ಸಾರಾಂಶ
ಕನ್ನಡಪ್ರಭ ವಾರ್ತೆ ವಿಜಯಪುರ
ಸಾಮಾಜಿಕ ರೋಗಗಳ ನಾಶಕ್ಕೆ ಅಂಬಿಗರ ಚೌಡಯ್ಯರ ವಚನಗಳು ಮದ್ದುಗಳಾಗಿವೆ ಎಂದು ಅಪರ ಜಿಲ್ಲಾಧಿಕಾರಿ ಸೊಮ್ಮಲಿಂಗ ಗೆಣ್ಣೂರು ಅಭಿಪ್ರಾಯ ಪಟ್ಟರು.ನಗರದ ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ನಿಜ ಶರಣ ಅಂಬಿಗರ ಚೌಡಯ್ಯ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಸಮಾಜದ ಅಂಕುಡೊಂಕುಗಳನ್ನು ನೇರ, ನಿಷ್ಠುರವಾಗಿ ತಮ್ಮ ವಚನಗಳಲ್ಲಿ ಅಂಬಿಗರ ಚೌಡಯ್ಯನವರು ತಿಳಿ ಹೇಳುವ ಮೂಲಕ ಸಮಾಜಕ್ಕೆ ಬೆಳಕಾಗಿದ್ದಾರೆ. ಮೂಢನಂಬಿಕೆಗಳು ಸಮಾಜಕ್ಕೆ ಆಘಾತಕಾರಿ, ಅವುಗಳ ವಿರುದ್ಧ ನೇರವಾಗಿ ಮಾತನಾಡಿದ ಶಿವಶರಣ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಮಹಿಳೆಯರು ಮತ್ತು ಪುರುಷ ಸಮಾನರೆಂದು ಪ್ರತಿಪಾದಿಸಿದ ತತ್ವಜ್ಞಾನಿ ವಚನಕಾರರಾಗಿದ್ದರು ಎಂದು ತಿಳಿಸಿದರು.
ಕಾಯಕ ದಾಸೋಹ, ಶಿವಯೋಗ ಸಾಧನೆಯ ಮೂಲಕ ವಚನಗಳನ್ನು ಕಟ್ಟಿ ಕೊಟ್ಟಿದ್ದಾರೆ. ಅವರ ೨೭೯ ವಚನಗಳು ದೊರಕಿದ್ದು, ಅವರ ವಚನಗಳಲ್ಲಿ ವೈಚಾರಿಕತೆ, ಇಷ್ಟಲಿಂಗ, ನಿಷ್ಠೆ, ಕಾಲಜ್ಞಾನ, ಸಂಕೀರ್ಣ ವಚನಗಳು, ಜೀವನ್ಮುಕ್ತಿ ಸ್ಥಿತಿ, ಆಧ್ಯಾತ್ಮಕತೆ ವಿಡಂಬನೆ, ಸೃಷ್ಟಿಯ ಕ್ರಮ ಸೇರಿದಂತೆ ಹಲವು ವಿಶೇಷತೆಗಳನ್ನು ಅವರ ವಚನಗಳಲ್ಲಿ ಕಾಣಬಹುದು ಎಂದರು.ಉಪನ್ಯಾಸ ನೀಡಿದ ಸಾಹಿತಿ ಸತ್ಯಣ್ಣ ಹಡಪದ ಮಾತನಾಡಿ, ಅಂಬಿಗರ ಚೌಡಯ್ಯ ನಿಷ್ಠುರವಾದಿ, ನಿರ್ಭಯವಾದಿ ವಚನಕಾರರಾಗಿದ್ದರು. ೧೨ನೇ ಶತಮಾನದಲ್ಲಿಯೇ ಸಮಾನತೆಗಾಗಿ, ಸಾಮಾಜಿಕ ನ್ಯಾಯಕ್ಕಾಗಿ ಹೋರಾಡಿದ ಶ್ರೇಷ್ಠ ಶರಣ. ಕಂದಾಚಾರಗಳ ಕುರಿತು ತಮ್ಮ ವಚನಗಳಲ್ಲಿ ಚಿತ್ರಿಸಿದ್ದಾರೆ ಎಂದು ಹೇಳಿದರು.
ಚೌಡಯ್ಯನವರ ಸಂಘದ ಜಿಲ್ಲಾಧ್ಯಕ್ಷ ಸಾಹೇಬ್‌ಗೌಡ ಬಿರಾದಾರ ಮಾತನಾಡಿ, ಶರಣರಲ್ಲಿಯೇ ನಿಜಶರಣ ಎಂಬ ಬಿರುದು ಚೌಡಯ್ಯನವರಿಗಿತ್ತು. ಕಬ್ಬಿಣದ ಕಡಲೇಗಳಂತಹ ವಚನಗಳನ್ನು ಸರಳವಾಗಿ ಬಿಡಿಸುತ್ತಿದರು ಎಂದು ಚೌಡಯ್ಯನವರ ಕುರಿತು ಹೇಳಿದರು.ಜಿಲ್ಲಾ ಶಸ್ತ್ರಚಿಕಿತ್ಸಾಧಿಕಾರಿ ಶಿವಾನಂದ ಮಾಸ್ತಿಹೊಳಿ, ಜಿಪಂ ಯೋಜನಾ ಅಂದಾಜು ಮತ್ತು ಮೌಲ್ಯಮಾಪನ ಅಧಿಕಾರಿ ಎ.ಬಿ.ಅಲ್ಲಾಪುರ, ಸಮಾಜದ ಮುಖಂಡರಾದ ಭರತ ಕೋಳಿ, ಶಿವಾನಂದ ಅಂಬಿಗರ, ಗುರುನಾಥ್ ವಾಲಿಕರ್, ಮಹಾದೇವ ಗದ್ಯಾಳ, ಅಶೋಕ ಅಂಬಿಗರ, ಅಪ್ಪು ಕೊಲಕಾರ ಪ್ರವೀಣ ಗಣಿ, ದಾನಮ್ಮ ಕೋಳಿ, ರೇಣುಕಾ ಮಣ್ಣಿಕೆರಿ, ಪೂಜಾ ಕೋಳಿ, ಹನಮಂತ ನಾಯ್ಕೊಡಿ, ರೂಪಾ, ಕವಿತಾ ತಳವಾರ, ಅಣಪೂರ್ಣಾ ಕೋಳಿ, ಸಂತೋಷ ತಟಗಾರ, ಹಣುಮಂತ ಜಕಣ್ಣವರ, ಪರಶುರಾಮ ಅಳಗುಂಡಿ, ಸೋಮಣಗೌಡ ಕಲ್ಲೂರು, ಭೀಮರಾಯ ಜಿಗಜಿನಗಿ, ದೇವೆಂದ್ರ ಮಿರೇಕರ, ಲಕ್ಷ್ಮಣ ಜಾವಡಗಿ, ಸಿ.ಎಸ್.ಕಮತಗಿ, ಪಿ.ಕೆ.ಚೌದರಿ ಮುಂತಾದವರು ಇದ್ದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಸಂತೋಷ ಬೋವಿ ಸ್ವಾಗತಿಸಿದರು. ಸುಭಾಸ ಕನ್ನೂರ ನಿರೂಪಿಸಿದರು.