ಜನ ಮಾನಸದಲ್ಲಿ ಅಚ್ಚಳಿಯದೆ ಉಳಿದಿರುವ ವಚನಕಾರರು-ರವಿ ಕೊರವರ

| Published : Aug 20 2024, 12:46 AM IST

ಸಾರಾಂಶ

ಸಾಮಾಜಿಕ ಕ್ರಾಂತಿ ಮಾಡಿದ ವಚನಕಾರರು ಸದಾ ಕಾಲಕ್ಕೂ ಉಳಿಯುವ ಸಮಾಜ ಸೇವೆ ಮಾಡಿ ಜನ ಮಾನಸದಲ್ಲಿ ಅಚ್ಚಳಿಯದೆ ಉಳಿದಿದ್ದಾರೆ ಎಂದು ಹಾನಗಲ್ಲಿನ ಗ್ರೇಡ್-೨ ತಹಸೀಲ್ದಾರ್‌ ರವಿ ಕೊರವರ ತಿಳಿಸಿದರು.

ಹಾನಗಲ್ಲ: ಸಾಮಾಜಿಕ ಕ್ರಾಂತಿ ಮಾಡಿದ ವಚನಕಾರರು ಸದಾ ಕಾಲಕ್ಕೂ ಉಳಿಯುವ ಸಮಾಜ ಸೇವೆ ಮಾಡಿ ಜನ ಮಾನಸದಲ್ಲಿ ಅಚ್ಚಳಿಯದೆ ಉಳಿದಿದ್ದಾರೆ ಎಂದು ಹಾನಗಲ್ಲಿನ ಗ್ರೇಡ್-೨ ತಹಸೀಲ್ದಾರ್‌ ರವಿ ಕೊರವರ ತಿಳಿಸಿದರು.

ಹಾನಗಲ್ಲಿನ ತಹಸೀಲ್ದಾರ್‌ ಕಚೇರಿ ಸಭಾಂಗಣದಲ್ಲಿ ತಾಲೂಕು ಆಡಳಿತ ಆಯೋಜಿಸಿದ್ದ ಶರಣ ನುಲಿಯಚಂದಯ್ಯ ಜಯಂತಿಯಲ್ಲಿ ನುಲಿಯ ಚಂದಯ್ಯನವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು.ಸಾಮಾಜಿಕ ಸಮಾನತೆಗಾಗಿ, ಸಾಮಾಜಿಕ ನ್ಯಾಯಕ್ಕಾಗಿ ಶರಣರ ಕೊಡುಗೆ ದೊಡ್ಡದು. ಎಲ್ಲ ಕಾಲಕ್ಕೂ ಸಲ್ಲುವ ಸಮಾಜೋದ್ಧಾರದ ಸಂಗತಿಗಳನ್ನು ಜನ ಸಾಮಾನ್ಯರಿಗೆ ತಲುಪಿಸಿ ಸಾಮಾಜಿಕ ನ್ಯಾಯದ ಪರ ಚಿಂತನೆಗಳನ್ನು ನೀಡಿದರು. ಬಸವಣ್ಣನವರ ಚಿಂತನೆಗಳ ದಾರಿಯಲ್ಲಿ ಆಗಿನ ಎಲ್ಲ ಶರಣರು ನಡೆದು ಎಲ್ಲ ಕಾಲಕ್ಕೂ ಸಲ್ಲುವ ಮಹಾತ್ಮರಾಗಿದ್ದಾರೆ. ವಚನಗಳು ಇಂದಿನ ಸಾಮಾಜಿಕ ಸ್ಥಿತಿಯಲ್ಲಿ ಅತ್ಯುತ್ತಮ ಮಾರ್ಗದರ್ಶನ ಮಾಡುವ ಸಶಕ್ತ ಸಾಹಿತ್ಯವಾಗಿದೆ. ನುಲಿಯ ಚಂದಯ್ಯನವರ ಕೊಡುಗೆ ಅಪಾರ ಹಾಗೂ ಆಮೂಲ್ಯ ಎಂದರು.ಉಪನ್ಯಾಸ ನೀಡಿದ ಅರಳೇಶ್ವರ ಸರಕಾರಿ ಪದವಿಪೂರ್ವ ಕಾಲೇಜಿನ ಉಪನ್ಯಾಸಕ ಶಿವರಾಜ ಭಜಂತ್ರಿ, ಹಗ್ಗ ನೂಲುವ ನುಲಿಯ ಚಂದಯ್ಯನವರು ಜಗಜ್ಯೋತಿ ಬಸವಣ್ಣನವರ ಸಮಾಜಮುಖಿ ಚಿಂತನೆಯಲ್ಲಿ ಹೆಗಲಿಗೆ ಹೆಗಲಾಗಿ ದುಡಿದ ಮಹನೀಯರು. ಕಾಯಕ ನಿಷ್ಠೆಯನ್ನು ಸಮಾಜಕ್ಕೆ ತೋರಿದ ಹೆಚ್ಚುಗಾರಿಕೆ ಅವರದಾಗಿದೆ. ವಚನಗಳು ಕೇವಲ ಬೋಧನೆಯ ವಿಷಯಗಳಲ್ಲ. ಶರಣರು ನಡೆದು ನುಡಿದ ಅನುಭವದ ಅಮೃತ ನುಡಿಗಳು. ಇಂತಹ ಸಾಹಿತ್ಯ ಕನ್ನಡ ಸಾಹಿತ್ಯ ಇತಿಹಾಸದಲ್ಲಿ ಹೆಚ್ಚು ಮಹತ್ವ ಪಡೆದಿದೆ. ಒಬ್ಬ ಹಗ್ಗ ನೂಲುವ, ಅದನ್ನು ಮಾರಿ ಜೀವನ ನಡೆಸುವ ನುಲಿಯ ಚಂದಯ್ಯನವರ ಕಾಯಕ ನಿಷ್ಠೆ ಹಾಗೂ ಸಮಾಜದ ಹಿತಕ್ಕೆ ತಮ್ಮನ್ನು ಒಡ್ಡಿಕೊಳ್ಳುವ ಕ್ರಿಯಾಶೀಲತೆ ಹೆಚ್ಚು ಮಹತ್ವದ್ದು. ೧೨ನೇ ಶತಮಾನದ ಶರಣರ ದಾಸೋಹದಲ್ಲಿ ನುಲಿಯ ಚಂದಯ್ಯನವರದು ದೊಡ್ಡ ಪಾಲು ಎಂದರು.

ಶಿರಸ್ತೆದಾರ ಟಿ.ಕೆ. ಕಾಂಬಳೆ, ಬಸವರಾಜ ಭಜಂತ್ರಿ, ಹನುಮಂತ ಭಜಂತ್ರಿ, ಕುಮಾರ ಭಜಂತ್ರಿ, ಸಂತೋಷ ಭಜಂತ್ರಿ, ಚಂದ್ರು ಭಜಂತ್ರಿ, ಮೌನೇಶ ಭಜಂತ್ರಿ, ಪರಶುರಾಮ ಭಜಂತ್ರಿ, ಸಂಜು ಭಜಂತ್ರಿ, ಎಸ್. ಕುಮಾರ ರಾಮಕೃಷ್ಣ ಭಜಂತ್ರಿ, ಮಾಲತೇಶ ವಾಲಗದ ಸೇರಿದಂತೆ ಸಮಾಜದ ಮುಖಂಡರು, ವಿವಿಧ ಇಲಾಖೆಗಳ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.