಕೆ ಎನ್‌ಡಿಆರ್‌ಎಫ್ ಪ್ರಕಾರ ಪರಿಹಾರ ಒಗದಿಸುವ ಕುರಿತು ತಕ್ಷಣ ಹಾನಿಯ ವರದಿ ಸಲ್ಲಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆ ನೀಡಿದರು.
ಭಾನುವಾರ ಶಿರೂರು ಗುಡ್ಡ ಕುಸಿತದ ಸ್ಥಳ ಪರಿಶೀಲನೆ ಬಳಿಕ ಇಲ್ಲಿನ ಜಿಪಂ ಸಭಾಭವನದಲ್ಲಿ ಕಾರ್ಯದರ್ಶಿಗಳು ಮತ್ತು ಜಿಲ್ಲಾ ಮಟ್ಟದ ಅಧಿಕಾರಿಗಳ ಜತೆ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿ, ಕದ್ರಾ ಅಣೆಕಟ್ಟೆಯಿಂದ ಹೊರಬಿಡುವ ನೀರಿನಿಂದ ತೊಂದರೆಗೊಳಗಾಗುವ ಸಂತ್ರಸ್ತರಿಗೆ ಶಾಶ್ವತ ಪರಿಹಾರ ಒದಗಿಸುವ ಬಗ್ಗೆ ಅಂತಿಮ ತೀರ್ಮಾನ ತೆಗೆದುಕೊಳ್ಳುವಂತೆ ಸೂಚಿಸಿದರು.
ಮಳೆ ಅನಾಹುತ ಮತ್ತು ಪ್ರವಾಹದಿಂದ ಆದ ಜೀವಹಾನಿಗೆ ನೀಡಲಾಗಿರುವ ಪರಿಹಾರದ ಕುರಿತು ಮಾಹಿತಿ ಪಡೆದ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಳಿದವರಿಗೆ ತುರ್ತಾಗಿ ಕೊಡಬೇಕು ಎಂದರು.
ಕಾಮಗಾರಿ ಪೂರ್ಣಗೊಳಿಸದೆ ಟೋಲ್: ಉತ್ತರ ಕನ್ನಡ ಜಿಲ್ಲೆಯಲ್ಲಿ ರಾಷ್ಟ್ರಿಯ ಹೆದ್ದಾರಿ ಕಾಮಗಾರಿಯನ್ನು ಪೂರ್ಣಗೊಳಿಸದೆ ಸಾರ್ವಜನಿಕರಿಂದ ಟೋಲ್ ಏಕೆ ಸಂಗ್ರಹ ಮಾಡುತ್ತಿದ್ದೀರಿ? ಇದು ಸರಿಯಿಲ್ಲ. ಕಾಮಗಾರಿ 2016ಕ್ಕೆ ಮುಕ್ತಾಯಗೊಳಿಸಬೇಕಿದ್ದರೂ ಈವರೆಗೆ ಮುಕ್ತಾಯಗೊಳಿಸದೆ ಈ ಕಾಮಗಾರಿ ಬಗ್ಗೆ ಕೇಂದ್ರ ಸಚಿವರಿಗೂ ಹಾಗೂ ರಾಜ್ಯ ಸರ್ಕಾರಕ್ಕೂ ತಪ್ಪು ಮಾಹಿತಿ ನೀಡುತ್ತಿದ್ದೀರಿ ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ವಿರುದ್ಧ ಮುಖ್ಯಮಂತ್ರಿ ಸಿದ್ದರಾಮಯ್ಯ ಗರಂ ಆದರು.
ಇಲ್ಲಿ ರಸ್ತೆ ಮಾಡಲು ನಮ್ಮ ಜಾಗ ನೀಡಿದ್ದೇವೆ. ನೀರು ನೀಡಿದ್ದೇವೆ. ನೀವು ಹೇಳಿದ ಹಾಗೆ ಕೇಳುವುದಕ್ಕೆ ನಾವಿಲ್ಲ. ರಸ್ತೆ ಕಾಮಗಾರಿ ಆರಂಭಿಸುವ ಮುನ್ನ ಇಲ್ಲಿ ಸಂಭವಿಸಬಹುದಾದ ಗುಡ್ಡ ಕುಸಿತದಂತಹ ಅನಾಹುತಗಳ ಬಗ್ಗೆ ವೈಜ್ಞಾನಿಕ ವರದಿ ಪಡೆದಿದ್ದಿರಾ ಎಂದು ಪ್ರಶ್ನಿಸಿದ ಮುಖ್ಯಮಂತ್ರಿ, ಹೆದ್ದಾರಿ ಕಾಮಗಾರಿಗಳ ಕುರಿತಂತೆ ಜಿಲ್ಲಾಧಿಕಾರಿಗಳಿಂದ ವರದಿ ಪಡೆದು, ರಾಜ್ಯ ಸರ್ಕಾರದಿಂದ ಕೇಂದ್ರ ಹೆದ್ದಾರಿ ಸಚಿವರಿಗೆ ತೀಕ್ಷ್ಣ ಪತ್ರ ಬರೆಯುವುದಾಗಿ ಹೇಳಿದರು.
ಪ್ರಸ್ತುತ ಜಿಯಾಜಿಕಲ್ ಸರ್ವೇ ಆಫ್ ಇಂಡಿಯಾ ಸಿದ್ಧಪಡಿಸಿರುವ ಜಿಲ್ಲೆಯ ಗುಡ್ಡ ಕುಸಿತ ಪ್ರದೇಶಗಳ ಕುರಿತ ವರದಿಯನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ವತಿಯಿಂದ ಪರಿಶೀಲಿಸಿ, ಹೆದ್ದಾರಿಯಾದ್ಯಂತ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುವಂತೆ ಮುಖ್ಯಮಂತ್ರಿಗಳು ಸೂಚಿಸಿದರು.
ಕಂದಾಯ ಸಚಿವ ಕೃಷ್ಣ ಬೈರೇಗೌಡ, ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ, ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಆರ್.ವಿ. ದೇಶಪಾಂಡೆ, ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳು ವೈದ್ಯ, ಶಾಸಕರಾದ ಸತೀಶ್ ಸೈಲ್, ಶಿವರಾಮ ಹೆಬ್ಬಾರ್, ಭೀಮಣ್ಣ ನಾಯ್ಕ್, ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಹಾಗೂ ಅಭಿವೃದ್ಧಿ ಆಯುಕ್ತರಾದ ಶಾಲಿನಿ ರಜನೀಶ್, ಮುಖ್ಯಮಂತ್ರಿ ಅವರ ಅಪರ ಮುಖ್ಯ ಕಾರ್ಯದರ್ಶಿ ಅತೀಕ್ ಇತರರು ಇದ್ದರು.