ಮನಸ್ಸಿನ ಮಾಲಿನ್ಯ ನಿವಾರಣೆಗೆ ವಚನ ಸಾಹಿತ್ಯವೇ ಮಾರ್ಗಸೂಚಿ: ಡಾ.ಮಲ್ಲಿಕಾರ್ಜುನ ಸ್ವಾಮೀಜಿ

| Published : May 15 2024, 01:40 AM IST

ಮನಸ್ಸಿನ ಮಾಲಿನ್ಯ ನಿವಾರಣೆಗೆ ವಚನ ಸಾಹಿತ್ಯವೇ ಮಾರ್ಗಸೂಚಿ: ಡಾ.ಮಲ್ಲಿಕಾರ್ಜುನ ಸ್ವಾಮೀಜಿ
Share this Article
  • FB
  • TW
  • Linkdin
  • Email

ಸಾರಾಂಶ

ಕಳ್ಳರು ಕದಿಯಲಾಗದ, ಅಣ್ಣ-ತಮ್ಮಂದಿರು ಪಾಲು ಕೇಳಲಾಗದ, ಬಳಸಿದಷ್ಟು ವ್ಯಯವಾಗದ ಒಳ್ಳೆಯ ವಿದ್ಯೆ, ಜ್ಞಾನ ಸಂಪತ್ತು ಬಸವಾದಿ ಶಿವಶರಣರ ವಚನ ಸಾಹಿತ್ಯವೇ ಆಗಿದ್ದು, ಮನಸ್ಸಿನ ಮೈಲಿಗೆ ತೊಳೆದು ನಮ್ಮ ಬಾಳಿಗೆ ಬೆಳಕು ನೀಡುವ ಸಾಧನವಾಗಿದೆ. ಆಂತಹ ವಚನ ಸಾಹಿತ್ಯವನ್ನು ಪ್ರತಿಯೊಬ್ಬ ಶಿವಶರಣ ನಿತ್ಯವು ಬಾಳಿನಲ್ಲಿ ಅಳವಡಿಸಿಕೊಂಡು ಬದುಕಬೇಕಿದೆ.

ಕನ್ನಡಪ್ರಭ ವಾರ್ತೆ ಹೊಸನಗರ

ನೈಸರ್ಗಿಕ ಸಂಪತ್ತುಗಳ ಮೇಲಿನ ಮಾನವನ ನಿರಂತರ ದಾಳಿಯೇ ಇಂದಿನ ಪ್ರಕೃತಿ ವಿಕೋಪಕ್ಕೆ ಕಾರಣ ಎಂದು ಆನಂದಪುರ ಮಠದ ಶ್ರೀ ಡಾ.ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ ಹೇಳಿದರು.

ಬಸವ ಜಯಂತಿ ಹಾಗೂ ಲಿಂಗೈಕ್ಯ ಶ್ರೀ ಮ.ನಿ.ಪ್ರ ಸಿದ್ದಲಿಂಗ ಮಹಾಶಿವಯೋಗಿ ಪುಣ್ಯಸ್ಮರಣೆ ಅಂಗವಾಗಿ ತಾಲೂಕಿನ ಮೂಲೆಗದ್ದೆ ಮಠದ ಶ್ರೀ ಸದಾನಂದ ಶಿವಯೋಗಾಶ್ರಮದಲ್ಲಿ ಹಮ್ಮಿಕೊಂಡಿದ್ದ ಇಷ್ಟಲಿಂಗ ಪೂಜೆ ಬಳಿಕ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿ, ಜಲ-ವಾಯು ಮಾಲಿನ್ಯದಂತೆ ಮನುಷ್ಯನ ಮನಸ್ಸು ಕೂಡ ಕಲುಷಿತಗೊಳ್ಳುತ್ತಿದೆ. ಆದರೆ, ಮನಸ್ಸಿನ ಮಾಲಿನ್ಯ ತೊಡೆದು ಹಾಕಲು ವಿಶ್ವಗುರು ಬಸವಣ್ಣಾದಿ ಶಿವಶರಣರ ವಚನ ಸಾಹಿತ್ಯವೇ ಸೂಕ್ತ ಮಾರ್ಗ ಸೂಚಿಯಾಗಿದೆ ಎಂದರು.

ಮನಸ್ಸು ಮಾಲಿನ್ಯವಾದಲ್ಲಿ ಕೂಡಲ ಸಂಗಮ ದೇವರ ಶರಣರಲ್ಲಿ ಅನುಭಾವ ಹೊಂದಬೇಕು ಎನ್ನುವ ಮೂಲಕ ಬಸವಣ್ಣ ವಿಶ್ವಮಾನ್ಯರಾದರು. ಮಠ-ಮಾನ್ಯಗಳಲ್ಲಿ ನಡೆಯುವ ಹಲವು ಅನುಭವ ಗೋಷ್ಠಿಗಳಲ್ಲಿ ಭಕ್ತರು ಪಾಲ್ಗೊಂಡು ಮನಮೈಲಿಗೆ ನಿವಾರಿಸಿಕೊಳ್ಳಲು ಇದು ಏಕೈಕ ಪರಿಹಾರ ಎಂದರು.

ಕಳ್ಳರು ಕದಿಯಲಾಗದ, ಅಣ್ಣ-ತಮ್ಮಂದಿರು ಪಾಲು ಕೇಳಲಾಗದ, ಬಳಸಿದಷ್ಟು ವ್ಯಯವಾಗದ ಒಳ್ಳೆಯ ವಿದ್ಯೆ, ಜ್ಞಾನ ಸಂಪತ್ತು ಬಸವಾದಿ ಶಿವಶರಣರ ವಚನ ಸಾಹಿತ್ಯವೇ ಆಗಿದ್ದು, ಮನಸ್ಸಿನ ಮೈಲಿಗೆ ತೊಳೆದು ನಮ್ಮ ಬಾಳಿಗೆ ಬೆಳಕು ನೀಡುವ ಸಾಧನವಾಗಿದೆ. ಆಂತಹ ವಚನ ಸಾಹಿತ್ಯವನ್ನು ಪ್ರತಿಯೊಬ್ಬ ಶಿವಶರಣ ನಿತ್ಯವು ಬಾಳಿನಲ್ಲಿ ಅಳವಡಿಸಿಕೊಂಡು ಬದುಕಬೇಕಿದೆ ಎಂದರು.

ಇಡೀ ಮನುಕುಲವನ್ನು ಸಮಗ್ರವಾಗಿ ಸಂಘಟಿಸಿ ಪ್ರತಿ ಸಮಾಜದ ನಿರ್ಮಾಣಕ್ಕೆ ಬಸವಣ್ಣ ಕಟಿಬದ್ಧರಾದವರು. ಹುಟ್ಟಿನಿಂದ ಜಾತಿಯಲ್ಲ ಎಂದು ಪ್ರತಿಪಾದಿಸಿದ ಅವರು ಸಕಲ ಜೀವಾತ್ಮರಿಗೂ ಲೇಸು ಬಯಸಿದರು. ಆದರೆ, ಇಂದು ಕಾಯಕಗಳೆಲ್ಲ ಜಾತಿಗಳಾಗಿರುವುದು ವಿಷಾದನೀಯ ಎಂದ ಶ್ರೀಗಳು ಎಲ್ಲಾ ಕಾಯಕ ನಿರತರ ಒಂದೇ ವೇದಿಕೆಯಲ್ಲಿ ಸಂಘಟಿಸುವ ಮೂಲಕ ಭಕ್ತಿಪಂಥಕ್ಕೆ ನಾಂದಿ ಹಾಡಿದ ಮಹಾಪುರುಷ ಬಸವಣ್ಣ ಎಂದು ಹೇಳಿದರು.

ಬೆಳಗ್ಗೆ ಶೀ ಮಠದ ಆವರಣದಲ್ಲಿ ನೂರಾರು ಭಕ್ತರು ಇಷ್ಟಲಿಂಗ ಪೂಜೆ, ರುದ್ರಾಕ್ಷಿ ಧಾರಣೆ ಬಳಿಕ, ರೋಟರಿ ಕ್ಲಬ್ ಆಶ್ರಯದಲ್ಲಿ ರಕ್ತದಾನ ಶಿಬಿರ ಏರ್ಪಡಿಸಿ 35 ಯೂನಿಟ್ ರಕ್ತ ಸಂಗ್ರಹಿಸಲಾಯಿತು. ಈ ವೇಳೆ ನೂತನವಾಗಿ ನಿರ್ಮಾಣವಾಗಿದ್ದ ಭೋಜನಾಲಯ ಕಟ್ಟಡ ಲೋಕಾರ್ಪಣೆಗೊಂಡಿತು. ಸಮಾಜದ ವಿವಿಧ ಸಾಧಕರ ಸನ್ಮಾನಿಸಲಾಯಿತು. 50 ವರ್ಷದ ವೈವಾಹಿಕ ಜೀವನ ಪೂರೈಸಿದ ಸಮಾಜದ ಹಿರಿಯರಾದ ಹರತಾಳು ಜಯಶೀಲಪ್ಪಗೌಡ ದಂಪತಿಯ ಮಠದ ವತಿಯಿಂದ ಸನ್ಮಾನಿಸಿ ಆಶೀರ್ವದಿಸಲಾಯಿತು.

ಕಾರ್ಯಕ್ರಮದಲ್ಲಿ ಮೂಲೆಗದ್ದೆ ಮಠದ ಪೀಠಾಧ್ಯಕ್ಷ ಶ್ರೀ ಅಭಿನವ ಚನ್ನಬಸವ ಸ್ವಾಮೀಜಿ, ಜಡೆ ಮಠದ ಶ್ರೀ ಸಿದ್ದ ವೃಷಭೇಂದ್ರ ಸ್ವಾಮೀಜಿ, ಪ್ರಮುಖರಾದ ಬಿ.ಜೆ. ಚಂದ್ರಮೌಳಿ, ಮಲ್ಲಿಕಾರ್ಜುನ ಹಕ್ರೆ, ಜಬಗೋಡು ಹಾಲಪ್ಪ, ಕೆ.ಎಸ್.ಪ್ರಶಾಂತ್, ಕಲ್ಯಾಣಪ್ಪಗೌಡ, ಚಿಕ್ಕಮಣತಿ ಯುವರಾಜ್ ಸೇರಿ ಹಲವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.