ಅಕ್ಷರ ಸಂಸ್ಕೃತಿ ನಶಿಸುತ್ತಿರುವ ಕಾರಣ ಮನುಷ್ಯನ ಪಂಚೇಂದ್ರಿಯಗಳು ಸಹ ನಿಷ್ಕ್ರಿಯವಾಗುತ್ತಿವೆ

| Published : Dec 09 2024, 12:46 AM IST

ಸಾರಾಂಶ

ಮೆದುಳು ಕೂಡ ಅಂಗಾಂಗಗಳ ಸಂಪರ್ಕವನ್ನು ಕಳೆದುಕೊಳ್ಳುತ್ತಿದೆ. ನಾಲಿಗೆ ಸರಿಯಾಗಿ ಹೊರಳದೆ, ಕಿವಿಯು ಕೇಳಿಸಿಕೊಳ್ಳದೆ, ಮೆದುಳು ಯೋಚಿಸುವ ಶಕ್ತಿ ಕಳೆದುಕೊಂಡು

ಕನ್ನಡಪ್ರಭ ವಾರ್ತೆ ಮೈಸೂರು

ಧ್ವನಿ ಎತ್ತಿ ಪುಸ್ತಕ ಓದುವ, ಮತ್ತೊಬ್ಬರು ಓದಿದ್ದನ್ನು ಕೇಳಿಸಿಕೊಂಡು ಮನನ ಮಾಡುವ ಅಕ್ಷರ ಸಂಸ್ಕೃತಿ ನಶಿಸಿ ಹೋಗುತ್ತಿರುವ ಕಾರಣ ಮನುಷ್ಯನ ಪಂಚೇಂದ್ರಿಯಗಳು ಸಹ ನಿಷ್ಕ್ರಿಯವಾಗುತ್ತಿವೆ ಎಂದು ಅಕ್ಕಮಹಾದೇವಿ ಮಹಿಳಾ ವಿವಿ ವಿಶ್ರಾಂತ ಕುಲಪತಿ ಡಾ. ಸಬಿಹಾ ಭೂಮಿಗೌಡ ತಿಳಿಸಿದರು.ವಿ-ಕೇರ್ ಸಂಸ್ಥೆಯ ತಿಂಗಳ ಪುಸ್ತಕ ಓದು ಕಾರ್ಯಕ್ರಮದ 4ನೇ ಸಂಚಿಕೆಯಲ್ಲಿ ಕಡಲ ತೀರದ ಭಾರ್ಗವ ಡಾ. ಶಿವರಾಮ ಕಾರಂತರ ದ್ವಿತೀಯ ಕಥಾ ಸಂಕಲನವಾದ ತೆರೆಯ ಮರೆಯಲ್ಲಿ ಆಯ್ದ ಕಥೆಗಳ ಓದು ಮತ್ತು ಚಿಂತನೆಯಲ್ಲಿ ಅವರು ಮಾತನಾಡಿದರು.ಮೆದುಳು ಕೂಡ ಅಂಗಾಂಗಗಳ ಸಂಪರ್ಕವನ್ನು ಕಳೆದುಕೊಳ್ಳುತ್ತಿದೆ. ನಾಲಿಗೆ ಸರಿಯಾಗಿ ಹೊರಳದೆ, ಕಿವಿಯು ಕೇಳಿಸಿಕೊಳ್ಳದೆ, ಮೆದುಳು ಯೋಚಿಸುವ ಶಕ್ತಿ ಕಳೆದುಕೊಂಡು, ಬೆಳೆಯುತ್ತಿರುವ ಮಕ್ಕಳು ಕೂಡ ಇಂದು ನೈಜ ಜ್ಞಾನದಿಂದ ವಂಚಿತರಾಗಿ, ಗಡ ಚಿಕ್ಕುವ ಸಂಗೀತ ಮತ್ತು ವಿಚಾರ ರಹಿತ ದೃಶ್ಯ ಮಾಧ್ಯಮಗಳ ಗೀಳಿನೊಂದಿಗೆ ವ್ಯತಿರಿಕ್ತ ಬೆಳವಣಿಗೆಗೆ ಒಳಗಾಗುತ್ತಿರುವುದು ಕಳವಳಕಾರಿಯಾಗಿದೆ ಎಂದರು.ಒಬ್ಬ ಲೇಖಕ ಹೇಗಿರಬೇಕು? ಲೇಖಕನ ಮಾನದಂಡಗಳು ಯಾವುವು ಎಂಬುದಕ್ಕೆ ಕಾರಂತ ಬದುಕು ಬರಹ ಒಂದು ಮಾದರಿ ನಿದರ್ಶನವಾಗಿದೆ. ಪ್ರತಿಯೊಬ್ಬ ಬರಹಗಾರ ಮತ್ತು ಓದುಗ ಹಲವು ಮಿತಿಗಳಿಗೆ ಒಳಪಟ್ಟಿರುತ್ತಾನೆ. ಇಂದಿನ ಪೀಳಿಗೆಯ ಲೇಖಕರು ಹಾಗೂ ಓದುಗರು ಕಾರಂತರ ಶಿಸ್ತಿನ ಜೀವನದಿಂದ ಕಲಿಯುವುದು ಬಹಳಷ್ಟಿದೆ ಎಂದು ಅವರು ಹೇಳಿದರು.ವಿ-ಕೇರ್ ಸಂಸ್ಥೆಯ ಕಾರ್ಯಕರ್ತೆ ಸಿಂಚನಾ, ವೈದ್ಯೆ ಡಾ. ರಮ್ಯಾ, ಶಿಕ್ಷಕ ಸತೀಶ್ ಜವರೇಗೌಡ ಕಥೆಗಳನ್ನು ಓದಿದರು.ವಿ-ಕೇರ್ ಸಂಸ್ಥೆಯ ಸಂಸ್ಥಾಪಕಿ ಡಾ. ಕುಮುದಿನಿ ಅಚ್ಚಿ, ವಕೀಲೆ ಶೋಭಾ ಗೌಡ, ವೈದ್ಯೆ ಡಾ. ಸಾರಿಕಾ ಪ್ರಸಾದ್, ಹೋರಾಟಗಾರ ಅಯ್ಯಪ್ಪ ಹೂಗಾರ್, ಮೂಡಿಗೆರೆ ಗೋಪಾಲ್ ಇದ್ದರು. ಒಡನಾಡಿಯ ಸ್ಟ್ಯಾನ್ಲಿ ನಿರೂಪಿಸಿದರು.