ಕನ್ನಡಕ್ಕೆ ವಿಶ್ವಮಾನ್ಯತೆ ತಂದುಕೊಟ್ಟ ವಚನ ಸಾಹಿತ್ಯ

| Published : Sep 09 2025, 01:01 AM IST

ಸಾರಾಂಶ

ಜನರನ್ನು ಬಸವ ತತ್ವದೆಡೆಗೆ ಸೆಳೆಯಬೇಕಾಗಿದೆ. ಅದರಲ್ಲೂ ಮಕ್ಕಳು, ಯುವಕರನ್ನು ಸೆಳೆಯುಲು ಈ ಬಸವ ಸಂಸ್ಕೃತ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಮಕ್ಕಳಲ್ಲಿಯೂ ವಚನ ಸಾಹಿತ್ಯದ ಕುರಿತು ಕುತೂಹಲ ಇರುವುದು ನಿಜಕ್ಕೂ ಅತ್ಯುತ್ತಮ ಬೆಳವಣಿಗೆಯಾಗಿದೆ.

ಕೊಪ್ಪಳ:

ಶರಣರು ಸಾಹಿತಿಯಾಗಲು ವಚನ ರಚಿಸದೆ ಜನರಲ್ಲಿದ್ದ ಮೌಢ್ಯ, ಅಂಧಶ್ರದ್ಧೆ ತೊಡೆದು ಹಾಕಲು ರಚಿಸಿದರು ಎಂದಿರುವ ಗದಗ ತೋಂಟದಾರ್ಯ ಮಠದ ತೋಂಟದ ಸಿದ್ದರಾಮ ಸ್ವಾಮೀಜಿ, ಕನ್ನಡಕ್ಕೆ ವಿಶ್ವಮಾನ್ಯತೆಯನ್ನು ವಚನ ಸಾಹಿತಿ ತಂದುಕೊಟ್ಟಿದೆ ಎಂದು ಹೇಳಿದರು.

ನಗರದ ಮಧುಶ್ರೀ ಗಾರ್ಡ್‌ನಲ್ಲಿ ಸೋಮವಾರ ಬಸವ ಸಂಸ್ಕೃತಿ ಅಭಿಯಾನ ನಿಮಿತ್ತ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಜನರನ್ನು ಬಸವ ತತ್ವದೆಡೆಗೆ ಸೆಳೆಯಬೇಕಾಗಿದೆ. ಅದರಲ್ಲೂ ಮಕ್ಕಳು, ಯುವಕರನ್ನು ಸೆಳೆಯುಲು ಈ ಬಸವ ಸಂಸ್ಕೃತ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಮಕ್ಕಳಲ್ಲಿಯೂ ವಚನ ಸಾಹಿತ್ಯದ ಕುರಿತು ಕುತೂಹಲ ಇರುವುದು ನಿಜಕ್ಕೂ ಅತ್ಯುತ್ತಮ ಬೆಳವಣಿಗೆಯಾಗಿದೆ. ಆಗಿನ ಕಾಲದ ಮೌಢ್ಯ ತೊಡೆದು ಹಾಕಲು ಶರಣರು ಸರಳ ಭಾಷೆಯಲ್ಲಿ ವಚನ ರಚಿಸಿದರು ಎಂದ ಅವರು, ಸಂಸ್ಕೃತ ಭಾಷೆಯಲ್ಲಿ ಇರುವ ಪಾಂಡಿತ್ಯದಿಂದ ಜನರಿಗೆ ಕಗ್ಗಂಟಾಗಿತ್ತು. ಆಗ ವಚನ ರಚಿಸಿ ಜನರಲ್ಲಿ ಜಾಗೃತಿ ಮೂಡಿಸಿದರು ಎಂದರು.

ಪ್ರತಿಯೊಬ್ಬರು ವಚನ ಓದಿ ಅರ್ಥೈಸಿಕೊಂಡರೆ ಅಜ್ಞಾನ ದೂರವಾಗುತ್ತದೆ. ಕಲ್ಲು ದೇವರು ದೇವರಲ್ಲ, ಮಣ್ಣು ದೇವರಲ್ಲ, ತನ್ನ ತಾನರಿದೊಡೆ ದೇವರು ಎನ್ನುವ ಅರಿವು ಮೂಡಿಸಿದ್ದು ಶರಣರು ಎಂದ ಅವರು, ೨೧ನೇ ಶತಮಾನದಲ್ಲಿಯೂ ಮೌಢ್ಯ, ಅಂಧ-ಶ್ರದ್ಧೆಗಳಿರುವುದು ದುರಂತ. ವಿಜ್ಞಾನಿಗಳು ಸಹ ಅಂಧ-ಶ್ರದ್ಧೆ ಹೊಂದಿದ್ದಾರೆ ಎನ್ನುವುದೇ ಬೇಸರದ ಸಂಗತಿ ಎಂದು ಹೇಳಿದರು.

ವಿಶೇಷ ಉಪನ್ಯಾಸ ನೀಡಿದ ಮನಗುಂಡಿ ಬಸವನಾಂದಶ್ರೀ, ಬಸವಣ್ಣ ಯುದ್ಧ ಮಾಡದೆ ಅನುಭವ ಮಂಟಪ ಮಾಡಿ ಜನರಲ್ಲಿ ಜಾಗೃತಿ ಮೂಡಿಸಿ ಪ್ರತಿಯೊಬ್ಬರಲ್ಲಿಯೂ ಸಮಾನತೆಯ ಬೀಜ ಬಿತ್ತಿದರು. ಕಾಯಕದ ಅರಿವಿನ ಜತೆಗೆ ದಾಸೋಹದ ಅರಿವು ಮೂಡಿಸಿದರು. ಸ್ವಾತಂತ್ರ್ಯ ಪರಿಕಲ್ಪನೇ ಇಲ್ಲದ ಕಾಲದಲ್ಲಿ ವಿಶ್ವದಲ್ಲಿಯೇ ಮೊದಲ ಬಾರಿಗೆ ಸ್ವಾತಂತ್ರ್ಯ ಕುರಿತು ಅರಿವು ಮೂಡಿಸಿದರು ಎಂದರು.

ಬಾಲ್ಕಿ ಶ್ರೀಬಸವಲಿಂಗ ಪಟ್ಟದೇವರು, ಲಿಂಗಾಯತ ಮಠಾಧೀಶರ ಒಕ್ಕೂಟದ ಅಧ್ಯಕ್ಷ ಡಾ. ಬಸವಲಿಂಗ ಪಟ್ಟದ್ದೇವರು, ಹಂದಿಗುಂದ ಸಿದ್ಧೇಶ್ವರ ಮಠದ ಶಿವಾನಂದ ಸ್ವಾಮೀಜಿ, ಗುರುಬಸವೇಶ್ವರ ಸಂಸ್ಥಾನ ಮಠದ ಶಿವಾನಂದ ಸ್ವಾಮೀಜಿ, ನವಲಗುಂದ ಬಸವಲಿಂಗ ಸ್ವಾಮೀಜಿ, ಮನಗುಂಡಿ ವೀರೀತೇಶಾನಂದ ಸ್ವಾಮೀಜಿ, ಬೆಳಗಾವಿಯ ಬಸವಾನಂದ ಸ್ವಾಮೀಜಿ, ಶಿವಬಸವದೇವರು, ಬಸವ ಕಲ್ಯಾಣದ ಬಸವದೇವರು, ರಾಯಚೂರಿನ ಜಾಗಿರಜಾಡಲದಿನ್ನಿ ವೀರಭದ್ರ ಸ್ವಾಮೀಜಿ, ಬೀದರನ ವಚನ ಸಂಸ್ಕೃತಿ ಮಾತೆ, ಬಸವ ಕಲ್ಯಾಣದ ಮಾತೆ ಸುಗುಣತಾಯಿ, ವಿಜಯಪುರ ಮಾತೆ ಚಂದ್ರಕಲಾ, ಬಸವ ಕಲ್ಯಾಣದ ಗುಣತೀರ್ಥದ ಬಸವಪ್ರಭು ಸ್ವಾಮೀಜಿ, ವಿಪ ಸದಸ್ಯೆ ಹೇಮಲತಾ ನಾಯಕ್, ಕೊಪ್ಪಳ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಶ್ರೀನಿವಾಸ ಗುಪ್ತಾ, ಮಾಜಿ ಶಾಸಕರಾದ ಪರಣ್ಣ ಮುನವಳ್ಳಿ, ಕೆ. ಶರಣಪ್ಪ, ಡಾ. ಕಾವ್ಯ ಮಹಾಗಾವಂಕರ್, ಮುಖಂಡರಾದ ಬಸವರಾಜ ಬಳೊಳ್ಳಿ, ಹನುಮೇಶ ಕಲ್ಕಂಗಿ, ರಾಜೇಶ ಸಸಿಮಠ, ಅರ್ಚನಾ ಸಸಿಮಠ, ದಾನಪ್ಪ ಶೆಟ್ಟರ, ಸೌಮ್ಯ, ಅಮರೇಶಪ್ಪ ಬಳ್ಳಾರಿ, ಸಂಗಮೇಶ ಗುತ್ತಿ, ಬಸವರಾಜ ಬಳ್ಳೊಳ್ಳಿ, ಸಿದ್ದಣ್ಣ ಜಕ್ಕಲಿ, ವೆಂಕನಗೌಡರು, ದೊಡ್ಡಬಸಪ್ಪ ಭತ್ತದ, ಗುಡದಪ್ಪ ಹಡಪದ, ಕಳಕನಗೌಡ ಪಾಟೀಲ, ಶಿವಕುಮಾರ ಕುಕನೂರು, ನಿರ್ಮಲ ಬಳ್ಳೊಳ್ಳಿ, ಮಹೇಶ ಬಳ್ಳಾರಿ ಸೇರಿದಂತೆ ಇತರರು ಇದ್ದರು.ಪುಸ್ತಕ ಬಿಡುಗಡೆ...

ಡಾ. ಸಂಗಮೇಶ ಕಲ್ಹಾಳ ಬರೆದಿರುವ ಲಿಂಗಾಯತ ಧರ್ಮದ ಮಹತ್ವ ಎನ್ನುವ ಕಿರುಹೊತ್ತಿಗೆ ಬಿಡುಗಡೆ ಮಾಡಿ ಉಚಿತವಾಗಿ ಹಂಚಿಕೆ ಮಾಡಲಾಯಿತು.

ಬಸವ ಸಂಸ್ಕೃತಿ ಅಭಿಯಾನದ ಬಸವ ಮೂರ್ತಿ ಮೆರವಣಿಗೆ ಸೋಮವಾರ ಸಂಜೆ ವಿಜೃಂಭಣೆಯಿಂದ ನಡೆಯಿತು. ‌ನಗರದ ಬಸವೇಶ್ವರ ವೃತ್ತದಿಂದ ಮಧುಶ್ರೀ ಗಾರ್ಡನ್ ವರೆಗೂ ನಡೆಯಿತು. ಮೆರವಣಿಯಲ್ಲಿ ಶರಣರ ವೇಷ ಧರಿಸಿದ್ದ ಮಕ್ಕಳು ಗಮನ ಸೆಳೆದರು. ಅಭಿಯಾನದ ನಿಮಿತ್ತ ಕಿಡದಾಳದ ಶಾರದ ಇಂಟರ್‌ ನ್ಯಾಷನಲ್ ಸ್ಕೂಲ್ ಸಭಾಂಗಣದಲ್ಲಿ ಸ್ವಾಮೀಜಿಗಳು ಮಕ್ಕಳೊಂದಿಗೆ ವಚನ ಕುರಿತು ಸಂವಾದ ನಡೆಸಿದರು. ಮಕ್ಕಳು ವಚನ ಸಾಹಿತ್ಯದ ಕುರಿತು ಕುತೂಹಲಕರ ಪ್ರಶ್ನೆಗಳನ್ನು ಕೇಳಿದರು.