ವಚನಗಳಿಂದ ಸಾರ್ಥಕ ಬದುಕು: ಹೊಕ್ರಾಣಿ

| Published : May 02 2025, 12:11 AM IST

ಸಾರಾಂಶ

ಮಹಾನ್ ಮಾನವತಾವಾದಿ ಬಸವಣ್ಣನವರು ಅನುಭವ ಮಂಟಪ ಸ್ಥಾಪಿಸುವ ಮೂಲಕ ಎಲ್ಲರನ್ನು ಸಮಾನವಾಗಿ ಕಂಡವರು. ಲಿಂಗ ಸಮಾನತೆ, ಜಾತಿರಹಿತ ಸಮಾಜ ನಿರ್ಮಾಣಕ್ಕೆ ಮುಂದಾದವರು.

ಕುಷ್ಟಗಿ:

ಸಾರ್ಥಕ ಬದುಕಿಗೆ ಬಸವಣ್ಣವರ ವಚನ ಅಳವಡಿಸಿಕೊಂಡು ಜೀವನ ನಡೆಸಬೇಕೆಂದು ರಾಜಶೇಖರ ಹೊಕ್ರಾಣಿ ಹೇಳಿದರು.

ತಾಲೂಕಿನ ಕೇಸೂರು ಗ್ರಾಮದ ಶ್ರೀವಿಜಯ ಮಹಾಂತೇಶ್ವರ ಮಠದಲ್ಲಿ ನಡೆದ ಸಾಂಸ್ಕೃತಿಕ ನಾಯಕ ಜಗಜ್ಯೋತಿ ಬಸವೇಶ್ವರ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಮಹಾನ್ ಮಾನವತಾವಾದಿ ಬಸವಣ್ಣನವರು ಅನುಭವ ಮಂಟಪ ಸ್ಥಾಪಿಸುವ ಮೂಲಕ ಎಲ್ಲರನ್ನು ಸಮಾನವಾಗಿ ಕಂಡವರು. ಲಿಂಗ ಸಮಾನತೆ, ಜಾತಿರಹಿತ ಸಮಾಜ ನಿರ್ಮಾಣಕ್ಕೆ ಮುಂದಾದವರು. ಬಸವಣ್ಣನವರ ಸರಳತೆ, ವಿಚಾರಧಾರೆಗಳು ಎಲ್ಲರಿಗೂ ಅನುಕರಣೀಯವಾಗಿದ್ದು ಪ್ರತಿಯೊಬ್ಬರು ಮಕ್ಕಳಿಗೆ ವಚನ ಓದಿ ಅರ್ಥೈಸಿಕೊಳ್ಳುವುದನ್ನು ಕಲಿಸಬೇಕು ಎಂದರು.

ಯುವ ಮುಖಂಡ ಮಂಜುನಾಥ ಅಂಗಡಿ ಮಾತನಾಡಿ ಬಸವಣ್ಣನವರು ಅನುಭವ ಮಂಟಪ ನಿರ್ಮಿಸುವ ಮೂಲಕ ಮೊದಲ ಸಂಸತ್‌ ರಚಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ. ಸಮಾನತೆ, ಜಾತ್ಯತೀತ, ಸ್ತ್ರೀಸಮಾನತೆಯ ಸಲುವಾಗಿ ವಚನ ರಚಿಸುವ ಮೂಲಕ ಕ್ರಾಂತಿಯನ್ನೆ ಸೃಷ್ಟಿಸಿದ ಇವರು ಜಾತ್ಯತೀತ ನಾಯಕರಾಗಿದ್ದಾರೆ. 12ನೇ ಶತಮಾನದಲ್ಲೇ ಸಮ ಸಮಾಜ ನಿರ್ಮಾಣಕ್ಕೆ ಶ್ರಮಿಸಿದವರು. ಕಾಯಕವೇ ಕೈಲಾಸ ಎಂಬ ತತ್ವವನ್ನು ಜಗತ್ತಿಗೆ ಸಾರಿದ ದೈವ ಸ್ವರೂಪಿಯಾಗಿದ್ದಾರೆ ಎಂದರು.

ಈ ವೇಳೆ ವೀರಯ್ಯ ಮಳಿಮಠ, ಆನಂದಪ್ಪ ಸುರಪುರ, ಸಣ್ಣ ಈರಪ್ಪ ಅಂಗಡಿ, ಕರಬಸಪ್ಪ ಪಟ್ಟಣಶೆಟ್ಟರ, ಶಿವಾನಂದಯ್ಯ ಸರಗಣಾಚಾರಿ, ಗವಿಸಿದ್ದಯ್ಯ ವಿರಕ್ತಮಠ, ಗುಂಡಪ್ಪ ಹುಬ್ಬಳ್ಳಿ, ಬಸಲಿಂಗಪ್ಪ ಬೂದಿಹಾಳ, ಈರನಗೌಡ ಟೆಂಗುಂಟಿ, ಅಮರೇಶ ಹಾಗರಗಿ ಸೇರಿದಂತೆ ಅನೇಕರು ಇದ್ದರು.