ಸಾರಾಂಶ
ಕನ್ನಡಪ್ರಭ ವಾರ್ತೆ ವಿಜಯಪುರ
ಬಸವಾದಿ ಶರಣರನ್ನು ಅವಹೇಳನಕಾರಿಯಾಗಿ ಬಿಂಬಿಸಿ ಬಸವ ಭಕ್ತರ ಭಾವನೆಗೆ ಧಕ್ಕೆ ತರುವ ವಚನ ದರ್ಶನ ಕೃತಿಯನ್ನು ಸರ್ಕಾರ ಮುಟ್ಟುಗೋಲು ಹಾಕಬೇಕು ಹಾಗೂ ಶರಣ ಸಂಸ್ಕೃತಿಗೆ ಅಪಮಾನ ಮಾಡುವಂತಹ ಶರಣರ ಶಕ್ತಿ ಚಲನಚಿತ್ರ ನಿಷೇಧಿಸಬೇಕೆಂದು ಆಗ್ರಹಿಸಿ ಅ.16ರಂದು ಹೋರಾಟ ನಡೆಸಲಾಗುವುದು ಎಂದು ಪುಣೆಯ ಬಸವ ತಿಳುವಳಿಕೆ ಮತ್ತು ಸಂಶೋಧನಾ ಕೇಂದ್ರದ ಅಧ್ಯಕ್ಷ ಡಾ.ಶಶಿಕಾಂತ ಪಟ್ಟಣ ಹೇಳಿದರು.ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಕುರಿತು ಸರ್ಕಾರವು ಸೂಕ್ತಕ್ರಮ ತೆಗೆದುಕೊಳ್ಳಬೇಕು. ತಪ್ಪಿಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಎಲ್ಲ ಬಸವ ಪರ ಸಂಘಟನೆಗಳ ಕಾರ್ಯಕರ್ತರು ಅ.16 ಬೆಳಗ್ಗೆ 11 ಗಂಟೆಗೆ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಡಿಸಿ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಗುವುದು ಎಂದರು.ಬಸವ ಭಕ್ತರ ಭಾವನೆಗೆ ಧಕ್ಕೆ ತರುವ ವಚನ ದರ್ಶನ ಕೃತಿ ಮತ್ತು ಶರಣರ ಶಕ್ತಿ ಚಲನಚಿತ್ರ ನಿರ್ಮಾಣದ ಹಿಂದಿನ ದುರುದ್ದೇಶವನ್ನು ಎಳೆಎಳೆಯಾಗಿ ಬಿಡಿಸಿ, ಅದರ ಹಿಂದಿರುವ ಪೂರ್ವಾಗ್ರಹ ಪೀಡಿತ ಶಕ್ತಿಗಳ ವಿರುದ್ಧ ಆಕ್ರೋಶ ಹೊರಹಾಕಿದರು. ಇಂದು ಬಸವ ತತ್ವವು ಜಗತ್ತಿನ ಪ್ರಗತಿಪರ ರಾಷ್ಟ್ರಗಳಲ್ಲಿ ಪ್ರಜಾಪ್ರಭುತ್ವದ ಮಾದರಿ ಎನಿಸಿದ ಶರಣರ ಅನುಭವ ಮಂಟಪ ಪರಿಕಲ್ಪನೆಯನ್ನು ಬುಡಮೇಲು ಮಾಡುವ ರೀತಿಯಲ್ಲಿ ಕೆಲ ಸಂಪ್ರದಾಯವಾದಿಗಳು ಈ ವಚನ ದರ್ಶನ ಕೃತಿ ರಚಿಸಿದ್ದಾರೆ ಎಂದರು.ಬಸವಣ್ಣನವರು ವರ್ಗ, ವರ್ಣ, ಲಿಂಗಭೇದ, ಆಶ್ರಮ ರಹಿತ ಸಾಂಸ್ಥಿಕರಣವಲ್ಲದ ಬಂಡಾಯ ಧೋರಣೆ ಹೊಂದಿದ ಪುರೋಗಾಮಿ ವಿಚಾರಗಳಿಂದ ವಚನ ಚಳುವಳಿ ಹುಟ್ಟು ಹಾಕಿದರು. ಎಲ್ಲ ಕಾಯಕ ವರ್ಗದವರು ಇಂತಹ ಅಪೂರ್ವ ವೈಚಾರಿಕ ಕ್ರಾಂತಿಗೆ ತಮ್ಮನ್ನು ತೊಡಗಿಸಿಕೊಂಡರು. ಬದುಕಿನಲ್ಲಿ ಅಗತ್ಯವಿರುವ ಶ್ರಮ ಸಂಸ್ಕೃತಿಯ ವಾರಸುದಾರರು ಶರಣರು. ಅವರು ಹೊರಗಿನ ಭೌತಿಕ ದೇವರುಗಳನ್ನು ಗುಡಿ ಸಂಸ್ಕೃತಿ, ಕಂದಾಚಾರ, ಬಹುದೇವೋಪಾಸನೆ ಸಾಂಪ್ರದಾಯಿಕ ಅಂಧ ಶ್ರದ್ಧೆಗಳ ವಿರುದ್ಧ ಬಂಡೆದ್ದರು. ವಚನ ಚಳುವಳಿಗೆ ತನ್ನದೇ ಆದ ಸ್ವಾನುಭಾವದ ನೆಲೆ ಇದೆ. ಅದು ವೇದ ಆಗಮ ಶಾಸ್ತ್ರ ಪುರಾಣಗಳಿಂದ ಪ್ರಭಾವಿತವಾಗದೇ ಅದಕ್ಕೆ ಭಿನ್ನವಾಗಿ ತನ್ನ ಕಾಯಕದ ಪಾರಿಭಾಷಿಕ ಪದಗಳಿಂದ ಸುಂದರ ಮುಕ್ತ ಶೈಲಿಯ ಗದ್ಯ ಪದ್ಯ ಮಿಶ್ರಿತ ಪುರೋಗಾಮಿ ಸಾಹಿತ್ಯ ಎನ್ನುವುದು ಹಲವು ಶತಕಗಳಿಂದ ದಾಖಲಾಗಿದೆ. ಆದರೆ, ವಚನ ಚಳುವಳಿಗೆ ವೇದ ಶಾಸ್ತ್ರ ಆಗಮ ಮೂಲ ಎನ್ನುವ ರೀತಿಯಲ್ಲಿ ಬಿಂಬಿಸುವ ವಚನ ದರ್ಶನವು ಲಿಂಗಾಯತ ಸಮಾಜ ಮತ್ತು ಬಸವ ಭಕ್ತರನ್ನು ದಿಕ್ಕು ತಪ್ಪಿಸುವ ಕೃತಿಯಾಗಿದೆ. ಕಾರಣ ಶರಣರ ಅಭಿವ್ಯಕ್ತಿಗೆ ಕಳಂಕ ತರುವ ಈ ಕೃತಿಯನ್ನು ಕೂಡಲೇ ಸರ್ಕಾರ ಮುಟ್ಟುಗೋಲು ಹಾಕಬೇಕು ಎಂದು ಒತ್ತಾಯಿಸಿದರು.ಅನುರಾಧಾ ಕುಲಕರ್ಣಿ ನಿರ್ಮಾಣದ, ದಿಲೀಪ್ ಶರ್ಮ ನಿರ್ದೇಶನದ ಶರಣರ ಶಕ್ತಿ ಎಂಬ ಚಲನಚಿತ್ರವು ಶರಣರ ಚರಿತ್ರೆಗೆ ಮಸಿ ಬಳೆಯುವ ರೀತಿಯಲ್ಲಿ ಶರಣರ ಬದುಕನ್ನು ಕ್ರೌರ್ಯದಿಂದ ಅನಾಗರಿಕ ಸಂಭಾಷಣೆಯಿಂದ ಚಿತ್ರಿಸಿ ಶರಣ ಸಂಸ್ಕೃತಿಗೆ ಅಪಮಾನ ಮಾಡಿದ್ದಾರೆ. ಇಂತಹ ಚಲನಚಿತ್ರದ ಅನೇಕ ಸನ್ನಿವೇಶಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು ಶೀಘ್ರವಾಗಿ ಚಲನಚಿತ್ರ ಬಿಡುಗಡೆಗೊಳ್ಳಲಿದೆ. ಕಾರಣ ತಕ್ಷಣ ಶರಣರ ಶಕ್ತಿ ಚಲನಚಿತ್ರ ಪ್ರದರ್ಶನಕ್ಕೆ ಸರ್ಕಾರ ನಿಷೇಧ ಹೇರಬೇಕು ಎಂದು ಆಗ್ರಹಿಸಿದರು.ಗೋಷ್ಠಿಯಲ್ಲಿ ಕಲಬುರ್ಗಿ ಫೌಂಡೇಶನ್ ಅಧ್ಯಕ್ಷ ಶಿವಲಿಂಗಪ್ಪ ಕಲಬುರ್ಗಿ, ಮಾನವ ಬಂಧುತ್ವ ವೇದಿಕೆ ಅಧ್ಯಕ್ಷ ಪ್ರಭುಗೌಡ ಪಾಟೀಲ, ಅಖಿಲ ಭಾರತ ವೀರಶೈವ-ಲಿಂಗಾಯತ ಮಹಾಸಭೆ ಜಿಲ್ಲಾ ಕಾರ್ಯದರ್ಶಿ ಸೋಮಶೇಖರ ಸಾಲಿ ಹಾಗೂ ಪುಣೆಯ ಅಕ್ಕನ ಅರಿವು ಕಾರ್ಯಕಾರಿ ಸಮಿತಿ ಸದಸ್ಯರಾದ ಡಾ.ಸರಸ್ವತಿ ಪಾಟೀಲ, ಡಾ.ಶಾರದಾಮಣಿ ಹುಣಶ್ಯಾಳ, ಡಾ.ಮೀನಾಕ್ಷಿ ಪಾಟೀಲ ಉಪಸ್ಥಿತರಿದ್ದರು.