ವಾರ್ತಾಧಿಕಾರಿ ಮಮತಾ ಸಾವು ತುಂಬಲಾರದ ನಷ್ಟ: ಚಿ.ನಿ.ಪುರುಷೋತ್ತಮ

| Published : Aug 04 2024, 01:17 AM IST

ವಾರ್ತಾಧಿಕಾರಿ ಮಮತಾ ಸಾವು ತುಂಬಲಾರದ ನಷ್ಟ: ಚಿ.ನಿ.ಪುರುಷೋತ್ತಮ
Share this Article
  • FB
  • TW
  • Linkdin
  • Email

ಸಾರಾಂಶ

ವಾರ್ತಾ ಇಲಾಖೆ ಅಧಿಕಾರಿಗಳು ಜಿಲ್ಲಾಡಳಿತ ಮಾಧ್ಯಮದ ನಡುವಿನ ಸಂಪರ್ಕ ಕೊಂಡಿ. ಇತ್ತೀಚೆಗೆ ಸರ್ಕಾರಿ ಅಧಿಕಾರಿಗಳು ಅತ್ಯಂತ ಹೆಚ್ಚಿನ ಒತ್ತಡದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಅಗತ್ಯ ಸಿಬ್ಬಂದಿ ಕೊರತೆಯು ಇದಕ್ಕೆ ಕಾರಣವಾಗಿದೆ. ಪರಿಸ್ಥಿತಿಯನ್ನು ಅರ್ಥೈಸಿಕೊಂಡು ಮಾಧ್ಯಮದವರು ಸಲಹೆ ರೂಪದಲ್ಲಿ ಅಧಿಕಾರಿಗಳೊಡನೆ ಸಂವಹನ ಸಾಧಿಸಬೇಕು. ಮಮತಾ ಹಾಗೂ ಮಂಜುನಾಥ್ ನಿಧನ ತುಂಬಲಾರದ ನಷ್ಟ .

ಕನ್ನಡಪ್ರಭ ವಾರ್ತೆ ತುಮಕೂರು

ಮಮತಾ ವಾರ್ತಾ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕಿಯಾಗಿ ಅಧಿಕಾರ ವಹಿಸಿಕೊಂಡಾಗಿನಿಂದ ಅತ್ಯಂತ ಸ್ನೇಹಪೂರ್ವಕವಾಗಿ ಕಾರ್ಯ ನಿರ್ವಹಿಸುತ್ತಿದ್ದರು ಎಂದು ಕಾರ್ಯನಿರತ ಪತ್ರಕರ್ತರ ಸಂಘದ ಸಂಘದ ಜಿಲ್ಲಾಧ್ಯಕ್ಷ ಚಿ.ನಿ.ಪುರುಷೋತ್ತಮ ಹೇಳಿದರು.

ನಗರದ ಪತ್ರಿಕಾಭವನದಲ್ಲಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ನಡೆದ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಸಂತಾಪ ಸೂಚಿಸಿ ಮಾತನಾಡಿದರು. ಮೆದುಳು ರಕ್ತಸ್ರಾವದಿಂದ ಶಸ್ತ್ರಚಿಕಿತ್ಸೆಗೆ ಒಳಗಾಗಿ ನಿಧನರಾದ ಮಮತಾ ಪ್ರತಿಯೊಬ್ಬರೊಂದಿಗೆ ಪ್ರೀತಿ ಹಾಗೂ ಆತ್ಮೀಯತೆಯಿಂದ ವರ್ತಿಸುತ್ತಿದ್ದರು. ಅವರು ಇತ್ತೀಚೆಗೆ ತಮ್ಮ ಅನಾರೋಗ್ಯದ ಬಗ್ಗೆ ಪತ್ರಕರ್ತ ಸ್ನೇಹಿತರೊಂದಿಗೆ ಹಂಚಿಕೊಂಡಿದ್ದರು. ಆದರೆ ಇಷ್ಟು ಬೇಗ ಸಾವು ಅವರನ್ನು ಅಪ್ಪಿಕೊಳ್ಳುತ್ತದೆ ಎಂಬುದನ್ನು ಊಹಿಸಿರಲಿಲ್ಲ. ಈ ಹಿಂದಿನ ಹಿರಿಯ ಸಹಾಯಕ ನಿರ್ದೇಶಕ ಮಂಜುನಾಥ್ ರವರೂ ಸಹ ಅಕಾಲಿಕ ಮರಣಕ್ಕೆ ತುತ್ತಾಗಿದ್ದು, ವಾರ್ತಾ ಇಲಾಖೆಗೆ ಗ್ರಹಣ ಹಿಡಿದಂತಾಗಿದೆ ಎಂದರು.ಹಿರಿಯ ಪತ್ರಕರ್ತ ಎಸ್.ನಾಗಣ್ಣ ಮಾತನಾಡಿ, ವಾರ್ತಾ ಇಲಾಖೆ ಅಧಿಕಾರಿಗಳು ಜಿಲ್ಲಾಡಳಿತ ಮಾಧ್ಯಮದ ನಡುವಿನ ಸಂಪರ್ಕ ಕೊಂಡಿ. ಇತ್ತೀಚೆಗೆ ಸರ್ಕಾರಿ ಅಧಿಕಾರಿಗಳು ಅತ್ಯಂತ ಹೆಚ್ಚಿನ ಒತ್ತಡದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಅಗತ್ಯ ಸಿಬ್ಬಂದಿ ಕೊರತೆಯು ಇದಕ್ಕೆ ಕಾರಣವಾಗಿದೆ. ಪರಿಸ್ಥಿತಿಯನ್ನು ಅರ್ಥೈಸಿಕೊಂಡು ಮಾಧ್ಯಮದವರು ಸಲಹೆ ರೂಪದಲ್ಲಿ ಅಧಿಕಾರಿಗಳೊಡನೆ ಸಂವಹನ ಸಾಧಿಸಬೇಕು. ಮಮತಾ ಹಾಗೂ ಮಂಜುನಾಥ್ ನಿಧನ ತುಂಬಲಾರದ ನಷ್ಟ ಎಂದರು.

ಜಿಲ್ಲಾಧಿಕಾರಿಗಳ ಕಚೇರಿ ಸಹಾಯಕ ಮೋಹನ್ ಕುಮಾರ್ ಮಾತನಾಡಿ, ಮಮತಾ ಚುರುಕಿನಿಂದ ಕಾರ್ಯನಿರ್ವಹಿಸುತ್ತಿದ್ದರು. ಆದರೆ ಅವರ ಅನಾರೋಗ್ಯ ಅವರನ್ನು ಕರ್ತವ್ಯ ನಿರ್ವಹಿಸಲು ಅನುಮತಿಸುತ್ತಿರಲಿಲ್ಲ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸಿದರು.

ಗೃಹ ಸಚಿವರ ವಿಶೇಷ ಕರ್ತವ್ಯಾಧಿಕಾರಿ ಡಾ. ನಾಗಣ್ಣ ಮಾತನಾಡಿ, ಸರ್ಕಾರ ಮತ್ತು ಮಾಧ್ಯಮಗಳ ನಡುವಿನ ಸಂವಹನಕಾರರಾಗಿದ್ದ ಮಮತಾ ನಿಧನ ತುಂಬಲಾರದ ನಷ್ಟವಾಗಿದೆ ಎಂದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ.ಎಸ್.ಸಿದ್ದಲಿಂಗಪ್ಪ ಮಾತನಾಡಿ, ಜಿಲ್ಲಾಡಳಿತದ ಹಲವು ಸಭೆಗಳಲ್ಲಿ ಅವರೊಂದಿಗೆ ಭಾಗಿಯಾಗಿದ್ದೆ. ಸಭೆಗಳಲ್ಲಿ ಮೌನಿಯಾಗಿದ್ದರೂ ಕರಾರುವಕ್ಕಾಗಿ ಸುದ್ದಿಗಳನ್ನು ಮಾಧ್ಯಮ ಮಿತ್ರರಿಗೆ ತಲುಪಿಸುತ್ತಿದ್ದರು. ಒತ್ತಡದಲ್ಲಿ ಇರುತ್ತಿದ್ದುದನ್ನು ಗಮನಿಸಿದ್ದೆ. ವಿಧಿಯಾಟಕ್ಕೆ ಬಲಿಯಾಗಿದ್ದು ದುರಂತ ಎಂದು ಸ್ಮರಿಸಿದರು. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಟಿ.ಇ.ರಘುರಾಂ,ಹರೀಶ್ ಆಚಾರ್ಯ, ರಾಷ್ಟ್ರೀಯ ಮಂಡಳಿ ಸದಸ್ಯ ಅನು ಶಾಂತರಾಜು, ನಿರ್ದೇಶಕರಾದ ಜಯಣ್ಣ, ಶಂಕರ್, ಚಿಕ್ಕಣ್ಣ, ರೇಣುಕಾ ಪ್ರಸಾದ್ ಕಾಗ್ಗೆರೆ ಸುರೇಶ್, ಮಾಜಿ ನಿರ್ದೇಶಕ ಕೊಂತಿಹಳ್ಳಿ ರಂಗನಾಥ್, ನರಸಿಂಹ, ಸುರೇಶ್, ವೀರಪ್ಪ, ರವಿ, ಕಸಾಪದ ಚಿಕ್ಕ ಬೆಳ್ಳಾವಿ ಶಿವಕುಮಾರ್, ಕನ್ನಡ ಸಂಸ್ಕೃ ತಿ ಇಲಾಖೆ ಸುರೇಶ್ ಸೇರಿದಂತೆ ಹಿರಿಯ, ಯುವ ಪತ್ರಕರ್ತರು ಉಪಸ್ಥಿತರಿದ್ದರು. ಎರಡು ನಿಮಿಷ ಮೌನ ಆಚರಿಸಿ ಸಂತಾಪ ಸೂಚಿಸಲಾಯಿತು.