ವಿ. ಶ್ರೀನಿವಾಸಪ್ರಸಾದ್ ಅವರ ರಾಜಕೀಯ ಬದುಕು, ಸಂದೇಶ ನಮ್ಮೆಲ್ಲರಿಗೂ ಪ್ರೇರಣೆ: ಬಿ.ಹರ್ಷವರ್ಧನ್

| Published : May 03 2024, 01:00 AM IST

ವಿ. ಶ್ರೀನಿವಾಸಪ್ರಸಾದ್ ಅವರ ರಾಜಕೀಯ ಬದುಕು, ಸಂದೇಶ ನಮ್ಮೆಲ್ಲರಿಗೂ ಪ್ರೇರಣೆ: ಬಿ.ಹರ್ಷವರ್ಧನ್
Share this Article
  • FB
  • TW
  • Linkdin
  • Email

ಸಾರಾಂಶ

ಚಾಮರಾಜನಗರವನ್ನು ಕರ್ಮ ಭೂಮಿಯನ್ನಾಗಿಸಿಕೊಂಡು 50 ವರ್ಷಗಳ ರಾಜಕೀಯ ಜೀವನ ನಡೆಸಿದ ವಿ.ಶ್ರೀನಿವಾಸ ಪ್ರಸಾದ್ ಅವರ ನಿಧನದ ಬಳಿಕ ಮೈಸೂರು, ಚಾಮರಾಜನಗರ ಹಾಗೂ ಮಂಡ್ಯ ಸೇರಿದಂತೆ ಇತರೆ ಭಾಗಗಳಿಂದ ಆಗಮಿಸಿದ್ದ ಸಾವಿರಾರು ಮಂದಿ ಅಭಿಮಾನಿಗಳು ಅಂತಿಮ ದರ್ಶನ ಪಡೆದುಕೊಂಡು ಅವರ ಸಾಧನೆಗಳನ್ನು ಸ್ಮರಿಸಿದ್ದರು.

ಕನ್ನಡಪ್ರಭ ವಾರ್ತೆ ನಂಜನಗೂಡು

ಸಂಸದ ವಿ.ಶ್ರೀನಿವಾಸಪ್ರಸಾದ್ ಅವರ ರಾಜಕೀಯ ಬದುಕು ಮತ್ತು ಸಂದೇಶಗಳು ನಮ್ಮೆಲ್ಲರಿಗೂ ಪ್ರೇರಣೆಯಾಗಿದ್ದು, ಅವರು ನಂಬಿದ್ದ ತತ್ವಾದರ್ಶಗಳನ್ನು ನಾವೆಲ್ಲರೂ ಮೈಗೂಡಿಕೊಳ್ಳುವ ಮೂಲಕ ಅವರ ಆಶಯಗಳನ್ನು ಈಡೇರಿಸಬೇಕಿದೆ ಎಂದು ಮಾಜಿ ಶಾಸಕ ಬಿ. ಹರ್ಷವರ್ಧನ್ ಹೇಳಿದರು.

ಪಟ್ಟಣದ ನಂದಿ ಕನ್ವೆನ್ಷನ್ ಹಾಲ್ ನಲ್ಲಿ ಗುರುವಾರ ಬಿಜೆಪಿ ನಗರ ಮತ್ತು ಗ್ರಾಮಾಂತರ ಮಂಡಲದಿಂದ ಆಯೋಜಿಸಿದ್ದ ಶ್ರದ್ಧಾಂಜಲಿ ಸಭೆಯಲ್ಲಿ ಅವರು ಮಾತನಾಡಿದರು.

ಚಾಮರಾಜನಗರವನ್ನು ಕರ್ಮ ಭೂಮಿಯನ್ನಾಗಿಸಿಕೊಂಡು 50 ವರ್ಷಗಳ ರಾಜಕೀಯ ಜೀವನ ನಡೆಸಿದ ವಿ. ಶ್ರೀನಿವಾಸ ಪ್ರಸಾದ್ ಅವರ ನಿಧನದ ಬಳಿಕ ಮೈಸೂರು, ಚಾಮರಾಜನಗರ ಹಾಗೂ ಮಂಡ್ಯ ಸೇರಿದಂತೆ ಇತರೆ ಭಾಗಗಳಿಂದ ಆಗಮಿಸಿದ್ದ ಸಾವಿರಾರು ಮಂದಿ ಅಭಿಮಾನಿಗಳು ಅಂತಿಮ ದರ್ಶನ ಪಡೆದುಕೊಂಡು ಅವರ ಸಾಧನೆಗಳನ್ನು ಸ್ಮರಿಸಿದ್ದರು. ಇನ್ನು ರಾಜ್ಯ ಸರ್ಕಾರ ಹಾಗೂ ಮೈಸೂರು ಜಿಲ್ಲಾಡಳಿತದವರು ವ ಅಂತ್ಯಸಂಸ್ಕಾರಕ್ಕೆ ಸಂಪೂರ್ಣ ಸಹಕಾರ ಹಾಗೂ ಅಗತ್ಯ ಭದ್ರತೆಯನ್ನು ನೀಡಿ ವ್ಯವಸ್ಥಿತವಾಗಿ ಅಂತಿಮ ವಿಧಿವಿಧಾನಗಳು ನಡೆಯಲು ಸಹಕಾರ ನೀಡಿದ್ದಾರೆ ಅವರಿಗೆ ನಮ್ಮ ಕುಟುಂಬದ ಪರವಾಗಿ ಧನ್ಯವಾದಗಳನ್ನು ತಿಳಿಸಿದ್ದೇವೆ ಎಂದರು.

ಸಕ್ರಿಯ ರಾಜಕೀಯ ಜೀವನದಿಂದ ನಿವೃತ್ತಿ ಬಳಿಕ ಶ್ರೀನಿವಾಸಪ್ರಸಾದ್ ಅವರು ಸಂಸದರಾಗಿದ್ದ ಸಂದರ್ಭದಲ್ಲಿನ 7 ಮಂದಿ ಪ್ರಧಾನಮಂತ್ರಿಗಳ ಒಡನಾಟದ ಬಗ್ಗೆ ಪುಸ್ತಕ ಬರೆಯುವ ಹಂಬಲವನ್ನು ಹೊಂದಿದ್ದರು, ಆದರೆ ದುರಾದೃಷ್ಠವಶಾತ್ ಅದು ನೆರವೇರಲಿಲ್ಲ. ಇನ್ನು 2023ರ ವಿಧಾನಸಭಾ ಚುನಾವಣೆಯಲ್ಲಿ ನನಗೆ ಸೋಲುಂಟಾದಾಗ ತೀವ್ರ ನೊಂದಿದ್ದರು. ಕೆಲ ದಿನಗಳ ಬಳಿಕ ನನಗೆ ಸಮಾಧಾನ ಹೇಳಿದ್ದಲ್ಲದೆ ಮುಂಬರುವ ದಿನಗಳಲ್ಲಿ ಖಂಡಿತ ಕ್ಷೇತ್ರದ ಜನರು ನಿನ್ನನ್ನು ಮತ್ತೊಮ್ಮೆ ಬೆಂಬಲಿಸಲಿದ್ದಾರೆ. ಧೃತಿಗೆಡವುದು ಬೇಡ ಎಂದು ಧೈರ್ಯವನ್ನು ತುಂಬಿದ್ದರು, ಅವರೊಂದಿಗಿನ ಸುದೀರ್ಘ ಒಡನಾಟ ಹಾಗೂ ಮಾರ್ಗದರ್ಶನದಿಂದಾಗಿ ಪಕ್ಷದ ಕಾರ್ಯಕರ್ತರು ಹಾಗೂ ಪ್ರಸಾದ್ ಅವರ ಬೆಂಬಲಿಗರನ್ನು ಒಟ್ಟಿಗೆ ಕರೆದೊಯ್ಯುವ ಸಾಮರ್ಥ್ಯ ಪಡೆದಿದ್ದೇನೆ ಎಂದರು.

ಕಾಂಪೋಸ್ಟ್ ಅಭಿವೃದ್ಧಿ ನಿಗಮ ಮಾಜಿ ಅಧ್ಯಕ್ಷ ಎಸ್. ಮಹದೇವಯ್ಯ ಮಾತನಾಡಿ, ಪ್ರಸಾದ್ ಅವರು ನೇರ, ನಿಷ್ಠೂರ, ಎದೆಗಾರಿಕೆಯುಳ್ಳ ಹಾಗೂ ಲೆಕ್ಕಾಚಾರದ ರಾಜಕಾರಣಿ, 2008ರ ಚುನಾವಣೆಯಲ್ಲಿ ಅವರ ವಿರುದ್ದ ಕಡಿಮೆ ಅಂತರದಿಂದ ಸೋತಾಗ ನನ್ನನ್ನು ಕರೆಸಿ ನನ್ನ ವಿರುದ್ದ ಸ್ಪರ್ಧಿಸಿ ಹತ್ತಿರದಿಂದ ಪರಾಭಾವಗೊಂಡಿದ್ದೀಯ ಎಂದು ಸಂತೋಷಪಟ್ಟು ನಿನಗೆ ಉತ್ತಮ ಭವಿಷ್ಯವಿದೆ ಎಂದು ಹರಸಿದ್ದರು. ಅವರಲ್ಲಿ ದ್ವೇಷ ಅಸೂಹೆ ಇರಲಿಲ್ಲ. ಅವರ ಹೆಸರು ಅಜರಾಮರವಾಗಲು ನಂಜನಗೂಡಿನಲ್ಲಿ ನಿರ್ಮಾಣವಾಗಿರುವ ರೈಲ್ವೆ ಮೇಲ್ಸೇತುವೆಗೆ ಅವರ ಹೆಸರನ್ನು ನಾಮಕರಣ ಮಾಡಬೇಕು ಎಂದು ಒತ್ತಾಯಿಸಿದರು.

ಜೆಡಿಎಸ್ ಜಿಲ್ಲಾಧ್ಯಕ್ಷ ಎನ್. ನರಸಿಂಹಸ್ವಾಮಿ ಮಾತನಾಡಿ, ವಿ. ಶ್ರೀನಿವಾಸಪ್ರಸಾದ್ ಪಕ್ಷಾತೀತವಾಗಿ ಜನಮನ್ನಣೆಯನ್ನು ಪಡೆದಿದ್ದರು, ಅವರ ತತ್ವಾದರ್ಶಗಳನ್ನು ರೂಢಿಸಿಕೊಂಡು ಅವರ ಆಶಯದಂತೆ ರಾಜಕೀಯವಾಗಿ ಮುನ್ನಡೆಯಲು ಪ್ರಸಾದ್ ಅಳಿಯ ಮಾಜಿ ಶಾಸಕ ಬಿ. ಹರ್ಷವರ್ಧನ್ ಅವರಿಗೆ ಅಗತ್ಯ ಶಕ್ತಿಯನ್ನು ಕಾರ್ಯಕರ್ತರು ನೀಡಬೇಕಿದೆ ಎಂದರು.

ಸಭೆಯಲ್ಲಿ ಸಂಸದ ವಿ. ಶ್ರೀನಿವಾಸಪ್ರಸಾದ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಗೌರವ ನಮನ ಸಲ್ಲಿಸಲಾಯಿತು.

ಸಭೆಯನ್ನು ದ್ದೇಶಿಸಿ ಪ್ರಥಮ ದರ್ಜೆ ಗುತ್ತಿಗೆದಾರ ಯು.ಎನ್. ಪದ್ಮನಾಭರಾವ್, ಜಿಪಂ ಮಾಜಿ ಸದಸ್ಯರಾದ ಸಿ. ಚಿಕ್ಕರಂಗನಾಯಕ, ಮಂಗಳಾ ಸೋಮಶೇಖರ್, ಎಸ್.ಎಂ. ಕೆಂಪಣ್ಣ, ಬಿಜೆಪಿ ರಾಜ್ಯ ಮುಖಂಡ ಕುಂಬ್ರಳ್ಳಿ ಸುಬ್ಬಣ್ಣ, ಹೊರಳವಾಡಿ ಪಿ. ಮಹೇಶ್, ಬಾಲಚಂದ್ರು, ಖಾದಿ ಗ್ರಾಮೋದ್ಯೋಗ ಮಂಡಳಿ ಮಾಜಿ ಅಧ್ಯಕ್ಷ ಎನ್.ಆರ್. ಕೃಷ್ಣಪ್ಪಗೌಡ, ಹೆಮ್ಮರಗಾಲ ಸೋಮಣ್ಣ, ಬಿಜೆಪಿ ಮಂಡಲ ಅಧ್ಯಕ್ಷ ಕೆಂಡಗಣ್ಣಪ್ಪ ಮಾತನಾಡಿದರು.

ಸಭೆಯಲ್ಲಿ ತಾಪಂ ಮಾಜಿ ಸದಸ್ಯರಾದ ಬಿ.ಎಸ್. ರಾಮು, ಮಹದೇವನಾಯಕ, ಹೆಮ್ಮರಗಾಲ ಶಿವಣ್ಣ, ಸಿ.ಎಂ. ಮಹದೇವಯ್ಯ, ಕೊಂಗಳ್ಳಿ ಬಸವರಾಜು, ನಗರಸಭಾ ಸದಸ್ಯರಾದ ಎಚ್.ಎಸ್. ಮಹದೇವಸ್ವಾಮಿ, ಸಿದ್ದರಾಜು, ಮಹದೇವಪ್ರಸಾದ್, ವಿಜಯಲಕ್ಷ್ಮಿ ಕುಮಾರ್, ಮಹೇಶ್ ಅತ್ತಿಖಾನೆ, ಶ್ರೀನಿವಾಸರೆಡ್ಡಿ, ಮಧುರಾಜ್, ಮುರುಗೇಶ್, ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಗೋವರ್ಧನ್ ಇದ್ದರು.