ವಚನ ಸಾಹಿತ್ಯ ಸಮುದ್ರ ರೂಪಿಯಾಗಿ ಆಧುನಿಕ ಸಾಹಿತ್ಯದಲ್ಲಿ ಸೇರಿದೆ: ಬಸವಶಾಂತಲಿಂಗ ಸ್ವಾಮೀಜಿ

| Published : Apr 21 2024, 02:21 AM IST

ವಚನ ಸಾಹಿತ್ಯ ಸಮುದ್ರ ರೂಪಿಯಾಗಿ ಆಧುನಿಕ ಸಾಹಿತ್ಯದಲ್ಲಿ ಸೇರಿದೆ: ಬಸವಶಾಂತಲಿಂಗ ಸ್ವಾಮೀಜಿ
Share this Article
  • FB
  • TW
  • Linkdin
  • Email

ಸಾರಾಂಶ

ದಿನಕರ ದೇಸಾಯಿ, ಮಹಾದೇವ ಬಣಕಾರ ಹಾಗೂ ಜಯದೇವಿ ತಾಯಿ ಲಿಗಾಡೆ ಆಧುನಿಕ ವಚನಕಾರರು ಕನ್ನಡ ಸಾಹಿತ್ಯವನ್ನು ಶ್ರೀಮಂತ ಗೊಳಿಸಿದವರು ಎಂದು ಹೊಸಮಠದ ಬಸವಶಾಂತಲಿಂಗ ಸ್ವಾಮೀಜಿ ಹೇಳಿದರು

ಕನ್ನಡಪ್ರಭ ವಾರ್ತೆ ಹಾವೇರಿ

ಸಮುದ್ರಕ್ಕೆ ಪೂಜಿಸಿದರೆ ಸಕಲ ನದಿಗಳನ್ನು ಪೂಜಿಸಿದಂತೆ ಎಂಬಂತೆ ಬಸವಾದಿ ಶರಣರ ವಚನ ಸಾಹಿತ್ಯ ಈಗಲೂ ಸಮುದ್ರ ರೂಪಿಯಾಗಿ ಆಧುನಿಕ ಸಾಹಿತ್ಯದಲ್ಲಿ ತುಳುಕುತ್ತಿದೆ ಎಂದು ಹೊಸಮಠದ ಬಸವಶಾಂತಲಿಂಗ ಸ್ವಾಮೀಜಿ ಹೇಳಿದರು.

ನಗರದ ಬಸವೇಶ್ವರ ಶಿಕ್ಷಣ ಮಹಾವಿದ್ಯಾಲಯದಲ್ಲಿ ಬಸವೇಶ್ವರ ಶಿಕ್ಷಣ ಮಹಾವಿದ್ಯಾಲಯ, ಜಿಲ್ಲಾ ಮತ್ತು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಸಾಹಿತಿ ಕಲಾವಿದರ ಬಳಗದ ಆಶ್ರಯದಲ್ಲಿ ಏರ್ಪಡಿಸಿದ್ದ ಆಧುನಿಕ ಕನ್ನಡದ ವಚನತ್ರಯರು ಎಂಬ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದರು.

ದಿನಕರ ದೇಸಾಯಿ, ಮಹಾದೇವ ಬಣಕಾರ ಹಾಗೂ ಜಯದೇವಿ ತಾಯಿ ಲಿಗಾಡೆ ಆಧುನಿಕ ವಚನಕಾರರು ಕನ್ನಡ ಸಾಹಿತ್ಯವನ್ನು ಶ್ರೀಮಂತ ಗೊಳಿಸಿದವರು. ಕೇವಲ ಕವಿಗಳಾಗದೇ ಕಲಿಗಳೂ ಆಗಿದ್ದ ವಚನ ತ್ರಯರು ಕರ್ನಾಟಕ ಏಕೀಕರಣವಾಗಲು ಕಾರಣರಾದರು ಎಂದರು.

ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಲಿಂಗಯ್ಯ ಹಿರೇಮಠ ಮಾತನಾಡಿ, ಮರೆತುಹೋದ ಕನ್ನಡದ ಕಿಚ್ಚನ್ನು ಮತ್ತೆ ಹೊತ್ತಿ ಬೆಳಗಿಸಿ ಮುಂದಿನ ಪೀಳಿಗೆಗೆ ಪರಿಚಯಸಬೇಕಾಗಿದೆ. ನಾಡು ರೂಪಗೊಳ್ಳಲು ದಿನಕರ ದೇಸಾಯಿ, ಬಣಕಾರ ಹಾಗೂ ಲಿಗಾಡೆಯಂತವರ ಕಾಣಿಕೆ ದೊಡ್ಡದಿದೆ ಎಂದರು.

ಮೊದಲು ಚೌಪದಿಯ ಚಮತ್ಕಾರಿಕ ಕವಿ ದಿನಕರ ದೇಸಾಯಿ ಕುರಿತು ಉಪನ್ಯಾಸ ನೀಡಿದ ಪ್ರಾಚಾರ್ಯ ಸೋಮನಾತ. ಡಿ. ಅವರು, ದೇಸಾಯಿಯವರು ಐದು ಸಾವಿರ ಚುಟುಕುಗಳನ್ನು, ಒಂದನೂರ ಒಂಬತ್ತು ಪುಸ್ತಕಗಳನ್ನು ಬರೆದವರು. ಹೊಸ ಗನ್ನಡವನ್ನು ಕಟ್ಟುತ್ತ. ತಮ್ಮ ಸಮಾಜಮುಖಿ ಚಿಂತನೆಯಿಂದ ಪ್ರಭುತ್ವಕ್ಕೆ ಕಣ್ಣಾದವರು ಎಂದರು.

ಸಮಾಜಮುಖಿ ವಚನಕಾರ, ನೆಲದ ಪ್ರತಿಭೆ, ಮಹಾದೇವ ಬಣಕಾರರ ಸಾಹಿತ್ಯ ಮತ್ತು ಬದುಕು ಕುರಿತು ಆರ್.ಸಿ. ನಂದಿಹಳ್ಳಿ ಮಾತನಾಡಿ, ಬಣಕಾರರದು ಬಹುಮುಖ ವ್ಯಕ್ತಿತ್ವ. ಕಾವ್ಯ, ನಾಟಕ, ವಚನ ಸಾಹಿತ್ಯ ಸಂಶೋಧನೆಗಳ ಮೂಲಕ ಪ್ರಸಿದ್ಧರಾದವರು ಬಣಕಾರರು. ಅವರ ಆಂಗ್ಲರ ಆಡಳಿತದಲ್ಲಿ ಕನ್ನಡ ಕೃತಿ ಎಲ್ಲ ಕಾಲಕ್ಕೂ ಆಕರ ಗ್ರಂಥವಾಗಿದೆ ಎಂದರು.

ಗಡಿ ಕನ್ನಡತಿ ಜಯದೇವಿ ತಾಯಿ ಲಿಗಾಡೆ ಅವರ ಬದುಕು ಬರಹ ಕುರಿತು ಹಿರಿಯ ಲೇಖಕಿ ಲೀಲಾವತಿ ಪಾಟೀಲ ಮಾತನಾಡಿ, ಗಡಿಭಾಗದಲ್ಲಿ ನಾಲ್ಕನೂರು ಶಿಕ್ಷಕರನ್ನು ನೇಮಿಸಿ ಕನ್ನಡ ಕಟ್ಟುತ್ತ ನಾಲ್ಕು ಸಾವಿರ ಪದ್ಯಗಳ ಮೂಲಕ ಸಿದ್ದರಾಮೇಶ್ವರ ಚರಿತೆ ಬರೆದ ದೊಡ್ಡ ಲೇಖಕಿ. ಗಡಿಯಿಂದ ಕನ್ನಡದ ಕೂಗು ಕೊಟ್ಟ ಆಧುನಿಕ ವಚನಕಾರತಿ ಎಂದರು.

ಕಾರ್ಯಕ್ರಮದಲ್ಲಿ ಲೇಖಕಿ ನೇತ್ರಾವತಿ ಅಂಗಡಿ, ಸಾಹಿತ್ಯ ಪರಿಷತ್ತಿನ ಕಾರ್ಯದರ್ಶಿ ಈರಣ್ಣ ಬೆಳವಡಿಗೆ ಇದ್ದರು. ವಿಚಾರ ಸಂಕಿರಣದಲ್ಲಿ ರೇಣುಕಾ ಗುಡಿಮನಿ, ಜುಬೇದಾನಾಯಕ, ಮಹ್ಮದಅಲಿ ಸಂಕಲಾಪುರ ಪಾಲ್ಗೊಂಡಿದ್ದರು.