ಹಂಪಿಯ ತುಂಗಭದ್ರಾ ನದಿ ತೀರದಲ್ಲಿರುವ ನರಹರಿ ತೀರ್ಥರ ಬೃಂದಾವನದ ಪೂಜೆ ಪರ್ಯಾಯದ ರೀತಿ ನಡೆದಿದ್ದು, ಶುಕ್ರವಾರದಿಂದ ಮೂರು ದಿನಗಳ ಕಾಲ ನಡೆದ ಶ್ರೀನರಹರಿ ತೀರ್ಥರ ಆರಾಧನೋತ್ಸವ ಸೌಹಾರ್ದಯುತವಾಗಿ ನೆರವೇರಿದೆ.

ಕನ್ನಡಪ್ರಭ ವಾರ್ತೆ ಹೊಸಪೇಟೆ

ಹಂಪಿಯ ತುಂಗಭದ್ರಾ ನದಿ ತೀರದಲ್ಲಿರುವ ನರಹರಿ ತೀರ್ಥರ ಬೃಂದಾವನದ ಪೂಜೆ ಪರ್ಯಾಯದ ರೀತಿ ನಡೆದಿದ್ದು, ಶುಕ್ರವಾರದಿಂದ ಮೂರು ದಿನಗಳ ಕಾಲ ನಡೆದ ಶ್ರೀನರಹರಿ ತೀರ್ಥರ ಆರಾಧನೋತ್ಸವ ಸೌಹಾರ್ದಯುತವಾಗಿ ನೆರವೇರಿದೆ. ಪೂರ್ವಾರಾಧನೆ ಹಾಗೂ ಮಧ್ಯಾರಾಧನೆ ನಿಮಿತ್ತ ಉತ್ತರಾದಿ ಮಠದ ಸತ್ಯಾತ್ಮ ತೀರ್ಥರು ಪೂಜಾ ಕೈಂಕರ್ಯ ನೆರವೇರಿಸಿದರೆ, ಉತ್ತರಾರಾಧನೆಯ ಪೂಜಾ ಕೈಂಕರ್ಯವನ್ನು ಮಂತ್ರಾಲಯದ ರಾಯರ ಮಠದ ಸುಬುಧೇಂದ್ರ ತೀರ್ಥರು ನೆರವೇರಿಸಿದರು. ಆ ಮೂಲಕ ಆರಾಧನೋತ್ಸವ ಸುಬುಧೇಂದ್ರ ತೀರ್ಥರು ಹಾಗೂ ಸತ್ಯಾತ್ಮ ತೀರ್ಥರ ಸಮಾಗಮಕ್ಕೆ ನೆಲೆಯಾಯಿತು.

ನರಹರಿ ತೀರ್ಥರ ಪೂಜೆಗಾಗಿ ಎರಡು ಮಠಗಳ ನಡುವೆ ವಿವಾದ ತಲೆದೋರಿತ್ತು. ಪ್ರಕರಣದ ವಿಚಾರಣೆ ನಡೆಸಿದ್ದ ಹೈಕೋರ್ಟ್‌, ಉಭಯ ಮಠಗಳಿಗೆ ಸಮಾನ ಪೂಜೆಯ ಹಕ್ಕು ನೀಡಿ, ತೀರ್ಪು ಪ್ರಕಟಿಸಿತ್ತು. ಈ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಈಚೆಗೆ ಉತ್ತಾರಾದಿ ಮಠದ ಶ್ರೀಗಳೊಂದಿಗೆ ಸೌಹಾರ್ದ ಸಮಾಗಮ ಏರ್ಪಾಡಾಗಿತ್ತು.

ಅಲ್ಲಿನ ತೀರ್ಮಾನದಂತೆ ನರಹರಿ ತೀರ್ಥರ ಮೊದಲ ಎರಡು ದಿನಗಳ ಆರಾಧನೆ, (ಪೂರ್ವಾರಾಧನೆ ಹಾಗೂ ಮಧ್ಯಾರಾಧನೆ) ಯನ್ನು ಉತ್ತರಾದಿ ಮಠದ ಸತ್ಯಾತ್ಮ ತೀರ್ಥರು ನೆರವೇರಿಸಿದರು. ಆರಾಧನೆಯ ನಿಮಿತ್ತ ಬೃಂದಾವನಕ್ಕೆ ಪಂಚಾಮೃತಾಭಿಷೇಕ ನೆರವೇರಿಸಿ, ಸಂಸ್ಥಾನ ಪೂಜೆ ನಡೆಸಿದರು. ಪೂರ್ವಾರಾಧನೆ ನಿಮಿತ್ತ ಬೃಂದಾವನಕ್ಕೆ ವಿಶೇಷ ಅಲಂಕಾರ ಮಾಡಿ, ನೈವೇದ್ಯ ಸಮರ್ಪಿಸಿ, ಮಹಾಮಂಗಳಾರತಿ ನೆರವೇರಿಸಿದರು. ನೆರೆದಿದ್ದ ಭಕ್ತರಿಗೆ ಅನುಗ್ರಹ ಸಂದೇಶ ನೀಡಿದರು.

ಮಧ್ಯಾರಾಧನೆಯ ದಿನ, ಶನಿವಾರ ಸಂಜೆ ಮಠಕ್ಕೆ ಆಗಮಿಸಿದ ಮಂತ್ರಾಲಯದ ರಾಯರ ಮಠದ ಸುಬುಧೇಂದ್ರ ತೀರ್ಥರನ್ನು ಆತ್ಮೀಯವಾಗಿ ಸ್ವಾಗತಿಸಲಾಯಿತು. ಉಭಯ ಸ್ವಾಮೀಜಿಗಳು ನರಹರಿ ತೀರ್ಥರ ಬೃಂದಾವನಕ್ಕೆ ಆರತಿ ಬೆಳಗಿ, ಸಂಜೆಯ ಪೂಜೆ ನೆರವೇರಿಸಿ, ಪರಸ್ಪರ ಶಾಲು ಹೊದೆಸಿ ಗೌರವಿಸಿದರು. ಆರಾಧನೋತ್ಸವದ ಮೂರನೇ ದಿನದ ಅಂಗವಾಗಿ ಭಾನುವಾರ ನಡೆದ ಉತ್ತರಾರಾಧನೆ ನಿಮಿತ್ತ ಮಂತ್ರಾಲಯದ ರಾಯರ ಮಠದ ಸುಬುಧೇಂದ್ರ ತೀರ್ಥರು, ಫಲ ಪಂಚಾಮೃತಾಭಿಷೇಕ ನೆರವೇರಿಸಿದರು. ಬಳಿಕ, ಮೂಲ ರಾಮದೇವರ ಸಂಸ್ಥಾನದ ಪೂಜೆ ನೆರವೇರಿಸಿ, ನೆರೆದಿದ್ದ ಭಕ್ತರಿಗೆ ಅನುಗ್ರಹ ಸಂದೇಶ ನೀಡಿದರು. ನರಹರಿ ತೀರ್ಥರು ಮನುಕುಲಕ್ಕೆ ವಿಶೇಷ ಕೊಡುಗೆ ನೀಡಿದ್ದಾರೆ. ಅವರ ಆರಾಧನೆ ದಿನದಂದು ಪಾದೋದಕ, ಹಸ್ತೋದಕ ಸ್ವೀಕಾರ ಹಾಗೂ ಅವರ ಗ್ರಂಥಗಳ ಬಗ್ಗೆ ಸ್ಮರಣೆ ಮಾಡುವುದೇ ಮಹಾಭಾಗ್ಯ ಎಂದರು.

ಉತ್ತರಾದಿ ಮಠದ ಸತ್ಯಾತ್ಮ ತೀರ್ಥರು ಮಾತನಾಡಿ, ಇದೊಂದು ಐತಿಹಾಸಿಕ ಕ್ಷಣವಾಗಿದ್ದು, ಮಾಧ್ವ ಪ್ರಪಂಚಕ್ಕೆ ಮಾತ್ರವಲ್ಲದೆ ವೈಷ್ಣವರಿಗೆ ಅವಿಸ್ಮರಣೀಯವಾಗಿದೆ. ಇದು ಹೀಗೆಯೇ ಮುಂದುವರಿಯಲಿದೆ ಎಂದರು.