ಸಾರಾಂಶ
ಕುಷ್ಟಗಿ: ಐದು ವರ್ಷದೊಳಗಿನ ಮಕ್ಕಳಿಗೆ ಪಾಲಕರು ಎರಡು ಹನಿ ಪೊಲಿಯೋ ಲಸಿಕೆ ಹಾಕಿಸುವ ಮೂಲಕ ಮಗುವಿನ ಸಂಪೂರ್ಣ ರಕ್ಷಣೆಯನ್ನು ಖಚಿತಪಡಿಸಿಕೊಳ್ಳಬೇಕು ಎಂದು ದೋಟಿಹಾಳ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ. ಸಂತೋಷಕುಮಾರ ಬಿರಾದಾರ ಅಭಿಪ್ರಾಯಪಟ್ಟರು.ತಾಲೂಕಿನ ದೋಟಿಹಾಳ ಗ್ರಾಮದ ಆರೋಗ್ಯ ಕೇಂದ್ರದ ವ್ಯಾಪ್ತಿಯ ಕೈಮಗ್ಗ ನೇಕಾರ ಸಹಕಾರ ಸಂಘದ ಆವರಣದಲ್ಲಿ ನಡೆದ ಪೊಲಿಯೋ ಲಸಿಕಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಪೋಷಕರು ಮತ್ತು ಸಾರ್ವಜನಿಕರು ಜಾಗೃತರಾಗಿ ಶಾಶ್ವತ ಅಂಗವಿಕಲತೆ ತರಬಲ್ಲ ಪೊಲಿಯೋವನ್ನು ಲಸಿಕೆ ಮೂಲಕ ತಡೆಯಲು ನಮ್ಮೊಂದಿಗೆ ಕೈ ಜೋಡಿಸಬೇಕು ಎಂದು ಮನವಿ ಮಾಡಿದರು.ರಾಷ್ಟ್ರೀಯ ಪಲ್ಸ್ ಪೊಲಿಯೋ ಕಾರ್ಯಕ್ರಮ ಮಾ.6ರವರೆಗೆ ನಡೆಯುತ್ತಿದೆ. ಐದು ವರ್ಷದೊಳಗಿನ ಎಲ್ಲ ಮಕ್ಕಳಿಗೂ ಪೋಲಿಯೊ ಹನಿ ಹಾಕುವ ಮೂಲಕ ಪೊಲಿಯೋ ನಿರ್ಮೂಲನೆ ಮಾಡುವ ಗುರಿ ಹೊಂದಲಾಗಿದೆ. ನಾಲ್ಕು ದಿನಗಳವರೆಗೆ ನಡೆಯುವ ಕಾರ್ಯಕ್ರಮದಲ್ಲಿ ಎಲ್ಲರೂ ಪಾಲ್ಗೊಳ್ಳಬೇಕು ಎಂದರು.ಈ ಸಂದರ್ಭದಲ್ಲಿ ದೋಟಿಹಾಳ ಗ್ರಾಪಂ ಅಧ್ಯಕ್ಷ ಮಹೇಶ ಕಾಳಗಿ ಮಗುವಿಗೆ ಪೊಲಿಯೋ ಲಸಿಕೆ ಹಾಕುವ ಮೂಲಕ ಲಸಿಕಾ ಅಭಿಯಾನಕ್ಕೆ ಚಾಲನೆ ನೀಡಿದರು. ಈ ವೇಳೆ ಆರೋಗ್ಯ ಕೇಂದ್ರದ ಅಧಿಕಾರಿ ರವೀಂದ್ರ ನಂದಿಹಾಳ, ಬಸವರಾಜ ಚೋಕಾವಿ, ಶ್ರೀನಿವಾಸ ಕಂಟ್ಲಿ, ಪೂರ್ಣಿಮಾ ದೇವಾಂಗಮಠ, ಸವಿತಾ ಗುಗ್ರಿ, ತಾರಾಬಿ ಯಲಬುರ್ಗಿ, ಉಷಾ ದೊಡ್ಡಮನಿ, ಅಮೃತಾ ಹೊಸಮನಿ ಇದ್ದರು.