ಸಾರಾಂಶ
ಕನ್ನಡಪ್ರಭ ವಾರ್ತೆ ವಿಜಯಪುರ
ಲೋಕಸಭಾ ಚುನಾವಣೆಯಲ್ಲಿ ವಹ್ನಿಕುಲ ತಿಗಳ ಸಮುದಾಯ ಬಿಜೆಪಿ ಪಕ್ಷದ ಪರ ನಿಲ್ಲಲಿದೆ. ಇದುವರೆಗೂ ಉಂಟಾಗಿದ್ದ ಎಲ್ಲಾ ಗೊಂದಲಗಳೂ ಬಗೆಹರಿದಿವೆ ಎಂದು ಬಿಜೆಪಿ ಅಭ್ಯರ್ಥಿ ಡಾ.ಕೆ.ಸುಧಾಕರ್ ವಿಶ್ವಾಸ ವ್ಯಕ್ತಪಡಿಸಿದರು.ಹೋಬಳಿಯ ಹಾರೋಹಳ್ಳಿ ಗ್ರಾಪಂ ವ್ಯಾಪ್ತಿಯ ಬುಳ್ಳಹಳ್ಳಿ ಗ್ರಾಮದಲ್ಲಿರುವ ದ್ರೌಪದಿ ಆದಿಪರಾಶಕ್ತಿ ಮಹಾಸಂಸ್ಥಾನ ಪೀಠದಲ್ಲಿ ಬುಧವಾರ ತಿಗಳ ಸಮುದಾಯದ ಮುಖಂಡರು ಹಾಗೂ ಸ್ವಾಮೀಜಿ ಅವರೊಂದಿಗೆ ಸಮಾಲೋಚನೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
ನನ್ನ ಕುರಿತಾಗಿ ಸಮುದಾಯದ ಮುಖಂಡರಿಗೆ ಕೆಲವು ಅನುಮಾನಗಳಿದ್ದವು. ಅವುಗಳ ಕುರಿತು ವಿವರಣೆ ನೀಡಿ, ಅನುಮಾನಗಳನ್ನು ದೂರ ಮಾಡಿದ್ದೇನೆ. ನಮ್ಮ ಪಕ್ಷ ವಹ್ನಿಕುಲ ಕ್ಷತ್ರೀಯ ಸಮಾಜದ ಪರವಾಗಿದೆ. ಹಿಂದಿನ ಬಿಜೆಪಿ ಸರ್ಕಾರದಲ್ಲಿ ಮುಖ್ಯಮಂತ್ರಿಯಾಗಿದ್ದ ಬಸವರಾಜ ಬೊಮ್ಮಾಯಿ ಅವರು ಸಮುದಾಯಕ್ಕೆ ೧ ಕೋಟಿ ಬಿಡುಗಡೆ ಮಾಡಿದ್ದರು. ಸಮುದಾಯಕ್ಕೆ ಶೈಕ್ಷಣಿಕ, ಸಾಮಾಜಿಕ, ಆರ್ಥಿಕ , ರಾಜಕೀಯ ಮತ್ತು ಸಾಂಸ್ಕೃತಿಕವಾಗಿ ಎಲ್ಲಾ ಕ್ಷೇತ್ರಗಳಲ್ಲಿ ಅವಕಾಶಗಳನ್ನು ಕೊಡುವುದು ನಮ್ಮ ಕರ್ತವ್ಯವಾಗಿದೆ. ಸಮುದಾಯದ ಮುಖಂಡರನ್ನು ಉತ್ತಮವಾಗಿ ನಡೆಸಿಕೊಳ್ಳುವುದಾಗಿ ಸ್ವಾಮೀಜಿಗೆ ಭರವಸೆ ನೀಡಿದ್ದೇನೆ.ನನ್ನ ಕಾರ್ಯವೈಖರಿ ಸ್ವಾಮೀಜಿಗೆ ಗೊತ್ತಿದೆ. ಸಮುದಾಯದ ಮುಖಂಡರು ನನ್ನೊಂದಿಗೆ ತುಂಬಾ ಚೆನ್ನಾಗಿದ್ದಾರೆ. ನಮ್ಮ ಪಕ್ಷ ಅವರಿಗೆ ಎಲ್ಲಾ ಅವಕಾಶಗಳನ್ನೂ ಕೊಡುತ್ತದೆ. ರಾಜ್ಯಾಧ್ಯಕ್ಷರು, ವಿರೋಧ ಪಕ್ಷದ ನಾಯಕರು, ಎಂ.ಟಿ.ಬಿ ನಾಗರಾಜ್ ಅವರು ಎಲ್ಲರೂ ಸೇರಿ ಚರ್ಚೆ ಮಾಡಿ, ಸುಖಾಂತ್ಯಗೊಳಿಸಿದ್ದಾರೆ ಎಂದರು.
ದ್ರೌಪದಿ ಆದಿಪರಾಶಕ್ತಿ ಮಹಾಸಂಸ್ಥಾನ ಪೀಠದ ಮಂಜುನಾಥ್ ಮಹಾರಾಜ್ ಸ್ವಾಮೀಜಿ ಮಾತನಾಡಿ, ನಮ್ಮ ಸಮುದಾಯಕ್ಕೆ ಅನುಮಾನಗಳು ಹುಟ್ಟಿಕೊಂಡಿರುವುದು ಸತ್ಯ. ಡಾ.ಕೆ.ಸುಧಾಕರ್ ಅವರು ಎಲ್ಲರ ಸಮ್ಮುಖದಲ್ಲಿ ವಿವರಣೆ ನೀಡಿದ್ದಾರೆ. ನಮ್ಮ ಸಮುದಾಯ ಅವರ ಹಿಂದೆ ಇರುತ್ತದೆ. ಕರಗ ನಡೆಸುತ್ತಿರುವ ದೊಡ್ಡ ಜನಾಂಗ ನಮ್ಮದು. ನಮಗೆ ಬಿಜೆಪಿ ಸರ್ಕಾರದಿಂದ ಸಹಕಾರ ಸಿಕ್ಕಿದೆ. ಎಲ್ಲವೂ ಸುಖಾಂತ್ಯವಾಗಿದೆ. ಡಾ.ಕೆ.ಸುಧಾಕರ್ ಅವರು ಗೆಲ್ಲುತ್ತಾರೆ. ಸುಧಾಕರ್ ಕೊಟ್ಟ ಮಾತನ್ನು ಅವರು ಉಳಿಸಿಕೊಳ್ಳುತ್ತಾರೆ ಎನ್ನುವ ವಿಶ್ವಾಸವಿದೆ ಎಂದರು.ಆದಿಶಕ್ತಿ ಬ್ಯಾಂಕ್ ಅಧ್ಯಕ್ಷ ಕೆ.ಲಕ್ಷ್ಮಣ್, ಎಸ್.ಆರ್.ಎಸ್.ದೇವರಾಜ್, ತಾಲೂಕು ತಿಗಳರ ಸಂಘದ ಅಧ್ಯಕ್ಷ ವಿ.ಗೋಪಾಲಕೃಷ್ಣ, ರಾಜ್ಯ ಸಂಘದ ಉಪಾಧ್ಯಕ್ಷ ವೈ.ಎನ್.ಶಾಮಣ್ಣ, ರಾಜ್ಯ ಸಂಘಟನಾ ಕಾರ್ಯದರ್ಶಿ ಜೆ.ಆರ್.ಮುನಿ ವೀರಣ್ಣ, ನಿರ್ದೇಶಕ ಎನ್.ಕನಕರಾಜು, ಕೆ.ಎಂ.ಮಂಜುನಾಥ್, ಜಿ.ಗಣೇಶ್, ಮುನೀಂದ್ರ, ಜಿ.ಎಂ.ಚಂದ್ರು, ಕರವೇ ಶಿವಕುಮಾರ್, ಡಿ.ಆರ್.ಚನ್ನಕೃಷ್ಣ, ವಿ.ಎಂ.ಮಂಜುನಾಥ್ ಇತರರಿದ್ದರು.
;Resize=(128,128))
;Resize=(128,128))