ವಚನ ಸಾಹಿತ್ಯ ಅಪಮೌಲ್ಯ ಬೇಡ: ಡಾ.ವೀರಣ್ಣ ರಾಜೂರ

| Published : Aug 04 2024, 01:17 AM IST

ಸಾರಾಂಶ

ವಚನ ಸಾಹಿತ್ಯವನ್ನು ಅಪಮೌಲ್ಯಗೊಳಿಸುವ ಕೆಲಸ ಇಂದು ನಡೆಯುತ್ತಿದೆ. ವಚನ ಸಾಹಿತ್ಯಕ್ಕೆ, ವಚನಗಳಿಗೆ ಯಾವುದೇ ಕಾಲಕ್ಕೂ, ಎಂಥದ್ದೇ ಪರಿಸ್ಥಿತಿಯಲ್ಲೂ ಸಾವಿಲ್ಲ ಎಂದು ಆರೂಢ ದಾಸೋಹಿ ಶರಣ ಮಾಗನೂರು ಬಸಪ್ಪ-2024ರ ಪ್ರಶಸ್ತಿ ಪುರಸ್ಕೃತ ವಚನ ಸಾಹಿತ್ಯ ಸಂಶೋಧಕ ಧಾರವಾಡದ ಡಾ.ವೀರಣ್ಣ ಬಿ. ರಾಜೂರ ಹೇಳಿದರು.

ಕನ್ನಡಪ್ರಭ ವಾರ್ತೆ, ದಾವಣಗೆರೆ

ವಚನ ಸಾಹಿತ್ಯವನ್ನು ಅಪಮೌಲ್ಯಗೊಳಿಸುವ ಕೆಲಸ ಇಂದು ನಡೆಯುತ್ತಿದೆ. ವಚನ ಸಾಹಿತ್ಯಕ್ಕೆ, ವಚನಗಳಿಗೆ ಯಾವುದೇ ಕಾಲಕ್ಕೂ, ಎಂಥದ್ದೇ ಪರಿಸ್ಥಿತಿಯಲ್ಲೂ ಸಾವಿಲ್ಲ ಎಂದು ಆರೂಢ ದಾಸೋಹಿ ಶರಣ ಮಾಗನೂರು ಬಸಪ್ಪ-2024ರ ಪ್ರಶಸ್ತಿ ಪುರಸ್ಕೃತ ವಚನ ಸಾಹಿತ್ಯ ಸಂಶೋಧಕ ಧಾರವಾಡದ ಡಾ.ವೀರಣ್ಣ ಬಿ. ರಾಜೂರ ಹೇಳಿದರು.

ನಗರದ ಕುವೆಂಪು ಕನ್ನಡ ಭವನದಲ್ಲಿ ಶನಿವಾರ ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಘಟಕ ಹಾಗೂ ಮಾಗನೂರು ಬಸಪ್ಪ ಪ್ರತಿಷ್ಟಾನ ಟ್ರಸ್ಟ್‌ ವತಿಯಿಂದ ನೀಡುವ ಆರೂಢ ದಾಸೋಹಿ ಶರಣ ಮಾಗನೂರು ಬಸಪ್ಪ ಪ್ರಶಸ್ತಿ-2024 ಸ್ವೀಕರಿಸಿ ಮಾತನಾಡಿದ ಅವರು, ಶರಣರು, ವಚನಕಾರರ ಬಳುವಳಿಯಾದ, ಸರ್ವಕಾಲಕ್ಕೂ ಮಾನವ ಕುಲಕ್ಕೆ ದಾರಿದೀಪವಾದ, ಅಮೃತ ನುಡಿಗಳಾದ ವಚನಗಳನ್ನು ಅಪಮೌಲ್ಯಗೊಳಿಸುವ ಕೆಲಸಕ್ಕೆ ಯಾರೂ ಕೈ ಹಾಕಬಾರದು ಎಂದರು.

ನಿಜವಾದ ಬಂಡಾಯಗಾರರೆಂದರೆ ಅದು ಶರಣರು ಮತ್ತು ವಚನಕಾರರು ಎಂಬುದೇ ಬಹುತೇಕರಿಗೆ ಇಂದಿಗೂ ತಿಳಿದಿಲ್ಲ. ಶಿಕ್ಷಣ, ಸಾಹಿತ್ಯ, ಸಮಾಜ ಸೇವೆ, ಕಾಯಕನಿಷ್ಠೆ, ಧರ್ಮನಿಷ್ಠೆ ಹೀಗೆ ಇವೆಲ್ಲ ವಿಶೇಷಗಳ ಸಂಗಮವಾಗಿದ್ದ ಮಾಗನೂರು ಬಸಪ್ಪನವರ ಹೆಸರಿನಲ್ಲಿ ಪ್ರತಿ ವರ್ಷ ಪ್ರಶಸ್ತಿ ನೀಡುತ್ತಿರುವುದು ಸಂತಸದ ಸಂಗತಿ. ಈ ಮಹನೀಯರ ಹೆಸರಿನ ಪ್ರಶಸ್ತಿಯನ್ನು ತುಂಬಾ ಅಭಿಮಾನದಿಂದ ಪ್ರಸಾದದ ರೂಪದಲ್ಲಿ ಸ್ವೀಕರಿಸಿದ್ದೇನೆ. ಈ ಮೂಲಕ ವಚನ ಸಾಹಿತ್ಯ ಕ್ಷೇತ್ರದಲ್ಲಿ ಕೆಲಸ ಮಾಡಲು ನನಗೆ ಮತ್ತಷ್ಟು ಬಲ ಬಂದಂತಾಗಿದೆ ಎಂದು ಹೇಳಿದರು.

ಹರಿಜನ, ಭೋವಿ ಹಾಸ್ಟೆಲ್‌:

ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷ ಡಾ. ಸಿ.ಸೋಮಶೇಖರ ಮಾತನಾಡಿ, ಮಾಗನೂರು ಬಸಪ್ಪನವರು ಶರಣರ ವಾಣಿಯಂತೆ ಬದುಕಿದವರು. ತನಗಾಗಿ ಬದುಕದೇ ಇತರರಿಗಾಗಿ ಬದುಕಿನ ಅನರ್ಘ್ಯ ರತ್ನ. ಶರಣರು ನುಡಿದಂತೆ ನಡೆದವರು. ಜಾತಿ, ಮತ, ಕುಲಗಳ ಎಲ್ಲೆ ಮೀರಿ ಬೆಳೆದವರು. ಇದೇ ದಾರಿಯಲ್ಲಿ ಸಾಗಿದ ಮಾಗನೂರು ಬಸಪ್ಪ ದಾವಣಗೆರೆಯಲ್ಲಿ ಹರಿಜನ, ಭೋವಿ ಸೇರಿದಂತೆ ತುಳಿತಕ್ಕೊಳಗಾದ ಜನರನ್ನು ಅಪ್ಪಿಕೊಂಡು, ಅಂತಹವರಿಗಾಗಿ ಹರಿಜನ, ಭೋವಿ ಹಾಸ್ಟೆಲ್ ಸ್ಥಾಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು ಎಂದು ತಿಳಿಸಿದರು.

ಹಿರಿಯ ಜವಳಿ ಉದ್ಯಮಿ, ಹರಿಹರ ಪಂಚಮಸಾಲಿ ಪೀಠದ ಪ್ರಧಾನ ಧರ್ಮದರ್ಶಿ ಬಿ.ಸಿ.ಉಮಾಪತಿ ಮಾತನಾಡಿ, ಕನ್ನಡ ಸೇರಿದಂತೆ ಎಲ್ಲ ಭಾಷೆಗಳೂ ನಮಗೆ ಇಂದು ಅಗತ್ಯ. ಆದರೆ, ಮಾತೃಭಾಷೆ ಕನ್ನಡವೇ ನಮ್ಮ ಪ್ರಧಾನ ಭಾಷೆ ಆಗಿರಬೇಕು. ಲಿಂಗಾಯತ ಧರ್ಮದ ಆಚರಣೆಗಳು ವೈಜ್ಞಾನಿಕ ಆಧಾರಿತವಾಗಿವೆ. ಲಿಂಗಧಾರಣೆ, ವಿಭೂತಿ ಧರಿಸುವುದು ಸೇರಿದಂತೆ ವಿವಿಧ ಆಚರಣೆಗಳ ಹಿಂದೆ ಬಲವಾದ ವೈಜ್ಞಾನಿಕ ತಳಹದಿ ಮೇಲೆ ನಿಂತಿದೆ. ಇಂತಹ ಸಂಸ್ಕೃತಿ ಆಚಾರ, ವಿಚಾರಗಳನ್ನು ಪಾಲಕರು ಮಕ್ಕಳಿಗೆ ತಿಳಿಸಿಕೊಡಬೇಕು ಎಂದು ಸಲಹೆ ನೀಡಿದರು.

ಮಾಗನೂರು ಬಸಪ್ಪ ಶಾಲಾ ವಿದ್ಯಾರ್ಥಿಗಳು ನೃತ್ಯ ರೂಪಕ ನಡೆಸಿಕೊಟ್ಟರು. ಇದೇ ವೇಳೆ ಧಾರವಾಡದ ವಚನ ಸಾಹಿತ್ಯ ಸಂಶೋಧಕ ಡಾ.ವೀರಣ್ಣ ಬಿ.ರಾಚೂರ ಅವರಿಗೆ ಆರೂಢ ದಾಸೋಹಿ ಶರಣ ಮಾಗನೂರು ಬಸಪ್ಪ ಪ್ರಶಸ್ತಿ ನೀಡಿ, ಗೌರವಿಸಲಾಯಿತು.

ಹರಿಹರ ಪಂಚಮಸಾಲಿ ಪೀಠದ ಶ್ರೀವಚನಾನಂದ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ಕಸಾಪ ಜಿಲ್ಲಾಧ್ಯಕ್ಷ ಬಿ.ವಾಮದೇವಪ್ಪ, ನಿಕಟ ಪೂರ್ವ ಅಧ್ಯಕ್ಷ ಡಾ.ಎಚ್.ಎಸ್‌.ಮಂಜುನಾಥ ಕುರ್ಕಿ, ಸಿರಿಗೆರೆ ತರಳಬಾಳು ವಿದ್ಯಾಸಂಸ್ಥೆ ಆಡಳಿತಾಧಿಕಾರಿ ಡಾ.ಎಚ್‌.ಬಿ.ವಾಮದೇವಪ್ಪ, ಕೆ.ರಾಘವೇಂದ್ರ ನಾಯರಿ ಇತರರು ಇದ್ದರು.

- - -

ಬಾಕ್ಸ್‌-1 * ಪ್ರಶಸ್ತಿಗಳೆಂದರೆ ಬಯಸದೇ ಬಂದ ಭಾಗ್ಯವಾಗಬೇಕು: ಶ್ರೀ

ಹರಿಹರ ಪಂಚಮ ಸಾಲಿ ಪೀಠದ ಶ್ರೀ ವಚನಾನಂದ ಸ್ವಾಮೀಜಿ ಸಾನಿಧ್ಯ ವಹಿಸಿ ಮಾತನಾಡಿ, ಅರ್ಜಿ ಹಾಕಿ ಪಡೆಯುವುದು ಪ್ರಶಸ್ತಿಯಲ್ಲ. ಪ್ರಶಸ್ತಿಗಳೆಂದರೆ ಬಯಸದೇ ಬಂದ ಭಾಗ್ಯವಾಗಬೇಕು. ಈ ನಿಟ್ಟಿನಲ್ಲಿ ಸಾಧಕರನ್ನು ಗುರುತಿಸಿ ಪ್ರಶಸ್ತಿ ನೀಡುವ ಕಾರ್ಯ ಶ್ಲಾಘನೀಯವಾಗಿದೆ ಎಂದರು.

ಪ್ರಸ್ತುತ ದಿನಗಳಲ್ಲಿ ಗುರುಗಳು ಮನೆಗೆ ಬಂದು ಪೂಜೆ, ಪ್ರಸಾದ ಸ್ವೀಕರಿಸಿದರೆ ಧನ್ಯರಾಗುತ್ತೇವೆಂಬ ಭಾವನೆ ಇದೆ. ಆದರೆ ತನು, ಮನ, ಭಾವಶುದ್ಧವಿರುವ ಭಕ್ತರ ಮನೆಯಲ್ಲಿ ಯಾವ ಶರಣ ಪೂಜೆ- ಪ್ರಸಾದ ಸ್ವೀಕರಿಸುತ್ತಾನೋ ಅಂತಹ ಶರಣನೇ ಪುಣ್ಯವಂತನೆಂದು ಬಸವಣ್ಣ ಹೇಳಿದ್ದರು. ಮಾಗನೂರು ಬಸಪ್ಪ ಅಂತಹ ಭಕ್ತರಲ್ಲೊಬ್ಬರಾಗಿದ್ದರು ಎಂದು ಶ್ಲಾಘಿಸಿದರು.