ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರು
ವಚನ ಸಾಹಿತ್ಯ ಸಂದೇಶವು ಲೌಕಿಕ ಜೀವನದಲ್ಲಿ ಆಧ್ಯಾತ್ಮಿಕ ಮಾರ್ಗ ಬೆಳೆಸಿಕೊಳ್ಳಲು ಸಹಕಾರಿ ಎಂದು ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ತಿಳಿಸಿದರು.ನಗರದ ಮುಕ್ತ ಗಂಗೋತ್ರಿ ಕಾವೇರಿ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ಮುಕ್ತ ವಿವಿ ಕನ್ನಡ ಅಧ್ಯಯನ ಮತ್ತು ಸಂಶೋಧನಾ ವಿಭಾಗ, ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ನಗರ ಘಟಕ ಮತ್ತು ಕದಳಿ ಮಹಿಳಾ ವೇದಿಕೆ ಸಂಯುಕ್ತವಾಗಿ ಮಂಗಳವಾರ ಆಯೋಜಿಸಿದ್ದ ಶಿವಶರಣೆಯರು- ಸಮಲಕಾಲೀನ ಸಂದರ್ಭ ಕುರಿತು ಒಂದು ದಿನದ ರಾಜ್ಯ ಮಟ್ಟದ ವಿಚಾರ ಸಂಕಿರಣವನ್ನು ಅವರು ಉದ್ಘಾಟಿಸಿ ಮಾತನಾಡಿದರು.
ಶಿವಶರಣರು, ಶರಣೆಯರ ವಚನಗಳು ಇಂದಿನ ಜೀವನಕ್ಕೂ ಪ್ರಸ್ತುವಾಗಿದ್ದು, ಅವನ್ನು ಅರಿಯಬೇಕಾದ ಅನಿವಾರ್ಯತೆ ಇದೆ. 12ನೇ ಶತಮಾನದಲ್ಲಿ ಬಸವಣ್ಣ, ಅಲ್ಲಮ, ಅಕ್ಕ ಮಹಾದೇವಿ ಅಲ್ಲದೆ ಅನುಭವ ಮಂಟಪಕ್ಕೆ ಬಂದವರಿಗೆ ತಮ್ಮ ಮನಸ್ಸಿನ ಆಧ್ಯಾತ್ಮಿಕ ಅನುಭವ ಹಂಚಿಕೊಳ್ಳಲು ಮುಕ್ತ ಸ್ವಾತಂತ್ರ್ಯ ಅವಕಾಶವಿತ್ತು ಎಂದು ಅವರು ಹೇಳಿದರು.ಮುಕ್ತವಾಗಿ ಮಾತನ್ನು ಹಂಚಿಕೊಂಡಾಗ ಮನುಷ್ಯನ ಜ್ಞಾನದ ವಿಚಾರ ಬೆಳೆಯುತ್ತದೆ. ನಮಗೆ ಎಲ್ಲಾ ತಿಳಿದಿದೆ ಅಂದುಕೊಂಡಿರುತ್ತೇವೆ. ಆದರೆ, ಮುಕ್ತವಾಗಿ ಚರ್ಚಿಸಿದಾಗ ನಮ್ಮ ತಿಳವಳಿಕೆ ಶೂನ್ಯ ಎಂಬುದು ಗೊತ್ತಾಗುತ್ತದೆ. ಇಂತಹ ವಿಚಾರ ಸಂಕಿರಣದ ಭಾಗವಹಿಸುವುದರಿಂದ ಓದಿನ ವಿಸ್ತಾರ ಬೆಳೆಸಿ ಅಧ್ಯಯನದಲ್ಲಿ ತೊಡಗಿಸಿಕೊಳ್ಳಲು ಸಾಧ್ಯ. ಹೆಚ್ಚಿನ ಭಾಗವಹಿಸುವಿಕೆಯು ಜ್ಞಾನವಂತರಾಗಲು ಸಾಧ್ಯ ಎಂದು ಅವರು ತಿಳಿಸಿದರು.ರಾಜ್ಯ ಮುಕ್ತ ವಿವಿ ಕುಲಪತಿ ಪ್ರೊ. ಶರಣಪ್ಪ ವಿ. ಹಲಸೆ, ಕುಲಸಚಿವ ಪ್ರೊ.ಕೆ.ಬಿ. ಪ್ರವೀಣ, ಡೀನ್ ಪ್ರೊ.ಎಂ. ರಾಮನಾಥನಾಯ್ಡು, ಪರೀಕ್ಷಾಂಗ ಕುಲಸಚಿವ ಡಾ.ಎಚ್. ವಿಶ್ವನಾಥ್, ಹಣಕಾಸು ಅಧಿಕಾರಿ ಡಾ.ಎಸ್. ನಿರಂಜನ್ ರಾಜ್, ಕನ್ನಡ ಅಧ್ಯಯನ ಮತ್ತು ಸಂಶೋಧನಾ ವಿಭಾಗದ ಅಧ್ಯಕ್ಷೆ ಪ್ರೊ.ಟಿ.ಎಂ. ಗೀತಾಂಜಲಿ, ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ನಗರ ಘಟಕದ ಅಧ್ಯಕ್ಷ ಮ.ಗು. ಸದಾನಂದಯ್ಯ, ಕದಳಿ ಮಹಿಳಾ ವೇದಿಕೆ ಅಧ್ಯಕ್ಷೆ ಶಾರದಾ ಶಿವಲಿಂಗಸ್ವಾಮಿ, ಕಾರ್ಯಕ್ರಮ ಸಂಯೋಜಕಿ ಡಾ. ಜ್ಯೋತಿ ಶಂಕರ್ ಇದ್ದರು.
ಬದುಕಿನ ಸೂಕ್ಷ್ಮತೆಗಳು ವಚನಗಳಲ್ಲಿವೆ:ಹುಣಸೂರು ಡಿ. ದೇವರಾಜ ಅರಸು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕ ಹಾಗೂ ಸಾಹಿತಿ ಪ್ರೊ.ಬಿ.ವಿ. ವಸಂತಕುಮಾರ್ ಮಾತನಾಡಿ, ಮಾತನ್ನು ವಚನವನ್ನಾಗಿಸಿದ್ದು ವಚನ ಚಳುವಳಿ. ವಚನಗಳಲ್ಲಿ ನಡೆ- ನುಡಿ ಸಿದ್ಧಾಂತ ಇದೆ. ಅದರೊಳಗೆ ಒಂದಾಗದವರು ವಚನ ಓದಬಾರದು ಎನ್ನುತ್ತಾರೆ ಎಂದರು.ಎಡ- ಬಲ ವಾದದಿಂದ ಸತ್ಯ ಕಳೆದುಕೊಂಡಿದ್ದಾರೆ. ಜಡ- ಚೇತನವಾದ ಇರುವುದು, ಸಂಘರ್ಷವಿಲ್ಲದೆ ಸಾಮರಸ್ಯವಲ್ಲ. ಸಂಘರ್ಷವೇ ಸಾಮರಸ್ಯವಲ್ಲ. ಮೊಸರನ್ನು ಕಡಿಯಬೇಕು, ಆದರೆ ಮಡಿಕೆ ಒಡೆಯಬಾರದು ಎನ್ನುವಂತಿರಬೇಕು. ನಾನು ದೊಡ್ಡವನಾಗಬೇಕು. ಎದುರಾಳಿಯನ್ನು ಸೋಲಿಸಬೇಕೆಂಬ ಕಿಚ್ಚಿನಿಂದ ಹೀಗಾಗುತ್ತಿದೆ. ಬದುಕಿನ ಸೂಕ್ಷ್ಮತೆಗಳ ಬಗ್ಗೆ ವಚನಗಳು ತಿಳಿಸುತ್ತವೆ ಎಂದು ಅವರು ಹೇಳಿದರು.ಭಕ್ತಿ ಹುಟ್ಟಲು ಕಾಯಕ ಇರಲೇಬೇಕು. ದೇವಾಲಯದ ಪೂಜೆಯಿಂದ ಹುಟ್ಟುವುದಿಲ್ಲ, ಕಾಯಕದಿಂದ ಕೈಲಾಸ ಎಂಬುದನ್ನು ಪ್ರತಿಪಾದಿಸಿದ್ದಾರೆ. ವ್ರತ ಎಂದರೆ ಮನೋವಿಕಾರವಾಗದಂತೆ ಇರಲು ಕಟ್ಟಿರುವ ಗೂಟ. ಪಾಂಡಿತ್ಯದ ಅನಾವರಣ ಆಗುತ್ತಿದೆ. ವಿದ್ಯಾರ್ಥಿಗಳ ವಿಕಾಸ ಆಗುತ್ತಿದೆಯೇ ಶಿಕ್ಷಣದಲ್ಲಿ ಎಂಬ ಬಗ್ಗೆ ಪ್ರಶ್ನಿಸಿಕೊಳ್ಳಬೇಕಿದೆ ಎಂದು ಅವರು ತಿಳಿಸಿದರು.
‘ಯಾವುದು ಸರ್ವಕಾಲಿಕವೊ ಅದು ಎಲ್ಲಾ ಕಾಲಕ್ಕೂ ಸಮಕಾಲಿನವಾಗಿರುತ್ತದೆ. ಇದಕ್ಕೆ ವಚನಗಳು ಪೂರಕವಾದವು. ತುಂಡಾಗುತ್ತಿರುವುದು ದುಃಖಕ್ಕೆ ಕಾರಣವಾಗುತ್ತಿದೆ. ಒಂದಾಗುವುದೇ ಸಂತೋಷಕ್ಕೆ ಕಾರಣವಾಗುವುದು. ವಚನ ಸಾಹಿತ್ಯವು ದೊಡ್ಡದಾಗಲು ಹುಟ್ಟಿಕೊಂಡಿದ್ದಲ್ಲ, ಬದುಕನ್ನು ದೊಡ್ಡದಾಗಿಸಲು ಹುಟ್ಟಿದ್ದು.’- ಪ್ರೊ.ಬಿ.ವಿ. ವಸಂತಕುಮಾರ್, ಸಾಹಿತಿ