ಪರಿಸರ ಕೃಷಿ ವಿಧಾನಗಳು ಕುರಿತು ಕೃಷಿಸಖಿಯರಿಗೆ ತರಬೇತಿ

| Published : Jul 24 2025, 12:47 AM IST

ಸಾರಾಂಶ

ರೈತ ಮಹಿಳೆಯರು ರಾಸಾಯನಿಕ ಮುಕ್ತ ಕೃಷಿ ಆರಂಭಿಸಿ, ಆರೋಗ್ಯಕರ ಪರಿಸರ ಹಾಗೂ ಆರೋಗ್ಯ ಉತ್ಪನ್ನ

ಕನ್ನಡಪ್ರಭ ವಾರ್ತೆ ಮೈಸೂರು

ಸಂಜೀವಿನಿ- ಕೆ.ಎಸ್.ಆರ್.ಎಲ್.ಪಿ.ಎಸ್, ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ಕೃಷಿ ವಿವಿ ಸಹಯೋಗದಲ್ಲಿ ಮೈಸೂರು ತಾಲೂಕಿನ ನಾಗನಹಳ್ಳಿಯ ವಿಸ್ತರಣಾ ಶಿಕ್ಷಣ ಘಟಕದಲ್ಲಿ ಪರಿಸರ ಕೃಷಿ ವಿಧಾನಗಳು ಕುರಿತು ಕೃಷಿ ಜೀವನೋಪಾಯ ಸಮುದಾಯ ಸಂಪನ್ಮೂಲ ವ್ಯಕ್ತಿಗಳಿಗೆ (ಕೃಷಿಸಖಿ) 6 ದಿನಗಳ ತರಬೇತಿಯು ಸೋಮವಾರ ಆರಂಭವಾಯಿತು.

ಈ ಕಾರ್ಯಕ್ರಮವನ್ನು ಉದ್ಘಾಟಿಸಿದ ವಿ.ಸಿ. ಫಾರಂ ವಲಯ ಕೃಷಿ ಸಂಶೋಧನಾ ಕೇಂದ್ರದ ಸಹ ಸಂಶೋಧನಾ ನಿರ್ದೇಶಕ ಡಾ.ಬಿ.ಎಸ್. ಬಸವರಾಜು ಮಾತನಾಡಿ, ಕೃಷಿಸಖಿಯರು ರೈತರ ತಾಕುಗಳಿಗೆ ಭೇಟಿ ನೀಡಬೇಕಾದಲ್ಲಿ ಮೊದಲು ಕೃಷಿ ತಾಂತ್ರಿಕತೆಗಳನ್ನು ಕಲಿತಿರಬೇಕು. ಈ ತಾಂತ್ರಿಕತೆಗಳು ಇಂತಹ ತರಬೇತಿ ಕಾರ್ಯಕ್ರಮಗಳಿಂದ ಸಿಗುತ್ತದೆ ಎಂದರು.

ರೈತ ಮಹಿಳೆಯರು ರಾಸಾಯನಿಕ ಮುಕ್ತ ಕೃಷಿ ಆರಂಭಿಸಿ, ಆರೋಗ್ಯಕರ ಪರಿಸರ ಹಾಗೂ ಆರೋಗ್ಯ ಉತ್ಪನ್ನಗಳನ್ನು ಉತ್ಪಾದಿಸಿ, ಆರೋಗ್ಯ ಮಟ್ಟವನ್ನು ಸುಧಾರಿಸಬೇಕು. ಈ ಕಾರ್ಯಕ್ರಮದ ಪ್ರಮುಖ ಹಂತವಾಗಿ ಕೃಷಿಸಖಿಯರಿಗಾಗಿ ಪರಿಸರ ಕೃಷಿ ವಿಧಾನಗಳ ಬಗ್ಗೆ 6 ದಿನಗಳು ಆಯೋಜಿಸಿರುವ ಮೂರನೇ ಮಾಡ್ಯುಲ್‌ ತರಬೇತಿ ಬಹಳ ಉಪಯುಕ್ತವಾಗಿದೆ ಎಂದು ಅವರು ಹೇಳಿದರು.

ತರಬೇತಿಯನ್ನು ಪಡೆದು ಕೃಷಿಸಖಿಯರು ಪ್ರಮುಖ ಇಲಾಖೆಗಳು ಹಾಗೂ ರೈತರಿಗೆ ಸಂಪರ್ಕ ಸೇತುವೆಯಾಗಿ ಕಾರ್ಯ ನಿರ್ವಹಿಸಿ, ಉದ್ಯೋಗಾವಕಾಶಗಳನ್ನು ಕಲ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿ ಶ್ರಮಿಸಬೇಕು ಎಂದರು.

ಅಧ್ಯಕ್ಷತೆ ವಹಿಸಿದ್ದ ವಿಸ್ತರಣಾ ಶಿಕ್ಷಣ ಘಟಕದ ವಿಸ್ತರಣಾ ಮುಂದಾಳು ಡಾ.ಸಿ. ರಾಮಚಂದ್ರ ಮಾತನಾಡಿ, ಈ ತರಬೇತಿಯ ಮೂಲ ಉದ್ದೇಶ ಜೀವನೋಪಾಯ ವೃದ್ಧಿ ಮಾಡುವ ಜೊತೆಗೆ ಉದ್ಯೋಗದ ಅವಕಾಶಗಳನ್ನು ಸೃಷ್ಟಿಸುವ ಮೂಲಕ ಗ್ರಾಮೀಣ ಪ್ರದೇಶದ ಮಹಿಳೆಯರಿಗೆ ಆತ್ಮ ವಿಶ್ವಾಸ ಹೆಚ್ಚಿಸುವ ಹೊಸ ಯೋಜನೆಯಾಗಿದೆ ಎಂದರು.

ನಿವೃತ್ತ ವಿಜ್ಞಾನಿ ಡಾ.ಜೆ.ಜಿ. ರಾಜಣ್ಣ ಅವರು, ಮಣ್ಣು ಪರೀಕ್ಷೆಯ ವಿಧಾನಗಳು ಮತ್ತು ಮಣ್ಣು ಆರೋಗ್ಯ ಚೀಟಿಯ ಬಗ್ಗೆ ಕೃಷಿಸಖಿಯರಿಗೆ ಮಾಹಿತಿ ನೀಡಿದರು.

ವಲಯ ಕೃಷಿ ಸಂಶೋಧನಾ ಕೇಂದ್ರದ ವಿಜ್ಞಾನಿಗಳಾದ ಡಾ. ವೆಂಕಟಪ್ಪ, ಡಾ.ಸಿ.ಎಂ. ಸುನಿಲ್ ಇದ್ದರು. ಸಹಾಯಕ ಪ್ರಾಧ್ಯಾಪಕ ಡಾ. ಶಿವಕುಮಾರ್ ಸ್ವಾಗತಿಸಿದರು.