ಸ್ಮಾರಕ ರೋಗಗಳ ವಿರುದ್ಧ ಲಸಿಕೆ ಕೊಡಿಸಿ ಮಕ್ಕಳ ಉಳಿಸಿ

| Published : Jan 04 2025, 12:33 AM IST

ಸಾರಾಂಶ

ಚಿತ್ರದುರ್ಗ ವೆಂಕಟೇಶ್ವರ ಬಡಾವಣೆ ಅಂಗನವಾಡಿ ಕೇಂದ್ರದಲ್ಲಿ ಹಮ್ಮಿಕೊಳ್ಳಲಾದ ಲಸಿಕಾ ಅಧಿವೇಶನ ತಾಯಂದಿರ ಸಭೆಯಲ್ಲಿ ತಾಯಿ ಕಾರ್ಡುಗಳ ಬಿಡುಗಡೆ ಮಾಡಲಾಯಿತು.

ಕನ್ನಡಪ್ರಭ ವಾರ್ತೆ ಚಿತ್ರದುರ್ಗ

ತಾಯಂದಿರು ತಮ್ಮ ಮಕ್ಕಳಿಗೆ ತಪ್ಪದೇ ಮಾರಕ ರೋಗಗಳ ವಿರುದ್ಧ ಲಸಿಕೆಗಳನ್ನು ಕೊಡಿಸಿ ಮಕ್ಕಳನ್ನು ರಕ್ಷಿಸಿ ಎಂದು ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಕೃಷ್ಣನಾಯ್ಕ್ ಸಲಹೆ ನೀಡಿದರು.

ನಗರದ ಚಳ್ಳಕೆರೆ ರಸ್ತೆಯ ವೆಂಕಟೇಶ್ವರ ಬಡಾವಣೆ ಅಂಗನವಾಡಿ ಕೇಂದ್ರದಲ್ಲಿ ಹಮ್ಮಿಕೊಳ್ಳಲಾದ ಲಸಿಕಾ ಅಧಿವೇಶನ ತಾಯಂದಿರ ಸಭೆಯಲ್ಲಿ ಮಾತನಾಡಿದ ಅವರು, ಪ್ರತಿ ತಿಂಗಳು ಅಂಗನವಾಡಿ ಕೇಂದ್ರದಲ್ಲಿ ಲಸಿಕೆ ನೀಡುವ ಕಾರ್ಯಕ್ರಮ ನಡೆಯುತ್ತದೆ. ಸರ್ಕಾರದಿಂದ ಉಚಿತವಾಗಿ ಲಸಿಕೆ ನೀಡಲಾಗುತ್ತದೆ. ಬುದ್ಧಿವಂತರಾಗಿ ಮಕ್ಕಳಿಗೆ ಸಂಪೂರ್ಣ ಲಸಿಕೆಗಳನ್ನು ಕೊಡಿಸಿ ಎಂದರು.

ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಎನ್.ಎಸ್.ಮಂಜುನಾಥ್ ಮಾತನಾಡಿ, ಮೊದಲು ಶಿಕ್ಷಣ ನಂತರ ಮದುವೆ. ಬಾಲ್ಯ ವಿವಾಹ ನಿಷೇಧ ಕಾಯ್ದೆ ಬಹಳಷ್ಟು ಕಠಿಣವಾಗಿದೆ. ಬಾಲ್ಯ ವಿವಾಹ ಮಾಡುವುದು ಶಿಕ್ಷಾರ್ಹ ಅಪರಾಧ. ಹೆಣ್ಣು ಮಗುವನ್ನು ರಕ್ಷಿಸಿ ಹೆಣ್ಣು ಮಗುವನ್ನು ಓದಿಸಿ. ಬಾಲ್ಯ ವಿವಾಹಗಳನ್ನು ನಿಲ್ಲಿಸುವುದರಿಂದ ತಾಯಿ ಮರಣ ಶಿಶು ಮರಣ ಪ್ರಮಾಣ ತಗ್ಗಿಸಬಹುದು ಎಂದು ಹೇಳಿದರು.

ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಬಿ.ಮೂಗಪ್ಪ ಮಾತನಾಡಿ, ಕುಟುಂಬ ಕಲ್ಯಾಣ ವಿಧಾನಗಳನ್ನು ಅನುಸರಿಸುವಲ್ಲಿ ಪುರುಷರ ಸಹಭಾಗಿತ್ವ ಬಹಳ ಪ್ರಮುಖವಾಗಿದೆ. ಪುರುಷರಿಗಾಗಿ ಎನ್‌ಎಸ್‌ವಿ ಒಂದು ಸರಳ ಸುಲಭ ಹೊಲಿಗೆ ಹಾಕದಂತಹ ನೂತನ ಗರ್ಭ ನಿರೋಧಕ ಶಸ್ತ್ರಚಿಕಿತ್ಸಾ ವಿಧಾನವಾಗಿದೆ. ಮನೆಯಲ್ಲಿ ಕುಟುಂಬದ ಎಲ್ಲಾ ಸದಸ್ಯರು ಕುಳಿತು ವಿಚಾರ ಮಾಡಿ ನಿಮ್ಮ ಮನೆಯ ಪುರುಷರಿಗೆ ಈ ವಿಧಾನ ಉಪಯೋಗ ಮಾಡಿಕೊಳ್ಳುವಂತೆ ಸೂಚಿಸಿ ಎಂದರು.

ಹಿರಿಯ ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ ಕಾತ್ಯಾಯನಮ್ಮ ತಾಯಿ ಮಕ್ಕಳ ಪೌಷ್ಟಿಕ ಆಹಾರದ ಬಗ್ಗೆ ಸಭೆಯಲ್ಲಿ ಮಾಹಿತಿ ಶಿಕ್ಷಣ ನೀಡಿದರು. ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಬಿ ಜಾನಕಿ ಅವರು ತಾಯಿ ಕಾರ್ಡಿನ ಮಹತ್ವ, ಮಕ್ಕಳಿಗೆ ತಗಲುವ ರೋಗಕ್ಕೆ ಯಾವ ಲಸಿಕೆಯನ್ನು ನೀಡಲಾಗುತ್ತದೆ. ಬೆಳವಣಿಗೆ ಪಟ್ಟಿ ದಾಖಲಾತಿ ಬಗ್ಗೆ ಮಾಹಿತಿ ಶಿಕ್ಷಣ ನೀಡಿದರು.

ತಾಲೂಕು ಆಶಾ ಬೋಧಕಿ ತಬಿತ ಅವರು ಎದೆ ಹಾಲಿನ ಮಹತ್ವದ ಬಗ್ಗೆ ತಿಳಿಸಿದರು. ಪ್ರಾಥಮಿಕ ಆರೋಗ್ಯ ಸುರಕ್ಷತಾಧಿಕಾರಿ ಗೀತಾ, ಅಂಗನವಾಡಿ ಕಾರ್ಯಕರ್ತೆಯರಾದ ಆಶಾ ಮತ್ತು ರಂಗಮ್ಮ, ಆಶಾ ಕಾರ್ಯಕರ್ತೆಯರಾದ ರೇಣುಕಾ, ಅನುರಾಧ ತಾಯಂದಿರು, ಮಕ್ಕಳು, ಉಪಸ್ಥಿತರಿದ್ದರು.